ಹಬ್ಬಗಳ ತವರೂರಾದ ಭಾರತ ದೇಶದಲ್ಲಿ ಶಿವರಾತ್ರಿಯ ನಂತರ ಬರುವ ಆಧ್ಯಾತ್ಮಿಕ ಹಿನ್ನೆಲೆ ಇರುವ ಹಬ್ಬವೆಂದರೆ ಹೋಳಿ. ಭಾರತದಲ್ಲಿ ಮಾತ್ರವಲ್ಲದೆ, ಭಾರತಿಯರು ವಾಸಿಸುವ ನೇಪಾಳ, ಬಾಂಗ್ಲಾ ದೇಶ, ಪಾಕಿಸ್ತಾನ, ಉರೊಪ, ಉತ್ತರ ಅಮೆರಿಕಾ, ಸುರೆನಾಮ್, ಗಯಾನಾ, ಟ್ರಿನಿಡಾಡ್, ಆಫ್ರಿಕಾ, ಮಾರಿಶಿಯಸ್, ಫುಜಿ ಮುಂತಾದ ಕಡೆ ಈ ಹಬ್ಬವು ಪ್ರೆಮ, ಬಣ್ಣ, ಕುಣಿದು ಕುಪ್ಪಳಿಸುವ ಮತ್ತು ಸ್ನೇಹದ ಹಬ್ಬವೆಂದು ಆಚರಿಸಲಾಗುತ್ತದೆ.
ಹೋಳಿ ಹಬ್ಬವು ಹೋಲಿಕಾ ಶಬ್ದದಿಂದ ಬಂದಿದೆ. ಉತ್ತರಭಾರತದಲ್ಲಿ ‘ಹೋಳಿ’, ‘ಹೋಲಿಕಾ ದಹನ”, ‘ಧುರಿಯಾ’ ಎಂದೂ, ಮಹಾರಾಷ್ಟ್ರದಲ್ಲಿ ‘ಹೋಳಿ’, ’ಶಿಮಗ’ ‘ರಂಗಪಂಚಮಿ’, ‘ಧೂಲಿವಂದನ’ ಎಂದೂ, ಉತ್ತರ ಕರ್ನಾಟಕದಲ್ಲಿ ‘ಹೋಳಿ’, ’ಓಕಳಿ’ ’ಕಾಮಣ್ಣ’ನ ಹಬ್ಬವೆಂದು ಪ್ರಚಲಿತವಾಗಿದೆ. ಇದೆ ಸಮಯದಲ್ಲಿ ಶಿರಸಿಯಲ್ಲಿ ರಾತ್ರಿಯ ವೇಳೆ ಬೇಡರ ವೇಷ ಧರಿಸಿ ಲೊಕನೃತ್ಯ ಮಾಡುತ್ತಾರೆ. ಹುಬ್ಬಳ್ಳಿಯ ಮ್ಯಾದರ ಓಣಿಯ ಕಾಮಣ್ಣ-ರತಿದೇವಿ ಬಾಂಬುದಿಂದ ಮಾಡಿರುವ, ೮ ಅಡಿ ಎತ್ತರದ ಕಾಮಣ್ಣನಾಗಿದ್ದು ನೊಡಲು ಸುಂದರವಾಗಿರುತ್ತದೆ.
ಉತ್ತರ ಪ್ರದೇಶದ ಬ್ರಿಜ್ ಪ್ರಾಂತದಲ್ಲಿ ’ಲಾಠ ಮಾರ’ ಆಟ ಪ್ರಚಲಿತವಾಗಿದೆ. ಮಹಿಳೆಯರು ಪುರುಷರಿಗೆ ದೊಣ್ಣೆಯಿಂದ ಹೊಡೆಯುತ್ತಾರೆ, ಪುರುಷರು ಗುರಾಣಿಯ ಸಹಾಯದಿಂದ ಬಚಾವ್ ಆಗುತ್ತಾರೆ. ಉತ್ತರ ಕರ್ನಾಟಕ ಮತ್ತು ಗುಜರಾತದಲ್ಲಿ ’ದಹಿ-ಹಂಡಿ’ ಒಡೆಯುವ ಸ್ಪರ್ಧೆ ನಡೆಯುತ್ತದೆ. ಮೊಸರು ತುಂಬಿದ ಗಡಿಗೆ ಎತ್ತರಕ್ಕೆ ಕಟ್ಟಿವರು, ಅದನ್ನು ಮಾನವ ಪಿರ‍್ಯಾಮಿಡ್ ನಿರ್ಮಾಣ ಮಾಡಿ ಮೇಲೆ ಹತ್ತಿ ಹೊಡೆಯ ಬೇಕು. ಏರುವಾಗ ನೀರು ಹಾಗೂ ಬಣ್ಣ ಚೆಲ್ಲುತ್ತಾರೆ.
ಹೀಗೆ ಅನೇಕ ಆಟ-ಪಾಠದಿಂದ ಕೂಡಿರುವ ಸಂತೋಷದ ಹಬ್ಬವೇ ಹೋಳಿ.
ಹೋಳಿ ಹಬ್ಬದ ಬಗ್ಗೆ ಮೂರು ಪೌರಾಣಿಕ ದಂತ ಕಥೆಗಳು ಇವೆ.
೧. ವಿಷ್ಣು ಭಕ್ತ ಪ್ರಹ್ಲಾದನಿಗೆ ತನ್ನ ತಂದೆಯಾದ ಹಿರಣ್ಯಕಶಿಪು ಮತ್ತು ಅವನ ಸೋದರಿಯ ಹೋಲಿಕಾ ಎಂಬ ರಾಕ್ಷಸಿಯಿಂದ ಹಿಂಸೆಯಾಗುತ್ತದೆ, ಅವನನ್ನು ಸುಟ್ಟುಹಾಕಲು, ಬಯಸುವ ಹೋಲಿಕ ತಾನೆ ದಹನವಾದಳು.
೨. ತಾರಕಾಸುರನಿಂದ ಪೀಡಿತರಾದ ದೇವತೆಗಳು, ಶಿವನನ್ನು ತಪಸ್ಸುನಿಂದ ಎಬ್ಬಿಸಲು ಕಾಮದೇವನ ಸಹಾಯ ಪಡೆಯುತ್ತಾರೆ. ಪುಷ್ಪಬಾಣದ ಪ್ರಯೋಗದಿಂದ ವಿಚಲಿತನಾದ ಮಹಾದೇವನು ತನ್ನ ಮೂರನೆಯ ಕಣ್ಣನಿಂದ ಅವನನ್ನು ಸುಟ್ಟು ಹಾಕುತ್ತಾನೆ. ಆಗ ಕಾಮದೇವನ ಪತ್ನಿ ರತಿದೇವಿ ಮತ್ತು ದೇವತೆಗಳು ಕ್ಷಮಾಯಾಚನೆ ಮಾಡಿದಾಗ, ಶಿವನು ಕಾಮನನ್ನು ಬದುಕಿಸಿ ರತಿಗೆ ಶಾಶ್ವತ ಸೌಭಾಗ್ಯವನ್ನು ನೀಡುತ್ತಾನೆ.
೩. ಕೃಷ್ಣ ರಾಕ್ಷಸಿ ಪೂತನಿಯ ವಿಷಪ್ರಾಷನ ಮಾಡಿ ಕಪ್ಪಗಾದನು. ಅತಿ ಸುಂದರವಾದ ಗೋಪ ಗೋಪಿಯರ ನಡುವೆ ಅವನು ಶ್ಯಾಮವರ್ಣದವನು. ಆವನ ತಾಯಿ, ರಾಧೆಗೆ ಇಷ್ಟವಾದ ಯಾವ ಬಣ್ಣವಾದರೂ ಕೃಷ್ಣನಿಗೆ ಹಚ್ಚಲು ತಿಳಿಸುತ್ತಾರೆ. ಅಂದಿನಿಂದ ರಂಗಪಂಚಮಿ ಆಡುತ್ತಾರೆ.
ಫಾಲ್ಗುಣ ಮಾಸದ ಹುಣ್ಣಿಮೆಯ ದಿನ ‘ಹೋಳಿ’ ಹಬ್ಬವನ್ನು ಆಚರಿಸುವರು. ತದನಂತರ ‘ರಂಗಪಂಚಮಿ’, ಬಣ್ಣವನ್ನು ಹಾಕಿ ಬಣ್ಣದ ಹಬ್ಬ ಆಚರಿಸುತ್ತಾರೆ. ಆದರೆ ಇಂದಿನ ಆಧುನಿಕ ಯುಗದಲ್ಲಿ ಹಬ್ಬದ ಆಚರಣೆ ಸಂಪೂರ್ಣ ಬದಲಾಗಿದ್ದು, ವ್ಯಭಿಚಾರ, ಹಿಂಸಾಚಾರದ ರೂಪ ತಾಳುತ್ತಿದೆ.
ಹೋಳಿಯ ಹಬ್ಬದಲ್ಲಿ ಹೋಳಿಯನ್ನು ಸುಡಲು ಕಟ್ಟಿಗೆಯ ಸಂಗ್ರಹಣೆ, ಚಂದಾ ವಸೂಲಿ, ಹಲಗೆಯ ಕರ್ಕಶ ಧ್ವನಿ ಮಿತಿಮೀರುತ್ತಿವೆ. ಬಣ್ಣದ ಹಬ್ಬ ತನ್ನ ನಿಜ ಬಣ್ಣವನ್ನು ಕಳೆದುಕೊಳ್ಳುತ್ತಿದೆ. ನೈಸರ್ಗಿಕ ಬಣ್ಣಗಳ ಬದಲಾಗಿ ಆರೋಗ್ಯಕ್ಕೆ ಹಾನಿ ಮಾಡುವ ಆಮ್ಲ, ರಾಸಾಯನಿಕ ಬಣ್ಣ, ಡಾಂಬರ, ಶೆಗಣಿ, ಮುಂತಾದ ಪದಾರ್ಥಗಳು ಬಳಕೆಯಾಗುತ್ತಲಿವೆ. ಇದರಿಂದ ನಮ್ಮ ಈ ಬಡ ದೇಶದಲ್ಲಿ ಕೊಟ್ಯಾಂತರ ಹಣದ ಬಣ್ಣ ಹಾಗೂ ಬಟ್ಟೆಗಳು, ಹೋಳಿ ಹಬ್ಬಕ್ಕೆ ಹಾಳಾಗುತ್ತದೆ. ಶಾಂತಿ ಸುವ್ಯವಸ್ಥೆಗಾಗಿ ಅಪಾರ ಹಣ ಖರ್ಚವಾಗುತ್ತದೆ. ಇದರಿಂದ ಅನೇಕರಿಗೆ ಖುಷಿಯ ಬದಲಾಗಿ ದು:ಖವಾಗುತ್ತದೆ. ಹಾಗೂ ದೇಶದ ಧನ, ಬಡವರ ಸಹಾಯಕ್ಕೆ ಬರಲಾರದೇ ಹೋಳಿಯ ಬೂದಿಯಾಗಿ ವ್ಯರ್ಥವಾಗುತ್ತಿದೆ. ಇದರ ಪರಿಣಾಮ ಹಬ್ಬ ಆಚರಣೆ ಮಾಡುವವರ ಸಂಖ್ಯೆ ಪ್ರತಿವರ್ಷ ಕಡಿಮೆ ಆಗುತ್ತಿದೆ. ವಾಸ್ತವಿಕವಾಗಿ ಹೋಳಿಯ ಆಧ್ಯಾತ್ಮಿಕ ರಹಸ್ಯವನ್ನು ತಿಳಿದು ಹಬ್ಬವನ್ನು ಆಚರಿಸಿದರೆ ಮಾನವ ಜೀವನದಲ್ಲಿ ಹೊಸತನವು ಬರಬಹುದು.
ಬ್ರಹ್ಮಕುಮಾರಿಯರ ತತ್ವಜ್ಞಾನದ ಪ್ರಕಾರ ನಿಜವಾದ ಹೋಳಿ ಎಂದರೆ ‘ಹೊಲಿ’ ಪವಿತ್ರತೆ. ಪವಿತ್ರತೆಯೆ ಸುಖ ಶಾಂತಿಯ ಜನನಿ. ಪರಮಪಿತ ಪರಮಜ್ಯೋತಿ ನಿರಾಕಾರ ಪರಮಾತ್ಮನು ಪರಮಪವಿತ್ರನಾಗಿದ್ದಾನೆ. ಅವನ ಮುಖ್ಯ ಸಂದೇಶವೆ ‘ಪವಿತ್ರರಾಗಿ ಯೋಗಿಗಳಾಗಿ’ ಎಂದು. ಪವಿತ್ರತೆ ಎಂದರೆ ಬ್ರಹ್ಮಚರ್ಯ ಮಾತ್ರವಲ್ಲ, ಮನ ವಚನ ಕರ್ಮ ಸಂಬಂಧ ಸಂಪರ್ಕಗಳಲ್ಲಿ ಪವಿತ್ರತೆ. ಇದನ್ನು ಸಂಪೂರ್ಣವಾಗಿ ಪಾಲಿಸುವವನು ನಿಜವಾದ ಯೋಗಿ.
ಇಂದು ಕಲಿಯುಗ ಅಂತಿಮ ಚರಣದಲ್ಲಿದೆ. ಕಲಿಯುಗದ ಅಂತ್ಯ ಮತ್ತು ಸತ್ಯಯುಗದ ಆರಂಭದ ಸಂದಿಗ್ಧ ಕಾಲವೇ ಸಂಗಮಯುಗ. ಪ್ರತಿಯೊಬ್ಬ ಮಾನವನಿಗೆ ಸತ್ಯಯುಗದ ದೈವೀಪದವಿಯನ್ನು ಪಡೆಯುವ ಈಶ್ವರೀಯ ಜನ್ಮಸಿದ್ಧ ಅಧಿಕಾರ ಇದೆ. ಆ ಅಧಿಕಾರವನ್ನು ಸ್ವಯಂ ನಿರಾಕಾರ ಪರಮಾತ್ಮನೇ ಈ ಧರೆಗೆ ಅವತರಿಸಿ, ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಕಲಿಸುವ ಜ್ಞಾನ ಹಾಗೂ ರಾಜಯೋಗದ ಅಭ್ಯಾಸದ ಮೂಲಕ ನೀಡುತ್ತಿದ್ದಾನೆ. ಪವಿತ್ರತೆ ಹಾಗೂ ದೈವೀಗುಣಗಳ ಧಾರಣೆಯಿಂದ, ಕಾಮದಹನದ ಜೊತೆ-ಜೊತೆಗೆ ಕ್ರೋಧ, ಲೋಭ, ಮೋಹ, ಅಹಂಕಾರ ಮುಂತಾದ ಆಸುರಿ ಗುಣಗಳ ತ್ಯಾಗದಿಂದ ದೇವಿ-ದೇವತಾ ಪದವಿಯು ಪ್ರಾಪ್ತವಾಗುವುದು. ಮಾನವನು ಸರ್ವಗುಣ ಸಂಪನ್ನ, ೧೬ ಕಲಾಸಂಪೂರ್ಣ, ಮರ್ಯಾದಾ ಪುರುಷೋತ್ತಮ, ಅಹಿಂಸಾ ಪರಮೋಧರ್ಮಿ, ಸಂಪೂರ್ಣ ನಿರ್ವಿಕಾರಿ ಆಗುವನು. ಈ ನರಕದ ಮಹಾವಿನಾಶದ ನಂತರ ಸತ್ಯಯುಗವು ಬರುವುದು. ಈಗ ನಾವು ಎಲ್ಲರೂ ಪರಮಾತ್ಮನ ಜೊತೆಯಲ್ಲಿ ಇದ್ದರೆ ಅವನ ಸಂಗದ ರಂಗಿನಿಂದ ಸ್ವರ್ಗದಲ್ಲಿ ದೇವಿ ದೇವತೆಗಳಾಗಿ ಬರುತ್ತೆವೆ.”
ಭಗವದ್ಗೀತೆಯ ೨ ನೇ ಅಧ್ಯಾಯ ೬೨, ೬೩ ನೇಯ ಶ್ಲೋಕ ದಲ್ಲಿ ಆಸೆಯಿಂದ, ಕಾಮ, ಕಾಮದಿಂದ ಕ್ರೋಧ, ಕ್ರೋಧದಿಂದ ಮೋಹ, ಮೋಹದಿಂದ ವಿಸ್ಮೃತಿ, ವಿಸ್ಮೃತಿಯಿಂದ ಬುದ್ಧಿನಾಶ, ಬುದ್ಧಿನಾಶ ದಿಂದ ಸರ್ವನಾಶವಾಗುತ್ತದೆ ಎಂದು ಹೇಳಲಾಗಿದೆ. ಅಧ್ಯಾಯ ೧೬, ಶ್ಲೋಕ ೨೧ ರಲ್ಲಿ ಕಾಮ, ಕ್ರೋಧ, ಲೋಭ ಮೂರು ನರ್ಕದ ದ್ವಾರಗಳು ಅವುಗಳನ್ನು ನಾವು ತ್ಯಜಿಸಬೇಕೆಂದು ಭಗವಂತನ ಆದೇಶವಿದೆ. ಹೀಗೆ ಭಗವದ್ಗೀತೆಯ ಅನೇಕ ಶ್ಲೋಕಗಳು ನಮಗೆ ನಿರ್ವಿಕಾರಿ, ಪವಿತ್ರರಾಗಲು ಬೋಧನೆ ನಿಡುತ್ತವೆ. ಅಧ್ಯಾಯ ೧೮, ಶ್ಲೋಕ ೬೬ ರಲ್ಲಿ ಸರ್ವ ದೇಹದ ಧರ್ಮಗಳನ್ನು ತ್ಯಜಿಸಿ ನನಗೆ ಶರಣರಾದಾಗ ನಾನು ನಿನಗೆ ಪಾಪಕರ್ಮಗಳಿಂದ ದೂರ ಮಾಡಿ ಮೋಕ್ಷವನ್ನು ಕೊಡುವೆನು ಎಂದು ಪರಮಾತ್ಮನು ಹೇಳಿದ್ದಾನೆ. ಧರ್ಮಗ್ಲಾನಿಯ ಸಮಯದ ಬಗ್ಗೆ ಅಧ್ಯಾಯ ೪, ಶ್ಲೋಕ ೭,೮ ರಲ್ಲಿ ವರ್ಣನೆಯಿದೆ.
ಜ್ಞಾನಿ ಮತ್ತು ಯೋಗಿಗಳ ದೃಷ್ಟಿಯಲ್ಲಿ ಮನುಷ್ಯ ಸೃಷ್ಟಿಯು ವಿರಾಟ ನಾಟಕವಾಗಿದೆ. ಈ ಸೃಷ್ಟಿರೂಪಿ ನಾಟಕದಲ್ಲಿ ಎರಡು ಬಣ್ಣಗಳ ಆಟ ನಡೆಯುತ್ತದೆ. ಒಂದು ಮಾಯೆಯ ಬಣ್ಣ ಎರಡನೇಯದು ಈಶ್ವರನ ಬಣ್ಣ. ಈ ರಂಗಮಂಟಪದಲ್ಲಿ ಪ್ರತಿಯೊಬ್ಬನೂ ಯಾವುದಾದರು ಒಂದು ಬಣ್ಣವನ್ನು ಹಚ್ಚಿಕೊಂಡಿರುವನು. ಈಶ್ವರೀಯ ಬಣ್ಣವನ್ನು ಹಚ್ಚಿಕೊಂಡಿರುವವನು ನಿಜವಾಗಿಯೂ ಯೋಗಿ ಆಗುತ್ತಾನೆ ಮತ್ತು ಮಾಯೆಯ ರಂಗಿನಲ್ಲಿ ಇರುವವನು ಭೋಗಿ ಆಗಿರುತ್ತಾನೆ.
ವಾಸ್ತವವಾಗಿ ‘ಹೋಳಿ’ ಮತ್ತು ‘ರಂಗಪಂಚಮಿ’ ಸಂತೋಷ, ಪ್ರೀತಿ, ಸ್ನೇಹ, ಆತ್ಮೀಯತೆಯನ್ನು ವೃದ್ಧಿಸುವ ಹಬ್ಬ. ‘ಹೋಳಿ’ ಹಬ್ಬವು ಅತಿ ಪ್ರಾಚೀನ ಕಾಲದಿಂದ ಆಚರಣೆಯಲ್ಲಿದೆ ಎಂದು ಭಾರತೀಯರ ನಂಬಿಕೆ ಇದೆ. ಇದರ ಬಗ್ಗೆ ವೇದಕಾಲೀನ ‘ರಕ್ಷೋಹಗಂ ಬಲಗಹಮ್’ ಮುಂತಾದ ರಾಕ್ಷಸರು, ವಿನಾಶದ ಮಂತ್ರಗಳಿಂದ ‘ಹೋಲಿಕಾದಹನ’ ಮಾಡುತ್ತಿದ್ದರು. ಇದರ ಸತ್ಯಾರ್ಥ ‘ನಾವು ರಾಕ್ಷಸಿ ಆಹಾರ, ಆಚಾರ, ವಿಚಾರ ವ್ಯವಹಾರಗಳಿಂದ ನಮ್ಮನ್ನು ರಕ್ಷಿಸಬೇಕೆಂದು’.
ಹೋಲಿಕಾದಹನ ನಮಗೆ ಈ ಮಾತನ್ನು ನೆನಪಿಸಿಕೊಡುತ್ತವೆ ‘ಪಾಪಿ ತನ್ನದೇ ಪಾಪ ಕರ್ಮಗಳಿಂದ ಸುಟ್ಟು ಹೋಗುವನು.’ ಅದರಿಂದ ನಾವು ಪಾಪಕರ್ಮಗಳಿಂದ ದೂರ ಇರಬೇಕು. ನಮ್ಮ ಜೀವನದಲ್ಲಿ ದೈವೀಗುಣಗಳ ಧಾರಣೆ ಮಾಡಿಕೊಳ್ಳಬೇಕು. ಹೋಳಿಯನ್ನು ದಹನ ಮಾಡಿ ಕಳೆದ ವರ್ಷದ ಕಹಿ, ನೆನಪುಗಳನ್ನು ಸುಟ್ಟು, ತಮ್ಮ ದುಃಖಗಳನ್ನು ಮರೆತು, ನಗುನಗುತ್ತಾ ಹೊಸ ವರ್ಷದ ಸ್ವಾಗತ ಬಯಸುವುದು ಆಗಿದೆ.
ಕಟ್ಟಿಗೆಗಳಿಂದ ಕಾಮಣ್ಣನ ದಹನ ಮಾಡಲಾರದೇ, ನಮ್ಮಲ್ಲಿ ಇರುವ ಕಾಮ, ಕ್ರೋಧ, ಈರ್ಷೆ ದ್ವೇಷ, ಮದ, ಮತ್ಸರಗಳನ್ನು ಸುಡಬೇಕು. ಪರಸ್ಪರ ಆತ್ಮೀಯತೆ, ಸ್ನೇಹ, ಪ್ರೀತಿ ಬೆಳೆಸಿ ಸಿಹಿ ತಿಂಡಿ ತಿನಿಸುಗಳನ್ನು ಸ್ವೀಕರಿಸಬೇಕು. ‘ಹೋಳಿ’ ಅಥವಾ ‘ಕಾಮಣ್ಣ-ರತಿದೇವಿ’ಯ ದಹನ ಆದ ನಂತರ ಬಣ್ಣವನ್ನೂ ಹಾಕುವರು. ಸ್ಥೂಲವಾಗಿ ಬಣ್ಣವನ್ನು ಆಡುವಾಗ ದೊಡ್ಡವರು, ಚಿಕ್ಕವರು ಎಂಬ ಭೇದಭಾವ ಮರೆತು ಬಣ್ಣವನ್ನು ಆಡುವರು. ಅದರ ನಿಜವಾದ ಅರ್ಥ ಏನೆಂದರೆ, ನಾವೆಲ್ಲರೂ ಒಬ್ಬ ಭಗವಂತನ ಮಕ್ಕಳು ಎಂದು ತಿಳಿದು ಸತ್ಯಜ್ಞಾನದ, ಸತ್ಸಂಗದ, ದೈವೀ ಗುಣಗಳ ನಿಜವಾದ ಬಣ್ಣ ಹಾಕಿ ಸರ್ವರನ್ನೂ ಸಹೋದರತ್ವದ ಭಾವನೆಯಿಂದ ಕಾಣಬೇಕು.
ಪರಮಪಿತ ಪರಮಾತ್ಮನ ಧ್ಯಾನ ಅಥವಾ ಸಹಜ ರಾಜಯೋಗದಿಂದ ನಮ್ಮ ಜೀವನದಲ್ಲಿ ದೈವೀ ಗುಣಗಳ ಧಾರಣೆ ಆಗುತ್ತದೆ. ಏಕಂದರೆ ‘ಸಂಗು ದಂತೆ ರಂಗು’ ಎಂಬ ಗಾಯನವು ಇದೆ. ಪರಮಾತ್ಮನು ಸರ್ವ ಗುಣಗಳ ಸಾಗರನಾಗಿದ್ದಾನೆ. ಅತ್ಮಜ್ಯೋತಿಗಳಾದ ನಾವು, ಅವನ ಜೊತೆಗೆ ಸರ್ವಸಂಬಂಧವನ್ನು ಬೆಳೆಸಿದರೆ ಗುಣಮೂರ್ತಿ ಅಗಬಹುದು. ಹೋಳಿ ಅಂದರೆ ಆತ್ಮ ಗುಣಗಳ ಬಣ್ಣದಿಂದ ಹೊಳೆಯುವ ಹಬ್ಬವಾಗಬೇಕು.
ಹಿಂದಿ ಭಾಷೆಯಲ್ಲಿ ‘ಹೋ-ಲಿ’, ಅಂದರೆ ಆಗಿಹೋದದ್ದನ್ನು ಮರೆತು ಬಿಡಬೇಕು, ಇಂಗ್ಲಿಷ್ ಭಾಷೆಯಲ್ಲಿ ‘ಹೊಲಿ’ ಅಂದರೆ ಪವಿತ್ರತೆ. ನಮ್ಮ ಆಚಾರ, ವಿಚಾರ ವ್ಯವಹಾರಗಳನ್ನು ಶುದ್ಧಗೊಳಿಸಬೇಕು. ಪರಸ್ಪರರಲ್ಲಿ ಆತ್ಮೀಯತೆಯನ್ನು ಬೆಳೆಸಿ, ಸದ್ಗುಣಗಳಿಂದ ಕೂಡಿದ, ಸತ್ಯಜ್ಞಾನದ ಬಣ್ಣವನ್ನು ಹಚ್ಚಿಸಿ ನಾವು ಹೋಳಿಯನ್ನು ಆಚರಿಸಿದರೆ ನಮ್ಮ ಜೀವನವೂ ಮಂಗಳಮಯ(ಹೊಲಿ)ವಾಗುವುದು.
-ವಿಶ್ವಾಸ ಸೋಹೋನಿ, ಬ್ರಹ್ಮಾಕುಮಾರಿಸ್, ಮೀಡಿಯಾ ವಿಂಗ್
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ