
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಚುನಾವಣಾ ಕರ್ತವ್ಯ ಮುಗಿಸಿ ರಾಜ್ಯಕ್ಕೆ ಆಗಮಿಸಿದ್ದ ಹೋಂ ಗಾರ್ಡ್ ಓರ್ವರು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ.
ಮೃತ ಹೋಂ ಗಾರ್ಡ್ ಅವರನ್ನು ಸಿದ್ದು ಎಂದು ಗುರುತಿಸಲಾಗಿದೆ. ಮಧ್ಯಪ್ರದೇಶದ ಚುನಾವಣೆ ಹಿನ್ನೆಲೆಯಲ್ಲಿ ಕರ್ನಾಟಕದ 4000ಕ್ಕೂ ಹೆಚ್ಚು ಹೋಂ ಗಾರ್ಡ್ ಗಳನ್ನು ಕರ್ತವ್ಯಕ್ಕಾಗಿ ನಿಯೋಜಿಸಲಾಗಿತ್ತು. ಆದರೆ ಚುನಾವಣೆ ಮುಗಿದು ವಾರವಾದರೂ ಅಲ್ಲಿನ ಸರ್ಕಾರ ಕರ್ನಾಟಕದ ಹೋಂ ಗಾರ್ಡ್ ಗಳನ್ನು ರಾಜ್ಯಕ್ಕೆ ವಾಪಾಸ್ ಕಳುಹಿಸಲು ವ್ಯವಸ್ಥೆ ಮಾಡಿರಲಿಲ್ಲ. ಅಲ್ಲದೇ ಊಟ, ಉಪಹಾರಕ್ಕೂ ಪರದಾಡಬೇಕಾದ ಸ್ಥಿತಿ ಎದುರಾಗಿದೆ.
ಚುನಾವಣಾ ಕರ್ತವ್ಯ ಮುಗಿಸಿ ಬೆಂಗಳೂರಿಗೆ ವಾಪಾಸ್ ಆಗಿದ್ದ ಹೊಮ್ ಗಾರ್ಡ್ ಸಿದ್ದು, ರೈಲಿನಲ್ಲಿಯೇ ತೀವ್ರ ಅಸ್ವಸ್ಥರಾಗಿದ್ದರು. ಎರಡು ಮೂರು ಬಾರಿ ವಾಂತಿ ಮಾಡಿಕೊಂಡಿದ್ದರು. ಬೆಂಗಳೂರಿಗೆ ಆಗಮಿಸಿದ ಅವರನ್ನು ಸ್ನೇಹಿತರುಕೆ.ಸಿ.ಜನರಲ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಆಸ್ಪತ್ರೆಯಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಸರ್ಕಾರದ ನಿರ್ಲಕ್ಷ್ಯದಿಂದಾಗಿ ಹೋಂ ಗಾರ್ಡ್ ಮೃತಪಟ್ಟಿದ್ದು, ಕುಟುಂಬಸ್ಥರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ