
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಬಿಜೆಪಿ ಸರ್ಕಾರದಲ್ಲಿ ಪಿಎಸ್ಐ ನೇಮಕಾತಿ ಪ್ರಕ್ರಿಯೆಯಲ್ಲಿ ಬಹುದೊಡ್ಡ ಹಗರಣ ನಡೆದಿತ್ತು. ಅದನ್ನು ನಮ್ಮ ಸರ್ಕಾರ ಬಂದ ಬಳಿಕ ಬಗೆಹರಿಸಲಾಗಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಹೇಳಿದರು.
ನಗರದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಹಗರಣ ಮಾಡಿ ಹೊಗಿದ್ದರು. ಆದರೆ ಅದನ್ನೆಲ್ಲ ನಾವು ಸ್ವಚ್ಚಗೊಳಿಸಿ ಹೈಕೋರ್ಟ್ ಆದೇಶದಂತೆ ಮರು ಪರೀಕ್ಷೆ ನಡೆಸಿದ್ದೇವೆ ಎಂದು ತಿಳಿಸಿದರು.
ಪ್ರಸ್ತುತ ನಡೆದಿರುವ 545 ಪಿಎಸ್ಐ ಹುದ್ದೆಗಳ ನೇಮಕಾತಿಯ ಪ್ರಕ್ರಿಯೆಯನ್ನು ಸರ್ಕಾರ ಅಂತಿಮ ಘಟ್ಟಕ್ಕೆ ಕೊಂಡೊಯ್ಯುತ್ತಿದೆ. ಈಗಾಗಲೇ ಇದಕ್ಕೆ ಸಂಬಂಧಿಸಿದ ಸಿಂಧುತ್ವ ಪ್ರಮಾಣ ಪತ್ರ ಸಿದ್ದ ಪಡಿಸುವುದು, ವೈದ್ಯಕೀಯ ಹಾಗೂ ದೈಹಿಕ ಸಾಮರ್ಥ್ಯದ ತಪಾಸಣೆ ಕಾರ್ಯಗಳು ಪೂರ್ಣಗೊಂಡಿವೆ. ಈ ಚಳಿಗಾಲದ ಅಧಿವೇಶನದ ಬಳಿಕ ನೇಮಕಾತಿಯಲ್ಲಿ ಆಯ್ಕೆಯಾದ ಆ ಎಲ್ಲರಿಗೂ ಆದೇಶ ಪತ್ರಗಳನ್ನು ನೀಡುತ್ತೇವೆ ಎಂದು ಪರಮೇಶ್ವರ್ ಸಿಹಿ ಸುದ್ದಿ ನೀಡಿದ್ದಾರೆ.
ಅಲ್ಲದೆ ಇನ್ನುಳಿದ 402 ಪಿಎಸ್ಐ ಹುದ್ದೆಗಳಿಗೆ ಸಂಬಂಧಪಟ್ಟ ನೇಮಕಾತಿ ಪ್ರಕ್ರಿಯೆಯು ಮುಗಿದಿದೆ ಶೀಘ್ರದಲ್ಲೇ ಅವರಿಗೂ ಆದೇಶ ಪತ್ರ ವಿತರಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ