
ಪ್ರಗತಿವಾಹಿನಿ ಸುದ್ದಿ: ಭೀಕರ ಅಗ್ನಿ ಅವಘಡದಲ್ಲಿ ಮೂವರು ಅಪ್ರಾಪ್ತರು ಸೇರಿದಂತೆ ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ. ಬೆಂಕಿಯ ಕೆನ್ನಾಲಿಗೆಗೆ ಸುಮಾರು 30 ಮನೆಗಳು ಹಾಗೂ ಅಂಗಡಿಗಳು ಸುಟ್ಟು ಸಂಪೂರ್ಣ ಭಸ್ಮವಾಗಿರುವ ಘಟನೆ ಅರುಣಾಚಲ ಪ್ರದೇಶದ ಕುರುಂಗ್ ಕುಮೇ ಜಿಲ್ಲೆಯ ಪಾರ್ಸಿ ಪಾರ್ಲೋ ಪಟ್ಟಣದಲ್ಲಿ ಸಂಭವಿಸಿದೆ.
ಕಣ್ಣೆದುರೇ ಕ್ಷಣಾರ್ಧದಲ್ಲಿ ವ್ಯಾಪಿಸಿದ ಬೆಂಕಿಯಿಂದಾಗಿ ಸ್ಥಳೀಯರಲ್ಲಿ ಆತಂಕ ಸೃಷ್ಟಿಯಾಗಿದ್ದು, ಅಪಾರ ಪ್ರಮಾಣದ ಆಸ್ತಿಪಾಸ್ತಿ ನಷ್ಟ ಸಂಭವಿಸಿದೆ. ಮೃತಪಟ್ಟ ನಾಲ್ವರೂ ಒಂದೇ ಕುಟುಂಬದವರು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ದುರಂತದ ತೀವ್ರತೆಗೆ ಪ್ರಮುಖ ಕಾರಣಗಳಲ್ಲಿ ಅಗ್ನಿಶಾಮಕ ಸೌಲಭ್ಯದ ಕೊರತೆಯೂ ಒಂದಾಗಿದೆ. ಪಾರ್ಸಿ ಪಾರ್ಲೋ ಪಟ್ಟಣದಲ್ಲಿ ಅಗ್ನಿಶಾಮಕ ಠಾಣೆಯಾಗಲಿ, ಅಗ್ನಿಶಾಮಕ ವಾಹನಗಳಾಗಲಿ ಇಲ್ಲ. ಸಮೀಪದ ಅಗ್ನಿಶಾಮಕ ಠಾಣೆ ಕುರುಂಗ್ ಕುಮೇ ಜಿಲ್ಲೆಯ ಕೇಂದ್ರ ಕೊಲೋರಿಯಾಂಗ್ನಲ್ಲಿದೆ. ಅಲ್ಲಿಂದ ಪಾರ್ಸಿ ಪಾರ್ಲೋ ತಲುಪಲು ನಾಲ್ಕು ಗಂಟೆಗೂ ಹೆಚ್ಚು ಸಮಯ ಬೇಕಾಗುತ್ತದೆ.
ತುರ್ತು ಸಂದರ್ಭದಲ್ಲಿ ಅಗ್ನಿಶಾಮಕ ವಾಹನಗಳು ತಲುಪಲು ವಿಳಂಬವಾಗುವ ಪರಿಸ್ಥಿತಿಯೇ ಈ ದುರಂತದ ವೇಳೆ ದೊಡ್ಡ ಸವಾಲಾಗಿ ಪರಿಣಮಿಸಿದೆ. ಘಟನೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




