CrimeKannada NewsNational

*ಬೀಚ್‌ನಲ್ಲಿ ಭೀಕರ ದುರಂತ: ಸಮುದ್ರದ ಅಲೆಗಳಿಗೆ 8 ವಿದ್ಯಾರ್ಥಿಗಳು ಬಲಿ*

ಪ್ರಗತಿವಾಹಿನಿ ಸುದ್ದಿ: ಪ್ರವಾಸಕ್ಕೆ ತೆರಳಿದ್ದ ಪುಣೆಯ ಎಂಟು ವಿದ್ಯಾರ್ಥಿಗಳು ಸಮುದ್ರದ ಅಲೆಗಳ ಅಬ್ಬರಕ್ಕೆ ಸಿಲುಕಿ ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಮಹಾರಾಷ್ಟ್ರದ ಪ್ರಸಿದ್ಧ ದಿವ್ಯಾಗರ್ ಕಡಲತೀರದಲ್ಲಿ ನಡೆದಿದೆ.

ಮೃತ ವಿದ್ಯಾರ್ಥಿಗಳನ್ನು ತನ್ಮಯ ದತ್ತಾತ್ರೇಯ ವಾಹಿಲೆ, ಸುಮಿತ್ ಭರತ್ ಅಹಿರೇ, ಪ್ರಣವ್ ರಾಮದಾಸ್ ಬನ್ನೋಡೆ, ಕೈವಲ್ಯ ಸತೀಶ್ ವಸಂಕರ್, ರಾಜ್‌ವೀರ್ ಯುವರಾಜ್ ವಾಹಿಲೆ, ಯಶ್ ಕಿರಣ್ ವಾಂಖೆಡೆ, ಸೋಹಮ್ ತುಕಾರಾಂ ಭಂಡವಾಲ್ಕರ್ ಹಾಗೂ ಕೌಸ್ತುಭ್ ಸಂದೀಪ್ ದೌಂಡ್ ಎಂದು ಗುರುತಿಸಲಾಗಿದೆ. ಮೃತರೆಲ್ಲರೂ 16 ವರ್ಷದವರು ಎಂದು ಪೊಲೀಸರು ತಿಳಿಸಿದ್ದಾರೆ.

ಪುಣೆ ಜಿಲ್ಲೆಯ ಅಲಂದಿಯ ವಿನ್ನರ್ಸ್ ಅಕಾಡೆಮಿಯಿಂದ 48 ಮಂದಿಯ ತಂಡ ದಿವ್ಯಾಗರ್ ಬೀಚ್‌ಗೆ ಪ್ರವಾಸಕ್ಕೆ ಬಂದಿತ್ತು. ತಂಡದಲ್ಲಿ 25 ವಿದ್ಯಾರ್ಥಿಗಳು, 17 ವಿದ್ಯಾರ್ಥಿನಿಯರು ಹಾಗೂ 6 ಶಿಕ್ಷಕರು ಇದ್ದರು.

ಪ್ರವಾಸದ ವೇಳೆ ಕೆಲ ವಿದ್ಯಾರ್ಥಿಗಳು ಸಮುದ್ರಕ್ಕೆ ಇಳಿದು ಆಟವಾಡುತ್ತಿದ್ದಾಗ, ಏಕಾಏಕಿ ಅಲೆಗಳ ರಭಸ ಹಾಗೂ ನೀರಿನ ಸೆಳೆತಕ್ಕೆ ಸಿಲುಕಿ ಆಳ ಸಮುದ್ರದತ್ತ ಕೊಚ್ಚಿಹೋಗಿದ್ದಾರೆ. ವಿದ್ಯಾರ್ಥಿಗಳು ನೀರಿನಲ್ಲಿ ಮುಳುಗುತ್ತಿರುವುದನ್ನು ಗಮನಿಸಿದ ಸ್ಥಳೀಯ ವಾಟರ್ ಸ್ಪೋರ್ಟ್ಸ್ ಸಾಹಸಿಗಳ ತಂಡ ತಕ್ಷಣವೇ ರಕ್ಷಣಾ ಕಾರ್ಯಾಚರಣೆಗೆ ಮುಂದಾಗಿದೆ.

ಆದರೆ, ಸಮುದ್ರದ ಅಲೆಗಳ ತೀವ್ರತೆ ಹೆಚ್ಚಿದ್ದರಿಂದ ಎಂಟು ವಿದ್ಯಾರ್ಥಿಗಳನ್ನು ರಕ್ಷಿಸಲು ಸಾಧ್ಯವಾಗಿಲ್ಲ. ಸತತ ಕಾರ್ಯಾಚರಣೆ ಬಳಿಕ ಎಲ್ಲರ ಮೃತದೇಹಗಳನ್ನು ಸಮುದ್ರದಿಂದ ಹೊರತೆಗೆಯಲಾಗಿದೆ.

ಘಟನೆ ಕುರಿತು ಮಾಹಿತಿ ತಿಳಿಯುತ್ತಿದ್ದಂತೆ ದಿಘಿ ಸಾಗರಿ ಬೋರ್ಲಿ ಪಂಚತನ್ ಪೊಲೀಸ್ ಠಾಣೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹಗಳನ್ನು ಕಾನೂನು ಪ್ರಕ್ರಿಯೆ ಹಾಗೂ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಒಂದೇ ವೇಳೆ ಎಂಟು ವಿದ್ಯಾರ್ಥಿಗಳು ಮೃತಪಟ್ಟಿರುವ ಘಟನೆ ಪೋಷಕರು, ಶಿಕ್ಷಕರು ಹಾಗೂ ಸ್ಥಳೀಯರಲ್ಲಿ ತೀವ್ರ ಆಘಾತ ಮತ್ತು ಶೋಕಕ್ಕೆ ಕಾರಣವಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button