Kannada NewsLatest

ಕಳೆದ 4 ವರ್ಷದಲ್ಲಿ ಪ್ರಗತಿಯತ್ತ ರಾಣಿ ಚನ್ನಮ್ಮ ವಿವಿ

 

ಪ್ರೊ. ಶಿವಾನಂದ ಬಿ. ಹೊಸಮನಿ ಕರ್ನಾಟಕ ರಾಜ್ಯದ ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಕೃಷಿ ಕುಟುಂಬದಲ್ಲಿ ಜನಿಸಿದ, ಮೊದಲ ತಲೆಮಾರಿನ ಶಿಕ್ಷಿತರು.  ಪ್ರಾಥಮಿಕ ಶಿಕ್ಷಣವನ್ನು ಬೈಲಹೊಂಗಲದಲ್ಲಿ ಪೂರೈಸಿ, ಉನ್ನತ ಶಿಕ್ಷಣವನ್ನು ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಪೂರೈಸಿದರು.  ಎಂ.ಎಸ್ಸಿ. (ಕೃಷಿ) ಮತ್ತು ಪಿಹೆಚ್.ಡಿ.ಯನ್ನು ಕೃಷಿ ಅರ್ಥಶಾಸ್ತ್ರದಲ್ಲಿ ಚಿನ್ನದ ಪದಕಗಳೊಂದಿಗೆ ಪಡೆದಿದ್ದಾರೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿರುವುದಲ್ಲದೆ, ಅನೇಕ ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವರು. ಎಂ.ಎಸ್ಸಿ. ಹಾಗೂ ಪಿಹೆಚ್.ಡಿ. ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡಿದ್ದಾರೆ.  ಸುಮಾರು 45 ಕೋಟಿ ರೂ. ಮೊತ್ತದ ಹಲವಾರು ಸಂಶೋಧನಾ ಯೋಜನೆಗಳನ್ನು ನಿರ್ವಹಿಸಿದ್ದಾರೆ. ಭಾರತದುದ್ದಕ್ಕೂ ಹಾಗೂ ವಿದೇಶಗಳಲ್ಲಿ ಪ್ರವಾಸ ಕೈಗೊಂಡಿದ್ದಾರೆ. ರಾಜ್ಯ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಪ್ರಶಸ್ತಿಗಳನ್ನು ಪಡೆದಿದ್ದಾರೆ.

 

೧. ಭೂ-ಸ್ವಾಧೀನ ಮತ್ತು ಅಭಿವೃದ್ಧಿ:

ಪ್ರಸ್ತುತ, ರಾಣಿ ಚನ್ನಮ್ಮ ವಿಶ್ವವಿದ್ಯಾಲಯವನ್ನು ಸ್ಥಾಪಿಸಿ ಕಾರ್ಯನಿರ್ವಹಿಸುತ್ತಿರುವ ೭೨.೧೭೭ ಹೆಕ್ಟೇರ ಭೂಮಿ ಕೇಂದ್ರ ಸರಕಾರದ ಅರಣ್ಯ ಇಲಾಖೆಯ ಸ್ವತ್ತಿನಲ್ಲಿತ್ತು ಹಾಗೂ ಕರ್ನಾಟಕ ವಿಶ್ವವಿದ್ಯಾಲಯದ ಕಳೆದ ೨೭ ವರ್ಷಗಳಿಂದ ಮಾಲೀಕತ್ವದಲ್ಲಿತ್ತು.  ಪ್ರೊ. ಶಿವಾನಂದ ಬಿ. ಹೊಸಮನಿಯವರ ನಿರಂತರ ಪ್ರಯತ್ನದ ಫಲವಾಗಿ ಈ ಭೂಮಿಯು ವರ್ಗಾವಣೆಯ ಕೊನೆಯ ಹಂತದಲ್ಲಿದೆ.

ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ೬೬೭೦ ಚ.ಮೀ. ಭೂಮಿಯು ರಿಯಾಯಿತಿಯಲ್ಲಿ ೨.೫೬ ಕೋಟಿ ರೂಪಾಯಿಗಳಲ್ಲಿ ರಾಮತೀರ್ಥನಗದ ಕಣಬುರ್ಗಿ, ಬೆಳಗಾವಿಯಲ್ಲಿ ದಿನಾಂಕ ೧೨.೫.೨೦೧೭ ರಂದು ಮಂಜೂರಾಗಿದ್ದು ವಿದ್ಯಾರ್ಥಿನಿಯರ ವಸತಿ ಗೃಹ ಹಾಗೂ ಪರೀಕ್ಷಾಂಗ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಲಾಗಿದೆ. ಈ ಕಟ್ಟಡದ ಕಾಮಗಾರಿ ಯೋಜನೆಗೆ ಅಂದಾಜು ವೆಚ್ಚ ೯.೮೦ ಕೋಟಿಗಳಷ್ಟು ತಗಲಬಹುದು.

ಬಾಗಲಕೋಟ ಸ್ನಾತಕೋತ್ತರ ಕೇಂದ್ರದಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮುಂಬರುವ ಶೈಕ್ಷಣಿಕ ವರ್ಷದಿಂದ ಸ್ನಾತಕೋತ್ತರ ವಿಭಾಗಗಳನ್ನು ಪ್ರಾರಂಭಿಸಲು ಸುಮಾರು ೨೦೦ ಎಕರೆ ಭೂಮಿಯನ್ನು ವಿಶ್ವವಿದ್ಯಾಲಯಕ್ಕೆ ಪಡೆಯಲು ಸತತ ಪ್ರಯತ್ನ ನಡೆಸಿದ್ದಾರೆ. ಜಮಖಂಡಿಯಲ್ಲಿ ೨ ಎಕರೆಯಲ್ಲಿ ಸುಮಾರು ೧೮ ಕೋಟಿ ಮೌಲ್ಯದಲ್ಲಿ ಕಟ್ಟಿದ ಮಿನಿ ವಿಧಾನ ಸೌಧವನ್ನು ಸ್ನಾತಕೋತ್ತರ ಅಧ್ಯಯನ ಕೇಂದ್ರ ಪ್ರಾರಂಭಿಸಲು ದಿನಾಂಕ ೭.೮.೨೦೧೭ ರಂದು ಸರಕಾರದಿಂದ ಉಚಿತವಾಗಿ ಹಸ್ತಾಂತರಿಸಿಕೊಳ್ಳಲಾಯಿತು.

ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಬರುವ ರಾಷ್ಟ್ರೀಯ ಹೆದ್ದಾರಿ-೪ ನ್ನು ದಾಟಲು ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ರೂ. ೩೦ ಕೋಟಿ ರೂಗಳ ಅಂದಾಜು ವೆಚ್ಚದ ಒಳದಾರಿ ನಿರ್ಮಿಸಲು ಕೇಂದ್ರ ಸರಕಾರದ ಅನುಮೋದನೆ ದೊರೆತಿದೆ.

ವಿಜಯಪುರ ಸ್ನಾತಕೋತ್ತರ ಅಧ್ಯಯನ ಕೇಂದ್ರದ ೩೧ ಎಕರೆ ಭೂಮಿಯ ಮಾಲಿಕತ್ವವು ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ ಇವರ ಹೆಸರಿನಿಂದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹೆಸರಿಗೆ ವರ್ಗಾವಣೆ ಕಾರ್ಯವು ಕಳೆದ ೭ ವರ್ಷದಿಂದ ವಿಳಂಬವಾಗಿತ್ತು. ಅದು ಈಗ ವರ್ಗಾವಣೆಯಾಗಿದೆ ಹಾಗೂ ಅಭಿವೃದ್ಧಿ ಕಾರ್ಯಗಳು ಪ್ರಾರಂಭವಾಗಲಿವೆ.

೨. ಮೂಲಭೂತ ಸೌಕರ್ಯಗಳು :

ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ದ್ವಿಚಕ್ರ ಹಾಗೂ ನಾಲ್ಕು ಚಕ್ರ ವಾಹನಗಳ ನಿಲುಗಡೆಗೆ ಸ್ಥಳಾವಕಾಶ ಹಾಗೂ ವಿಶ್ರಾಂತಿ ಪಡೆಯಲು ಗ್ರಾನೈಟ್ ಬೆಂಚುಗಳ ವ್ಯವಸ್ಥೆಯನ್ನು ವಿಶ್ವವಿದ್ಯಾಲಯದ ಆವರಣದಲ್ಲಿ ಕಲ್ಪಿಸಲಾಗಿದೆ. ಸಂಗೊಳ್ಳಿ ರಾಯಣ್ಣ ಕಾಲೇಜಿನ ದ್ವಿಹಂತದ ಮಹಡಿ ಕಟ್ಟಡ ಯೋಜನೆಯ ಅಂದಾಜು ವೆಚ್ಚ ೪.೮೦ ಕೋಟಿ ಹಾಗೂ ವಿಜಯಪುರ ಸ್ನಾತಕೋತ್ತರ ಕೇಂದ್ರದಲ್ಲಿ ವಿದ್ಯಾರ್ಥಿಗಳ ವಸತಿ ನಿಲಯ ನಿರ್ಮಿಸಲು ಅಂದಾಜು ವೆಚ್ಚ. ೧.೬೨ ಕೋಟಿ ರೂಪಾಯಿಗಳನ್ನು ಪಿ.ಡಬ್ಲ್ಯೂಡಿ ಗೆ ನೀಡಲಾಗಿದೆ. ಅಲ್ಲದೇ ಸಂಗೊಳ್ಳಿ ರಾಯಣ್ಣ ಕಾಲೇಜಿನಲ್ಲಿ ಸುಮಾರು ೯.೮೦ ಕೋಟಿಗಳ ನಾಲ್ಕು ಮಹಡಿಗಳ ಕಟ್ಟಡ ಕಾಮಗಾರಿಯನ್ನು ಪಿ.ಡಬ್ಲ್ಯೂಡಿಯಿಂದ ಆರಂಭಿಸಲಾಗುವುದು.

೩. ಅಧ್ಯಯನ ಪೀಠಗಳ ಸ್ಥಾಪನೆ ಮತ್ತು ಅನುದಾನ :

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿ ಅಧ್ಯಯನ ಪೀಠಗಳು ಸ್ಥಾಪನೆಯಾಗಿವೆ. ಭಾರತ ಸರಕಾರದ, ಸಂಸ್ಕೃತಿ ಇಲಾಖೆಯಿಂದ ೫.೭೮ ಕೋಟಿ ರೂಪಾಯಿಗಳನ್ನು ಪಂಡಿತ ದೀನದಯಾಳ ಉಪಾಧ್ಯಾಯ ಅಧ್ಯಯನ ಪೀಠಕ್ಕೆ ಅನುದಾನವಾಗಿ ಪಡೆಯಲಾಗಿದೆ.

ಭಾರತ ದೇಶದಲ್ಲಿ ಎರಡು ಅಧ್ಯಯನ ಪೀಠಗಳಿಗೆ ಹಣಕಾಸಿನ ನೆರವು ದೊರೆತಿದ್ದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಅದರಲ್ಲಿ ಒಂದು. ಕರ್ನಾಟಕ ಸರಕಾರದಿಂದ ಡಾ. ಬಿ. ಆರ್. ಅಂಬೇಡ್ಕರ್, ರಾಣಿ ಚನ್ನಮ್ಮ ಹಾಗೂ ಸಂಗೊಳ್ಳಿ ರಾಯಣ್ಣ ಅಧ್ಯಯನ ಪೀಠಗಳಿಗೆ ತಲಾ ೨ ಕೋಟಿಗಳ ಅನುದಾನದಂತೆ ಒಟ್ಟು ೬ ಕೋಟಿ ಹಣಕಾಸಿನ ನೆರವು ದೊರಕಿದೆ.

ವಿಶ್ವವಿದ್ಯಾಲಯದ ಅಭಿವೃದ್ಧಿಗಾಗಿ ದೆಹಲಿಯ ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗದಿಂದ (ಯು.ಜಿ.ಸಿ) ರೂ.೨ ಕೋಟಿಗಳ ಅನುದಾನ ಪ್ರಥಮ ಬಾರಿಗೆ ದೊರೆತಿದೆ. ಮೂಲಭೂತ ಸೌಕರ್ಯಗಳ ಅಭಿವೃದ್ಧಿಗಾಗಿ ೩೦ ಕೋಟಿ ರೂಪಾಯಿಗಳು ಕರ್ನಾಟಕ ಸರಕಾರದಿಂದ ಅನುಮೋದನೆಯಾಗಿ ಈಗಾಗಲೇ ೧೦ ಕೋಟಿ ರೂಪಾಯಿ ಬಿಡುಗಡೆಯಾಗಿದೆ.

ಎಸ್.ಸಿ.ಪಿ ಹಣ ೩.೬೬ ಕೋಟಿಗಳು, ಟಿ.ಎಸ್.ಪಿ ಹಣ ೩.೧೬ ಕೋಟಿ ರೂಪಾಯಿಗಳು ಕರ್ನಾಟಕ ಸರ್ಕಾರದಿಂದ ಬಿಡುಗಡೆಯಾಗಿದ್ದು ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ವಿನಿಯೋಗಿಸಲಾಗುತ್ತಿದೆ.

೪. ಬೇರೆ ಬೇರೆ ಸರಕಾರದ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳೊಂದಿಗೆ ಒಡಂಬಡಿಕೆ :

ತನ್ನ ವಲಯದಲ್ಲಿರದ ಕ್ಷೇತ್ರವನ್ನು ವಿಸ್ತರಿಸಿಕೊಳ್ಳುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯವು ಸಿ.ಎಂ.ಆರ್. ವಿಶ್ವವಿದ್ಯಾಲಯ, ಬೆಂಗಳೂರು, ರೈ ತಾಂತ್ರಿಕ ವಿಶ್ವವಿದ್ಯಾಲಯ, ಬೆಂಗಳೂರು ಮತ್ತು ಅಕಾಡಮಿ ಆಫ್ ಕಂಪೇರಿಟೀವ್ ಫಿಲಾಸಾಫಿ ಮತ್ತು ರಿಲಿಜನ, ಬೆಳಗಾವಿ, ತೋಟಗಾರಿಕಾ ವಿಶ್ವವಿದ್ಯಾಲಯ, ಬಾಗಲಕೋಟೆ, ಸಿ.ಎಂ.ಡಿ.ಆರ್., ಧಾರವಾಡ, ಎಸ್.ಕೆ.ಇ. ಸೊಸೈಟಿಯ ಜೆ.ಎಸ್.ಎಸ್. ಮಹಾವಿದ್ಯಾಲಯ, ಬೆಳಗಾವಿ, ಧಾರವಾಡ ಧಾರವಾಡ ಇನ್ಸಿಸ್ಟೂಟ್ ಆಪ್ ಮೆಂಟಲ್ ಹೆಲ್ತ್ ಆಂಡ್ ನ್ಯೂರೋ ಸೈನ್ಸಿಸ್, ಧಾರವಾಡ, ವಿಜಯ ಆರ್ಥೋ ಥ್ರೂಮಾ ಸೆಂಟರ್, ಆಸ್ಪತ್ರೆ, ಜಾಯಿಂಟ್ ರಿಪ್ಲೇಶಮೆಂಟ್ ಸೆಂಟರ್, ಬೆಳಗಾವಿ ಇವರ ಜೊತೆ ಒಡಂಬಡಿಕೆ ಮಾಡಿಕೊಂಡಿದೆ. ಫ್ಲೋರಿಡಾ ಅಂತರಾಷ್ಟ್ರೀಯ ವಿಶ್ವವಿದ್ಯಾಲಯ, ಮಿಯಾಮಿ, ಅಮೇರಿಕ. ಇಂಗ್ಲೇಂಡಿನ ಬೋಲ್ಟನ್ ವಿಶ್ವವಿದ್ಯಾಲಯ ಹಾಗೂ ಸ್ಯಾಲಪೊರ್ಡ್ ವಿಶ್ವವಿದ್ಯಾಲಯ ಮುಂತಾದವುಗಳ ಜೊತೆ ಒಡಂಬಡಿಕೆ ಮಾಡುವ ಪ್ರಯತ್ನದಲ್ಲಿದೆ. ಈ ಮೂಲಕ ಜ್ಞಾನವನ್ನು ಶಿಕ್ಷಕರು ಮತ್ತು ವಿದ್ಯಾರ್ಥಿಗಳು ವಿನಿಮಯ ಮಾಡಿಕೊಳ್ಳಬಹುದಾಗಿದೆ.

೫. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವಿದ್ಯಾರ್ಥಿಗಳ ಅಭಿವೃದ್ಧಿ :

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಹಿಂದುಳಿದ ವರ್ಗಗಳ ಕೋಶಕ್ಕೆ ೫ ಲಕ್ಷ ರೂಪಾಯಿಗಳನ್ನು ಹಿಂದುಳಿದ ವರ್ಗಗಳ ವಿದ್ಯಾರ್ಥಿ ಕೋಶದ ಅಭಿವೃದ್ಧಿಗೆ ಸರಕಾರದಿಂದ ಹಣಕಾಸಿನ ನೆರವು ಪಡೆಯಲಾಗಿದೆ. ಈ ನಿಟ್ಟಿನಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ಲ್ಯಾಬ್ ಸೌಲಭ್ಯ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಪಿಹೆಚ್.ಡಿ ವಿದ್ಯಾರ್ಥಿಗಳಿಗೆ ರೂ.೬೦೦೦ ರಿಂದ ರೂ.೮೦೦೦ಕ್ಕೆ ಶಿಷ್ಯವೇತನ ಹೆಚ್ಚಿಸಲಾಗಿದೆ.

ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರವಾಸಕ್ಕೆ ಹಣ, ಇ.ಬಿ.ಎಲ್. ಸೌಲಭ್ಯ ಒದಗಿಸಲಾಗಿದೆ. ೨೦೧೮-೧೯ರಲ್ಲಿ ಸುಮಾರು ೫೯೪ ಲ್ಯಾಪಟಾಪ್‌ಗಳನ್ನು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡುತ್ತಿರುವ ಪಿಹೆಚ್.ಡಿ ಹಾಗೂ ಸ್ನಾತಕೋತ್ತರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.

ಟಿ.ಎಸ್.ಪಿ ಯೋಜನೆಯಡಿಯಲ್ಲಿ ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಕಂಪ್ಯೂಟರ ತರಬೇತಿಯನ್ನು ನೀಡಲಾಗಿದೆ. ಕಳೆದ ಸಾಲಿನಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸುಮಾರು ೩೨ ವಿದ್ಯಾರ್ಥಿಗಳು ನೆಟ್, ಸ್ಲೆಟ್  ಪರೀಕ್ಷೆ ಪಾಸಾಗಿದ್ದು, ಅವರಿಗೆ ವಿಶ್ವವಿದ್ಯಾಲಯದಿಂದ ಆಯೋಜಿಸಲಾದ ತರಬೇತಿಯ ಫಲಶೃತಿಯಾಗಿದೆ. ವಿದೇಶಗಳಲ್ಲಿ ವಿದ್ಯಾರ್ಜನೆಯ ಅವಕಾಶಗಳ ಕುರಿತು ಸ್ವತಃ ಕುಲಪತಿಗಳು ವಿದ್ಯಾರ್ಥಿಗಳಿಗೆ ಒಂದು ದಿನದ ತರಬೇತಿಯನ್ನು ಹಮ್ಮಿಕೊಂಡು ಮಾರ್ಗದರ್ಶನ ಮಾಡಿದ್ದಾರೆ.

೬. ಅಧ್ಯಾಪಕ ವರ್ಗದ ಚಟುವಟಿಕೆಗಳು :

ಪ್ರೊ. ಹೊಸಮನಿಯವರು ವಿಶ್ವವಿದ್ಯಾಲಯಕ್ಕೆ ಆಗಮಿಸಿದ ಕೆಲವೇ ದಿನಗಳಲ್ಲಿ ಸಾಧನೆಗೈದ ಅಧ್ಯಾಪಕರಿಗೆ ಸನ್ಮಾನಿಸಿದರು.  ಬೇರೆ ಬೇರೆ ಸಂಸ್ಥೆಗಳಿಂದ ಧನ ಸಹಾಯ ಪಡೆದು ಯೋಜನೆ ಪಡೆದುಕೊಂಡಿರುವ, ಪ್ರಶಸ್ತಿಗಳನ್ನು ಪಡೆದ, ಸಾರ್ವಜನಿಕ ವಲಯದಲ್ಲಿ ತಮ್ಮ ಶಿಕ್ಷಣ ವೃತ್ತಿಯಿಂದ ಹೆಸರುಗಳಿಸಿದ ಎಲ್ಲಾ ಅಧ್ಯಾಪಕರನ್ನು ಶ್ಲಾಘಿಸುವ ಹಾಗೂ ಇನ್ನುಳಿದ ಅಧ್ಯಾಪಕರನ್ನು ಹುರಿದುಂಬಿಸುವ ಕಾರ್ಯವನ್ನು ಕುಲಪತಿಗಳು ಮಾಡಿದರು. ಇದರಿಂದ ಪ್ರೇರೆಪಿತಗೊಂಡ ಅನೇಕ ಅಧ್ಯಾಪಕರು ಸಂಶೋಧನೆ ಮತ್ತು ಇತರ ಚಟುವಟಿಕೆಗಳಿಗೆ ಹಣಕಾಸಿನ ನೆರವಿಗಾಗಿ ಅನೇಕ ಸಂಸ್ಥೆಗಳಿಗೆ ತಮ್ಮ ಯೋಜನೆಗಳನ್ನು ಸಲ್ಲಿಸಿದ್ದಾರೆ.

೭. ವಿದ್ಯಾರ್ಥಿ ಕಲ್ಯಾಣ :

ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸ್ನಾತಕೋತ್ತರ ಹಾಗೂ ಪಿಹೆಚ್.ಡಿ. ವಿದ್ಯಾರ್ಥಿಗಳಿಗೆ ಸ್ವಚ್ಛತೆ ಮತ್ತು ಶುದ್ಧತೆಯ ವಾತಾವರಣವನ್ನು ಕಲ್ಪಿಸಿಕೊಡಲಾಗಿದೆ ಹಾಗೂ ವಸತಿ ನಿಲಯಗಳಲ್ಲಿ ನಿರಂತರ ವಿದ್ಯುತ್, ನೀರು, ಫ್ಯಾನ್‌ಗಳ ಸೌಲಭ್ಯ, ಒಳ್ಳೆಯ ಕೊಠಡಿಗಳ ಸೌಲಭ್ಯ ಮಾಡಿಕೊಡಲಾಗಿದೆ.

ವಿದ್ಯಾರ್ಥಿಗಳ ಕ್ಷೇತ್ರ ಅಧ್ಯಯನಕ್ಕೋಸ್ಕರ ಹಣಕಾಸಿನ ನೆರವನ್ನು ಹೆಚ್ಚಿಸಲಾಗಿದೆ. ವಿದ್ಯಾರ್ಥಿಗಳು ಉದ್ಯೋಗ ನಿರತರಾಗುವಂತೆ ಪ್ಲೇಸ್‌ಮೆಂಟ್ ಸೆಲ್ ಆರಂಭಿಸಲಾಗಿದೆ. ಅಂಕಗಳ ಅರ್ಹತೆಯನ್ನಾಧರಿಸಿಯೂ ಶಿಷ್ಯವೇತನ ನೀಡುವ ಯೋಜನೆ ಮಾಡಲಾಗಿದೆ.  ಕಲಿಯುವಾಗಲೇ ಗಳಿಸುವ ಯೋಜನೆ ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಗಾಗಿ ಅವರಿಗೆ ಧನ ಸಹಾಯ ಮಾಡಲು ಈ ಶೈಕ್ಷಣಿಕ ಸಾಲಿನಲ್ಲಿ  ಯೋಜನೆ ರೂಪಿಸಲಾಗಿದೆ.

೮. ಐ.ಸಿ.ಟಿ. ಉಪಕ್ರಮಗಳು :

ಆಡಳಿತ ನಿರ್ವಹಣೆ, ಎಫಿಲಿಯೇಶನ್, ಪೇಪರ್‌ಲೆಸ್ ಕಾರ್ಯಗಳನ್ನು ಈಗಾಗಲೇ ನಿರ್ವಹಿಸುತ್ತಿರುವ ವಿಶ್ವವಿದ್ಯಾಲಯವನ್ನು ಅಪರ ಮುಖ್ಯ ಕಾರ್ಯದರ್ಶಿಗಳು, ಉನ್ನತ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ, ಬೆಂಗಳೂರು ಇವರು ಶ್ಲಾಘಿಸಿದ್ದಾರೆ. ವಿಶ್ವವಿದ್ಯಾಲಯದ ಪರೀಕ್ಷೆಗಳಾದ ಮೇಲೆ ಫಲಿತಾಂಶಗಳು ಸರಿಯಾದ ಸಮಯಕ್ಕೆ ಹೊರಬರುತ್ತವೆ. ಇದರಿಂದ ವಿದ್ಯಾರ್ಥಿಗಳಿಗೆ ಬೇರೆ ಕೋರ್ಸ್‌ಗಳಿಗೆ ಪ್ರವೇಶ ಪಡೆಯಲು ಹಾಗೂ ಉದ್ಯೋಗಕ್ಕೆ ಸೇರಲು ಸಹಾಯವಾಗುತ್ತದೆ.

೯. ಶೈಕ್ಷಣಿಕ ಪ್ರಗತಿ :

ವಿಶ್ವವಿದ್ಯಾಲಯ ಧನ ಸಹಾಯ ಆಯೋಗ, ನವದೆಹಲಿಯಿಂದ ಧನ ಸಹಾಯ ಹಾಗೂ ಸಂಶೋಧನಾ ಯೋಜನೆಗಳನ್ನು ನಿರ್ವಹಿಸುವಲ್ಲಿ  ಸಮಿತಿ ವರದಿ ಬಹಳ ಮುಖ್ಯವಾದದ್ದು.  ವಿಶ್ವವಿದ್ಯಾಲಯದ ಶೈಕ್ಷಣಿಕ ಹಾಗೂ ಆಡಳಿತದ ನಿರ್ವಹಣೆಯನ್ನು ಪ್ರಶಂಸಿಸಲಾಗಿದೆ.

೧೦. ಪರಿಣಾಮಕಾರಿ ಆಡಳಿತ ನಿರ್ವಹಣೆ ಮತ್ತು ಯೋಜನೆ :

ಕುಲಪತಿಗಳು ಕಡ್ಡಾಯವಾಗಿ ಬೋಧಕೇತರ ವರ್ಗದವರು ದಿನಂಪ್ರತಿ ನಿರ್ವಹಿಸಿದ ಕಾರ್ಯದ ವರದಿಯನ್ನು ಬರೆಯುವಂತೆ ಹಾಗೂ ಅದನ್ನು ಸಂಬಂಧಪಟ್ಟ ಅಧಿಕಾರಿಗಳು ಗಮನಿಸುವಂತೆ ಮಾಡಲಾಗಿದೆ. ಜರ್ನಲಿಸಮ್ ಮತ್ತು ಮಾಸ್ ಕಮ್ಯೂನಿಕೇಶನ್ ಹಾಗೂ ಸಸ್ಯಶಾಸ್ತ್ರ, ಸ್ನಾತಕೋತ್ತರ ಅಧ್ಯಯನ ಕೋರ್ಸ್‌ಗಳನ್ನು ಈಗಾಗಲೇ  ಆರಂಭಿಸಲಾಗಿದೆ. ಸಕ್ಕರೆ ತಂತ್ರಜ್ಞಾನ ಕೋರ್ಸ್‌ಗಳನ್ನು ನಿಜಲಿಂಗಪ್ಪ ಶುಗರ ಇನ್‌ಸ್ಟ್ಯೂಟ್ ಸಹಯೋಗದಿಂದ ಆರಂಭಿಸಲಾಗಿದೆ. ಇದರಿಂದ ಬೆಳಗಾವಿ ಜಿಲ್ಲೆಯ ಸಕ್ಕರೆ ಖಾರ್ಕಾನೆಗಳಿಗೆ ಪರಿಣಿತ ಮಾನವ ಸಂಪನ್ಮೂಲ ದೊರೆಯಲಿದೆ.

೧೧. ಮಹಿಳಾ ಸಬಲೀಕರಣ ಕೋಶ :

ಮಹಿಳಾ ಸಬಲೀಕರಣ ಕೋಶಕ್ಕೆ ಸಾಮರ್ಥ್ಯವುಳ್ಳ, ವೃತ್ತಿಪರ, ಕ್ರಿಯಾಶೀಲರಾದ ಸದಸ್ಯರನ್ನು ನೇಮಕಗೊಳಿಸಿದೆ. ಮಹಿಳಾ ಸಬಲೀಕರಣ ಕೋಶ ಮಹಿಳಾ ಉದ್ಯೋಗಿಗಳಿಗೆ ಹಾಗೂ ವಿದ್ಯಾರ್ಥಿನಿಯರಿಗೆ ಜ್ಞಾನ ನೀಡುವ ಕಾರ್ಯ ಕೈಗೊಂಡಿದೆ. ಎರಡು ಸಾನಿಟರಿ ನೆಪಕಿನ್ ವೆಂಡಿಂಗ್ ಮಶಿನ್ ಗಳನ್ನು ವಿದ್ಯಾರ್ಥಿನಿಯರಿಗಾಗಿ ಹಾಗೂ ಮಹಿಳಾ ಉದ್ಯೋಗಿಗಳಿಗೆ ಸಹಾಯಕವಾಗಲೆಂದು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿದೆ.

೧೨. ವಿಶೇಷ ಹಾಗೂ ಸರಣಿ ಉಪನ್ಯಾಸಗಳು :

ಬೇರೆ ಬೇರೆ ವಿಷಯಗಳಲ್ಲಿ ನುರಿತ ತಜ್ಞರನ್ನು ಆಹ್ವಾನಿಸಿ ವಿಶ್ವವಿದ್ಯಾಲಯದ ಶೈಕ್ಷಣಿಕ ವಲಯವನ್ನು ಗಟ್ಟಿಗೊಳಿಸುವುದಕ್ಕಾಗಿ ಸರಣಿ ಹಾಗೂ ವಿಶೇಷ ಉಪನ್ಯಾಸಗಳನ್ನು ಅಧ್ಯಾಪಕರಿಗಾಗಿ ಹಾಗೂ ವಿದ್ಯಾರ್ಥಿಗಳಿಗಾಗಿ ಅಯೋಜಿಸಲಾಗುತ್ತಿದೆ. ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಖ್ಯಾತಿಯನ್ನು ಪಡೆದ ಅನೇಕ ವಿದ್ವಾಂಸರು ತಮ್ಮ ಜ್ಞಾನವನ್ನು ಹಂಚಿಕೊಂಡಿದ್ದಾರೆ.

೧೩. ವಿಶ್ವವಿದ್ಯಾಲಯ ಮತ್ತು ಸಮಾಜದ ಬಂಧ :

ಮೊಟ್ಟ ಮೊದಲ ಬಾರಿ ’ಅಭಿನಂದನೋತ್ಸವ’ ಕಾರ್ಯಕ್ರಮವನ್ನು ಹಮ್ಮಿಕೊಂಡು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ವಿಜಯಪುರ, ಬೆಳಗಾವಿ ಮತ್ತು ಬಾಗಲಕೋಟೆಯಲ್ಲಿರುವ ಬೇರೆ ಬೇರೆ ಕ್ಷೇತ್ರಗಳಲ್ಲಿ ಸಾಧನೆಗೈದ ೨೨ ಮಂದಿ ಸಾಧಕರನ್ನು ಕರೆಯಿಸಿ ಅಭಿನಂದಿಸಲಾಯಿತು. ಇದು ಸಮಾಜ ಮತ್ತು ವಿಶ್ವವಿದ್ಯಾಲಯದ ಸಹಯೋಗದ ಸಂಕೇತವಾಗಿದೆ. ಈಗಾಗಲೇ ’ಬಂಬರಗ’ ಎನ್ನುವ ಗ್ರಾಮವನ್ನು ವಿಶ್ವವಿದ್ಯಾಲಯ ದತ್ತು ತೆಗೆದುಕೊಂಡು ಗ್ರಾಮದ ಅಭಿವೃದ್ಧಿಗೆ ಕಾರ್ಯ ಪ್ರವೃತ್ತವಾಗಿದೆ.

ಅಷ್ಟೇ ಅಲ್ಲ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬದ ಮಕ್ಕಳಿಗೆ, ಹೆಚ್.ಐ.ವಿ. ಪೀಡಿತರಿಗೆ, ದೇವದಾಸಿಯರ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ ನೀಡುವುದಕ್ಕೂ ವಿಶ್ವವಿದ್ಯಾಲಯ ಮುಂದಾಗಿದೆ. ಎನ್.ಎಸ್.ಎಸ್‌ನ ಅತಿ ಹೆಚ್ಚು ಘಟಕಗಳನ್ನು ಸ್ಥಾಪಿಸಿ ಆ ಮೂಲಕ ಸಮಾಜ ಹಾಗೂ ವಿಶ್ವವಿದ್ಯಾಲಯದ ಬಂಧವನ್ನು ಸದೃಢಗೊಳಿಸಲಾಗಿದೆ.

ಕುಲಪತಿಗಳು, ಯಾವುದೇ ಸಭೆ ಸಮಾರಂಭಗಳಲ್ಲಿ ಸನ್ಮಾನವನ್ನು ಸ್ವೀಕರಿಸದೇ ಅದಕ್ಕೆ ತಗಲುವ ಖರ್ಚನ್ನು ಸ್ವಾಮಿ ವಿವೇಕಾನಂದ ಅನಾಥಾಶ್ರಮ ಮತ್ತು ಮಹೇಶ್ವರಿ ಅಂಧ ಮಕ್ಕಳ ಶಾಲೆಗೆ ದೇಣಿಗೆಯಾಗಿ ನೀಡುವಂತೆ ಸಂಯೋಜಕರನ್ನು ಪ್ರೇರೆಪಿಸುತ್ತಾರೆ.

ಇದೇ ಸಂದರ್ಭದಲ್ಲಿ ಈ ಪ್ರಗತಿಗೆ ಸಹಕಾರಿಯಾದ  ರಾಜ್ಯಪಾಲರಿಗೆ, ಮುಖ್ಯಮಂತ್ರಿಗಳಿಗೆ,  ಉನ್ನತ ಶಿಕ್ಷಣ ಮಂತ್ರಿಗಳಿಗೆ,  ಸಂಸದರು, ಶಾಸಕರು, ಪರಿಷತ್ ಸದಸ್ಯರು, ಜನಪ್ರತಿನಿಧಿಗಳು, ಸಿಂಡಿಕೇಟ್ ಸದಸ್ಯರು, ವಿದ್ಯಾವಿಷಯಕ ಪರಿಷತ್ ಸದಸ್ಯರು, ಶಿಕ್ಷಕರು, ಶಿಕ್ಷಕೇತರು, ವಿದ್ಯಾರ್ಥಿಗಳು ಹಾಗೂ ಸಮಾಜದ ಮಾರ್ಗದರ್ಶಕರಿಗೆ ಕೃತಜ್ಞತೆ ಸಲ್ಲಿಸಿದ್ದು, ಮುಂದೆಯೂ ಕೂಡ ಇದೇ ರೀತಿಯ ಸಹಕಾರ ನೀಡಲು ವಿನಂತಿಸಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button