Latest

ಸಂಜೀವಿನಿಯಾಗಿದ್ದ ಆಸ್ಪತ್ರೆಗಳಲ್ಲೀಗ ಸೇವೆಗಿಂತ ಸಂಪಾದನೆಯೇ ಮುಖ್ಯ

ಪ್ರಗತಿವಾಹಿನಿ ಸುದ್ದಿ ಮೈಸೂರು: ಬಡ ಹಾಗೂ ಮಧ್ಯಮ ವರ್ಗದವರಿಗೆ ಆರೋಗ್ಯ ಸಂಜೀವಿನಿ ಎಂದೇ ಹೆಸರು ವಾಸಿಯಾಗಿದ್ದ ಆಸ್ಪತ್ರೆ ಎಂದರೆ ಕೆ. ಆರ್. ಆಸ್ಪತ್ರೆ ಹಾಗೂ ಚೆಲುವಾಂಬ ಆಸ್ಪತ್ರೆಗಳು ನಿಧಾನವಾಗಿ ಜನರಿಗೆ ಗಗನಕುಸುಮಗಳಾಗುತ್ತಿವೆ.

ಇಲ್ಲಿ sc, st, ಜೈಲ್ ವಾರ್ಡನ್, ಅನಾಥರಿಗೆ ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತ ತಪಾಸಣೆ ನೀಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕೆ. ಆರ್. ಆಸ್ಪತ್ರೆ ಜನರ ಪಾಲಿಗೆ ದುಬಾರಿಯಾಗುತ್ತಿದ್ದು  ನಾನಾ ಪ್ರದೇಶಗಳಿಂದ ಬರುವ ಜನ ದರ ಗಳನ್ನು ಕೇಳಿಯೇ ಬೆಚ್ಚಿ ಬೀಳುತ್ತಿದ್ದಾರೆ. ಅನೇಕ ಬಾರಿ ಜನ ಇಲ್ಲಿನ ವೆಚ್ಚ ಕೇಳಿ ಚಿಕಿತ್ಸೆಯೇ ಬೇಡವೆಂದು ಹಿಂದಿರುಗಿರುವ ಪರಿಸ್ಥಿತಿಯೂ ಉಂಟು.

ಗರ್ಭಿಣಿಯರಿಗೆ ನೆಲದ ಹಾಸಿಗೆಯೇ ಗತಿ. ಮೈಸೂರು ಮಹಾರಾಜರಿಂದ ಸ್ಥಾಪನೆಗೊಂಡ ರಾಜ್ಯದ ‘ದೊಡ್ಡಾಸ್ಪತ್ರೆ’ ಎನಿಸಿರುವ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚು ರೋಗಿಗಳು ಬರುತ್ತಿರುವುದರಿಂದ ಇಲ್ಲಿ ಹಾಸಿಗೆಗಳ ಕೊರತೆ ಉದ್ಭವಿಸಿದೆ.

ಇದೇ ಸ್ಥಿತಿ ಚೆಲುವಾಂಬ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿಯೂ ಕಂಡು ಬಂದಿದೆ. ಇಲ್ಲಿ ಸಾಮರ್ಥ್ಯಕ್ಕಿಂತ ಹೆಚ್ಚಿನ ಮಹಿಳೆಯರು ಚಿಕಿತ್ಸೆಗೆ ದಾಖಲಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಈಗ ಹಾಸಿಗೆಗಳ ತೀವ್ರ ಕೊರತೆ ಎದುರಾಗಿದೆ.

Home add -Advt

ಚೆಲುವಾಂಬ ಆಸ್ಪತ್ರೆಯಲ್ಲಿ ಹೆರಿಗೆಗಾಗಿ ದಾಖಲಾಗುವವರ ಸಂಖ್ಯೆಯಲ್ಲಿ ಏರಿಕೆ ಇದ್ದು, ಪ್ರತಿನಿತ್ಯ ಸರಾಸರಿ 100 ರಿಂದ 110 ಹೆರಿಗೆ ಪ್ರಕರಣಗಳು ದಾಖಲಾಗುತ್ತಿವೆ. ಈ ಪೈಕಿ 50-55 ಸಾಮಾನ್ಯ ಹೆರಿಗೆ, 10ರಿಂದ 15 ಸಿಸೇರಿಯನ್ ಶಸ್ತ್ರಚಿಕಿತ್ಸೆಯಡಿ ಹೆರಿಗೆಗಳಾಗುತ್ತಿವೆ. ಆದರೆ ಇಲ್ಲಿ ಬೆಡ್ ಗಳ ಕೊರತೆ ಇದೆ. ಚೆಲುವಾಂಬ ಆಸ್ಪತ್ರೆಯಲ್ಲಿರುವ ಬೆಡ್ ಗಳ ಸಂಖ್ಯೆ 420. ಮಂಜೂರಾಗಿರುವ ಬೆಡ್ ಗಳ ಸಂಖ್ಯೆ 470. ಅಂದರೆ 50 ಬೆಡ್ ಗಳ ಕೊರತೆ ಇದೆ. ಮಂಜೂರಾಗಿರುವಷ್ಟು  ಬೆಡ್ ಗಳನ್ನು ಹಾಕಲು ಚೆಲುವಾಂಬ ಕಟ್ಟಡದಲ್ಲಿ ಕೊಠಡಿಗಳ ಕೊರತೆಯೂ ಇದೆ. ಇರುವಷ್ಟು ಜಾಗದಲ್ಲಿ  ಬೆಡ್ ಗಳನ್ನು ಹಾಕಲಾಗಿದ್ದು, ಉಳಿದ  ಬೆಡ್ ಗಳಿಗೆ ಅಗತ್ಯ ಕೊಠಡಿಗಳಿಲ್ಲ ಎನ್ನಲಾಗಿದೆ.

ಯಾವ ವಿಭಾಗ ಎಲ್ಲಿದೆ ಎನ್ನುವುದು ರೋಗಿಗಳಿಗೆ ತಿಳಿಯುವುದಿಲ್ಲ.! ಪಾರಂಪರಿಕ ಕಟ್ಟಡವಾಗಿ ರುವ ಕೆ.ಆರ್.ಆಸ್ಪತ್ರೆಯಲ್ಲಿ ಆಧುನಿಕ ರೀತಿಯ ಸೌಲಭ್ಯಗಳನ್ನು ನೀಡುವುದು ಸವಾಲಾಗಿದೆ. ಶತಮಾನದ ಕಟ್ಟಡದಲ್ಲಿ 1300ಕ್ಕೂ ಹೆಚ್ಚು ಹಾಸಿಗೆಗಳಿದ್ದು, ಓಡಾಡುವುದೇ ಕಷ್ಟ. ಕೆ.ಆರ್.ಆಸ್ಪತ್ರೆಗೆ ಬರುವುದು ಸುಲಭವಾದರೂ ಬಂದ ನಂತರ ಬೇರೆ ಬೇರೆ ಘಟಕಗಳನ್ನು ಹುಡುಕುವುದೇ ಹಿಂಸೆ. ನಿತ್ಯ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಸೌಲಭ್ಯವಿಲ್ಲದೆ ತೀವ್ರ ಒತ್ತಡದಲ್ಲಿ ಆಸ್ಪತ್ರೆ ಇದೆ.

ಹೊಸ ಚಿಕಿತ್ಸಾ ದರ : ಹೊರರೋಗಿಗಳ ನೋಂದಣಿಗೆ 10ರೂ. ಹಾಗೂ ಒಳರೋಗಿ
ನೋಂದಣಿಗೆ 25 ರೂ. ಶುಲ್ಕದಲ್ಲಿ ಮಾತ್ರ ಬದಲಾವಣೆ ಇಲ್ಲ.ಉಳಿದಂತೆ ಒಳರೋಗಿಗಳ ದಿನದ ಹಾಸಿಗೆ ಶುಲ್ಕ 25 ರೂ., ವಿಶೇಷ ವಾರ್ಡ್ ಶುಲ್ಕ 750 ರೂ, ವಿಐಪಿ ಸೂಟ್ಸ್ ವಾರ್ಡ್ಗಳಿಗೆ 3,000
ರೂ. ಶುಲ್ಕ ನಿಗದಿಗೊಳಿಸಲಾಗಿದೆ.ಐಸಿಯುನಲ್ಲಿ ದಿನಕ್ಕೆ 2000 ರೂ.ಶಸ್ತ್ರಚಿಕಿತ್ಸೆಗೆ ಮೊದಲ ಒಂದು ಗಂಟೆ ಅವಧಿಗೆ 750 ರೂ. ಮತ್ತು ನಂತರದ ಅವಧಿಗೆ ಪ್ರತಿ 1 ಗಂಟೆಗೆ 400 ರೂ. ಶುಲ್ಕವನ್ನು ರೋಗಿಗಳು ಪಾವತಿಸಬೇಕಾಗಿದೆ.

ಸ್ಕ್ಯಾನಿಂಗ್, ಶಸ್ತ್ರ ಚಿಕಿತ್ಸೆ ವಿಭಾಗ, ಹೆರಿಗೆ ವಿಭಾಗ ಮತ್ತು ಸ್ಪೆಷಲ್ ವಾರ್ಡ್ ಯಾವುದೂ ಸರಿಯಿಲ್ಲ. ಇತ್ತೀಚೆಗೆ ದುರಸ್ತಿಪಡಿಸಿರುವ ಸ್ಪೆಷಲ್ ವಾರ್ಡನ್ನೂ  ಯಾರಿಗೂ ನೀಡುತ್ತಿಲ್ಲ. ಮುಗ್ಧ ಜನರ ಬಳಿ ಹಣ ವಸೂಲಿ ಹಾಗೂ ಒಂದಿಬ್ಬರು ಸಮಾಜ ಸೇವಕರ ಸೋಗಿನಲ್ಲಿ ಈ ಆಸ್ಪತ್ರೆಯಲ್ಲಿ ಹಣ ಪೀಕುವ ಕೆಲಸಕ್ಕೆ ಮುಂದಾಗಿದ್ದಾರೆ.                                                                                                                                                     – ಮಂಜೇಗೌಡ ಮೈಸೂರು ನಿವಾಸಿ. 

 (ವರದಿ : ಸುಮಾ ಸಿ ಎಸ್)

ಬೆಳಗಾವಿ ಸೇರಿದಂತೆ ರಾಜ್ಯಾದ್ಯಂತ ಭಾರಿ ಮಳೆ; ಯೆಲ್ಲೋ ಅಲರ್ಟ್ ಘೋಷಣೆ

Related Articles

Back to top button