Latest

ಮಕ್ಕಳಿಗೆ ಮನೆಯಲ್ಲಿಯೇ ಶಿಕ್ಷಣ ಎಷ್ಟು ಸೂಕ್ತ?

ಗಿರೀಶ್ ಭಟ್
ಕೊರೋನಾದಿಂದ ಜನಜೀವನ ಸಾಕಷ್ಟು ಬದಲಾವಣೆ ಕಂಡಿದೆ. ಕೊರೋನಾದ ಮೊದಲಿನ ಜೀವನ ಸರಾಗವಾಗಿ ನಡೆಯುತ್ತಿತ್ತು. ಆದರೆ ನಂತರ ಸಮಾಜದ ಎಲ್ಲ ರಂಗದ ಮೇಲೂ ಕೊರೋನಾ ಕರಿ ನೆರಳು ಬಿತ್ತು. ಪ್ರಮುಖವಾಗಿ ಕೋವಿಡ್-೧೯ ನಿಂದ ಶಿಕ್ಷಣದ ಮೇಲೆ ಸಾಕಷ್ಟು ದುಷ್ಪರಿಣಾಮಗಳು ಬಿದ್ದಿವೆ. ವಿದ್ಯಾರ್ಥಿಗಳು ಪರೀಕ್ಷೆ ಬರೆಯಲೆಂದು ಕಷ್ಟಪಟ್ಟು ಓದಿ ತಯಾರಿ ಮಾಡಿಕೊಂಡಿದ್ದು, ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಯಿತು. ವಿದ್ಯಾರ್ಥಿಗಳ ಸುಮಾರು ಒಂದು ವರ್ಷದ ಭವಿಷ್ಯವೇ ಹಾಳಾಯಿತು ಎಂಬಂತಾಗಿದೆ ಈಗ. ೧೦ ನೇ ತರಗತಿ ಮತ್ತು ೧೨ ನೇ ತರಗತಿ ಬಿಟ್ಟು ಉಳಿದ ೧ ರಿಂದ ೬ ಹಾಗೂ ೮ ಮತ್ತು ೯ ನೇ ತರಗತಿಯವರಿಗೆ ಪರೀಕ್ಷೆ ಬರೆಯದೇ ಈ ಸಲದ ಶೈಕ್ಷಣಿಕ ವರ್ಷದಲ್ಲಿ ಪಾಸ್ ಭಾಗ್ಯ ದೊರೆತಿದೆ. ಅಂದರೆ ಅವರು ಮುಂದಿನ ವರ್ಗಕ್ಕೆ ತೇರ್ಗಡೆಯಾಗಿದ್ದಾರೆ. ಇದು ಕೊರೋನಾದ ಪರಿಣಾಮವೇ. ಯಾವುದೋ ಒಂದು ರೋಗವೋ, ಪ್ರಕೃತಿ ವಿಕೋಪವೋ ಬಂದು ಈ ತರಹ ಜನಜೀವನದ ಮೇಲೆ ಪರಿಣಾಮ ಬೀರಿದ್ದು ಕಳೆದ ೧೦೦ ವರ್ಷಗಳಲ್ಲಿ ಇದೇ ಮೊದಲಿರಬಹುದು. ಮೊದಲು ಸ್ಪ್ಯಾನಿಷ್ ಫ್ಲೂ, ಪ್ಲೇಗ್ ಮಹಾಮಾರಿ ಬಂದಾಗಲೂ ಸಾಕಷ್ಟು ಜನರು ಸಾವನ್ನಪ್ಪಿದ್ದರು ಎಂದು ನಾವು ಕೇಳಿದ್ದೇವಷ್ಟೆ. ನಮ್ಮ ಜೀವಿತಾವಧಿಯಲ್ಲಿಯೇ ಈಗ ಕರೋನಾದಿಂದ ಇಂತಹ ಬೆಳವಣಿಗೆಗಳೆಲ್ಲ ನಡೆಯುತ್ತಿರುವುದು ವಿಚಿತ್ರವಾದರೂ ಸತ್ಯ ಪರೀಕ್ಷೆಯಲ್ಲಿ ನಾನು ಶಾಲೆಗೆ/ಕಾಲೇಜಿಗೆ/ಹೈಸ್ಕೂಲಿಗೆ ನೂರಕ್ಕೆ ನೂರು ಅಂಕಗಳಷ್ಟು ಸಂಪಾದಿಸಿ ಕೀರ್ತಿ ತರುತ್ತೇನೆ ಎಂದು ಕನಸು ಕಂಡಿದ್ದ ರ‍್ಯಾಂಕ್ ಸ್ಟುಡೆಂಟ್ಸ್ ಆಸೆಗೆ ಕೊರೋನಾ ತಣ್ಣೀರೆರೆಯಿತು. ಹಲವಾರು ವಿದ್ಯಾರ್ಥಿಗಳು ಹೆಚ್ಚು ಹೆಚ್ಚು ಅಂಕಗಳನ್ನು ತೆಗೆದುಕೊಳ್ಳಬೇಕು. ಇದರಿಂದ ತಾವು ಓದಿದ ಶಾಲೆಗೆ ರಾಜ್ಯ ಮಟ್ಟದಲ್ಲಿ ಹೆಸರು ತಂದುಕೊಡಬೇಕೆಂಬ ಹಂಬಲದಿಂದಿದ್ದರೂ ಕರೋನಾ ಅದಕ್ಕೆ ಸಧ್ಯ ಅವಕಾಶ ನೀಡುತ್ತಿಲ್ಲ. ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ ವಿದ್ಯಾರ್ಥಿಗಳು ಪರೀಕ್ಷೆಯ ನಿರೀಕ್ಷೆಯಲ್ಲಿ ಕಾದು ಕಾದು ಸುಸ್ತಾಗಿದ್ದಾರೆ. ಆದ್ದರಿಂದ ವಿದ್ಯಾರ್ಥಿಗಳು ಒಲ್ಲದ ಮನಸ್ಸಿನಿಂದ ಪದೇ ಪದೇ ಓದುತ್ತ, ಪರೀಕ್ಷಾ ದಿನಾಂಕವನ್ನು ಎದುರು ನೋಡುವಂತಾಗಿದೆ.
ಈ ಕೊರೋನಾದ ನಡುವೆ ಚಿಕ್ಕ ಮಕ್ಕಳಿಗೆ ಆನ್‌ಲೈನ್‌ನಲ್ಲೇ ಶಿಕ್ಷಣ ಮತ್ತು ಮನೆಯಲ್ಲಿ ಶಿಕ್ಷಣ ಕೊಡಬೇಕು ಎಂಬ ಮಾತು ಸಾಕಷ್ಟು ಕೇಳಿಬರುತ್ತಿದೆ. ಮಕ್ಕಳಿಗೆ ಮನೆಯೇ ಮೊದಲ ಪಾಠಶಾಲೆ ಎನ್ನು ನಾಣ್ನುಡಿ ಕೊರೋನಾ ಸಮಯದಲ್ಲಿ ಸುಳ್ಳಾಗುತ್ತಿದೆ. ಎಲ್ಲ ಪಾಠಗಳೂ ಮನೆಯಲ್ಲಿಯೇ ಎನ್ನುವಂತಿದೆ ಕರೋನಾದಿಂದಾದ ಪರಿಸ್ಥಿತಿ. ಆದರೆ ಕೆಲವು ಕಡೆ ಮಕ್ಕಳಿಗೂ ಕೋವಿಡ್ ಸೋಂಕು ತಗುಲಿರುವುದರಿಂದ ಪೋಷಕರಿಗೆ ಮನೆಯಲ್ಲಿ ತಮ್ಮ ತಮ್ಮ ಮಕ್ಕಳಿಗೆ ಶಿಕ್ಷಣ ಕೊಡುವುದೂ ಭಯವೇ ಆಗಿದೆ. ಶಾಲೆ ಪ್ರಾರಂಭವಾದರೂ ನಮ್ಮ ದೇಶದಲ್ಲಿ ಸಾಮಾಜಿಕ ಅಂತರ, ಮುಖಗವಸು ಮತ್ತು ಸ್ಯಾನಿಟೈಜೇಶನ್ ಎಲ್ಲವನ್ನೂ ಕಟ್ಟುನಿಟ್ಟಾಗಿ ಪಾಲನೆ ಮಾಡುವುದು ಸಾಧ್ಯವೇ? ಆಕಸ್ಮಾತ್ ಶಾಲೆ ಪ್ರಾರಂಭವಾದಲ್ಲಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಎಷ್ಟು ಪೋಷಕರು ಮನಸ್ಸು ಮಾಡಬಹುದು?
ನಮ್ಮ ರಾಜ್ಯದ ಪ್ರಮುಖ ನಗರಗಳಲ್ಲದೇ, ತಾಲ್ಲೂಕುಗಳಲ್ಲೂ ಕೂಡ ಹಲವು ಶಾಲೆಗಳು ಆನ್‌ಲೈನ್ ಪಾಠ ಮಾಡುವ ಯೋಜನೆ ಹಾಕಿವೆ. ಕೆಲವು ಶಾಲೆಗಳು ಈಗಾಗಲೇ ಇದನ್ನು ಪ್ರಾರಂಭಿಸಿವೆ ಕೂಡ. ಆದರೆ ಅಷ್ಟು ಚಿಕ್ಕ ಮಕ್ಕಳು ದಿನದಲ್ಲಿ ೪-೫ ಗಂಟೆಗಳ ಕಾಲ ಕಂಪ್ಯೂಟರ್ ಮುಂದೆ ಹೇಗೆ ಕುಳಿತುಕೊಂಡಾರು? ಮನೆಯಲ್ಲಿ ಶಿಕ್ಷಣ ಪಡೆಯುವ ಮಕ್ಕಳಿಗಿಂತ ಇನ್ನೂ ಚಿಕ್ಕ ಮಗುವಿದ್ದರೆ ಅದನ್ನು ನೋಡಿಕೊಳ್ಳಲೇ ಅದರ ತಂದೆ-ತಾಯಂದಿರಿಗೆ ಒಂದು ಕೆಲಸವಾಗಿರುತ್ತದೆ. ಇದರ ನಡುವೆ ಮಕ್ಕಳಿಗೆ ಶಿಕ್ಷಣ ಕೊಡಲು ಪಾಲಕರಿಗೆ ಸಮಯವೆಲ್ಲಿ ಸಿಕ್ಕೀತು? ಮಕ್ಕಳನ್ನು ನೋಡಿಕೊಳ್ಳುತ್ತ ತಾಯಂದಿರಿಗೆ ಮನೆಕೆಲಸವೂ ಮಾಡಲೇ ಬೇಕಾಗಿರುವುದರಿಂದ ಅಡಿಗೆ ಮಾಡುವುದೂ ಕಷ್ಟಕರವಾದೀತು? ಮಕ್ಕಳ ಪುಂಡಾಟಿಕೆಯಿಂದ ಮಕ್ಕಳು ಶಾಲೆಗೆ ಹೋದಾಗ ಮನೆಕೆಲಸಗಳನ್ನೆಲ್ಲ ಮುಗಿಸುವ ಮಾತೆಯರಿಗೆ ಈಗ ಆ ಅವಕಾಶವೂ ಇಲ್ಲವಾಗಿದೆ.
ಕರೋನಾ ಮೊದಲು ಒಂದು ಕೊಠಡಿ ತುಂಬಾ ಮಕ್ಕಳನ್ನು ತುಂಬಿ ಅವರಿಗೆ ಒಬ್ಬ ಶಿಕ್ಷಕ/ಶಿಕ್ಷಕಿ ಪಾಠ ಮಾಡಿದಾಗಲೇ ಕೆಲವು ಮಕ್ಕಳಿಗೆ ಅರ್ಥವಾಗದ ಪಾಠ ಆನ್‌ಲೈನ್‌ನ ಮೂಲಕ ಏಷ್ಟು ಅರ್ಥವಾದೀತು? ಸರ್ಕಾರಿ ಶಾಲೆಗಳಲ್ಲಂತೂ ಸಣ್ಣ ಕೊಠಡಿಯಲ್ಲಿ ಮಕ್ಕಳನ್ನು ಒತ್ತೊತ್ತಾಗಿ ಕೂರಿಸುತ್ತಾರೆ. ಅವು ಪರಸ್ಪರ ಕಚ್ಚಾಡುತ್ತವೆ. ಜಗಳವಾಡುತ್ತವೆ. ಹೊಡೆದಾಡುತ್ತವೆ ಕೂಡ. ಖಾಸಗಿ ಶಾಲೆಗಳಲ್ಲೂ ಒಂದು ತರಗತಿಯಲ್ಲಿ ೨೦ ಕ್ಕೂ ಹೆಚ್ಚು ಮಕ್ಕಳನ್ನು ಕೂರಿಸುತ್ತಾರೆ. ಅನೇಕ ಶಾಲೆಗಳಲ್ಲಿ ಮಕ್ಕಳಿಗೆ ಮಾತು ಕೇಳಿಸಲು ಬೆತ್ತದ ಪ್ರಯೋಗದ ಮೂಲಕವೂ ಶಿಕ್ಷಣ ನೀಡಲಾಗುತ್ತದೆ. ಈ ನಡುವೆ ಮನೆಯಲ್ಲೇ ಶಾಲೆ (ಹೋಮ್‌ಸ್ಕೂಲ್) ನಡೆಸಬೇಕೆಂಬ ಒತ್ತಾಯವೂ ಕೇಳಿಬರುತ್ತಿದೆ. ಪೋಷಕರೇ ತಾವು ತಮ್ಮ ಮಕ್ಕಳಿಗೆ ಕಲಿಸುವುದು ಅಥವಾ ಮನೆಯಲ್ಲಿಯೇ ಶಿಕ್ಷಕರನ್ನಿಟ್ಟು ಮಕ್ಕಳಿಗೆ ಶಿಕ್ಷಣ ನೀಡುವುದು ಇದರ ಉದ್ಧೇಶವಾಗಿದೆ.
ಮನೆಯಲ್ಲಿ ಶಿಕ್ಷಣ/ ಆನ್‌ಲೈನ್ ಪಾಠದಿಂದ ಆಗುವ ಕೆಲವು ಉಪಯೋಗಗಳು
* ಮಕ್ಕಳಿಗೆ ಯಾವುದರಲ್ಲಿ ಆಸಕ್ತಿ ಇದೆಯೋ ಅಂಥ ವಿಷಯವನ್ನೇ ಆಯ್ಕೆ ಮಾಡಿಕೊಳ್ಳಬಹುದು.
* ಮಕ್ಕಳಿಗೆ ರಾಮಾಯಣ, ಮಹಾಭಾರತಗಳಂತಹ ಪುರಾಣ ಕಥೆಗಳನ್ನು ಹೇಳಬಹುದು. ಇಂತಹ ಕಥೆಗಳ ಮೂಲಕ ಮಕ್ಕಳಿಗೆ ನೀತಿಪಾಠಗಳನ್ನು ತಿಳಿಸಿಕೊಟ್ಟಂತಾಗುತ್ತದೆ.
* ತಮ್ಮ ಮಕ್ಕಳ ಪಠ್ಯ ಹಾಗೂ ತರಗತಿ ಸಮಯವನ್ನು ಮನೆಯವರೇ ನಿರ್ಧರಿಸಬಹುದು.
* ಮಕ್ಕಳು ಕಲಿಕೆಯ ಜೊತೆ ಬೇಸರವಾಗದಂತೆ ತಮಾ? ಮಾಡುತ್ತ ಕಲಿಯಬಹುದು.
* ಮಕ್ಕಳಿಗೆ ಯಾವ ವಿಷಯ ಕಠಿಣವೋ ಅಂತಹ ವಿಷಯವನ್ನು ಪಾಲಕರಿಂದ ಹೆಚ್ಚು ಹೆಚ್ಚು ಕೇಳಿ ತಿಳಿದುಕೊಳ್ಳಬಹುದು.
* ಮಕ್ಕಳು ವೈಯಕ್ತಿಕವಾಗಿಯೂ ಕಠಿಣವೆನಿಸಿದ ವಿಷಯವನ್ನು ಹೆಚ್ಚೆಚ್ಚು ಓದಬಹದು.
* ಕೆಲವು ಶಾಲೆಗಳಲ್ಲಿ ನಡೆಯುವಂತಹ ’ರ‍್ಯಾಗಿಂಗ್’ನಿಂದ ವಿದ್ಯಾರ್ಥಿಗಳನ್ನು ಮುಕ್ತಗೊಳಿಸಬಹುದು. ಇದರಿಂದ ಮಕ್ಕಳು ’ರ‍್ಯಾಗಿಂಗ್’ನಿಂದ ಅನುಭವಿಸುವ ಮಾನಸಿಕ ಹಿಂಸೆ ಕೊನೆಗೊಳಿಸಬಹುದು.
* ಪಠ್ಯ ಶಿಕ್ಷಣದೊಂದಿಗೆ ಸಂಗೀತ, ನೃತ್ಯ, ಕ್ರೀಡೆಗಳ ಬಗ್ಗೆ ವಿದ್ಯಾರ್ಥಿಗೆ ಶಿಕ್ಷಣ ನೀಡಬಹುದು. ಮಕ್ಕಳಿಗೆ ಯಾವ ವಿಷಯದಲ್ಲಿ ಆಸಕ್ತಿ ಇದೆಯೋ ಆ ವಿಷಯಕ್ಕೆ ಹೆಚ್ಚು ಒತ್ತು ಕೊಡಬಹುದು.
* ಮನೆಯಲ್ಲಿಯೇ ಚಿಕ್ಕಂದಿನಿಂದ ಮಕ್ಕಳಿಗೆ ಯೋಗಾಭ್ಯಾಸವನ್ನು ಕಲಿಸಬಹುದು.
* ಮಕ್ಕಳು ತಾನು ಕಲಿಯುವ ವೇಗದಲ್ಲಿಯೇ ಶಿಕ್ಷಣ ಪಡೆಯಲು ಅವಕಾಶವಿರುತ್ತದೆ. ಕಲಿಸುವ ವಿಧಾನ ಮತ್ತು ವೇಗದ ಮೇಲೆ ಪಾಲಕರಿಗೆ/ಶಿಕ್ಷಕರಿಗೆ ಹಿಡಿತವಿರುತ್ತದೆ.

ಆದರೆ ಹೋಮ್ ಸ್ಕೂಲ್‌ನಿಂದ ಸಾಕಷ್ಟು ಅಡ್ಡ ಪರಿಣಾಮಗಳೂ ಇವೆ. ಮನೆಯಲ್ಲಿ ಕಲಿಯುವ ಮಕ್ಕಳಿಗೆ ಸಮಾಜದ ಬೇರೆ ಬೇರೆ ಮಕ್ಕಳ ಜೊತೆ ಬೆರೆಯುವ ಅವಕಾಶವಿರುವುದಿಲ್ಲ. ಪಾಲಕರು ಪುಸ್ತಕ ಮತ್ತು ಇತರ ಕಲಿಕಾ ಸಾಮಗ್ರಿಗಳ ಮೇಲೆ ಹೆಚ್ಚು ವೆಚ್ಛ ಭರಿಸಬೇಕಾಗುತ್ತದೆ. ಮನೆಯನ್ನು ಶಾಲೆಯನ್ನಾಗಿ ಪರಿವರ್ತಿಸಲೂ ಸಾಕಷ್ಟು ಹಣ ಖರ್ಚಾಗಬಹುದು. ಇಷ್ಟೆಲ್ಲ ವ್ಯವಸ್ಥೆ ಮಾಡಿ ಮನೆಯಲ್ಲಿ ಶಿಕ್ಷಣ ಪ್ರಾರಂಭಿಸಿದರೂ ಮಕ್ಕಳಿಗೆ ಶಾಲೆಯ ಮತ್ತು ಮನೆಯ ನಡುವಿನ ಜೀವನದ ಮಧ್ಯೆ ವ್ಯತ್ಯಾಸವೇ ತಿಳಿಯುವುದಿಲ್ಲ.
ಶಾಲೆಯಲ್ಲಾದರೆ ಶಿಕ್ಷಕರು ಸಾಕಷ್ಟು ಕಲಿಸಿದ ಅನುಭವ ಹೊಂದಿದವರಾಗಿರುತ್ತಾರೆ ಮತ್ತು ಹೆಚ್ಚು ತಿಳಿದವರಾಗಿರುತ್ತಾರೆ. ಆದರೆ ಮನೆಯಲ್ಲಿ ಪೋ?ಕರಿಗೆ ಅನುಭವವಿರದು ಮತ್ತು ಶಾಲೆಯ ಶಿಕ್ಷಕರಷ್ಟು ಎಲ್ಲಾ ವಿ?ಯಗಳಲ್ಲಿ ಪರಿಣಿತರಾಗಿರುವುದಿಲ್ಲ. ಮಕ್ಕಳು ಹೇಳಿದ್ದನ್ನು ಕೇಳದಿದ್ದಾಗ ಪಾಲಕರು ಸಾಕಷ್ಟು ಸಂಯಮದಿಂದ ಶಿಕ್ಷಣ ಕೊಡಬೇಕಾಗುತ್ತದೆ. ಅಲ್ಲದೆ ಕೋಪ ಬಂದರೂ ತಡೆದುಕೊಳ್ಳುವುದನ್ನು ಕಲಿಯಬೇಕಾಗುತ್ತದೆ. ಮನೆಯ ಶಿಕ್ಷಣದಿಂದ ವ್ಯವಸ್ಥಿತವಾದ ಸಿಲೆಬಸ್ ಕೊರತೆ ಕಾಡಬಹುದು. ಇದರಿಂದ ಸರಿಯಾದ ಸಮಯದಲ್ಲಿ ವರ್ಷದ ಸಿಲೆಬಸ್ ಕೊನೆಗೊಳ್ಳದೇ ಇರಬಹುದು. ಮನೆಯಲ್ಲಿ ಚಿಕ್ಕ ಮಗುವಿದ್ದರಂತೂ ಇತರ ಮಕ್ಕಳ ಪಾಠ ನಡೆಯುತ್ತಿದ್ದಾಗ ಆ ಮಗುವಿನಿಂದ ಸಾಕಷ್ಟು ಅಡಚಣಿ ಉಂಟುಮಾಡಬಹುದು. ಇನ್ನು ಪ್ರೀತಿಯಿಂದ ಬೆಳೆಸಿರುವ ತಮ್ಮ ಮಕ್ಕಳಿಗೆ ಸಾಕಷ್ಟು ನಿಷ್ಠುರವಾಗಿ ವಿದ್ಯೆ ಕಲಿಸುವುದೂ ಪಾಲಕರಿಗೆ ಸವಾಲಾದೀತು. ಹೀಗೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇರುವ ಕೊರೋನಾ ಹಾವಳಿ ನಡುವೆ ಎಷ್ಟು ದಿನವೆಂದು ಜೀವನದ ಚಟುವಟಿಕೆಗಳನ್ನು ನಿಲ್ಲಿಸಲು ಸಾಧ್ಯ. ಏನಾದರೂ ಪರ್ಯಾಯ ಮಾರ್ಗಗಳನ್ನು ಹುಡುಕಲೇ ಬೇಕು ಅಲ್ಲವೆ?

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button