*ಇಲ್ಲಿದ್ದಾಗ ನನ್ನ ಸಂಪರ್ಕದಲ್ಲಿ ಇರದ ಪ್ರಜ್ವಲ್ ವಿದೇಶಕ್ಕೆ ಹೊದ ಮೇಲೆ ಹೇಗೆ ಇರುತ್ತಾನೆ? ಹೆಚ್ಡಿಕೆ ಪ್ರಶ್ನೆ*
ಪ್ರಗತಿವಾಹಿನಿ ಸುದ್ದಿ: ಪ್ರಜ್ವಲ್ ನನ್ನ ಸಂಪರ್ಕದಲ್ಲಿ ಇಲ್ಲ. ಆತ ಮೊದಲಿನಿಂದಲೂ ಪಕ್ಷದ ಚಟುವಟಿಕೆಗಳ ಸಂದರ್ಭದಲ್ಲಿಯೂ ನನ್ನ ಸಂಪರ್ಕದಲ್ಲಿ ಇರಲಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ಡಿ ಕುಮಾರಸ್ವಾಮಿ ಹೇಳಿದರು.
ಮೈಸೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿದ್ದಾಗಲೇ ನನ್ನ ಸಂಪರ್ಕದಲ್ಲಿರದ ಪ್ರಜ್ವಲ್ ವಿದೇಶದಲ್ಲಿರುವಾಗ ಹೇಗೆ ನನ್ನ ಜೊತೆ ಸಂಪರ್ಕದಲ್ಲಿರುತ್ತಾನೆ. ಪ್ರಜ್ವಲ್ ಪ್ರಕರಣ ಸಂಬಂಧ ಎಸ್ಐಟಿ ತನಿಖೆಯ ನಡೆಯನ್ನು ಪ್ರಶ್ನಿಸಿರುವ ಅವರು, ಎಸ್ಐಟಿ ಅನವಶ್ಯಕವಾಗಿ ಕೆಲವರನ್ನು ಬಂಧಿಸುತ್ತಿದೆ ಎಂದು ಆರೋಪಿಸಿದರು.
ಬಿಜೆಪಿ ಮುಖಂಡ ದೇವೇರಾಜೇಗೌಡರನ್ನು ಪ್ರಕರಣ ದಾಖಲಾಗಿ ಒಂದು ತಿಂಗಳ ನಂತರ ಬಂಧಿಸಿದ್ದು ಯಾಕೆ ಎಸ್ಐಟಿಯವರಿಗೆ ದೇವೇರಾಜೇಗೌಡರಿಂದ ಏನು ಮಾಹಿತಿ ಬೇಕಿದೆ? ಪ್ರಜ್ವಲ್ ರೇವಣ್ಣ ವಿಡಿಯೋ ವೈರಲ್ ಮಾಹಿತಿನಾ? ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದ ಮಾಹಿತಿನಾ? ಈ ಪ್ರಕರಣದ ಆಡಿಯೋ ತುಣುಕು ಬಿಡುಗಡೆಯಾಗಿತ್ತಲ್ಲ ಅದರ ಮಾಹಿತಿನಾ? ಏತಕ್ಕಾಗಿ ಎಸ್ಐಟಿ ನಾಲ್ಕು ದಿನದಿಂದ ವಶಕ್ಕೆ ಪಡೆದುಕೊಂಡು ಇಟ್ಟುಕೊಂಡಿದೆ ಎಂದು ಅವರು ಪ್ರಶ್ನಿಸಿದರು.
ಈ ಪ್ರಕರಣದಲ್ಲಿ ಎರಡು ಭಾಗ ಇದೆ. ಒಂದು ವಿಡಿಯೋ ಮಾಡಿಕೊಂಡವನ ಅಪರಾಧ. ಮತ್ತೊಂದು ಆ ವಿಡಿಯೋವನ್ನು ವೈರಲ್ ಮಾಡಿ ಕುಟುಂಬಗಳನ್ನು ಬೀದಿಗೆ ತಂದವರದ್ದು. ಇದು ಕೂಡ ಘೋರ ಅಪರಾಧ. ಆದರೆ ಎಸ್ಐಟಿ ವೈರಲ್ ಮಾಡಿದವರನ್ನು ಬಂಧಿಸುವಲ್ಲಿ ವಿಫಲವಾಗಿದೆ. ಆರೋಪಿ ಖಾಸಗಿ ಚಾನೆಲ್‌ಗೆ ಸಂದರ್ಶನ ನೀಡುತ್ತಾನೆ. ಆದರೆ ಎಸ್ಐಟಿಗೆ ಸಿಗುತ್ತಿಲ್ಲ ಅಂದರೆ ಏನು ಅರ್ಥ ಎಂದು ಕುಮಾರಸ್ವಾಮಿ ಪ್ರಶ್ನಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ