Kannada NewsKarnataka NewsLatestNational

*ಕುಂಭಮೇಳದ ಕಾಲ್ತುಳಿತದಲ್ಲಿ ಸಿಲುಕಿದ ಕನ್ನಡಿಗರೆಷ್ಟು?*

ಪ್ರಗತಿವಾಹಿನಿ ಸುದ್ದಿ : ಉತ್ತರ ಪ್ರದೇಶದ ಪ್ರಯಾಗ್ ರಾಜ್ ನಲ್ಲಿ ನಡೆಯುತ್ತಿರುವ ಕುಂಭಮೇಳದಲ್ಲಿ ಇಂದು ಬೆಳಗಿನ ಜಾವ ನಡೆದ ಕಾಲ್ತುಳಿತದಲ್ಲಿ ಬಹಳಷ್ಟು ಕನ್ನಡಿಗರೂ ಸಹ ಗಾಯಗೊಂಡಿದ್ದಾರೆ ಎನ್ನುವ ಮಾಹಿತಿ ಬಂದಿದೆ.

ಕುಂಬಮೇಳದಲ್ಲಿ ಇಂದು 10 ಕೋಟಿಯಷ್ಟು ಜನರು ಸೇರಿರುವ ಅಂದಾಜು ಮಾಡಲಾಗಿದ್ದು, ಲಕ್ಷಾಂತರ ಕನ್ನಡಿಗರು ಸಹ ಇದರಲ್ಲಿ ಸೇರಿದ್ದಾರೆ. ಕಾಲ್ತುಳಿತದ ಸ್ಥಳದಲ್ಲಿ ಸಾವಿರಾರು ಕನ್ನಡಿಗರು ಇದ್ದಿರಬಹುದು ಎಂದು ಅಂದಾಜಿಸಲಾಗಿದೆ. ಕರ್ನಾಟಕದ ನಿಮ್ಹಾನ್ಸ್ ಆಸ್ಪತ್ರೆಯ ವೈದ್ಯೆ ಡಾ. ಸೌಮ್ಯ ಅವರು ಚಿಕಿತ್ಸಾ ಘಟಕದಲ್ಲಿ ಸೇವೆಯಲ್ಲಿ ನಿರತರಾಗಿದ್ದಾರೆ.

Home add -Advt

ಕರ್ನಾಟಕದ ವಿವಿಧ ಭಾಗದ ಜೊತೆಗೆ ಬೆಳಗಾವಿಯ ನಾಲ್ವರು ಸಹ ಗಾಯಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಖಚಿತ ಮಾಹಿತಿ ಇನ್ನಷ್ಟೇ ಬರಬೇಕಿದೆ. ಘಟನೆಯಲ್ಲಿ 10ಕ್ಕೂ ಹೆಚ್ಚು ಜನರು ಸಾವಿಗೀಡಾಗಿರುವ ಶಂಕೆ ವ್ಯಕ್ತಪಡಿಸಲಾಗುತ್ತಿದೆಯಾದರೂ ಯಾವುದೂ ಖಚಿತ ಮಾಹಿತಿಯಲ್ಲ.

ಕುಂಬಮೇಳ ನಡೆಯುವ ಸ್ಥಳದಿಂದ ಕನಿಷ್ಟ 15 ಕಿಮೀ ದೂರದಲ್ಲಿ ವಾಹನ ನಿಲ್ಲಿಸಿ ನಡೆದು ಹೋಗಬೇಕಾಗಿದೆ. ಮಕ್ಕಳು, ವೃದ್ದರು ಪ್ರಯಾಸ ಪಡುತ್ತಿದ್ದಾರೆ. ವ್ಯವಸ್ಥೆ ತುಂಬಾ ಅಚ್ಚುಕಟ್ಟಾಗಿದ್ದರೂ ಅಪಾರ ಸಂಖ್ಯೆಯಲ್ಲಿ ಜನರು ಸೇರುತ್ತಿರುವುದರಿಂದ ನಿಯಂತ್ರಣ ಕಷ್ಟವಾಗುತ್ತಿದೆ. ಕರ್ನಾಟಕದಿಂದ ಲಕ್ಷಾಂತರ ಜನರು ಪ್ರತಿನಿತ್ಯ ವಿವಿಧ ವಾಹನಗಳಲ್ಲಿ ಪ್ರಯಾಗ್ ದತ್ತ ತೆರಳುತ್ತಿದ್ದಾರೆ. ಆದರೆ ವೃದ್ದರು ಮತ್ತು ಮಕ್ಕಳು ಬಾರದಿರುವುದು ಉತ್ತಮ ಎಂದು ಅಲ್ಲಿನ ಪರಿಸ್ಥಿತಿ ನೋಡಿದವರು ವಿನಂತಿಸುತ್ತಿದ್ದಾರೆ.

Related Articles

Back to top button