ಮಕ್ಕಳ ಕೋಪ ನಿಭಾಯಿಸುವ ಬಗೆ

ಜಯಶ್ರೀ ಜೆ. ಅಬ್ಬಿಗೇರಿ
ಮಾನವ ಭಾವ ಜೀವಿ ಭಾವನೆಗಳನ್ನು ನಿಭಾಯಿಸುವುದು ಒಂದು ದೊಡ್ಡ ಕಲೆ. ಅದರಲ್ಲೂ ಕೋಪವನ್ನು ನಿಭಾಯಿಸುವುದು ದೊಡ್ಡವರಿಗೇ ಕಷ್ಟಕರ ಸಂಗತಿ. ಇನ್ನು ಮಕ್ಕಳ ಕೋಪದ ವಿಷಯದಲ್ಲಂತೂ ನಾವೂ ಸಿಟ್ಟು ನೆತ್ತಿಗೇರಿಸಿಕೊಂಡು ಕೂಗಾಡಿ ಬಿಡುತ್ತೇವೆ. ಮಕ್ಕಳಿಗೆ ಯಾವುದೇ ಭಾವನೆಗಳನ್ನು ನಿಭಾಯಿಸುವುದು ಕಠಿಣವೆನಿಸುತ್ತದೆ. ಅದರಲ್ಲೂ ಬೇಗ ಸಿಟ್ಟಿಗೇಳುವ ಮಕ್ಕಳ ಸಮಾಧಾನಿಸುವಲ್ಲಿ ತಾಯಂದಿರು ಪಡುವ ಕಷ್ಟ ಅಷ್ಟಿಷ್ಟಲ್ಲ.

ಕೆಲವೊಮ್ಮೆ ಬೈದು, ಇನ್ನೂ ಕೆಲವೊಮ್ಮೆ ಅಂಗಲಾಚಿ ಬೇಡಿ, ತಾರಕ್ಕಕ್ಕೇರಿದಾಗ ಹೊಡೆಯುವ ಪ್ರಸಂಗಗಳೂ ನಡೆದು ಬಿಡುತ್ತವೆ. ನಂತರ ಮಕ್ಕಳ ಮೇಲಿನ ಮೋಹಕ್ಕೆ ಕಣ್ಣು ತುಂಬುತ್ತವೆ. ಬೆಂಕಿಯ ಕಿಡಿ ಮೈ ಮೇಲೆ ಬಿದ್ದ ಹಾಗೆ ಕೂಗುವ, ಚೀರುವ ಮಕ್ಕಳನ್ನು ನಿಭಾಯಿಸುವುದು ಸಾಹಸದ ಕೆಲಸದಂತೆ ಕಾಣಿಸುತ್ತದೆ. ನಾವು ತಾಳ್ಮೆ ವಹಿಸಿದರೆ, ಹೂವಿನಂಥ ಮನಸ್ಸಿರುವ ಪುಟ್ಟ ಮಕ್ಕಳ ಕೋಪ ನಿಭಾಯಿಸುವುದು ಸುಲಭ. ಮಕ್ಕಳ ಕೋಪ ನಿಭಾಯಿಸಲು ಹೀಗೆ ಮಾಡಿ.

ಸಾಮಾನ್ಯ ಸಂಗತಿ ನೆನಪಿಡಬೇಕು


ಮಗು ಯಾವಾಗಲೂ ನಾವು ಹೇಳಿದಂತೆ ಕೇಳಬೇಕು. ನಾವು ಕಲಿಸಿದ್ದನ್ನು ಕಲಿಯಬೇಕು ಎನ್ನುವ ಮನೋಭಾವನೆಗೆ ಅಂಟಿಕೊಳ್ಳಬಾರದು. ಮಗು ನಮ್ಮಂತೆಯೇ ಭಾವನೆಗಳುಳ್ಳ ಜೀವಿ. ಅದಕ್ಕೆ ತನ್ನದೇ ಆದ ಇಷ್ಟ ಕಷ್ಟಗಳು ಇವೆ ಎನ್ನುವುದನ್ನು ತಿಳಿದುಕೊಳ್ಳಬೇಕು. ಭಾವನೆಗಳು ಬೆಳವಣಿಗೆಯ ಭಾಗಗಳು. ಮಗು ನಮ್ಮಂತೆಯೇ ವಿವಿಧ ರೀತಿಯ ಭಾವನೆಗಳನ್ನು ಅನುಭವಿಸುತ್ತದೆ. ತಾನು ಬಯಸಿದಂತೆ ಆಗದಿದ್ದರೆ, ತನಗೆ ಬೇಕಾದ್ದು ಸಿಗದಿದ್ದರೆ ಮಗುವಿಗೆ ಸಿಟ್ಟು ಬರುವುದು ಸಾಮಾನ್ಯ.

ಮಗು ಕೋಪಗೊಂಡಾಗ ಅದಕ್ಕೆ ದೈಹಿಕವಾಗಿ ಶಿಕ್ಷೆ ನೀಡುವುದು ತರವಲ್ಲ. ಕೋಪಗೊಳ್ಳುವುದು ಸಾಮಾನ್ಯ ಸಂಗತಿ ಎಂಬುದನ್ನು ನೆನಪಿಡಿ. ಆದರೆ ಅದನ್ನು ನಿಯಂತ್ರಿಸಲು ಮಗುವಿನ ಚಿತ್ತವನ್ನು ಅದಕ್ಕೆ ಇಷ್ಟವಿರುವ ಬೇರೆ ವಿಷಯಗಳೆಡೆ ಆಕರ್ಷಿಸುವುದು ಸೂಕ್ತ. ಅದರ ಮನಸ್ಸನ್ನು ಅರ್ಥೈಸಿಕೊಳ್ಳಲು ಪ್ರಯತ್ನಿಸಬೇಕು. ವರ್ತನೆಯಲ್ಲಿ ಬದಲಾವಣೆ ತಂದುಕೊಂಡಾಗ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹಿಸಬೇಕು.

ಒಲುಮೆಯಿಂದ ಹೇಳಬೇಕು

ಯಾವ ವಾತಾವರಣದಲ್ಲಿ, ಯಾವ ಸಂದರ್ಭದಲ್ಲಿ ಮಗು ಕೋಪಗೊಳ್ಳುತ್ತದೆ ಎಂಬುದನ್ನು ಗಮನಿಸಿ, ಸಮಾಲೋಚಿಸಿ. ತಿಂಡಿ, ಊಟ, ಓದಿನ ವಿಷಯದಲ್ಲಿ ಮನಸ್ಸಿಗೆ ಹಿತವಿಲ್ಲದ್ದನ್ನು ಮಾಡಬೇಕಾಗಿ ಬಂದಾಗ, ಆಸಕ್ತಿಗೆ ವಿರುದ್ಧವಾದದ್ದನ್ನು, ಇಷ್ಟವಿಲ್ಲದ್ದನ್ನು ಮಾಡಲು ಹೇಳಿದಾಗ ಮಗುವಿಗೆ ಒಮ್ಮಿಂದೊಮ್ಮೆಲೇ ಸಿಟ್ಟು ಬರಬಹುದು. ಹೀಗಾಗಿ ಮಗುವಿಗೆ ಇಂಥ ವಿಷಯಗಳನ್ನು ಆಜ್ಞೆಯ ರೀತಿ ಹೇಳದೇ, ಒಲುಮೆಯಿಂದ ಕಾಳಜಿಪೂರ್ವಕವಾಗಿ ಹೇಳಬೇಕು.

ಚೆನ್ನಾಗಿರುವ ವರ್ತನೆಗಳಿಗೆ ಪ್ರಶಂಸಿಸಿ ಮಾಡಲೇಬೇಕಾದ ಕೆಲಸಗಳನ್ನು ಮಾಡಲು ಹುರುದುಂಬಿಸಬೇಕು. ಜೊತೆಗೆ ಸಮಯಾವಕಾಶ ನೀಡಬೇಕು. ಹಾಗಾದಾಗ ಒತ್ತಡವೆನಿಸುವುದಿಲ್ಲ. ಕೋಪ ಬರದಂತೆ ತಡೆಗಟ್ಟಬಹುದು. ಕೋಪ ಮತ್ತೆ ಮತ್ತೆ ಪುನರಾವರ್ತನೆ ಆಗದಂತೆ ಹಲವಾರು ಬಾರಿ ತಾಳ್ಮೆಯಿಂದ ತಿಳಿ ಹೇಳುವುದನ್ನು ಮುಂದುವರಿಸಬೇಕು.

ಭಾವನೆಗಳಿಗೆ ಪ್ರಾಮುಖ್ಯತೆ ನೀಡಬೇಕು

ನಮಗೆ ತೀರ ಕ್ಷುಲ್ಲಕವೆನಿಸುವ ಸಂಗತಿಗಳು ಮಗುವಿಗೆ ತೀರ ಮುಖ್ಯ ಎನಿಸುತ್ತವೆ. ನಾವು ಕೆಂಪು ಬಣ್ಣದ ಅಂಗಿ ತೊಡಿಸಲು ಹೋದಾಗ ಹಳದಿ ಬಣ್ಣದ ಅಂಗಿಯನ್ನೇ ತೊಡಿಸೆಂದು ಸಿಟ್ಟು ಮಾಡುತ್ತದೆ. ನಮಗೆ ಅದು ಮುಖ್ಯವಲ್ಲದ ವಿಷಯ. ಇದರಲ್ಲೇನು ಕೋಪಿಸಿಕೊಳ್ಳುವಂಥದ್ದು ಹಟ ಮಾಡುವಂಥದ್ದು ಇದೆ ಎಂದು ನಮಗೆನಿಸುತ್ತದೆ.

ಆದರೆ ಮಗುವಿಗೆ ಅದೇ ದೊಡ್ಡ ವಿಷಯ. ಪುಸ್ತಕ, ಪೆನ್ಸಿಲ್, ವಾಟರ್ ಬಾಟಲ್, ಇರೇಸರ್, ಆಟಿಕೆ ಸಾಮನು ಇನ್ನೊಂದು ಮಗುವಿನ ಕೈಯಲ್ಲಿರುವ ಗೊಂಬೆ ಬೇಕೆಂಬ ವಿಷಯದಲ್ಲೂ ಮಗು ಸಿಟ್ಟು ಮಾಡಿಕೊಳ್ಳುತ್ತದೆ. ಇಂಥ ಕೆಲ ಸಂಗತಿಗಳಲ್ಲಿ ಮಕ್ಕಳ ಭಾವನೆಗೆ ಪ್ರಾಮುಖ್ಯತೆ ನೀಡಬೇಕು. ಕೋಪಿಸಿಕೊಳ್ಳುವ ಇತರ ಸಂಗತಿಗಳಲ್ಲಿ ಪ್ರೀತಿಯಿಂದ ಮನವೊಲಿಸಬೇಕು.
ಶಾಂತವಾಗಿರಬೇಕು
ಮಗುವಿಗೆ ಕೋಪ ಬಂದಾಗ ನಾವೂ ಬುದ್ಧಿಯ ಮೇಲಿನ ನಿಯಂತ್ರಣ ಕಳೆದುಕೊಂಡು ಸಿಟ್ಟಿಗೆದ್ದು ವರ್ತಿಸಬಾರದು. ಕೆಟ್ಟ, ಅವಾಚ್ಯ ಶಬ್ದಗಳನ್ನು ಬಳಸಿ ಅವರನ್ನು ನಿಯಂತ್ರಿಸಲು ಹೋಗಬಾರದು. ಇದರಿಂದ ಪರಿಸ್ಥಿತಿ ಮತ್ತಷ್ಟು ಹದಗೆಡುತ್ತದೆ. ಅದರ ಬದಲಾಗಿ ನಾವು ಶಾಂತವಾಗಿರಬೇಕು. ಮಕ್ಕಳ ಮನಸ್ಸು ಮುಗ್ಧ. ಆದ್ದರಿಂದ ಸಮಾಧಾನದಿಂದ ತಿಳಿ ಹೇಳಿದರೆ ಅವರ ಸಿಟ್ಟು ತಹಬದಿಗೆ ಬರುತ್ತದೆ.

ನಮ್ಮ ಶಾಂತ ವರ್ತನೆಯು ಮಕ್ಕಳು ಕೋಪದಿಂದ ಹೊರಗೆ ಬರಲು ಸಹಕರಿಸುತ್ತದೆ. ನಮ್ಮ ವರ್ತನೆ ಗಮನಿಸಿ ಬರಬರುತ್ತ ಮಕ್ಕಳು ಶಾಂತವಾಗಿ ವ್ಯವಹರಿಸುವುದನ್ನು ಕಲಿಯುತ್ತಾರೆ. ಕೋಪವನ್ನು ನಿಲ್ಲಿಸಿದಾಗ ಬೆನ್ನು ತಟ್ಟಿ ಭೇಷ್ ನೀನು ಬಹಳ ಒಳ್ಳೆಯ ಹುಡುಗ/ಗಿ ಎಂದು ಪ್ರತಿಫಲದ ಬಹುಮಾನ ನೀಡಬೇಕು. ಇಲ್ಲವೇ ಅವರಿಗೆ ಇಷ್ಟವಾದ ತಿಂಡಿ ಕೊಡಬೇಕು. ಸಣ್ಣ ಪುಟ್ಟ ಜವಾಬ್ದಾರಿಗಳನ್ನು ನೀಡಬೇಕು. ಅದನ್ನು ಪೂರೈಸಿದಾಗ ಹೊಗಳಿಕೆಯ ಮಾತುಗಳನ್ನಾಡಬೇಕು.

ಮಾತು ಆಲಿಸಬೇಕು

ನೀನಿಷ್ಟು ದೊಡ್ಡವನು/ಳು ಆಗಿದ್ದಿಯಾ ನಿನಗಿನ್ನು ಬುದ್ಧಿ ಬಂದಿಲ್ಲ. ಇಷ್ಟು ಸಣ್ಣ ವಿಷಯ ತಿಳಿಯಲ್ವಾ? ಇದೆಲ್ಲಾ ನಿನಗೆ ತಿಳಿದಿರಬೇಕು. ಎಂಬ ಮಾತುಗಳ ಮೂಲಕ ಖಂಡಿಸುವುದು. ಅವಮಾನಿಸುವುದು ಶುದ್ಧ ತಪ್ಪು.ಈ ರೀತಿಯ ಪದ ಬಳಕೆಯಿಂದ ಮಕ್ಕಳ ಮನಸ್ಸಿಗೆ ಘಾಸಿ ಆಗುತ್ತದೆ. ಮತ್ತು ಮಕ್ಕಳ ಆತ್ಮವಿಶ್ವಾಸಕ್ಕೆ ಪೆಟ್ಟು ಬೀಳುತ್ತದೆ. ಮಕ್ಕಳು ನಮ್ಮ ಹತೋಟಿಯಲ್ಲಿರಬೇಕು. ಅವರು ನಾವು ಹೇಳಿದ ಮಾತುಗಳನ್ನು ಪಾಲಿಸಬೇಕು.

ಆದರೆ ಅವರ ಇಷ್ಟ ಕಷ್ಟಗಳನ್ನು ಕೇಳಲು ಪುರಸೊತ್ತಿಲ್ಲ ಎಂದು ಅಸಹನೆ ತೋರಿದರೆ ಮಕ್ಕಳು ಕೋಪಿಸಿಕೊಳ್ಳುವುದು ಸಹಜ. ಮಕ್ಕಳು ಕೋಪಗೊಂಡಾಗ ಅವರನ್ನು ಒಂಟಿಯಾಗಿ ಬಿಡಬಾರದು. ಮಕ್ಕಳ ಮಾತುಗಳನ್ನು ನಾವು ಪ್ರೀತಿಯಿಂದ ಆಲಿಸುವ ವ್ಯವಧಾನ ತೋರಿಸಬೇಕು. ಪಕ್ಕಕ್ಕೆ ಕುಳಿತು ಮುದ್ದಿಸಿದರೆ ಅವರ ಮನಸ್ಸು ಉಲ್ಲಸಿತವಾಗುತ್ತದೆ. ಅವರ ಬೇಕು ಬೇಡಿಕೆಗಳನ್ನು ಹೇಳಲು ಅವಕಾಶ ಮಾಡಿಕೊಡಬೇಕು. ಮತ್ತು ಆಸ್ಥೆಯಿಂದ ಆಲಿಸಬೇಕು. ಮಕ್ಕಳು ಖುಷಿ ಪಡುತ್ತಾರೆ. ಕ್ರಮೇಣ ಮಕ್ಕಳು ಕೋಪದ ಚೌಕಟ್ಟನ್ನು ಬಿಟ್ಟು ಬರುತ್ತವೆ.

ಕೊನೆ ಹನಿ: ಮಗುವಿನ ಕೋಪ ನಿಯಂತ್ರಿಸುವ ಭರದಲ್ಲಿ ನಾವೂ ಕೋಪಿಷ್ಟರಾಗುತ್ತಿದ್ದೇವೆ. ದಾವಂತ ಗಡಿಬಿಡಿಯ ಸಂದರ್ಭಗಳಲ್ಲಿ ಮುಂಗೋಪಿಗಳೂ ಆಗುತ್ತಿದ್ದೇವೆ. ಹೀಗಾಗಿ ಮಗು ಕೋಪಿಷ್ಟವಾಗಲು ನಾವೇ ಕಾರಣರಾಗುತ್ತಿದ್ದೇವೆ. ಶಿಕ್ಷಿಸಿದರೆ ಕೋಪ ಇನ್ನೂ ಹೆಚ್ಚುತ್ತದೆ. ತಿಳಿಯದೇ ಮಾಡಿದ ತಪ್ಪುಗಳನ್ನು ಮನ್ನಿಸಬೇಕು. ಮನುಷ್ಯ ಭಾವನೆಗಳ ಮೊತ್ತವೇ ಸರಿ ಕೋಪ ಎನ್ನುವುದು ಒಂದು ನಕಾರಾತ್ಮಕ ಬಂಧನ. ಅದರಿಂದಾಚೆ ಬರುವುದು ಜಾಣತನ. ಕೋಪದಲ್ಲಿರುವ ಮಕ್ಕಳ ಮನಸ್ಸನ್ನು ಪ್ರೀತಿಯಿಂದ ಗೆಲ್ಲಬೇಕು. ಮಕ್ಕಳಿಗೆ ಒಳ್ಳೆಯ ನಡುವಳಿಕೆ ಯಾವುದು ಎಂಬುದನ್ನು ಕಲಿಸಿಕೊಡಬೇಕು. ಅಂತೆಯೇ ಒಳ್ಳೆಯ ನಡುವಳಿಕೆ ತೋರಿದಾಗ ಮೆಚ್ಚುಗೆಯ ಮಾತುಗಳಿಂದ ಪ್ರೋತ್ಸಾಹಿಸಬೇಕು. ಹಾಗಾದಾಗ ಮಾತ್ರ ಮಗು ನಂದನವನದ ಹೂವಿನಂತೆ ತಾನಾಗಿ ಅರಳಿ ನಗು ಚೆಲ್ಲುವುದು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button