Kannada NewsKarnataka NewsLatest

ಯಡಿಯೂರಪ್ಪ ಸಂಪುಟದಲ್ಲಿ ಬೆಳಗಾವಿಯ ಎಷ್ಟು ಜನರಿಗೆ ಸ್ಥಾನ?

ಬೆಳಗಾವಿಯ ಎಷ್ಟು ಜನರಿಗೆ ಸ್ಥಾನ?

ಎಂ.ಕೆ.ಹೆಗಡೆ, ಬೆಳಗಾವಿ- [email protected]

ಹಲವು ದಿನಗಳ ರಾಜಕೀಯ ನಾಟಕಗಳ ನಂತರ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಪತನವಾಗಿದೆ. 14 ತಿಂಗಳ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ಅಧಿಕಾರ ಕಳೆದುಕೊಂಡಿದೆ.

ಇನ್ನು ಬಿ.ಎಸ್.ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರ ಅಧಿಕಾರಕ್ಕೆ ಬರಲಿದೆ. ಮೈತ್ರಿ ಸರಕಾರ ಪತನದಲ್ಲಿ ಬೆಳಗಾವಿ ಜಿಲ್ಲೆಯ ಪಾತ್ರ ಅತ್ಯಂತ ಪ್ರಮುಖವಾಗಿದೆ. ಜಿಲ್ಲೆಯ ಮೂವರು ಕಾಂಗ್ರೆಸ್ ಶಾಸಕರು ಬಂಡಾಯವೆದ್ದಿದ್ದರು.

ಅದರಲ್ಲೂ ಮಾಜಿ ಸಚಿವ, ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಅವರೇ ಈ ಬೆಳವಣಿಗೆಗೆಲ್ಲ ಮೂಲ ಕಾರಣರಾದವರು.

ಜಾರಕಿಹೊಳಿ ಸಹೋದರರಿಗೆ ಖಚಿತ

ಈಗ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರಕಾರದಲ್ಲಿ ಬೆಳಗಾವಿ ಜಿಲ್ಲೆಯ ಎಷ್ಟು ಜನರಿಗೆ ಮಂತ್ರಿಸ್ಥಾನ ಸಿಗಲಿದೆ ಎನ್ನುವ ಕುತೂಹಲ ಆರಂಭವಾಗಿದೆ.

ಬೆಳಗಾವಿ ದೊಡ್ಡ ಜಿಲ್ಲೆಯಾಗಿದ್ದು 18 ಶಾಸಕರ ಕ್ಷೇತ್ರವನ್ನು ಹೊಂದಿದೆ. ಹಾಗಾಗಿ 2 ಅಥವಾ 3 ಸಚಿವಸ್ಥಾನ ಸಿಗುವುದು ಖಚಿತವಾಗಿದೆ.

ರಮೇಶ ಜಾರಕಿಹೊಳಿ ಇದಕ್ಕೆಲ್ಲ ಮೂಲ ಕಾರಣರಾಗಿರುವುದರಿಂದ ಅವರು ಸಂಪುಟ ಸೇರುವುದು ಖಚಿತ. ಅಷ್ಟೇ ಅಲ್ಲ ಉಪಮುಖ್ಯಮಂತ್ರಿ ಸ್ಥಾನವನ್ನೇ ಅವರಿಗೆ ನೀಡಲಾಗುತ್ತದೆ ಎನ್ನುವ ಸುದ್ದಿ ಕೇಳಿಬರುತ್ತಿದೆ. ಹಾಗಾದಲ್ಲಿ ಬೆಳಗಾವಿ ಜಿಲ್ಲೆಯ ಮೊದಲ ಉಪಮುಖ್ಯಮಂತ್ರಿ ಅವರಾಗಲಿದ್ದಾರೆ.

ಇನ್ನು ತೆರೆಯ ಹಿಂದೆ ನಿಂತು ಕಾಂಗ್ರೆಸ್ -ಜೆಡಿಎಸ್ ಬಂಡಾಯಗಾರರನ್ನೆಲ್ಲ ಸಂಘಟಿಸುವ ಮತ್ತು ಕಾನೂನಾತ್ಮಕ ಸಲಹೆಗಳನ್ನು ನೀಡುತ್ತ ಈ ಮಟ್ಟಕ್ಕೆ ತಂದು ನಿಲ್ಲಿಸಿದವರು ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ. ಹಾಗಾಗಿ ಅವರನ್ನು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವುದು ನಿಶ್ಚಿತ ಎನ್ನಲಾಗುತ್ತಿದೆ. ಹಾಗೆಯೇ ಜಿಲ್ಲಾ ಉಸ್ತುವಾರಿ ಸಚಿವಸ್ಥಾನ ಅವರಿಗೆ ಸಿಕ್ಕಿದರೂ ಸಿಗಬಹುದು.

ಮತ್ತೊಬ್ಬರು ಯಾರು?

ಉಮೇಶ ಕತ್ತಿ ಬಿಜೆಪಿಯ ಹಿರಿಯ ನಾಯಕ. ಮಾಜಿ ಸಚಿವ. ಯಡಿಯೂರಪ್ಪ ಜೊತೆ ಉತ್ತಮ ಸಂಬಂಧವನ್ನೂ ಹೊಂದಿದ್ದಾರೆ. ಹಾಗಾಗಿ ಬೆಳಗಾವಿಗೆ ಮೂರನೆ ಅವಕಾಶ ಸಿಕ್ಕಿದರೆ ಅವರನ್ನು ಸೇರಿಸಿಕೊಳ್ಳಬಹುದು.

ಜಾತಿವಾರು ಲೆಕ್ಕಾಚಾರದಲ್ಲಿ ಜೈನ ಸಮುದಾಯದ, ಮೂರನೇ ಬಾರಿಗೆ ಶಾಸಕರಾಗಿರುವ ಮತ್ತು ಉತ್ತಮ ಕೆಲಸಗಾರ ಎನ್ನುವ ಹೆಸರು ಪಡೆದಿರುವ ಅಭಯ ಪಾಟೀಲ ಸ್ಥಾನ ಪಡೆಯಬಹುದೆಂದು ಲೆಕ್ಕಾಚಾರ ಹಾಕಲಾಗುತ್ತಿದೆ.

ಹಾಗೆಯೇ ಮಹಿಳಾ ಕೋಟಾದಲ್ಲಿ ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆಗೆ ಸ್ಥಾನ ಸಿಗಬಹುದು ಎನ್ನಲಾಗುತ್ತಿದೆ.

ಸವದತ್ತಿ ಶಾಸಕ  ಆನಂದ ಮಾಮನಿ, ರಾಮದುರ್ಗ ಶಾಸಕ ಮಹಾದೇವಪ್ಪ ಯಾದವಾಡ, ಕುಡಚಿ ಸಾಸಕ ಪಿ.ರಾಜೀವ, ರಾಯಬಾಗ ಶಾಸಕ ದುರ್ಯೋಧನ ಐಹೊಳೆ ಇವರೆಲ್ಲ 2-3ನೇ ಬಾರಿ ಆಯ್ಕೆಯಾಗಿರುವುದರಿಂದ ಲಾಬಿ ನಡೆಸಬಹುದು.

ಕಾಂಗ್ರೆಸ್ ನಿಂದ ರಮೇಶ ಜಾರಕಿಹೊಳಿ ಜೊತೆ ಬರುತ್ತಿರುವ ಶ್ರೀಮಂತ ಪಾಟೀಲ ಮತ್ತು ಮಹೇಶ ಕುಮಟಳ್ಳಿ ಯಾವ ಭರವಸೆ ನೀಡಲಾಗಿದೆ ಎನ್ನುವುದು ಗೊತ್ತಾಗಿಲ್ಲ.

ಇವರನ್ನು ಬಿಟ್ಟರೆ ಬೆಳಗಾವಿ ಜಿಲ್ಲೆಯಲ್ಲಿ ಮಹಾಂತೇಶ ದೊಡ್ಡಗೌಡರ್ ಮತ್ತು ಅನಿಲ ಬೆನಕೆ ಮೊದಲಬಾರಿಗೆ ಆಯ್ಕೆಯಾದ ಬಿಜೆಪಿ ಶಾಸಕರು.

ಕಾಂಗ್ರೆಸ್ ನಲ್ಲಿ ಐವರು ಶಾಸಕರು

ಕಾಂಗ್ರೆಸ್ ನ ಮೂವರು ಮೈನಸ್ ಆದ ನಂತರ ಸಧ್ಯಕ್ಕೆ ಕಾಂಗ್ರೆಸ್ ಬೆಳಗಾವಿ ಜಿಲ್ಲೆಯಲ್ಲಿ ಐವರು ಶಾಸಕರನ್ನು ಹೊಂದಿದೆ. ಯಮಕನಮರಡಿಯ ಸತೀಶ ಜಾರಕಿಹೊಳಿ, ಬೆಳಗಾವಿ ಗ್ರಾಮೀಣ ಕ್ಷೇತ್ರದ ಲಕ್ಷ್ಮಿ ಹೆಬ್ಬಾಳಕರ್, ಖಾನಾಪುರದ ಅಂಜಲಿ ನಿಂಬಾಳಕರ್, ಚಿಕ್ಕೋಡಿಯ ಗಣೇಶ ಹುಕ್ಕೇರಿ ಮತ್ತು ಬೈಲಹೊಂಗಲದ ಮಹಾಂತೇಶ ಕೌಜಲಗಿ.

ಈ ಐವರೂ ಶಾಸಕಸ್ಥಾನದ ಜೊತೆಗೆ ಕುಮಾರಸ್ವಾಮಿ ಸರಕಾರದಲ್ಲಿ ಒಂದಿಲ್ಲೊಂದು ಹುದ್ದೆ ಹೊಂದಿದ್ದವರೆ. ಸತೀಶ್ ಜಾರಕಿಹೊಳಿ ಸಚಿವರಾಗಿದ್ದರು. ಗಮೇಶ ಹುಕ್ಕೇರಿ ವಿಧಾನಸಭೆಯ ಸಚೇತಕರಾಗಿದ್ದರು. ಲಕ್ಷ್ಮಿ ಹೆಬ್ಬಾಳಕರ್ ಮೈಸೂರು ಮಿನರಲ್ಸ್ ಚೇರಮನ್ ಆಗಿದ್ದರು. ಅಂಜಲಿ ನಿಂಬಾಳಕರ್ ಮತ್ತು ಮಹಾಂತೇಶ ಕೌಜಲಗಿ ಮುಖ್ಯಮಂತ್ರಿಗಳ ಸಂಸದೀಯ ಕಾರ್ಯದರ್ಶಿಗಳಾಗಿದ್ದರು.

 

 

 

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button