*ಮೂವರು ಮಕ್ಕಳಿಗೆ ಹೊಯ್ಸಳ ಮತ್ತು ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ಪ್ರದಾನ*
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು : ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವರಾದ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ಕೊಡಗಿನ ಅರ್ಜುನ್ ಸಾಗರ್, ತುಮಕೂರು ಜಿಲ್ಲೆಯ ಆರ್.ಸಿ.ಗೌಡ ಹಾಗೂ ಕುಮಾರಿ ಶಾಲು ಅವರಿಗೆ 2023-24ನೇ ಸಾಲಿನ ಹೊಯ್ಸಳ ಹಾಗೂ ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಶಸ್ತಿ ಪುರಸ್ಕೃತ ಮಕ್ಕಳಿಗೆ 10 ಸಾವಿರ ನಗದು ಬಹುಮಾನ, ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆಯನ್ನು ನೀಡಿ ಗೌರವಿಸಿದರು.
- ಅರ್ಜುನ್‌ಸಾಗರ್.ವೈ.ಡಿ
ಮಡಿಕೇರಿ ಜಿಲ್ಲೆ ವಿರಾಜಪೇಟೆ ತಾಲೂಕಿನ ನೋತ್ಯಾ ಗ್ರಾಮದ ದಿನೇಶ್ ಎಂ.ಪಿ. ಯದತೋರು ಅವರ ಮಗನಾದ ಮಾಸ್ಟರ್ ಅರ್ಜುನ್ ಸಾಗರ್ ವೈ.ಡಿ, 22- 04-2023ರಂದು ಸ್ನೇಹಿತರೊಂದಿಗೆ ಆಟವಾಡುವ ಸಂದರ್ಭದಲ್ಲಿ ಆಯಿರಸುಳಿ ಹಾಡಿಯಲ್ಲಿ ಮೇಯಲು ಬಂದ ಹಸು ಆಕಸ್ಮಿಕವಾಗಿ ಹೆಸರಿನಲ್ಲಿ ಸಿಲುಕಿ ಜೀವನ್ಮರಣ ಸ್ಥಿತಿಯಲ್ಲಿ ಹೋರಾಟ ನಡೆಸುತ್ತಿದ್ದುದನ್ನು ಗಮನಿಸಿ, ತನ್ನ ಜೀವದ ಹಂಗನ್ನು ತೊರೆದು, ಸಮಯ ಪ್ರಜ್ಞೆ ತೋರಿ ನಿರಂತರವಾಗಿ ಐದು ಗಂಟೆಗಳ ಕಾಲ ಪ್ರಯತ್ನಿಸಿ ಹಸುವನ್ನು ಪ್ರಾಣಾಪಾಯದಿಂದ ಕಾಪಾಡಿ ಸಾಹಸ ಮೆರೆದಿದ್ದರು. - ಆರ್.ಸಿ.ಗೌಡ
ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಹುಲಿಕುಂಟೆ ಹೋಬಳಿಯ ರಾಗಲಹಳ್ಳಿ ಗ್ರಾಮದ ಚಂದ್ರಪ್ಪ ಅವರ ಮಗನದಾದ ಆರ್.ಸಿ.ಗೌಡ, 29-01-2023ರಂದು ಹಂದಿಕುಂಟೆ ಕೆರೆಯಲ್ಲಿ ಹಂದಿಕುಂಟೆ ಅಗ್ರಹಾರದ ಹೆಣ್ಣು ಮಕ್ಕಳು ಕೆರೆಯಲ್ಲಿ ಆಕಸ್ಮಿಕವಾಗಿ ಮುಳುಗುತ್ತಿರುವ ಸಮಯದಲ್ಲಿ ಕೆ.ಎಸ್.ಆರ್.ಟಿ.ಸಿ. ಬಸ್‌ನ ಚಾಲಕನೊಂದಿಗೆ ಕೆರೆಯಲ್ಲಿ ಮುಳುಗುತ್ತಿದ್ದ ಇಬ್ಬರು ಹೆಣ್ಣುಮಕ್ಕಳನ್ನು ಜೀವಾಪಾಯದಿಂದ ರಕ್ಷಿಸಿದ್ದರು. - ಶಾಲು
ತುಮಕೂರು ಜಿಲ್ಲೆಯ ಊರುಕೆರೆ ಅಂಚೆಯ ಕುಚ್ಚಂಗಿಪಾಳ್ಯದ ಜೀತೇಂದ್ರ ಅವರ ಮಗಳಾದ ಶಾಲು, 08-07-2023 ರಂದು ತನ್ನ ಸಹೋದರಿಯೊಂದಿಗೆ ತೋಟದಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬಾವಿಗೆ ಬಿದ್ದ ತನ್ನ ಸಹೋದರಿಯನ್ನು ಲೈಫ್ ಜಾಕೆಟ್ ಧರಿಸಿಕೊಂಡು ಬಾವಿಗೆ ಹಾರಿ ತನ್ನ ಪ್ರಾಣದ ಹಂಗನ್ನು ತೊರೆದು ರಕ್ಷಿಸಿ ಸಾಹಸ ಮೆರೆದಿದ್ದರು.
ಸಂಘ ಸಂಸ್ಥೆ ವಿಭಾಗದಲ್ಲಿ ಬೆಳಗಾವಿ ಜಿಲ್ಲಾ ರೋಲರ್ ಸಂಸ್ಥೆ, ಬೀದರ್ ಜಿಲ್ಲೆಯ ಮರಖಲ ಬೊಮ್ಮಗೊಂಡೇಶ್ವರ ಎಜುಕೇಶನ್ ಚಾರಿಟಬಲ್ ಟ್ರಸ್ಟ್, ಉಡುಪಿ ಜಿಲ್ಲೆಯ ಗುರು ರಾಘವೇಂದ್ರ ಸೇವಾ ಟ್ರಸ್ಟ್, ಶಿವಮೊಗ್ಗ ಜಿಲ್ಲೆಯ ಬಾಪೂಜಿ ಎಜುಕೇಷನ್ ಸೊಸೈಟಿ ರಾಜ್ಯ ಪ್ರಶಸ್ತಿಗೆ ಭಾಜನರಾದವು.
ಇನ್ನು ವ್ಯಕ್ತಿ ವಿಭಾಗದಲ್ಲಿ ಧಾರವಾಡ ಜಿಲ್ಲೆಯ ಪರಶುರಾಮ, ಬಳ್ಳಾರಿಯ ಶ್ರೀಮತಿ ರಜನಿ ಲಕ್ಕಾ, ಮಂಡ್ಯ ಜಿಲ್ಲೆಯ ಹೆಚ್.ಆರ್.ಕನ್ನಿಕಾ, ತುಮಕೂರು ಜಿಲ್ಲೆಯ ಲೋಕರಾಜು ಅರಸು ಅವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ