ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ‘ಮಂಡ್ಯ ಜಿಲ್ಲೆಗೆ ಸಕ್ಕರೆ ಜಿಲ್ಲೆ ಎನ್ನುತ್ತಾರೆ. ಆದರೆ ಬೆಳಗಾವಿ ಜಿಲ್ಲೆಯಲ್ಲಿ ಅತಿ ಹೆಚ್ಚು ಸಕ್ಕರೆ ಕಾರ್ಖಾನೆಗಳು ಇರುವುದರಿಂದ ಬೆಳಗಾವಿಯು ನಿಜವಾದ ಸಕ್ಕರೆ ಜಿಲ್ಲೆಯಾಗಿದೆ. ಕಾವೇರಿ ನದಿಗೆ ಜೀವನದಿ ಎಂದು ಕರೆಯುವಂತೆ ನಮ್ಮ ಭಾಗದ ಕೃಷ್ಣಾ ನದಿಗೂ ಜೀವನದಿ ಎಂದು ಕರೆಯಬೇಕು’ ಎಂದು ಚಿಂಚಣಿಯ ಸಿದ್ಧಸಂಸ್ಥಾನ ಮಠದ ಅಲ್ಲಮಪ್ರಭು ಸ್ವಾಮೀಜಿ ಅಭಿಪ್ರಾಯಪಟ್ಟರು.
ಸ್ಥಳೀಯ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯ 2021-22ನೇ ಸಾಲಿನ ಕಬ್ಬು ನುರಿಸುವ ಹಂಗಾಮಿಗೆ ಚಾಲನೆ ನೀಡಿ ನಂತರ ಜರುಗಿದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಅವರು ಮಾತನಾಡಿದರು. ‘ಚಕ್ರವು ಇಡಿ ವಿಶ್ವದ ಪ್ರಗತಿಯ ಸಂಕೇತವಾಗಿದ್ದರಿಂದ ನಮ್ಮ ರಾಷ್ಟ್ರಧ್ವಜದ ಮಧ್ಯದಲ್ಲಿ ಅಶೋಕ ಚಕ್ರವಿದೆ. ಆ ಅಶೋಕ ಚಕ್ರವೂ ಸಹ ನಮ್ಮ ರಾಜ್ಯದ ಕೊಪ್ಪಳ ಜಿಲ್ಲೆಯದ್ದಾಗಿದ್ದರಿಂದ ಹೆಮ್ಮೆ ಪಡುವ ವಿಷಯವಾಗಿದೆ. ಈ ಕಾರ್ಖಾನೆಯನ್ನು ಜೊಲ್ಲೆ ದಂಪತಿ, ಚಂದ್ರಕಾಂತ ಕೋಠಿವಾಲೆ ಹಾಗೂ ಅವರ ತಂಡವು ಸಮರ್ಥವಾಗಿ ಮುನ್ನಡೆಸಿಕೊಂಡು ನಡೆದಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಚಿಕ್ಕ ವಯಸ್ಸಿನಲ್ಲೆ ಜೊಲ್ಲೆ ದಂಪತಿ ‘ನ ಭೂತೋ ನ ಭವಿಷ್ಯತಿ’ ಅಂದ ಹಾಗೆ ಎತ್ತರ ಮಟ್ಟಕ್ಕೆ ಬೆಳೆಯುತ್ತಿದ್ದಾರೆ. ಕಾರ್ಮಿಕರಿಗೆ ಶೇ.10ರಷ್ಟು ವೇತನ ಹೆಚ್ಚಳ ಮಾಡಿದ್ದು ಇದಕ್ಕೆ ಒಂದು ನಿದರ್ಶನವಾಗಿದೆ’ ಎಂದರು.
ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ‘ರೈತರ ಮತ್ತು ಕಾರ್ಮಿಕರ ಹಿತದೃಷ್ಟಿಯಿಂದ ಸಂಕಷ್ಟ ಎದುರಿಸುತ್ತಿದ್ದ ಕಾರ್ಖಾನೆಯ ಜವಾಬ್ದಾರಿಯನ್ನು ಹೊತ್ತಿಕೊಂಡಿದ್ದೇವೆ. ಕಳೆದ 3 ವರ್ಷಗಳಿಂದ ಆರ್ಥಿಕ ಹಾನಿ ತೋರಿಸುತ್ತಿದ್ದ ಕಾರ್ಖಾನೆಯಲ್ಲಿ ಕಳೆದ ವರ್ಷ ರೂ.24 ಕೋಟಿಯಷ್ಟು ಹಾನಿ ಕಡಿಮೆಯಾಗಿದೆ. ಇದು ಕಾರ್ಖಾನೆಯು ಅಭಿವೃದ್ಧಿಯತ್ತ ದಾಪುಗಾಲು ಇಡುತ್ತಿರುವ ಸಂಕೇತವಾಗಿದೆ. ಆದಾಗ್ಯೂ ಕಾರ್ಖಾನೆಯ ಆರ್ಥಿಕ ಪರಿಸ್ಥಿತಿ ಇನ್ನೂ ಬಹಳಷ್ಟು ಸುಧಾರಿಸಬೇಕಿದ್ದು ಅದಕ್ಕಾಗಿ ಪ್ರಯತ್ನಿಸಲಾಗುತ್ತಿದೆ. ಕೆಲ ಸದಸ್ಯರು ಕಾರ್ಖಾನೆಗೆ ಕಬ್ಬು ಕಳುಹಿಸುತ್ತಿಲ್ಲದಿರುವುದು ಗಮನಕ್ಕೆ ಬಂದಿದೆ. ಅದಕ್ಕಾಗಿ ಇತರ ಕಾರ್ಖಾನೆಯಂತೆ ಕ್ರಮ ವಹಿಸಲಾಗುವುದು’ ಎಂದರು.
ಮುಜರಾಯಿ, ವಕ್ಫ್ ಹಾಗೂ ಹಜ್ ಸಚಿವೆ ಶಶಿಕಲಾ ಜೊಲ್ಲೆ ಮಾತನಾಡಿ ‘ಈ ಕಾರ್ಖಾನೆಯ ಎಲ್ಲ ಕಾರ್ಮಿಕರು ಮತ್ತು ಸಿಬ್ಬಂದಿ ವರ್ಗ ಕುಟುಂಬ ಸದಸ್ಯರಿದ್ದಂತೆ. ರಾಜ್ಯದಲ್ಲಿಯೇ ಸಹಕಾರಿ ಸಕ್ಕರೆ ಕಾರ್ಖಾನೆಗಳಲ್ಲಿ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಪ್ರಥಮ ಸ್ಥಾನಕ್ಕೆ ತರುವ ನಿಟ್ಟಿನಲ್ಲಿ ಪ್ರಯತ್ನಿಸಲಾಗುತ್ತಿದೆ. ರಾಜ್ಯ ಸರ್ಕಾರದಿಂದ ಅವಶ್ಯಕ ಸಹಕಾರ ನೀಡಲಾಗುವುದು’ ಎಂದರು.
ಕಾರ್ಖಾನೆಯ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಮಾತನಾಡಿ ‘ಕಳೆದ ಮೂರ್ನಾಲ್ಕು ವರ್ಷಗಳಿಂದ ಸಂಸದ ಅಣ್ಣಾಸಾಹೇಬ ಜೊಲ್ಲೆಯವರು ಕಾರ್ಖಾನೆಯನ್ನು ಅವಿರತವಾಗಿ ಪ್ರಯತ್ನಿಸಿ ಅಪಾರ ಬದಲಾವಣೆಗಳನ್ನು ತಂದಿದ್ದಾರೆ. ಕಾರ್ಖಾನೆಯ ಸಂಕಷ್ಟದ ಸಂದರ್ಭದಲ್ಲಿ ಧೈರ್ಯದಿಂದ ನಿರ್ಧಾರ ತೆಗೆದುಕೊಂಡು ಸಹಕಾರ ಮಾಡಿದ್ದು ಶ್ಲಾಘನೀಯ. ನೋಂದಣಿಯಾದಂತೆ ನಿಯೋಜನಬದ್ಧವಾಗಿ ಎಲ್ಲರ ಕಬ್ಬು ಸಾಗಾಣೆ ಮಾಡಲಾಗುವುದು’ ಎಂದರು.
ವ್ಯವಸ್ಥಾಪಕ ನಿರ್ದೇಶಕ ಶಿವ ಕುಲಕರ್ಣಿ ಮಾತನಾಡಿ ‘ಇತರ ಕಾರ್ಖಾನೆಯತ್ತ ಸಾಗುತ್ತಿದ್ದ ಈ ಪರಿಸರದ ಕಬ್ಬು, ಜೊಲ್ಲೆ ದಂಪತಿಯ ಸಹಕಾರ ಹಾಗೂ ಮಾರ್ಗದರ್ಶನದಲ್ಲಿ ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ ಮತ್ತು ಸಂಚಾಲಕರ ಆಡಳಿತಕ್ಕೆ ಬಂದಾಗ ಎಲ್ಲರೂ ಈಗ ಈ ಕಾರ್ಖಾನೆಗೆ ಕಳುಹಿಸುತ್ತಿದ್ದಾರೆ’ ಎಂದರು. ಕಾರ್ಮಿಕರ ನೇತಾರ ಅನೀಲ ಶಿಂಧೆ ಮಾತನಾಡಿ ‘2017ರಲ್ಲಿ ಕಾರ್ಖಾನೆಗೆ ಬೀಗ ಜಡೆಯುವ ಸಂದರ್ಭದಲ್ಲಿ ಅದರ ಜವಾಬ್ದಾರಿಯನ್ನು ಜೊಲ್ಲೆ ದಂಪತಿ ತಮ್ಮ ಹೆಗಲ ಮೇಲೆ ತೆಗೆದುಕೊಂಡ ಪರಿಣಾಮ ಕಾರ್ಮಿಕರಲ್ಲಿ ಉತ್ಸಾಹ ತುಂಬಿ ತುಳುಕುತ್ತಿದೆ. ವೇತನ ಹೆಚ್ಚಳದಿಂದ ಆ ಉತ್ಸಾಹ ಈಗ ಇಮ್ಮಡಿಯಾಗಿದೆ’ ಎಂದರು.
ರಾಜ್ಯ ಸೌಹಾರ್ದ ಸಂಘದ ಕಾರ್ಯಾಧ್ಯಕ್ಷ ವಿಶ್ವನಾಥ ಕಮತೆ, ಸಂಚಾಲಕ ಅಪ್ಪಾಸಾಹೇಬ ಜೊಲ್ಲೆ, ರಾಮಗೊಂಡಾ ಪಾಟೀಲ, ಸಮಿತ ಸಾಸನೆ, ಸುಕುಮಾರ ಪಾಟೀಲ-ಬುಧಿಹಾಳಕರ, ಮ್ಹಾಳಪ್ಪಾ ಪಿಸೂತ್ರೆ, ರಾಜಾರಾಮ ಖೋತ, ಪ್ರತಾಪ ಮೇತ್ರಾಣಿ, ಕಲ್ಲಪ್ಪಾ ನಾಯಿಕ, ಉಜ್ವಲಾ ಶಿಂಧೆ, ಮನಿಷಾ ರಾಂಗೋಳೆ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ ಮತ್ತು ಸದಸ್ಯರು, ಸಂಜಯ ಮೊಳವಾಡೆ, ರಾವಸಾಹೇಬ ಪಾಟೀಲ, ಮೊದಲಾದವರು ಸದಸ್ಯರು, ಕಾರ್ಮಿಕರು, ಉಪಸ್ಥಿತರಿದ್ದರು. ಸಂಚಾಲಕ ಆರ್.ವೈ. ಪಾಟೀಲ ಸ್ವಾಗತಿಸಿದರು. ಎಂಜಿನೀಯರ್ ನವೀನ ಬಾಡಕರ ನಿರೂಪಿಸಿದರು. ಉಪಕಾರ್ಯಾಧ್ಯಕ್ಷ ಮಲಗೊಂಡಾ ಪಾಟೀಲ ವಂದಿಸಿದರು.
ಸ್ಮಾರ್ಟ್ ಶಿಕ್ಷಣದತ್ತ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಲಕ್ಷ್ಯ: ಮೊದಲ ಹಂತದಲ್ಲಿ 20 ಸ್ಮಾರ್ಟ್ ಕೊಠಡಿ ನಿರ್ಮಾಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ