ಪ್ರಗತಿವಾಹಿನಿ ಸುದ್ದಿ: ನ್ಯಾಯದ ಅಂತಿಮ ಗುರಿ ಸತ್ಯದ ಅನ್ವೇಷಣೆ. ನ್ಯಾಯಾಲಯಗಳು ಸತ್ಯವನ್ನು ಕಂಡುಹಿಡಿದು, ಅದರ ಮೇಲೆ ತಮ್ಮ ನಿರ್ಧಾರಗಳನ್ನು ತೆಗೆದುಕೊಂಡಾಗ ಸಮಾಜವು ನ್ಯಾಯವನ್ನು ಅನುಭವಿಸುತ್ತದೆ. ನ್ಯಾಯ ನೀಡುವಲ್ಲಿ ಸಾಕ್ಷಿಗಳು ಪ್ರಮುಖ ಪಾತ್ರ ವಹಿಸುತ್ತಾರೆ. ಸಾವು ಅಥವಾ ಗಾಯವನ್ನು ಒಳಗೊಂಡ ಸಂಕೀರ್ಣ ಪ್ರಕರಣಗಳಲ್ಲಿ, ನ್ಯಾಯಾಲಯಗಳು ಸಂತ್ರಸ್ಥರಿಗೆ ನ್ಯಾಯ ಕಲ್ಪಿಸಲು ವೈದ್ಯಕೀಯ ವೃತ್ತಿಪರರ ನೆರವು ಪಡೆಯುವದು ಅತ್ಯಗತ್ಯವಾಗಿದೆ. ವೃತ್ತಿಪರರು ಜ್ಞಾನವುಳ್ಳವರಾಗಿದ್ದು, ಕಾನೂನು ಅವರ ಅಭಿಪ್ರಾಯಕ್ಕೆ ಹೆಚ್ಚಿನ ಪ್ರಾಮುಖ್ಯತೆ ನೀಡಿ ‘ತಜ್ಞ ಸಾಕ್ಷ್ಯ’ ಎಂದು ಪರಿಗಣಿತವಾಗುತ್ತದೆ ಎಂದು ರಾಜ್ಯದ ಕಾನೂನು, ನಾಗರೀಕ ಹಕ್ಕು, ಸಂಸದೀಯ ವ್ಯವಹಾರ ಹಾಗೂ ಪ್ರವಾಸೋದ್ಯಮ ಸಚಿವರಾದ ಹೆಚ್ ಕೆ ಪಾಟೀಲ ಅವರಿಂದಿಲ್ಲಿ ಹೇಳಿದರು.
ಕಾಹೇರ, ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಫಾರೆನ್ಸಿಕ್ ಮೆಡಿಸಿನ್ ಹಾಗೂ ಟಾಕ್ಸಿಕಾಲಾಜಿ ವಿಭಾಗವು ಏರ್ಪಡಿಸಿದ್ದ ಕರ್ನಾಟಕ ಮೆಡಿಕೋ ಲೀಗಲ್ ಸಂಸ್ಥೆಯ 32ನೇ ವಾರ್ಷಿಕ ರಾಜ್ಯ ಸಮ್ಮೇಳನವನ್ನು (ಕೆಎಎಮ್ಎಲ್ಎಸ್ ಕಾನ) ವನ್ನು ಇದೇ ದಿ. 8 ನವೆಂಬರ್ 2024ರಂದು ಉದ್ಘಾಟಿಸಿ ಮಾತನಾಡಿದ ಅವರು, ಸಂತ್ರಸ್ಥರ ಕುಂದುಕೊರತೆಗಳನ್ನು ಪರಿಹರಿಸಿ, ನ್ಯಾಯದಾನಕ್ಕಾಗಿ ನ್ಯಾಯಾಲಯಗಳು ತಜ್ಞರ ಸಾಕ್ಷ್ಯವನ್ನು ಹೆಚ್ಚಾಗಿ ಅವಲಂಬಿಸಿವೆ. ವಿಜ್ಞಾನ, ಔಷಧ, ವಿಧಿವಿಜ್ಞಾನ, ಇಂಜಿನಿಯರಿಂಗ್, ಅಥವಾ ಇನ್ನಿತರ ವಿಶೇಷ ವಿಭಾಗಗಳಂತಹ ಕ್ಷೇತ್ರಗಳ ಕಾನೂನು ಪ್ರಕ್ರಿಯೆಗಳಲ್ಲಿ ತಜ್ಞರ ಅಭಿಪ್ರಾಯಗಳನ್ನು ಪುರಾವೆಯಾಗಿ ಸ್ವೀಕರಿಸಿ, ಅಗತ್ಯ ಸಂದರ್ಭಗಳಲ್ಲಿ ನಿಖರವಾದ ನಿರ್ಧಾರ ತೆಗೆದುಕೊಳ್ಳಲು ಸತ್ಯ-ಶೋಧಕರಿಗೆ ಸಹಾಯ ಮಾಡುತ್ತವೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ವಿಧಿವಿಜ್ಙಾನ ಮತ್ತು ವಿಷಶಾಸ್ತ್ರ ವಿಭಾಗದಲ್ಲಿ ಸಂಶೋಧನೆಗಳು ಕಡಿಮೆ. ಆದ್ದರಿಂದ ಸಂಶೋಧನೆಗಳು ಅಧಿಕಗೊಂಡು ನ್ಯಾಯ ನೀಡುವಿಕೆಗೆ ಪರಿಹಾರ ಕಲ್ಪಿಸುವಂತಾಗಬೇಕು. ವಿಧಿವಿಜ್ಞಾನ ಹಾಗೂ ವಿಷಶಾಸ್ತ್ರವನ್ನು ಕಾನೂನು ಮಹಾವಿದ್ಯಾಲಯಗಳಲ್ಲಿ ಅಳವಡಿಸುವ ಕುರಿತು ಯೋಚಿಸಲಾಗುತ್ತಿದೆ. ಈ ವಿಭಾಗವನ್ನು ಉನ್ನತಿಕರಿಸಲು ಅವಶ್ಯವಿರುವ ಎಲ್ಲ ಸಹಕಾರವನ್ನು ನೀಡಲಾಗುತ್ತದೆ. ವೈದ್ಯಕೀಯ ತಜ್ಞರು ತನಿಖಾ ಅಧಿಕಾರಿಗಳಿಗೆ ಕಾಣದ ಸೂಕ್ಷ್ಮ ಪುರಾವೆಗಳನ್ನು ಸಂಗ್ರಹಿಸುವಲ್ಲಿ ನಿಸ್ಸೀಮರು. ಅಪರಾಧ ನ್ಯಾಯದ ಆಡಳಿತದಲ್ಲಿ ವಿಧಿವಿಜ್ಙಾನ ಮತ್ತು ವಿಷಶಾಸ್ತ್ರ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತಿದೆ. ನಿರ್ಣಾಯಕ ಮತ್ತು ಮಹತ್ವದ ದಾಖಲೆಗಳನ್ನು ಒದಗಿಸಿ, ಸತ್ಯವನ್ನು ನಿರ್ಧರಿಸಲು ನ್ಯಾಯಾಲಯಗಳಿಗೆ ಅನುವು ಮಾಡಿಕೊಡುತ್ತದೆ. ಅಸಹಜ ಸಾವು, ಕೊಲೆಗಳು, ವಿಷ ಸೇವನೆ, ಮಾದಕ ದ್ರವ್ಯ ಸೇವನೆ, ಆತ್ಮಹತ್ಯೆ ಇತ್ಯಾದಿ ಪ್ರಕರಣಗಳಲ್ಲಿ ಅವುಗಳ ಪ್ರಾಮುಖ್ಯತೆಯನ್ನು ಕಡಿಮೆ ಮಾಡಲು ಸಾಧ್ಯವಿಲ್ಲ ಎಂದು ತಿಳಿಸಿದರು.
ಆರಂಭದಲ್ಲಿ ವಿಧಿವಿಜ್ಙಾನ ಮತ್ತು ವಿಷಶಾಸ್ತ್ರ ಮುಖ್ಯವಾಗಿ ಮರಣೋತ್ತರ ಪರೀಕ್ಷೆಯಲ್ಲಿ ಕೊಲೆಗಳು, ಆಕಸ್ಮಿಕ ಅಥವಾ ಯಾವುದೇ ರೀತಿಯ ಅಸ್ವಾಭಾವಿಕ ಅಥವಾ ಅನುಮಾನಾಸ್ಪದ ಸಾವುಗಳಿಂದ ಉಂಟಾಗುವ ಸಾವುನೋವುಗಳನ್ನು ತನಿಖೆ ಮಾಡಲು ಬಳಸಲಾಗುತ್ತಿತ್ತು.ಆದರೆ ಇಂದು ಸಾಕಷ್ಟು ಪ್ರಕರಣಗಳಲ್ಲಿ ವಿಧಿವಿಜ್ಙಾನ ಮತ್ತು ವಿಷಶಾಸ್ತ್ರ ತಜ್ಞರ ಸಹಾಯ ಪಡೆಯಲಾಗುತ್ತಿದೆ ಎಂದ ಅವರು, ಅಪರಾಧ ಮಾಡುವಲ್ಲಿ ತನ್ನ ಹೆಜ್ಜೆಗಳನ್ನು ಮರೆಮಾಚಲು ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಲು ಅಪರಾಧಿ ಯಾವಾಗಲೂ ಜಾಗರೂಕನಾಗಿ, ವಿವೇಚನೆಯಿಂದ್ದಿರುತ್ತಾನೆ ಎಂದರು.
ಸಾಕ್ಷಿಗಳನ್ನು ಗೊಂದಲಗೊಳಿಸುವಲ್ಲಿ ವಕೀಲರು ತಜ್ಞರಾಗಿರುತ್ತಾರೆ. ಭಾರತದಲ್ಲಿ ಶೇ. 80ರಷ್ಟು ಅಪರಾಧ ಪ್ರಕರಣಗಳು ವ್ಯವಹಾರಗಳಾಗಿವೆ. ಈಗೀಗ ಜನರು ಕಾನೂನು ಸುಶಿಕ್ಷಿತರಾಗುತ್ತಿದ್ದಾರೆ. ಅದರ ಕುರಿತು ಪರಾಮರ್ಶಿಸುತ್ತಿದ್ದಾರೆ. ಆದ್ದರಿಂದ ಸತ್ಯ ಮರೆಮಾಚದಂತೆ ಅದು ಸದಾ ಗೋಚರಿಸುವಂತಾಗಲು ತಮ್ಮ ಜವಾದ್ಬಾರಿ ಸಾಕಷ್ಟಿದೆ. ಈ ಕುರಿತು ನ್ಯಾಯಾದೀಶರು ಕೂಡ ಮನವರಿಕೆ ಮಾಡುತ್ತಿರುತ್ತಾರೆ. ಆದರೂ ಕೂಡ ಸಾಕ್ಷಿ ವಿರುದ್ದ ಹೋದರೆ ವಿಜ್ಞಾನ ಮತ್ತು ತಂತ್ರಜ್ಞಾನ ಯುಗದಲ್ಲಿ ಸಕಲ ವ್ಯವಸ್ಥೆಯೊಂದಿಗೆ ಸಾಕ್ಷಿಗಳನ್ನು ನೀಡುತ್ತದೆ. ಅಪರಾಧಗಳಿಗೆ ಶೇ. 100ರಷ್ಟು ನ್ಯಾಯವನ್ನು ನೀಡಿದರೆ ಅಪರಾಧ ಮತ್ತು ವಂಚೆನೆಗಳು ಕಡಿಮೆಯಾಗುತ್ತವೆ. ಅದರ ಕುರಿತು ಪಾರೆನ್ಸಿಕ್ ವಿಭಾಗವು ಗಮನಹರಿಸಬೇಕೆಂದು ಸಲಹೆ ನೀಡಿದರು.
ಸಂಸ್ಥೆಯ ಕಾರ್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಅವರು ಮಾತನಾಡಿ, 1984ರಲ್ಲಿ ಮರಣೋತ್ತರ ಪರೀಕ್ಷೆ ಮಾಡುವದು ಅತ್ಯಂತ ಕಠಿಣವಾಗಿತ್ತು. ಈಗ ಎಲ್ಲ ಕಡೆ ವಿಧಿವಿಜ್ಙಾನ ಮತ್ತು ವಿಷಶಾಸ್ತ್ರ ವೈದ್ಯರು ಲಬ್ಯವಿರುವದರಿಂದ ಸಾಕಷ್ಟು ಅನುಕೂಲವಾಗಿದೆ. ಇದನ್ನು ಅಭ್ಯಸಿಸಲು ಶುಲ್ಕ ಪಡೆಯದೇ ಸ್ಟೈಪಂಡ ನೀಡಲಾಗುತ್ತಿದೆ ಎಂದ ಅವರು ಕಾನೂನು ಸುವ್ಯವಸ್ಥೆ ಕಾಪಾಡುವವರಿಗೆ ಸರಕಾರವು ತರಬೇತಿ ನೀಡಬೇಕೆಂದು ಸಲಹೆ ನೀಡಿದರು. ಕಾಹೆರನ ಉಪಕುಲಪತಿ ಡಾ. ನಿತಿನ ಗಂಗಾಣೆ ಮಾತನಾಡಿದರು. ವೇದಿಕೆ ಮೇಲೆ ಡಾ. ಎನ್ ಎಸ್ ಮಹಾಂತಶೆಟ್ಟಿ ಉಪಸ್ಥಿತರಿದ್ದರು. ಸಂಘಟನಾದ್ಯಕ್ಷರಾದ ಡಾ. ರವೀಂದ್ರ ಹೊನ್ನುಂಗರ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ವಿನಯ ಬನ್ನೂರ ವಂದಿಸಿದರು. ಡಾ. ಅವಿನಾಶ ಕವಿ ನಿರೂಪಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ