ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಅನೇಕ ವರ್ಷಗಳಿಂದ ಲೀವರ್ ವೈಫಲ್ಯದಿಂದ ಬಳಲುತ್ತ ಜೀವನ್ಮರಣದ ನಡುವೆ ಹೋರಾಡುತ್ತಿದ್ದ ೪೨ ವರ್ಷದ ವ್ಯಕ್ತಿಯೋರ್ವನಿಗೆ ಲೀವರ್ ಕಸಿ ಮಾಡುವುದರ ಮೂಲಕ ರೋಗಿಯನ್ನು ಪ್ರಾಣಾಪಾಯದಿಂದ ಪಾರು ಮಾಡಿದ್ದಲ್ಲದೇ, ಉತ್ತರ ಕರ್ನಾಟಕದಲ್ಲಿಯೇ ತೃತೀಯ ಯಶಸ್ವಿ ಯಕೃತ್ತಿನ ಕಸಿ ಮಾಡುವಲ್ಲಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯರು ಯಶಸ್ವಿಯಾಗಿದ್ದಾರೆ.
ಕಟ್ಟಡ ಕಾಮಗಾರಿ ಮಾಡುತ್ತಿರುವ ಸಂದರ್ಭದಲ್ಲಿ ಕಾಲು ಜಾರಿ ಬಿದ್ದು ತೀವ್ರವಾಗಿ ಗಾಯಗೊಂಡು ಹುಬ್ಬಳ್ಳಿಯ ಕಿಮ್ಸ್ (ಕರ್ನಾಟಕ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸ) ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂಲತಃ ಹಾವೇರಿ ಜಿಲ್ಲೆಯ ೧೭ ವರ್ಷದ ಬಾಲಕನ ಮೆದುಳು ನಿಷ್ಕ್ರೀಯಗೊಂಡು, ತನ್ನ ಕಾರ‍್ಯವನ್ನು ನಿಲ್ಲಿಸಿದಾಗ ಕುಟುಂಬ ಸದಸ್ಯರೊಂದಿಗೆ ಆಪ್ತಸಮಾಲೋಚನೆ ಮಾಡಿದಾಗ, ದಾನ ಮಾಡಿದ ಲೀವರ್ ಅನ್ನು ಯಕೃತ ವೈಫಲ್ಯದಿಂದ ಬಳಲುತ್ತಿದ್ದ ಬೆಂಗಳೂರಿನ ವ್ಯಕ್ತಿಗೆ ಕಸಿ ಮಾಡಲಾಗಿದೆ ಎಂದು ಹಿರಿಯ ಗ್ಯಾಸ್ಟ್ರೊಎಂಟ್ರಾಲಾಜಿಸ್ಟ ಡಾ. ಸಂತೋಷ ಹಜಾರೆ ಅವರು ಹೇಳಿದ್ದಾರೆ.
ಯಕೃತ ಕಸಿ ಮಾಡಿಸಿಕೊಂಡು ವ್ಯಕ್ತಿಯು ಈಗ ಸಂಪೂರ್ಣ ಗುಣಮುಖಗೊಂಡು ಆಸ್ಪತ್ರೆಯಿಂದ ಮರಳಿ ಮನೆಗೆ ತೆರಳಿದ್ದಾರೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಿಂದ ಪ್ರಥಮ ಬಾರಿಗೆ ಗ್ರೀನ್ ಕಾರಿಡಾರ ಮೂಲಕ ಲಿವರನ್ನು ರಸ್ತೆ ಮಾರ್ಗವಾಗಿ ತೆಗೆದುಕೊಂಡು ಬರಲಾಯಿತು. ಅತ್ಯಾಧುನಿಕ ವೈದ್ಯಕೀಯ ಸಲಕರಣೆ ಹಾಗೂ ಲಿವರ್ ಕಸಿ ಕೇಂದ್ರವಾಗಿ ಉತ್ತರ ಕರ್ನಾಟಕ, ಮಹಾರಾಷ್ಟತರ ಹಾಗೂ ಗೋವಾ ರಾಜ್ಯಗಳ ಜನತೆಗೆ ಆಶಾಕಿರಣವಾಗಿ ಹೊರಹೊಮ್ಮಿದೆ. ಕೇವಲ ಮೆಟ್ರೊ ನಗರಗಳಿಗೆ ಸೀಮಿತವಾಗಿದ್ದ ಲೀವರ್ ಕಸಿ ಶಸ್ತ್ರಚಿಕಿತ್ಸೆಗಳನ್ನು ಅವಶ್ಯವಿರುವ ರೋಗಿಗಳಿಗೆ ಕೈಗೆಟಕುವ ದರದಲ್ಲಿ ನೀಡಲಾಗುತ್ತಿದೆ. ಆದ್ದರಿಂದ ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳುವಂತೆ ಕೋರಲಾಗಿದೆ.
ಯಶಸ್ವಿ ಯಕೃತ ಕಸಿ ನೆರವೇರಿಸಿದ ಆಸ್ಪತ್ರೆಯ ವೈದ್ಯರ ತಂಡ ಹಾಗೂ ಲೀವರ್ ದಾನಿಯ ಕುಟುಂಬವನ್ನು ಕೆಎಲ್‌ಇ ಸಂಸ್ಥೆಯ ಕಾರ‍್ಯಾಧ್ಯಕ್ಷರಾದ ಡಾ. ಪ್ರಭಾಕರ ಕೋರೆ ಹಾಗೂ ಆಡಳಿತ ಮಂಡಳಿ ಸದಸ್ಯರು, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ ಡಾ. (ಕರ್ನಲ್) ಎಂ ದಯಾನಂದ ಅವರು ಅಭಿನಂದಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ