
ಪ್ರಗತಿವಾಹಿನಿ ಸುದ್ದಿ: ಮನೆ ದರೋಡೆ ಮಾಡಿದ್ದ ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಹುಬ್ಬಳ್ಳಿ ಪೊಲೀಸರು ಬೆಳ್ಳಂ ಬೆಳಗ್ಗೆ ಫೈರಿಂಗ್ ಮಾಡಿದ್ದು ಕಿಮ್ಸ್ ಆಸ್ಪತ್ರೆಗೆ ದಾಖಲಾಗುವಂತೆ ಮಾಡಿದ್ದಾರೆ.
ಕಳೆದ ಒಂದು ವಾರದ ಹಿಂದೆ ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ಸಭಾಪತಿ ಬಸವರಾಜ ಹೊರಟ್ಟಿ ಅವರ ಮನೆಯ ಪಕ್ಕದಲ್ಲಿಯೇ ಮನೆಯನ್ನು ದರೋಡೆ ಮಾಡಲಾಗಿತ್ತು. ಹೀಗಾಗಿ ಈ ಪ್ರಕರಣವನ್ನು ಬೆನ್ನತ್ತಿದ ಉಪನಗರ ಠಾಣೆಯ ಪೊಲೀಸರು ಅಂತಾರಾಜ್ಯದ ಇಬ್ಬರು ಆರೋಪಿಗಳು ಈ ಕೃತ್ಯ ನಡೆಸಿರೋ ಮಾಹಿತಿ ಲಭ್ಯವಾಗಿತ್ತು. ಹೀಗಾಗಿ ಆರೋಪಿಗಳನ್ನು ಬಂಧನ ಮಾಡಿ ತಂದು ವಿಚಾರಣೆ ನಡೆಸುತ್ತಿದ್ದಾಗ ಅವರು ಪೊಲೀಸರ ಮೇಲೆಯೇ ಹಲ್ಲೆ ನಡೆಸಲು ಮುಂದಾದರು. ಈ ವೇಳೆ ಇನ್ಸೆಕ್ಟರ್ ಎಂ ಎಸ್ ಹೂಗಾರ್ ಹಾಗೂ PSI ದೇವೇಂದ್ರ ಆತ್ಮ ರಕ್ಷಣೆಗಾಗಿ ದರೋಡೆಕೋರರಾದ ಇರ್ಷಾದ್ ಹಾಗೂ ಅಕ್ಟರ್ ಎಂಬುವರ ಮೇಲೆ ಫೈರಿಂಗ್ ಮಾಡಿದ್ದಾರೆ.
ಘಟನೆಯಲ್ಲಿ PSI ದೇವೇಂದ್ರ ಹಾಗೂ ಇನ್ನುಳಿದ ಇಬ್ಬರು ಸಿಬ್ಬಂದಿಗಳಿಗೆ ಗಾಯವಾಗಿದ್ದು ಅವರನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗುಂಡೇಟು ತಿಂದ ದರೋಡೆಕೋರರನ್ನು ಕೂಡ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.