ಪ್ರಗತಿವಾಹಿನಿ ಸುದ್ದಿ; ಧಾರವಾಡ: ಹುಬ್ಬಳ್ಳಿ-ಧಾರವಾಡ ಪಶ್ಚಿಮ ಕ್ಷೇತ್ರದ ಶಾಸಕ ಪ್ರಶಾಂತ್ ಅಬ್ಬಯ್ಯರಲ್ಲಿ ಕೊರೋನಾ ಸೋಂಕು ಕಂಡುಬಂದಿದ್ದು, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಾಗಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕ ಅಬ್ಬಯ್ಯ, ಜನರ ಸೇವೆಯಲ್ಲಿ ಪ್ರಾಮಾಣಿಕವಾಗಿ ತೊಡಗಿ, ಕ್ಷೇತ್ರದ ಸೋಂಕಿತ ಪ್ರದೇಶಗಳ ಉಸ್ತುವಾರಿ ಸರಿಯಾಗಿ ನಡೆಯುವಂತೆ ಸ್ವತಃ ಅಂತಹ ಪ್ರದೇಶಗಳಿಗೆ ಭೇಟಿ ನೀಡಿ ನಾನೂ ವ್ಯಾಧಿಪೀಡಿತನಾಗಿದ್ದೇನೆ. ಇದಕ್ಕೆ ನಾನು ವ್ಯಥೆ ಪಡುವದಿಲ್ಲ, ಬದಲು ನನ್ನ ಜನರ ಕಷ್ಟಗಳಲ್ಲಿ ಪಾಲುದಾರನಾದ ತೃಪ್ತಿ ನನಗಿದೆ ಎಂದು ಹೇಳಿದ್ದಾರೆ.
ತಾವು ಸೋಂಕಿನಿಂದ ಬಳಲುತ್ತಿರುವುದನ್ನು ಸಾಮಾಜಿಕ ಜಾಲತಾಣಗಳ ಮೂಲಕ ಬಹಿರಂಗಗೊಳಿಸಿರುವ ಶಾಸಕರು ತಾವು ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಲ್ಲಿ ಸತತವಾಗಿ ತೊಡಗಿದ್ದರಿಂದ ಮತ್ತು ಕೊರೊನಾ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿದ್ದರಿಂದ ಸ್ವಯಂಪ್ರೇರಿತನಾಗಿ ಕಳೆದ ಗುರುವಾರ ಹುಬ್ಬಳ್ಳಿ ಕಿಮ್ಸ್ ನಲ್ಲಿ ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದು, ಶುಕ್ರವಾರ ಕೊರೋನಾ ಪಾಸಿಟಿವ್ ಎಂದು ಫಲಿತಾಂಶ ಬಂದಿದೆ.
ರೋಗನಿರೋಧಕ ಶಕ್ತಿ ತಮ್ಮಲ್ಲಿ ಹೆಚ್ಚಾಗಿದೆ, ಅದಕ್ಕಿಂತ ಜನರ ಆಶೀರ್ವಾದ ತಮ್ಮ ಮೇಲೆ ಇರುವುದರಿಂದ ಶೀಘ್ರ ಗುಣವಾಗಿ ಮತ್ತೆ ಕ್ಷೇತ್ರದ ಹಾಗೂ ಜನರ ಸೇವೆಗೆ ಹಿಂದಿರುಗುವದಾಗಿ ಹೇಳಿದ್ದಾರೆ.
ಮುಂಜಾಗ್ರತಾ ಕ್ರಮವಾಗಿ ತಮ್ಮ ಕುಟುಂಬದ ಎಲ್ಲ ಸದಸ್ಯರಿಗೂ ಇಂದು ಕೊರೋನಾ ಟೆಸ್ಟ್ ಮಾಡಿಸಲಾಗಿದೆ. ತಮ್ಮನ್ನು ಭೇಟಿಯಾದವರಲ್ಲಿ ಯಾರಿಗಾದರೂ ಕೊರೊನಾ ಸೋಂಕಿನ ಲಕ್ಷಣಗಳು ಕಂಡುಬಂದಲ್ಲಿ ಕೂಡಲೇ ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ