ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಕೊರೊನ ಸೋಂಕು ಹೆಚ್ಚುತ್ತಿರುವ ಹಿನ್ನಲೆಯಲ್ಲಿ ವಾಣಿಜ್ಯ ನಗರಿ ಹುಬ್ಬಳ್ಳಿ ಹಾಗೂ ಧಾರವಾಡವನ್ನು ಕೊರೊನ ಹಾಟ್ ಸ್ಪಾಟ್ ಎಂದು ಘೋಷಿಸಲಾಗಿದ್ದು, ಅವಳಿ ನಗರ ಸಂಪೂರ್ಣ ಸ್ತಬ್ಧಗೊಂಡಿದೆ. ಈ ನಡುವೆ ಹುಬ್ಬಳ್ಳಿಯಲ್ಲಿ ಬಡವರು, ನಿರ್ಗತಿಕರು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ.
ಲಾಕ್ ಡೌನ್ ನಿಂದಾಗಿ ನಿರ್ಗತಿಕರು, ಬಡವರು ಅನ್ನ, ನೀರು ಇಲ್ಲದೇ ಹುಬ್ಬಳ್ಳಿ- ಗದಗ ರಸ್ತೆಯ ರೈಲ್ವೇ ಬ್ರಿಜ್ ಕೆಳಗೆ ವಾಸ್ತವ್ಯ ಹೂಡಿದ್ದು, ಪರದಾಟ ನಡೆಸಿದ್ದಾರೆ. ಸುಮಾರು 25ಕ್ಕೂ ಹೆಚ್ಚು ನಿರ್ಗತಿಕರು ಕಳೆದ ಮೂರ್ನಾಲ್ಕು ದಿನಗಳಿಂದ ಊಟವಿಲ್ಲದೇ ಹಸಿವಿನಿಂದ ಕಂಗಾಲಾಗಿದ್ದಾರೆ.
ಇಲ್ಲಿರುವ ಎಲ್ಲರೂ ಬೇರೆ ಬೇರೆ ಜಿಲ್ಲೆ ಹಾಗೂ ರಾಜ್ಯದವರಾಗಿದ್ದು ಹುಬ್ಬಳ್ಳಿಯ ಹೋಟೆಲ್ ಗಳಲ್ಲಿ ಕೆಲಸ ಮಾಡುವವರು, ದಿನಗೂಲಿ ನೌಕರರು ಆಗಿದ್ದಾರೆ. ಈಗ ಲಾಕ್ ಡೌನ್ ಘೋಷಿಸಿರುವುದರಿಂದ ಕೆಲಸ ಕಳೆದುಕೊಂಡಿದ್ದು, ವಾಪಸ್ ಊರುಗೂ ಹೋಗಲಾಗದೇ, ಊಟಕ್ಕೂ ಇಲ್ಲದೇ ಉಪವಾಸ ಬೀಳುವಂತಾಗಿದೆ.
ಎಲ್ಲರೂ ರೈಲ್ವೆ ಬ್ರಿಜ್ ಕೆಳಗೆ ಆಶ್ರಯ ಪಡೆದುಕೊಂಡಿದ್ದು, ಇವರ ಸಂಕಷ್ಟ ಕಂಡ ಹುಬ್ಬಳ್ಳಿ – ಧಾರವಾಡ ಮಹಾನಗರ ಪಾಲಿಕೆ ಮಾಜಿ ಮೇಯರ್ ಅನಿಲ್ ಪಾಟೀಲ್ ಹಾಗೂ ಪಾಲಿಕೆ ಕೆಲ ಸದಸ್ಯರು ಕೈಲಾದ ಸಹಾಯ ಮಾಡಿದ್ದು, ಊಟದ ವ್ಯವಸ್ಥೆ ಮಾಡಿದ್ದಾರೆ. ಆದರೆ ವಾಸ್ತವ್ಯಕ್ಕೆ ವ್ಯವಸ್ಥೆಯಿಲ್ಲದೇ ಬ್ರಿಜ್ ಕೆಳಗೇ ಕಾಲ ಕಳೆಯುತ್ತಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ