ಹುಬ್ಬಳ್ಳಿ ಟೈಗರ್ಸ್ ಕೆಪಿಎಲ್ ಚಾಂಪಿಯನ್

ಹುಬ್ಬಳ್ಳಿ ಟೈಗರ್ಸ್ ಕೆಪಿಎಲ್ ಚಾಂಪಿಯನ್

ಮೈಸೂರು-
ಬಳ್ಳಾರಿ ಟಸ್ಕರ್ಸ್ ವಿರುದ್ಧ 8 ರನ್ ಅಂತರದಲ್ಲಿ ಜಯ ಗಳಿಸಿದ ಹುಬ್ಬಳ್ಳಿ ಟೈಗರ್ಸ್ ತಂಡ 8ನೇ ಆವೃತ್ತಿಯ ಕರ್ನಾಟಕ ಪ್ರೀಮಿಯರ್ ಲೀಗ್ ಚಾಂಪಿಯನ್ ಪಟ್ಟ ಗೆದ್ದುಕೊಂಡಿದೆ.
153 ರನ್ ಜಯದ ಗುರಿ ಹೊತ್ತ ಬಳ್ಳಾರಿ ಟಸ್ಕರ್ಸ್ ತಂಡ ಟೈಗರ್ಸ್ ಬೌಲಿಂಗ್ ದಾಳಿಗೆ ತತ್ತರಿಸಿ ಕೇವಲ 144 ರನ್ ಗಳಿಸುವರಷ್ಟರಲ್ಲಿ ಸರ್ವಪತನ ಕಂಡಿತು. ದೇವದತ್ತ ಪಡಿಕ್ಕಲ್ ಗಳಿಸಿದ ಹೋರಾಟದ 68 ರನ್ ತಂಡವನ್ನು ಸೋಲಿನಿಂದ ಪಾರು ಮಾಡಲಾಗಲಿಲ್ಲ.

ವಿಜೇತ ಚಾಂಪಿಯನ್ ತಂಡ ಹುಬ್ಬಳ್ಳಿ ಟೈಗರ್ಸ್ 10 ಲಕ್ಷ ರೂ. ಬಹುಮಾನ ಹಾಗೂ ಪ್ರತಿಷ್ಠಿತ ಟ್ರೋಫಿ ಗೆದ್ದುಕೊಂಡಿತು.ರನ್ನರ್ಸ್ ಅಪ್ ಬಳ್ಳಾರಿ ಟಸ್ಕರ್ಸ್ 5 ಲಕ್ಷ ರೂ. ಬಹುಮಾನ ಹಾಗೂ ಟ್ರೋಫಿ ತನ್ನದಾಗಿಸಿಕೊಂಡಿತು. ಆದಿತ್ಯ ಸೋಮಣ್ಣ ಹಾಗೂ ಅಭಿಲಾಶ್ ಶೆಟ್ಟಿ ತಲಾ 2 ವಿಕೆಟ್ ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.

ಸಾಧಾರಣ ಮೊತ್ತ ದಾಖಲಿಸಿದ ಟೈಗರ್ಸ್ 

ಹುಬ್ಬಳ್ಳಿ ಟೈಗರ್ಸ್ ತಂಡ ಇದುವರೆಗೂ ಉತ್ತಮ ಪ್ರದರ್ಶನ ತೋರುತ್ತ ಬಂದಿತ್ತು. ಆದರೆ ಫೈನಲ್ ನಲ್ಲಿ ಬ್ಯಾಟಿಂಗ್ ವೈಫಲ್ಯ ಕಂಡಿರುವುದು ಸ್ಪಷ್ಟವಾಗಿತ್ತು. 20 ಓವರ್ ಗಳಲ್ಲಿ 6 ವಿಕೆಟ್ ಕಳೆದುಕೊಂಡು ಕೇವಲ 152 ರನ್ ಗಳಿಸಿತು.
ಹುಬ್ಬಳ್ಳಿ ಟೈಗರ್ಸ್ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ನಿರೀಕ್ಷಿತ ಮಟ್ಟದಲ್ಲಿ ತಂಡದ ಆಟಗಾರು ಬ್ಯಾಟಿಂಗ್ ಪ್ರದರ್ಶಿಸಿಲ್ಲ. ಆದಿತ್ಯ ಸೋಮಣ್ಣ (47) ಹಾಗೂ ಲವ್ನೀತ್ ಸಿಸೋಡಿಯಾ (29) ಹೊರತುಪಡಿಸಿದರೆ ಇತರರು ರನ್ ಗಳಿಸುವಲ್ಲಿ ಎಡವಿದರು.
ಈಗಾಗಲೇ ಆರೆಂಜ್ ಕ್ಯಾಪ್ ಗಳಿಸಿದ್ದ ಆರಂಭಿಕ ಆಟಗಾರ ಮೊಹಮ್ಮದ್ ತಹಾ (9) ಅವರ ವಿಕೆಟ್ ಪಡೆಯುವಲ್ಲಿ ಕೃಷ್ಣಪ್ಪ ಗೌತಮ್ ಯಶಸ್ವಿಯಾದರು. ಮೊದಲ ಓವರ್ ನಲ್ಲೇ ವಿಕೆಟ್ ಗಳಿಸಿ ಟೈಗರ್ಸ್ ತಂಡದ ಬೃಹತ್ ಮೊತ್ತಕ್ಕೆ . ಅಬ್ಬರದ ಹೊಡೆತಗಳಿಗೆ ಮನ ಮಾಡಿದ ನಾಯಕ ವಿನಯ್ ಕುಮಾರ್ ಕೂಡ 4 ರನ್ ಗೆ ತೃಪ್ತಿಪಟ್ಟರು.

ಪ್ರಸೀಧ್ ಕೃಷ್ಣ ಅವರ ಬೌಲಿಂಗ್ ನಲ್ಲಿ ವಿನಯ್ ಕುಮಾರ್ ಕ್ಲೀನ್ ಬೌಲ್ಡ್ ಆಗಿ ನಿರ್ಗಮಿಸಿದ್ದು,ಟೈಗರ್ಸ್ ತಂಡದ ಬೃಹತ್ ಮೊತ್ತದ ಕನಸನ್ನು ದೂರಮಾಡಿತು. ಇಂಥ ಪರಿಸ್ಥಿತಿಯಲ್ಲಿ ತಂಡಕ್ಕೆ ಆಧಾರವಾಗಿ ನಿಂತವರು ಆದಿತ್ಯ ಸೋಮಣ್ಣ. 38 ಎಸೆತಗಳನ್ನು ಎದುರಿಸಿದ ಸೋಮಣ್ಣ 2 ಸಿಕ್ಸರ್ ನೆರವಿನಿಂದ ಅಮೂಲ್ಯ 47 ರನ್ ಗಳಿಸಿ ಅನುಭವಿ ಸ್ಪಿನ್ನರ್ ಕೆ.ಪಿ. ಅಪ್ಪಣ್ಣ ಬೌಲಿಂಗ್ ನಲ್ಲಿ ಎಲ್ಬಿಗೆ ಬಲಿಯಾದರು. ಲವ್ನಿತ್ ಸಿಸೋಡಿಯಾ 29 ಎಸೆತಗಳಲ್ಲಿ 2  ಬೌಂಡರಿ ಹಾಗೂ 1 ಸಿಕ್ಸರ್ ಮೂಲಕ 29 ರನ್ ಗಳಿಸಿ ಸಾಧಾರಣ ಮೊತ್ತದಲ್ಲಿ ಪ್ರಮುಖ ಭಾಗಿಯಾದರು. ಕೆಪಿ ಅಪ್ಪಣ್ಣ 19 ರನ್ ಗೆ 2 ವಿಕೆಟ್ ಗಳಿಸಿದರೆ, ಪ್ರಸೀಧ್ ಕಷ್ಣ, ಕೃಷ್ಣಪ್ಪ ಗೌತಮ್, ಅಬ್ರಾರ್ ಕಾಝಿ ಹಾಗೂ ಕಾರ್ತಿಕ್ ತಲಾ 1 ವಿಕೆಟ್ ಗಳಿಸಿ ಟೈಗರ್ಸ್ ನ ರನ್ ಗಳಿಕೆಗೆ ಕಡಿವಾಣ ಹಾಕಿದರು.

ಬೃಹತ್ ಜಯ ದಾಖಲಿಸಿದ ಟಸ್ಕರ್ಸ್

ಪುರುಷರ ಫೈನಲ್ ನಡೆಯುವುದಕ್ಕೆ ಮುನ್ನ ನಡೆದ ಮಹಿಳಾ ಕೆಪಿಎಲ್ ನ ಪ್ರದರ್ಶನ ಪಂದ್ಯದಲ್ಲಿ ದಿವ್ಯಾ ಗ್ನಾನಾನಂದ ಅವರ ಆಲ್ರೌಂಡ್ ಪ್ರದರ್ಶನದ ನೆರವಿನಿಂದ ಬಳ್ಳಾರಿ ಟಸ್ಕರ್ಸ್ ತಂಡ ಬೆಳಗಾವಿ ಪ್ಯಾಂಥರ್ಸ್ ವಿರುದ್ಧ 9 ವಿಕೆಟ್ ಗಳ ಅಂತರದಲ್ಲಿ ಬೃಹತ್ ಜಯ ಗಳಿಸಿತು.
ಮೊದಲು ಬ್ಯಾಟಿಂಗ್ ಮಾಡಿದ ಪ್ಯಾಂಥರ್ಸ್ ತಂಡ ವೇದಾ ಕೃಷ್ಣ ಮೂರ್ತಿ ಹಾಗೂ ಕರುಣಾ ಜೈನ್ ಅವರಂಥ ಶ್ರೇಷ್ಠ ಆಟಗಾರ್ತಿಯರನ್ನು ಹೊಂದಿದ್ದರೂ 19 ಓವರ್ ಗಳಲ್ಲಿ ಕೇವಲ 90 ರನ್ ಗೆ ಸರ್ವಪತನ ಕಂಡಿತು.
ಚಂದು ವಿ (19ಕ್ಕೆ3), ಶ್ರೇಯಾಂಕ ಪಾಟೀಲ್ (13ಕ್ಕೆ 2) ಅವರ ಸ್ಪಿನ್ ದಾಳಿಗೆ ಪ್ಯಾಂಥರ್ಸ್ ಲಗುಬಗನೆ ವಿಕೆಟ್ ಕಳೆದುಕೊಂಡಿತು.
91 ರನ್ ಜಯದ ಗುರಿ ಹೊತ್ತ ಟಸ್ಕರ್ಸ್ 14.3 ಓವರ್ ಗಳಲ್ಲಿ ಕೇವಲ 1 ವಿಕೆಟ್ ಕಳೆದುಕೊಂಡು ಜಯ ದಾಖಲಿಸಿತು. ವನಿತಾ ವಿ.ಆರ್. (39) ಹಾಗೂ ದಿವ್ಯಾ (39 ನಾಟೌಟ್) ಟಸ್ಕರ್ಸ್ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.
ಸಂಕ್ಷಿಪ್ತ ಸ್ಕೋರ್
ಬೆಳಗಾವಿ ಪ್ಯಾಂಥರ್ಸ್ 19 ಓವರ್ ಗಳಲ್ಲಿ 90 ರನ್
(ಚಂದು ವಿ. 19ಕ್ಕೆ 3), ಶ್ರೇಯಾಂಕ ಪಾಟೀಲ್ 13ಕ್ಕೆ 2, ಗ್ನಾನಾನಂದ 13ಕ್ಕೆ 2)
ಟಸ್ಕರ್ಸ್ 14.3 ಓವರ್ ಗಳಲ್ಲಿ 1 ವಿಕೆಟ್ ಗೆ 91
(ವನಿತಾ ವಿ.ಆರ್. 39, ದಿವ್ಯಾ ಗ್ನಾನಾನಂದ 39 ನಾಟೌಟ್).///

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button