ಸಿಎಎ ವಿರೋಧಿಸುವವರಿಂದ ವೋಟ್ ಬ್ಯಾಂಕ್ ರಾಜಕಾರಣ: ಅಮಿತ್ ಶಾ

ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಬಿಜೆಪಿ ಎಂದೂ ವೋಟ್ ಬ್ಯಾಂಕ್ ರಾಜಕಾರಣ ಮಾಡಿಲ್ಲ, ಧರ್ಮದ ಆಧಾರದ ಮೇಲೆ ದೇಶ ಒಡೆಯುವ ಯತ್ನವನ್ನೂ ಮಾಡಿಲ್ಲ. ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸುವವರು ವೋಟ್ ಬ್ಯಾಂಕ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಹುಬ್ಬಳ್ಳಿಯಲ್ಲಿ ಪೌರತ್ವ ಕಾಯ್ದೆ ಕುರಿತು ಜಾಗೃತಿ ಸಮಾವೇಶದಲ್ಲಿ ಮಾತನಾಡಿದ ಅಮಿತ್ ಶಾ, ವಿಪಕ್ಷಗಳ ವಿರುದ್ಧ ಕಿಡಿಕಾರಿದರು. 70 ವರ್ಷಗಳಿಂದ ಸುಧಾರಿಸಲು ಸಾಧ್ಯವಾಗದ ಸಮಸ್ಯೆಗಳಿಗೆ ನಾಅವು ಪರಿಹಾರ ನೀಡುತ್ತಿದ್ದೇವೆ. ಪೌರತ್ವ ಕಾಯ್ದೆಯಿಂದ ಶತ್ರುರಾಷ್ಟ್ರಗಳಲ್ಲೂ ಭಾಯವುಂಟಾಗಿದೆ. ದೇಶದ ಎಲ್ಲಾ ನಾಗರಿಕರಿಗೂ ಪೌರತ್ವ ನೀಡೋದು ನಮ್ಮ ಉದ್ದೇಶ ಎಂದರು.

ಅಂದಿನ ಕಾಂಗ್ರೆಸ್ ನಾಯಕರೇ 3 ದೇಶಗಳ ಅಲ್ಪಸಂಖ್ಯಾತರಿಗೆ ಪೌರತ್ವ ನೀಡುವ ಭರವಸೆ ನೀಡಿದ್ದರು. ಅಂದು ನೆಹರು – ಲಿಯಾಖತ್ ಅಲಿ ಒಪ್ಪಂದದ ಮೂಲಕ ಅಲ್ಲಿನ ಅಲ್ಪಸಂಖ್ಯಾತರು ಭಾರತಕ್ಕೆ ಬಂದರೆ ಪೌರತ್ವ ನೀಡುವ ಒಪ್ಪಂದ ಮಾಡಿಕೊಂಡಿದ್ದರು. ಗಾಂಧೀಜಿಯವರು ಕೂಡ 1946ರರ ತಮ್ಮ ಭಾಷಣದಲ್ಲಿ ನಾಗರಿಕತ್ವ ನೀಡುವ ಭರವಸೆ ನೀಡಿದ್ದರು. ಕಾಂಗ್ರೆಸ್ ನವರೇ ಈಗ ಇದನ್ನು ವಿರೋಧಿಸುತ್ತಿದ್ದಾರೆ. ಗಾಂಧಿ ನೀಡಿದ್ದ ಭರವಸೆಗೂ ನೀವು ಬೆಲೆ ಕೊಡುತ್ತಿಲ್ಲ. ಹಾಗಾದರೆ ನೀವು ಯಾರ ಮಾತಿಗೆ ಬೆಲೆ ಕೊಡುತ್ತೀರಿ ಎಂದು ಪ್ರೆಶ್ನಿಸಿದರು.

ಪಾಕ್, ಬಾಂಗ್ಲಾ, ಅಪ್ಘಾನಿಸ್ತಾನದಲ್ಲಿ ಇಂದು ಏನಾಗಿದೆ. ಪಾಕಿಸ್ತಾನದಲ್ಲಿ ಶೇ.30 ರಷ್ಟಿದ್ದ ಅಲ್ಪಸಂಖ್ಯಾತರು 3 ರಷ್ಟಾಗಿದ್ದಾರೆ. ಕಾರಣ ಅಲ್ಲಿ ಅಲ್ಪಸಂಖ್ಯಾತರನ್ನು ಕೊಂದಿದ್ದಾರೆ ಇಲ್ಲವೇ ಓಡಿಸಿದ್ದಾರೆ. ಗಂಡಂದಿರ ಎದುರೇ ಮಹಿಳೆಯರ ಮಾನಹರಣವಾಗಿದೆ. 3 ದೇಶಗಳಿಂದ ಬಂದಿರುವ ಅಲ್ಪಸಂಖ್ಯಾತರಿಗೆ ನಾಗರಿಕತ್ವ ನೀಡಲು ನಾವು ಮುಂದಾಗಿದ್ದೇವೆ. ಆದರೆ ಇದನ್ನು ಕಾಂಗ್ರೆಸ್, ಜೆಡಿಎಸ್ ಸೇರಿದಂತೆ ವಿಪಕ್ಷಗಳು ವಿರೋಧಿಸುತ್ತಿದ್ದಾರೆ.

ನೆರೆ ದೇಶಗಳಲ್ಲಿ ಅಲ್ಪಸಂಖ್ಯಾತರಾಗಿ ಧಾರ್ಮಿಕ ದೌರ್ಜನ್ಯಕ್ಕೆ ಒಳಗಾಗಿರುವವರು ಅಲ್ಲಿಂದ ತಪ್ಪಿಸಿಕೊಂಡು ಇಲ್ಲಿಗೆ ಬಂದಿರುವವರಿಗೆ ಪೌರತ್ವ ನೀಡುವುದಕ್ಕಾಗಿಯೇ ಈ ಕಾಯ್ದೆಯನ್ನು ತರಲಾಗಿದೆ. ವಿರೋಧ ಪಕ್ಷದವರು ತಪ್ಪು ಮಾಹಿತಿಯನ್ನು ಜನರಲ್ಲಿ ಬಿತ್ತುವ ಮೂಲಕ ವೋಟ್ ಬ್ಯಾಂಕ್ ರಾಜನೀತಿ ಮಾಡುತ್ತಿದೆ. ಕಾಂಗ್ರೆಸ್ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಆದರೆ, ನಾವು ಜನರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.

ಸುಪ್ರೀಂ ಕೋರ್ಟ್ ನ್ಯಾಯಪೀಠವೇ ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಸಮ್ಮತಿ ನೀಡಿದೆ. ಆದರೆ ಕಾಂಗ್ರೆಸ್ ನಿಂದ ವಿರೋಧ ವ್ಯಕ್ತವಾಗುತ್ತಿದೆ. ಜಮ್ಮು-ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ 370ನೇ ವಿಧಿಯನ್ನು ಪ್ರಧಾನಿ ಮೋದಿ ನೇತೃತ್ವದ ಸರ್ಕಾರ ರದ್ದು ಮಾಡಿದೆ. ಅದನ್ನೂ ವಿಪಕ್ಷಗಳು ವಿರೋಧಿಸುತ್ತಿವೆ, ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಮೂಲಕ ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸಿದ್ದೇವೆ ಆದರೆ ಅದನ್ನು ರಾಹುಲ್ ಗಾಂಧಿ ಹಾಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಪ್ರಶ್ನೆ ಮಾಡುತ್ತಿದ್ದಾರೆ. ಪಾಕಿಸ್ತಾನ ಹಾಗೂ ಕಾಂಗ್ರೆಸ್ ಭಾಷೆ ಒಂದೇ ಆಗಿದೆ ಎಂದು ಗುಡುಗಿದರು.

ರಾಹುಲ್ ಗಾಂಧಿಯವರೇ ನೀವೇ ಸಮಯ, ಜಾಗ ನಿಗದಿ ಮಾಡಿ. ನಮ್ಮ ಸಚಿವರಾದ್ ಪ್ರಹ್ಲಾದ್ ಜೋಷಿಯವರೇ ನಿಮ್ಮೊಂದಿಗೆ ಪೌರತ್ವ ತಿದ್ದುಪಡಿ ಕಾಯ್ದೆ ಕುರಿತು ಚರ್ಚಿಸಲು ಆಗಮಿಸುತ್ತಾರೆ ಎಂದು ಸವಾಲು ಹಾಕಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button