ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಭಾರಿ ಪ್ರತಿಭಟನೆ ವ್ಯಕ್ತವಾಗಿದ್ದು, ’ಗೋ ಬ್ಯಾಕ್ ಅಮಿತ್ ಶ” ಎಂಬ ಘೋಷಣೆಗಳನ್ನು ಕೂಗಿ ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯ ನೆಹರು ಮೈದಾನದಲ್ಲಿ ಇಂದು ಪೌರತ್ವ ತಿದ್ದುಪಡಿ ಕಾಯ್ದೆ ಜನಜಾಗೃತಿ ಸಮಾವೇಶ ನಡೆಯುತ್ತಿದ್ದು, ’ಸಂಜೆ ಈ ಸಮಾವೇಶದಲ್ಲಿ ಭಾಗವಹಿಸಲಿರುವ ಅಮಿತ್ ಶಾ ಸಿಎಎ ಪರ ಮಾತನಾಡಲಿದ್ದಾರೆ. ಈ ಹಿನ್ನಲೆಯಲ್ಲಿ ಅಮಿತ್ ಶಾ ಹುಬ್ಬಳ್ಳಿ ಭೇಟಿ ಹಾಗೂ ಸಿಎಎ ವಿರೋಧಿಸಿ ವಿವಿಧ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಒಂದೆಡೆ ಹುಬ್ಬಳ್ಳಿಯ ಕೋರ್ಟ್ ಸರ್ಕಲ್ ಬಳಿ ಪ್ರತಿಭಟನೆ ನಡೆಸುತ್ತಿರುವ ಪ್ರತಿಭಟನಾಕಾರರು, ಕೇಂದ್ರ ಸರ್ಕಾರ ಹಾಗೂ ಅಮಿತ್ ಶಾ, ಪ್ರಧಾನಿ ಮೋದಿ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಇನ್ನೊಂದೆಡೆ ಸಿಪಿಐ ಸೇರಿದಂತೆ ವಿವಿಧ ಸಂಘಟನೆಗಳ ಕಾರ್ಯಕರ್ತರು ಸಮಾವೇಶ ನಡೆಯುತ್ತಿರುವ ಮೈದಾನಕ್ಕೆ ನುಗ್ಗಿ ಕಪ್ಪು ಬಲೂನುಗಳನ್ನು ಹಾರಿ ಬಿಟ್ಟಿದ್ದು, ’ಗೋ ಬ್ಯಾಕ್ ಅಮಿತ್ ಶಾ’ ಎಂದು ಘೋಷಣೆ ಕೂಗಿ ಆಕ್ರೋಶ ಹೊರಹಾಕಿದ್ದಾರೆ.
ಪ್ರತಿಭಟನೆಗಳು ಹೆಚ್ಚುತ್ತಿದ್ದಂತೆ ಪೊಲೀಸರು ಮುಂಜಾಗೃತಾ ಕ್ರಮವಾಗಿ ನೂರಾರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಇನ್ನೊಂದೆಡೆ ಕಾಂಗ್ರೆಸ್ ಕೂಡ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡುತ್ತಿರುವುದನ್ನು ಖಂಡಿಸಿ ಹಾಗೂ ಸಿಎಎ ವಿರೋಧಿಸಿ ಹುಬ್ಬಳ್ಳಿಯ ಚೆನ್ನಮ್ಮ ಸರ್ಕಲ್ ಬಳಿ ಪ್ರತಿಭಟನೆ ನಡೆಸಲು ಮುಂದಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ