ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ಅಟ್ಟಹಾಸ ಹೆಚ್ಚುತ್ತಿದ್ದು, ಈ ನಡುವೆ ಸೋಂಕಿತರ ಚಿಕಿತ್ಸೆಗಾಗಿ ಪ್ಲಾಸ್ಮಾ ಥೆರಪಿಗೂ ಪ್ರಯತ್ನಿಸಲಾಗುತ್ತಿದೆ. ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆ ಮತ್ತೊಂದು ಯಶಸ್ವಿ ಪ್ಲಾಸ್ಮಾ ಚಿಕಿತ್ಸೆ ನೀಡುವ ಮೂಲಕ ಉತ್ತರ ಕರ್ನಾಟಕದ ಸಂಜೀವಿನಿ ಎಂಬ ತನ್ನ ಹೆಸರನ್ನು ಮತ್ತೊಮ್ಮೆ ಸಾಬೀತು ಮಾಡಿದೆ.
ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ನೀಡುವ ಪ್ಲಾಸ್ಮಾ ಥೆರಪಿ ಸೋಂಕಿತರ ಆತಂಕವನ್ನು ಒಂದಿಷ್ಟು ದೂರಮಾಡಿದೆ. ಇದೀಗ ಕಿಮ್ಸ್ ರಾಜ್ಯದಲ್ಲಿ ಹೆಚ್ಚು ಮಂದಿಗೆ ಯಶಸ್ವಿ ಪ್ಲಾಸ್ಮಾ ಥೆರಪಿ ನೀಡಿದ ಕೀರ್ತಿಗೆ ಪಾತ್ರವಾಗಿದೆ.
ಕಿಮ್ಸ್ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಪಡೆದ 13 ಜನರು ಕೂಡ ಗುಣಮುಖರಾಗಿರುವುದು ವಿಶೇಷ. ಕರ್ನಾಟಕದ 14 ಮೆಡಿಕಲ್ ಕಾಲೇಜು ಪ್ಲಾಸ್ಮಾ ಥೆರಪಿ ಚಿಕಿತ್ಸೆ ನೀಡಲು ಮುಂದೆ ಬಂದಿದ್ದವು. ಈ ಮೆಡಿಕಲ್ ಕಾಲೇಜುಗಳ ಪೈಕಿ ಐಎಂಸಿಆರ್ ನಿಂದ ಮೊದಲ ಅನುಮೋದನೆ ಕಿಮ್ಸ್ ಗೆ ದೊರೆತಿತ್ತು.
ಬೆಂಗಳೂರಿನ ಮೆಡಿಕಲ್ ಕಾಲೇಜ್ ಆ್ಯಂಡ್ ರಿಸರ್ಚ್ ಇನ್ಸ್ಟಿಟ್ಯೂಟ್ ನಲ್ಲಿ 8 ಸೋಂಕಿತರಿಗೆ ಪ್ಲಾಸ್ಮಾ ಥೆರಪಿ ನೀಡಿದ್ದು, ಐವರು ಮಾತ್ರ ಗುಣಮುಖರಾಗಿದ್ದರು. ಆದರೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ಪ್ಲಾಸ್ಮಾ ಥೆರಪಿ ಚಿಕಿತ್ಸೆ ಪಡೆದ 13 ಜನರು ಗುಣಮುಖರಾಗಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ