
ಮಠದ ಜಾಗದಲ್ಲಿ ಕೆಎಲ್ಇ ಮೆಡಿಕಲ್ ಕಾಲೇಜು ನಿರ್ಮಾಣವಾಗಬೇಕೆನ್ನುವುದು ಹಿಂದಿನ ಶ್ರೀಗಳ ಕನಸಾಗಿತ್ತು
ಅದರಂತೆ ಆಗಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ
ಪ್ರಗತಿವಾಹಿನಿ ಸುದ್ದಿ; ಹುಬ್ಬಳ್ಳಿ: ಮೂರು ಸಾವಿರ ಮಠದ ವಿವಾದ ಮತ್ತೆ ತಾರಕಕ್ಕೇರಿದ್ದು, ಈ ಕುರಿತು ಮಾತನಾಡಿರುವ ಉದ್ಯಮಿ ವಿಜಯ ಸಂಕೇಶ್ವರ್, ಮೂಜಗು ಶ್ರೀಗಳು ಸಾಲದಿಂದ ಅಳುತ್ತಿದ್ದಾರೆ. ಮಠದ ಈಗಿನ ಪೀಠಾಧಿಪತಿಗಳಿಗೆ ಮಠವನ್ನು ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಇಬ್ಬರು ಸ್ವಾಮೀಜಿಗಳು ಕುಳಿತು ಸೌಹಾರ್ದಯುತವಾಗಿ ಸಮಸ್ಯೆ ಇತ್ಯರ್ಥ ಮಾಡಬೇಕು ಎಂದಿದ್ದಾರೆ.
ನಾನು ಉನ್ನತ ಸಮಿತಿಯಲ್ಲಿದ್ದಾಗ ಮಠದ ಅಭಿವೃದ್ಧಿ ನಿಟ್ಟಿನಲ್ಲಿ ಸಭೆ ಕರೆಯುವಂತೆ ಸಾಕಷ್ಟು ಬಾರಿ ಹೇಳಿದ್ದೆ. ಆದರೆ ಯಾರೊಬ್ಬರೂ ಗೋಜಿಗೆ ಹೋಗಿಲ್ಲ. ಹೀಗಾಗಿ ಎಲ್ಲಿ ದುಡ್ದಿನ ವ್ಯವಹಾರ ನಡೆಯುತ್ತೋ ಅಲ್ಲಿ ನಾನು ಇರುವುದಿಲ್ಲ. ಅದು ಮಠವಾದರೂ ಸರಿ, ರಾಜಕೀಯ ಪಕ್ಷವಾದರೂ ಸರಿ ಅಲ್ಲಿಂದ ಹಿಂದೆ ಸರಿದುಬಿಡುತ್ತೇನೆ. ಹಾಗಾಗಿ ಕಳೆದ 10 ವರ್ಷದಿಂದ ನಾನು ಮಠಕ್ಕೆ ಹೋಗಿಲ್ಲ ಎಂದು ಹೇಳಿದರು.
ಈ ಹಿಂದೆ ದಿಂಗಾಲೇಶ್ವರ ಶ್ರೀಗಳನ್ನು ಮೂರು ಸಾವಿರ ಮಠದ ಉತ್ತರಾಧಿಕಾರಿ ಮಾಡುವ ವಿಚಾರದಲ್ಲಿ ಖುದ್ದು ಶ್ರೀಗಳೇ ನನ್ನ ಬಳಿ ಬಂದು ಮಾತನಾಡಿದ್ದು ನಿಜ. ಆದರೆ ಅವರು ರಾತ್ರೋರಾತ್ರಿ ಹೊರಟುಹೋಗಿದ್ದರಿಂದ ಅದು ಸಾಧ್ಯವಾಗಿಲ್ಲ ಎಂದರು.
ಈಗಿನ ಸ್ವಾಮೀಜಿಗಳು ಭಕ್ತರನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ. ಭಕ್ತರು ಕಾಲು ಪಾದಸ್ಪರ್ಶಿಸಲು ಬಂದರೆ ನಿಲ್ಲುವುದಿಲ್ಲ. ಬೇರೆ ಅನೇಕ ಸ್ವಾಮಿಗಳನ್ನು ನಾನು ಹತ್ತಿರದಿಂದ ನೋಡಿದ್ದೇನೆ. ಅವರು ನಿಂತು, ಭಕ್ತರ ಕಷ್ಟ, ಸುಖ ಆಲಿಸುತ್ತಾರೆ. ಆ ರೀತಿ ಇಲ್ಲೂ ಆಗಬೇಕು. ಭಕ್ತರಲ್ಲಿ ಈಗಲೂ ಯಾವುದೇ ಗೊಂದಲಗಳಿಲ್ಲ. ಸ್ವಾಮೀಜಿಗಳಲ್ಲಿ ಗೊಂದಲವಿದೆ. ಅದನ್ನು ಬಗೆಹರಿಸಿಕೊಂಡು, ವಿವಾದ ಮುಗಿಸಬೇಕು ಎದು ಸಂಕೇಶ್ವರ ಸಲಹೆ ನೀಡಿದರು.
ಇನ್ನು ಮಠದ ಜಾಗದಲ್ಲಿ ಕೆ ಎಲ್ ಇ ಸಂಸ್ಥೆಯ ಮೆಡಿಕಲ್ ಕಾಲೇಜು ಕಟ್ಟುವ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ವಿಜಯ ಸಂಕೇಶ್ವರ, ಮಠದ ಜಾಗದಲ್ಲಿ ಕೆಎಲ್ಇ ಮೆಡಿಕಲ್ ಕಾಲೇಜು ನಿರ್ಮಾಣವಾಗಬೇಕೆನ್ನುವುದು ಹಿಂದಿನ ಶ್ರೀಗಳ ಕನಸಾಗಿತ್ತು. ಅದರಂತೆ ಆಗಿದೆ. ಇದರಲ್ಲಿ ಯಾವುದೇ ತಪ್ಪಿಲ್ಲ ಎಂದರು.
ದಿಂಗಾಲೇಶ್ವರ ಶ್ರೀಗಳು 500 ಕೋಟಿ ಬೆಲೆ ಬಾಳುವ ಆಸ್ತಿಯನ್ನು ದಾನದ ರೂಪದಲ್ಲಿ ಪಡೆದಿದೆ ಎಂಬ ಆರೋಪ ಮಾಡಿದ್ದಾರೆ. ಆದರೆ ಆ ಜಾಗ ಗರಿಷ್ಠ 48 ಕೋಟಿ ರೂ. ಬೆಲೆ ಬಾಳಬಹುದು. ಒಂದು ವೇಳೆ ದಿಂಗಾಲೇಶ್ವರ ಶ್ರೀಗಳು 100 ಕೋಟಿ ಕೊಟ್ಟರೆ ಪ್ರಭಾಕರ ಕೋರೆ ಹಾಗೂ ಮೂಜಗು ಅವರ ಮನವೊಲಿಸಿ ಅವರಿಗೆ ಜಾಗವನ್ನು ಕೊಡಿಸುತ್ತೇನೆ ಎಂದು ಸಂಕೇಶ್ವರ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ