ಪ್ರಗತಿವಾಹಿನಿ ಸುದ್ದಿ: ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮತ್ತೆ ಪೊಲೀಸರ ಗುಂಡಿನ ಸದ್ದು ಮೊಳಗಿದೆ. ಅಂತರಾಜ್ಯ ದರೋಡೆಕೋರರ ಮೇಲೆ ಪೊಲೀಸರು ಗುಂಡು ಹಾರಿಸಿದ್ದಾರೆ.
ನಟೋರಿಯಸ್ ದರೋಡೆಕೋರರ ಗ್ಯಾಂಗ್ ನ ಕಾಲಿಗೆ ಗೊಂಡೇಟು ಹೊಡೆದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಡಿಗೇರಿ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಎಸ್.ಆರ್.ನಾಯಕ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆದಿದೆ.
ಬೈಕ್ ನಲ್ಲಿ ತೆರಳುತ್ತಿದ್ದ ಕುಂದಗೋಳ ಮೂಲದ ವ್ಯಕ್ತಿಯನ್ನು ನಾಲ್ಕೈದು ಜನರ ಗುಂಪು ಅಡ್ಡಗಟ್ಟಿ ಬೈಕ್, ನಗದು ಹಣ, ಮೊಬೈಲ್ ಫೋನ್ ಕಿತ್ತುಕೊಂಡು ಸುಲಿಗೆ ಮಾಡಿತ್ತು. ಈ ಘಟನೆ ಬಳಿಕ ಕೆಲವೇ ಸಮಯದಲ್ಲಿ ರವಿಚಂದ್ರ ಎಂಬಾತನನ್ನು ಅಡ್ಡಗಟ್ಟಿದ ದರೋಡೆಕೋರರ ಗುಂಪು ಅವರಿಂದಲು ಸುಲಿಗೆ ಮಾಡಿತ್ತು. ಬಳಿಕ ಮಂಟೂರ ರಸ್ತೆಯಲ್ಲಿರುವ ಶಾರೂಖ್ ಎಂಬುವವರ ಮನೆಗೆ ನುಗ್ಗಿ ಕನ್ನ ಹಾಕಲು ಯತ್ನಿಸಿದೆ.
ಮನೆಯ ಮೇಲೆ ಕಲ್ಲು ತೂರಾಟ ನಡೆಸಿ ದಾಂಧಲೆ ನಡೆಸಿದ್ದಾರೆ. ಬಳಿಕ ಬಿಡನಾಳ ಬಳಿ ಬೈಕ್ ನಲ್ಲಿ ಅನುಮಾನಾಸ್ಪದವಾಗಿ ಓಡಾಡುತ್ತಿದ್ದ ಗುಂಪನ್ನು ತಡೆದು ಪೊಲೀಸರು ಪರಿಶೀಲಿಸಿದಾಗ ಪೊಲೀಸರ ಮೇಲೆ ಹಲ್ಲೆ ನಡೆಸಿ ಆರೋಪಿಗಳು ಎಸ್ಕೇಪ್ ಆಗಲು ಮುಂದಾಗಿದ್ದಾರೆ. ಈ ವೇಳೆ ಆತ್ಮಹರಕ್ಷಣೆಗಾಗಿ ಪೊಲೀಸರು ನಾಲ್ಕು ಸುತ್ತು ಗುಂಡುಹಾರಿಸಿದ್ದಾರೆ. ಬಳಿಕ ಇಬ್ಬರು ಆರೋಪಿಗಳ ಕಾಲುಗಳಿಗೆ ಗುಂಡೇಟು ಹೊಡೆದಿದ್ದಾರೆ.
ಆರೋಪಿಗಳಾದ ದಿಲೀಫ್ ಹಾಗೂ ನಿಲೇಶ್ ನನ್ನು ಬಂಧಿಸಿ ಕಿಮ್ಸ್ ಆಸ್ಪತ್ರೆಗೆದಾಖಲಿಸಲಾಗಿದೆ. ಆರೋಪಿಗಳ ಹಲ್ಲೆಯಿಂದಾಗಿ ಇಬ್ಬರು ಕಾನ್ಸ್ ಟೇಬಲ್ ಗಳು ಗಾಯಗೊಂಡಿದ್ದಾರೆ.
ಇಬ್ಬರು ಆರೋಪಿಗಳು ಗುಜರಾತ್ ಮೂಲದವರಾಗಿದ್ದು, ಗುಜರಾತ್ ನಿಂದ ಬಂದು ರಾಜ್ಯದ ವಿವಿಧೆಡೆ ದರೋಡೆ, ಕಳ್ಳತನದಲ್ಲಿ ಭಾಗಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ