*ಹುಲಿಕಲ್ ಘಾಟ್ ನಲ್ಲಿ ಮತ್ತೆ ಭೂ ಕುಸಿತ: ಸಂಚಾರ ಸಂಪೂರ್ಣ ಬಂದ್: ಪರ್ಯಾಯ ಮಾರ್ಗದ ಬಗ್ಗೆ ಇಲ್ಲಿದೆ ಮಾಹಿತಿ*

ಪ್ರಗತಿವಾಹಿನಿ ಸುದ್ದಿ: ಹುಲಿಕಲ್ ಘಾಟ್‌ನಲ್ಲಿ ಕಾಮಗಾರಿ ವೇಳೆ ಮಣ್ಣು ಕುಸಿದು ಮೂವರು ಕಾರ್ಮಿಕರು ಮೃತಪಟ್ಟಿರುವ ಘಟನೆ ಬೆನ್ನಲ್ಲೇ ಇದೇ ಜಾಗದಲ್ಲಿ ಮತ್ತೆ ಭೂಕುಸಿತ ಸಂಭವಿಸಿದೆ. ಈ ಹಿನೆಲೆಯಲ್ಲಿ ರಸ್ತೆ ಸಂಚಾರವನ್ನು ಬಂದ್ ಮಾಡಲಾಗಿದೆ.
ಭೂಕುಸಿತ ಹಿನ್ನೆಲೆಯಲ್ಲಿ ತೀರ್ಥಹಳ್ಳಿ-ಕುಂದಾಪುರ ರಾಜ್ಯ ಹೆದ್ದಾರಿ 52ರಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಈ ಬಗ್ಗೆ ಶಿವಮೊಗ್ಗ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ.
ಮುಂಜಾಗೃತಾ ಕ್ರಮವಾಗಿ ರಸ್ತೆಯ ಸುರಕ್ಷತಾ ಕಾಮಗಾರಿ ಮುಗಿಯುವವರೆಗೆ ಈ ನಿರ್ಬಂಧವಿರಲಿದೆ. ಎಲ್ಲಾ ವಾಹನಗಳಿಗೂ ಪರ್ಯಾಯ ಮಾರ್ಗಗಳನ್ನು ಸೂಚಿಸಲಾಗಿದೆ.
ಪರ್ಯಾಯ ಮಾರ್ಘಗಳೆಂದರೆ-
ತೀರ್ಥಹಳ್ಳಿ ಕಡೆಯಿಂದ ಕುಂದಾಪುರ ಕಡೆಗೆ ತೆರಳುವ ವಾಹನಗಳು, ತೀರ್ಥಹಳ್ಳಿ-ರಾವೆ-ಕಾನುಗೋಡು-ನಗರ-ಕೊಲ್ಲೂರು ಮೂಲಕ ಕುಂದಾಪುರಕ್ಕೆ ತೆರಳಬೇಕು.
ತೀರ್ಥಹಳ್ಳಿಯಿಂದ ಯಡೂರು, ಹುಲಿಕಲ್ ಮಾರ್ಗವಾಗಿ ತೆರಳುವವರು ತೀರ್ಥಹಳ್ಳಿ-ಯಡೂರು, ಮಾಸ್ತಿಕಟ್ಟೆ- ಕಾನುಗೋಡು-ನಗರ-ಕೊಲ್ಲೂರು ಮೂಲಕ ಕುಂದಾಪುರಕ್ಕೆ ಸಂಚರಿಸಬೇಕು.
ಶಿವಮೊಗ್ಗ/ಸಾಗರ ಕಡೆಯಿಂದ ಹೊಸನಗರ ಮೂಲಕ ತೆರಳುವವರು ಶಿವಮೊಗ್ಗ-ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳಿ ಭಟ್ಕಳ-ಬೈಂದೂರು ಮಾರ್ಗವಾಗಿ ಕುಂದಾಪುರಕ್ಕೆ ತೆರಳಬೇಕು ಎಂದು ಸೂಚಿಸಲಾಗಿದೆ.



