Kannada NewsLatest

ನ್ಯಾಯಾಲಯದಲ್ಲಿ ನಗೆಪ್ರಸಂಗಗಳು… ಹಾಸ್ಯ ಕಾರ್ಯಕ್ರಮ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ನ್ಯಾಯಾಲಯವೆಂದರೆ ಸಾಮಾನ್ಯವಾಗಿ ಗಂಭೀರ ವಾತಾವರಣವಿರುತ್ತದೆ. ಅಲ್ಲಿ ಘಟಿಸುವ ನಗೆ ಪ್ರಸಂಗಗಳು ಗಂಭೀರ ವಾತವರಣವನ್ನು ತಿಳಿಗೊಳಿಸುತ್ತವೆ. ಹೀಗೆ ಗಂಭೀರವಾದ ಬದುಕನ್ನೂ ಕೂಡ ನಗು ತಿಳಿಗೊಳಿಸುತ್ತದೆ ಎಂದು ಹಿರಿಯ ನ್ಯಾಯವಾದಿ ಎಸ್. ಎಂ. ಕುಲಕರ್ಣಿ ಹೇಳಿದರು.
ಅವರು ನಗರದ ಹಾಸ್ಯಕೂಟ ಹಾಗೂ ಕನ್ನಡ ಸಾಹಿತ್ಯ ಭವನ ವಿಶ್ವಸ್ತ ಮಂಡಳಿ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಳ್ಳಲಾಗಿದ್ದ ’ನ್ಯಾಯಾಲಯದಲ್ಲಿ ನಗೆಪ್ರಸಂಗಗಳು ಎಂಬ ಕಾರ‍್ಯಕ್ರಮದ  ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕಾರ‍್ಯಕ್ರಮಕ್ಕೆ ಚಾಲನೆ ನೀಡಿದ ಜಿಲ್ಲಾ ನ್ಯಾಯಾಧೀಶ  ಡಾ. ಜಿನದತ್ತ ದೇಸಾಯಿ, ನ್ಯಾಯಾಲಯದಲ್ಲಿ ನಗೆಗೆ ಪ್ರವೇಶವಿಲ್ಲವೆಂಬ ತಪ್ಪು ಕಲ್ಪನೆ ಬಹಳಷ್ಟು ಜನರಲ್ಲಿದೆ. ವಿಚಾರ ಮಾಡಿ ನಗಬೇಕು. ಇಬ್ಬರು ಕೂಡಿ ನಕ್ಕರೆ ಅದಕ್ಕೊಂದು ಅರ್ಥವಿದೆ. ಒಬ್ಬರೆ ನಕ್ಕರೆ ಅಪಾರ್ಥವಾಗುತ್ತದೆ ಎಂದು ಹೇಳಿದ ಅವರು ನ್ಯಾಯಾಲಯದಲ್ಲಿ ನಡೆಯುವ ನಗೆ ಪ್ರಸಂಗಗಳನ್ನು ಹಂಚಿಕೊಳ್ಳುತ್ತ ’ಮನೆ ಬಾಡಿಗೆ’ ಕೊಡವ ಜಾಹೀರಾತೊಂದು ಈ ರೀತಿ ಇತ್ತು – ’ಮನೆ ಬಾಡಿಗೆಗೆ ಕೊಡುವುದಿದೆ. ಒಳ್ಳೆಯ ಗಾಳಿ ಬೆಳಕು, ಪರಿಸರವಿದ್ದು. ಅಕ್ಕಪಕ್ಕದಲ್ಲಿ ಯಾವ ವಕೀಲರ ಮನೆಯೂ ಇಲ್ಲ’ ಎಂದು ಹೇಳಿದಾಗ ಜನರು ಮನದುಂಬಿ ನಕ್ಕರು.
ಅತಿಥಿಗಳಾಗಿ ಆಗಮಸಿದ್ದ ಉಚ್ಚ ನ್ಯಾಯಾಲಯ ನ್ಯಾಯವಾದಿಗಳಾದ ಮಂಜುನಾಥ ಮೇಳೇದ ಅವರು ನ್ಯಾಯಾಲಯದಲ್ಲಿಯ ನಗೆ ಪ್ರಸಂಗಗಳನ್ನು ಹಂಚಿಕೊಳ್ಳುತ್ತ ಜೇಬುಗಳ್ಳನಿಗೆ ಒಂದು ಸಾವಿರ ರೂಪಾಯಿ ದಂಡವಾಗುತ್ತದೆ. ಆದರೆ ಆತನ ಹತ್ತಿರ ಐನೂರು ರೂಪಾಯಿಗಳು ಮಾತ್ರ ಇರುತ್ತವೆ. ಆಗ ಜೇಬುಗಳ್ಳ ನ್ಯಾಯಾಧೀಶರಲ್ಲಿ ’ನನಗೆ ಕೇವಲ ಅರ್ಧಗಂಟೆ ಬಸ್ ನಿಲ್ದಾಣದಲ್ಲಿ ತಿರುಗಾಡಿಕೊಂಡು ಬರಲು ಅನುಮತಿ ಕೊಡಿ ನಿಮ್ಮ ಒಂದು ಸಾವಿರ ರೂಪಾಯಿ ದಂಡವನ್ನು ತುಂಬುತ್ತೇನೆ! ಎಂದು ವಿನಂತಿಸಿಕೊಳ್ಳುತ್ತಾನೆ ಇಂಥ ಹಲವಾರು ನ್ಯಾಯಾಲಯ ನಗೆಪ್ರಸಂಗಗಳನ್ನು ಹಂಚಿಕೊಂಡು ಜನರನ್ನು ನಗೆಸುವುದರಲ್ಲಿ ಯಶಸ್ವಿಯಾದರು.
ಗುಂಡೇನಟ್ಟಿ ಮಧುಕರ, ನಿವೃತ್ತ ನ್ಯಾಧೀಶರಾದ ಎ. ಎನ್. ಸೊಲ್ಲಾಪುರಕರ, ಎಸ್. ವಿ. ದೀಕ್ಷೀತ, ವಿಜಯಕುಮಾರ ಹಣ್ಣಿಕೇರಿ ಮುಂತಾದವರು ತಮ್ಮ ನಗೆ ಪ್ರಸಂಗ ಹಂಚಿಕೊಂಡರು. ಜಿ. ಎಸ್. ಸೋನಾರ ನಿರೂಪಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Check Also
Close
Back to top button