ಎಲ್ಲಿ ನೋಡಿದರೂ ನೀರು ನೀರು ನೀರು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಬೆಳಗಾವಿ ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಪ್ರದೇಶಗಳು ನೀರಿನಿಂದಾವೃತವಾಗಿದೆ. ಜಿಲ್ಲೆಯ ನೂರಾರು ಗ್ರಾಮಗಳು ಸಂಪರ್ಕ ಕಡಿದುಕೊಂಡಿದ್ದು, ಮನೆಗಳು ಸಂಪೂರ್ಣ ಜಲಾವೃತವಾಗಿವೆ.
ರಾತ್ರಿ ಸುರಿದ ಮಳೆಯಿಂದ ನದಿಗಳ ಮತ್ತು ನಾಲಾಗಳ ನೀರಿನ ಮಟ್ಟ ಇನ್ನಷ್ಟು ಹೆಚ್ಚಿದೆ. ಇಂದು ಬೆಳಗಾವಿಯ ಎಸ್.ವಿ.ಕಾಲನಿ, ಹಿಂಡಲಗಾ ರಸ್ತೆಯ ಬುಡಾ ಕಾಲನಿಗಳಿಗೆ ಸಹ ನೀರು ನುಗ್ಗಿದೆ. ಅಲ್ಲಿಂದ ನಾಗರಿಕರು ಪ್ರಗತಿವಾಹಿನಿಗೆ ಕರೆ ಮಾಡಿ, ಮಹಾನಗರ ಪಾಲಿಕೆಯ ಹೆಲ್ಪ್ ಲೈನ್ ಗಳಿಗೆ ಕರೆ ಮಾಡಿದ ಸ್ವೀಕರಿಸುತ್ತಿಲ್ಲ ಎಂದೂ ದೂರಿದರು.
ಮರಾಠಾ ಕಾಲನಿಯಲ್ಲಿ ನೀರಿನ ಮಟ್ಟ ರಾತ್ರಿ ಇನ್ನಷ್ಟು ಹೆಚ್ಚಿದೆ. ಬಳ್ಳಾರಿ ನಾಲಾ ಉಕ್ಕಿ ಹರಿಯುತ್ತಿದ್ದು, ಜಯನಗರ ನಾಲಾದಿಂದ ಕೂಡ ನೀರು ಹೊರಗೆ ಬರುತ್ತಿದೆ. ನಗರದ ಬಹುತೇಕ ಕಾಂಪ್ಲೆಕ್ಸ್ ಗಳು, ಅಪಾರ್ಟ್ ಮೆಂಟ್ ಗಳು, ಕೆಳಮಹಡಿ ಮನೆಗಳು ನೀರಿನಿಂದ ತುಂಬಿವೆ. ಅರ್ಧಕ್ಕಿಂತ ಹೆಚ್ಚಿನ ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
ಮಲಪ್ರಭಾ ನದಿ ಉಕ್ಕಿ ಹರಿಯುತ್ತಿರುವುದರಿಂದ ರಾಮದುರ್ಗ ಹಾಗೂ ಸವದತ್ತಿ ತಾಲೂಕಿನ ಹಲವು ಹಳ್ಳಿಗಳು ಸಂಪರ್ಕ ಕಡಿದುಕೊಂಡಿವೆ. ರಾಮದುರ್ಗದ 30 ಗ್ರಾಮಗಳು ಮುಳುಗಡೆ ಭೀತಿಯಲ್ಲಿವೆ. ಚಿಕ್ಕೋಡಿ, ರಾಯಬಾಗ, ಅಥಣಿ ತಾಲೂಕಿನ ಕೃಷ್ಣಾ ತೀರದ ಗ್ರಾಮಗಳ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ