*ಪತ್ನಿ ಕೊಲೆ ಮಾಡಿ ಮಂಚದ ಬಾಕ್ಸ್ ನಲ್ಲಿ ಶವ ಬಚ್ಚಿಟ್ಟು ಪತಿ ಎಸ್ಕೇಪ್*

ಪ್ರಗತಿವಾಹಿನಿ ಸುದ್ದಿ: ಮದುವೆಯಾದ ಕೇವಲ ನಾಲ್ಕೂವರೆ ತಿಂಗಳಿಗೆ ಪತ್ನಿ ಕಥೆಯನ್ನೇ ಮುಗಿಸಿರುವ ಪಾಪಿ ಪತಿ ಶವ ಮಂಚದ ಬಾಕ್ಸ್ ನಲ್ಲಿ ಬಚ್ಚಿಟ್ಟು ಪರಾರಿಯಾಗಿದ್ದಾನೆ.
ಈ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ಕಮಲದಿನ್ನಿ ಗ್ರಾಮದಲ್ಲಿ ನಡೆದಿದೆ. ಸಾಕ್ಷಿ ಕಂಬಾರ ಗಂಡನಿಂದ ಕೊಲೆಯಾದ ದುರ್ದೈವಿ, ಆಕಾಶ್ ಎಂಬಾತ ಕೊಲೆ ಮಾಡಿ ಪರಾರಿಯಾದ ಆರೋಪಿ.
ಹುಬ್ಬಳ್ಳಿಯಲ್ಲಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಆಕಾಶ್ ಒಂದು ಲಕ್ಷಕ್ಕಿಂತ ಹೆಚ್ಚು ಸಂಬಳ ಇದೆ ಅಂತಾ ಸುಳ್ಳು ಹೇಳಿ ಮದುವೆಯಾಗಿದ್ದ. ಐವತ್ತು ಗ್ರಾಂ ಚಿನ್ನ ಹಾಗೂ ಐದು ಲಕ್ಷ ಹಣಕ್ಕಾಗಿ ಪತ್ನಿಯನ್ನ ಪೀಡಿಸುತ್ತಿದ್ದ ಇದೇ ಕಾರಣಕ್ಕೆ ಆಕೆಯನ್ನ ಕೊಲೆ ಮಾಡಿದ್ದಾಗಿ ಸಾಕ್ಷಿ ಕುಟುಂಬಸ್ಥರು ಮೂಡಲಗಿ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಸೋಮವಾರ ಮಧ್ಯಾಹ್ನ ಪತ್ನಿಯ ಕತ್ತು ಹಿಸುಕಿ ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಇದಾದ ಬಳಿಕ ಶವವನ್ನ ಬೆಡ್ ರೂಮ್ ನಲ್ಲಿರುವ ಮಂಚದ ಬಾಕ್ಸ್ ನಲ್ಲಿ ಹಾಕಿ ತಾಯಿಗೆ ಗಂಡ ಹೆಂಡತಿ ಗೋಕಾಕ್ ಗೆ ಹೋಗಿ ಬರೋದಾಗಿ ಹೇಳಿದ್ದಾನೆ. ಇನ್ನೂ ತಾಯಿ ಯಲ್ಲಮ್ಮ ದೇವಿ ಸೇವೆ ಮಾಡ್ತಿದ್ದು ಹೀಗಾಗಿ ಹೆಚ್ಚಾಗಿ ದೇವಸ್ಥಾನದಲ್ಲೇ ಉಳಿದುಕೊಳ್ಳುತ್ತಿದ್ದಳು. ಆಕೆಗೆ ದಾರಿ ತಪ್ಪಿಸುವ ಕೆಲಸ ಮಾಡಿದ್ದ ಮಗ ಮಂಗಳವಾರ ಮತ್ತೆ ಎನೋ ಮನೆಯಲ್ಲಿ ವಾಸನೆ ಬರ್ತಿದೆ ಅಂತಾ ಕೇಳಿದ್ದಾಳೆ. ಈ ವೇಳೆ ಆಕೆಗೆ ಸುಳ್ಳು ಹೇಳಿ ಮತ್ತೆ ಮರೆಮಾಚುವ ಕೆಲಸ ಮಾಡಿದ್ದಾನೆ.
ಇತ್ತ ಪತ್ನಿ ಅವರ ಅಕ್ಕನ ಮನೆಗೆ ಹೋಗಿದ್ದಾಳೆ ಅನ್ನೋದನ್ನ ಕೂಡ ಹೇಳಿದ್ದ. ಇನ್ನೂ ಇದೇ ರೀತಿ ಎರಡು ದಿನ ಪತ್ನಿ ಶವದ ಜೊತೆಗೆ ಕಳೆದ ಆಕಾಶ್ ರಾತ್ರಿ ಆಕೆ ಮೃತದೇಹ ಸಾಗಿಸುವ ಪ್ರಯತ್ನ ಪಟ್ಟು ವಿಫಲನಾಗಿದ್ದ. ಸಾಧ್ಯವಿಲ್ಲ ಎಂದಾದಾಗ ಮಂಚದ ಬಾಕ್ಸ್ ನಲ್ಲಿ ಶವವಿಟ್ಟು ಡ್ರಾಮಾ ಮಾಡಿದ್ದಾನೆ.
ಕೊಲೆಯಾದ ಮೂರು ದಿನದ ಬಳಿಕ ಹೆಚ್ಚು ವಾಸನೆ ಬರ್ತಿದ್ದಂತೆ ಬೆಡ್ ರೂಮ್ ಗೆ ಹೋಗಿ ಆಕಾಶ್ ತಾಯಿ ನೋಡಿದಾಗ ಮಂಚದ ಕೆಳಗೆ ಶವ ಇರುವುದು ಗೊತ್ತಾಗಿದೆ.
ಸದ್ಯ ಇನ್ಯಾವತ್ತು ತಾನೂ ವಾಪಾಸ್ ಬರಲ್ಲಾ ಅಂತಾ ಆರೋಪಿ ತಾಯಿ ಮುಂದೆ ಹೇಳಿ ಹೋಗಿದ್ದಾನೆ. ಜೊತೆಗೆ ಅಕ್ಕನಿಗೂ ಕರೆ ಮಾಡಿ ತಾನೂ ಕೂಡ ಆತ್ಮಹತ್ಯೆ ಮಾಡಿಕೊಳ್ತಿದ್ದು ತನ್ನನ್ನ ಹುಡುಕದಂತೆ ಹೇಳಿದ್ದಾನೆ ಎನ್ನಲಾಗಿದೆ.
ಕೇಸ್ ದಾಖಲಿಸಿಕೊಂಡ ಪೊಲೀಸರು ಸದ್ಯ ಮೂರು ಜನರನ್ನ ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು ಸದ್ಯ ಪರಾರಿಯಾಗಿರುವ ಆಕಾಶ್ ಗಾಗಿ ಪೊಲೀಸರು ಶೋಧ ಮುಂದುವರೆದಿದೆ.