ಸತೀಶ್ ಜಾರಕಿಹೊಳಿಗೆ ಸೆಡ್ಡು: ಎಸೆದ ಕಲ್ಲಿನಿಂದಲೇ ಮನೆ ಕಟ್ಟಲು ಬಿಜೆಪಿ ತಯಾರಿ; ಯಮಕನಮರಡಿಯಲ್ಲಿ ಇಂದು ನಾನೂ ಹಿಂದು ಸಮಾವೇಶ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಯಾರಾದರೂ ನಮಗೆ ಕಲ್ಲು ಎಸೆದರೆ ಅವುಗಳನ್ನು ಸಂಗ್ರಹಿಸಿ ಮನೆ ಕಟ್ಟಬೇಕು ಎನ್ನುವ ನಾಣ್ಣುಡಿಯಂತೆ ಹಿಂದೂ ಶಬ್ಧದ ಕುರಿತಂತೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ನೀಡಿದ ಹೇಳಿಕೆಯನ್ನೇ ಬಂಡವಾಳವಾಗಿಸಿಕೊಂಡು ಅವರ ಕ್ಷೇತ್ರ ಯಮಕನಮರಡಿಯಲ್ಲಿ ಬೃಹತ್ ಸಮಾವೇಶ ಹಮ್ಮಿಕೊಳ್ಳಲಾಗಿದೆ.
ಯಮಕನಮರಡಿ ಕ್ಷೇತ್ರದ ಚಕ್ರವರ್ತಿ ಸೂಲಿಬೇಲಿ ಅಭಿಮಾನಿ ಬಳಗ ಎನ್ನುವ ಸಂಘಟನೆಯಡಿ ಸಮಾವೇಶ ಆಯೋಜಿಸಲಾಗಿದೆ. ಬುಧವಾರ ಸಂಜೆ 5.30ಕ್ಕೆ ಸಮಾವೇಶ ಆಯೋಜಿಸಲಾಗಿದ್ದು, ಚಕ್ರವರ್ತಿ ಸೂಲಿಬೇಲಿ ಮುಖ್ಯ ಭಾಷಣ ಮಾಡಲಿದ್ದಾರೆ.
ಸತೀಶ್ ಜಾರಕಿಹೊಳಿ ಈಚೆಗೆ ನಿಪ್ಪಾಣಿಯಲ್ಲಿ ಮಾಡಿದ ಭಾಷಣದ ವೇಳೆ ಹಿಂದೂ ಶಬ್ಧವನ್ನು ಕೀಳಾಗಿ ಬಳಸಿದ್ದಾರೆ, ಹಿಂದುಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿ ಬಿಜೆಪಿ ಎಲ್ಲೆಡೆ ಪ್ರತಿಭಟನೆ ನಡೆಸಿತ್ತು. ಅದನ್ನೇ ಮುಂದಿನ ವಿಧಾನ ಸಭಾ ಚುನಾವಣೆ ವೇಳೆ ರಾಜಕೀಯವಾಗಿ ಬಳಸಿಕೊಳ್ಳುವ ಎಲ್ಲ ಮುನ್ಸೂಚನೆ ಸಿಕ್ಕಿತ್ತು. ಕಾಂಗ್ರೆಸ್ ಕೂಡ ಸತೀಶ್ ಹೇಳಿಕೆಯನ್ನು ಖಂಡಿಸಿತ್ತು. ನಂತರ ಸತೀಶ್ ಆ ಹೇಳಿಕೆಯನ್ನು ಹಿಂದಕ್ಕೆ ಪಡೆಯುವುದಾಗಿ ತಿಳಿಸಿದ್ದರು. ನಂತರದಲ್ಲಿ ಸತೀಶ್ ಜಾರಕಿಹೊಳಿ ಬೆಂಬಲಿಗರೂ ಬೆಳಗಾವಿಯಲ್ಲಿ ಶಕ್ತಿ ಪ್ರದರ್ಶನ ಮಾಡಿದ್ದರು.
ಆದರೆ ಬಿಜೆಪಿ ಮತ್ತು ಹಿಂದೂ ಸಂಘಟನೆಗಳು ವಿಷಯವನ್ನು ಅಷ್ಟಕ್ಕೇ ಬಿಡುವ ಯಾವ ಲಕ್ಷಣಗಳೂ ಇಲ್ಲ. ರೊಟ್ಟಿಯೇ ಜಾರಿ ತುಪ್ಪದಲ್ಲಿ ಬಿದ್ದಿರುವಾಗ ಬಿಡುತ್ತಾರೆಯೇ? ಕಾಂಗ್ರೆಸ್ ಪಕ್ಷ ಹಿಂದೂಗಳನ್ನು ಅವಮಾನಿಸಿದೆ, ಅದು ಅಲ್ಪಸಂಖ್ಯಾತರನ್ನು ಓಲೈಸಲು ಇಂತಹ ಹೇಳಿಕೆಗಳನ್ನು ನೀಡುತ್ತಿದೆ ಎಂದು ಬಿಜೆಪಿ ಬೆಂಕಿಗೆ ತುಪ್ಪ ಸುರಿದು, ಚಳಿ ಕಾಯಿಸಿಕೊಳ್ಳುವ ತಯಾರಿಯಲ್ಲಿದೆ.
ಇದೀಗ ಸತೀಶ್ ಜಾರಕಿಹೊಳಿ ಕ್ಷೇತ್ರದಲ್ಲೇ ಸಮಾವೇಶ ಆರಂಭಿಸುವ ಮೂಲಕ 2023ರ ಚುನಾವಣೆಗೆ ಭರ್ಜರಿ ಎಂಟ್ರಿ ನೀಡಲು ಬಿಜೆಪಿ ತಯಾರಾಗಿದೆ. ಇಂದಿನ ಯಮಕನಮರಡಿ ಸಮಾವೇಶ ಹೈ ಓಲ್ಟೇಜ್ ಸಮಾವೇಶವಾಗಿದ್ದು, ಭಾರೀ ಪೊಲೀಸ್ ಬಂಧೋಬಸ್ತ್ ಏರ್ಪಡಿಸಲಾಗಿದೆ.
ಬೆಳಗಾವಿಯಲ್ಲಿ ಶಾಸಕ ಸತೀಶ್ ಜಾರಕಿಹೊಳಿ ಬೆಂಬಲಿಗರ ಶಕ್ತಿ ಪ್ರದರ್ಶನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ