ನಾನು ಯಡಿಯೂರಪ್ಪ ಮಗ : ರಮೇಶ ಜಾರಕಿಹೊಳಿ, ಯತ್ನಾಳ್ ಗೆ ವಿಜಯೇಂದ್ರ ಖಡಕ್ ಸಂದೇಶ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ನಾನು ಯಡಿಯೂರಪ್ಪ ಮಗ. ಓಡಿಹೋಗುವ ಪ್ರಶ್ನೆಯೇ ಇಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸ್ವ ಪಕ್ಷೀಯ ಭಿನ್ನಮತೀಯ ನಾಯಕರಿಗೆ ಖಡಕ್ ಸಂದೇಶ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಮೇಶ ಜಾರಕಿಹೊಳಿ ಮತ್ತು ಕೆಲವರು ಇನ್ನೂ ನನ್ನನ್ನು ಒಪ್ಪಿಕೊಂಡಿಲ್ಲ. ಅವರಿಗೆ ಇನ್ನೂ ಕೆಲವು ಸಮಯ ಬೇಕಾಗಬಹುದು. 2 ವರ್ಷವಾದರೂ ಒಪ್ಪಿಕೊಳ್ಳಲು ಸಮಯ ಸಾಕಾಗಲಿಲ್ಲವೇ ಎನ್ನುವ ಪ್ರಶ್ನೆಯನ್ನು ನೀವು ಕೇಳಬಹುದು. ಆದರೆ ಕೆಲವರಿಗೆ 2 ವರ್ಷ ಬೇಕಾಗುತ್ತದೆ. ಇನ್ನು ಕೆಲವರಿಗೆ 3 ವರ್ಷ ಬೇಕಾಗುತ್ತದೆ ಎಂದು ವ್ಯಂಗ್ಯವಾಡಿದರು.
ಯಡಿಯೂರಪ್ಪನವರಿಗೂ ಕೆಲವರು ಯಾವ ರೀತಿಯಲ್ಲಿ ತೊಂದರೆ ಕೊಟ್ಟಿದ್ದಾರೆ ಎನ್ನುವುದನ್ನು ನೀವೆಲ್ಲ ನೋಡಿದ್ದೀರಿ. ಆದರೆ ಎಂದೂ ಅವರು ಹೆದರಿ ಓಡಿ ಜದವರಲ್ಲ. ನಾನೂ ಯಡಿಯೂರಪ್ಪನವರ ಮಗ. ಹೆದರಿ ಓಡಿಹೋಗುವವನಲ್ಲ ಎಂದು ಎಚ್ಚರಿಕೆ ನೀಡಿದರು.
ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಲೇಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಯಾವುದೇ ಕ್ಷಣದಲ್ಲಿ ಅವರು ರಾಜಿನಾಮೆ ನೀಡಬಹುದು. ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಹೊಸ ಮುಖ್ಯಮಂತ್ರಿಯನ್ನು ಸ್ವಾಗತಿಸುತ್ತೀರಿ ಎಂದು ವಿಜಯೇಂದ್ರ ಹೇಳಿದರು.
ವಿರೋಧ ಪಕ್ಷದವರನ್ನು ಬೆದರಿಸಿದರೆ ಸರೆಂಡರ್ ಆಗುತ್ತಾರೆ ಎಂದು ಸಿದ್ದರಾಮಯ್ಯ ಹಾಗೂ ಅವರ ಸಂಪುಟದ ಸದಸ್ಯರು ತಿಳಿದುಕೊಂಡಿದ್ದಾರೆ. ಆದರೆ ನಾವು ಯಾವುದಕ್ಕೂ ಹೆದರುವ ಪ್ರಶ್ನೆಯೇ ಇಲ್ಲ. ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
ರಮೇಶ ಜಾರಕಿಹೊಳಿ ಅವರನ್ನು ಹುಡುಕಿದೆ, ಸಿಗಲಿಲಲ್ಲ. ಸತೀಶ್ ಜಾರಕಿಹೊಳಿ ಅವರನ್ನು ಭೇಟಿ ಮಾಡಿದೆ ಎಂದೂ ವಿಜಯೇಂದ್ರ ವ್ಯಂಗ್ಯವಾಡಿದರು. ಕ್ಷೇತ್ರದ ಕೆಲಸಗಳ ಕುರಿತು ಸತೀಶ್ ಜಾರಕಿಹೊಳಿ ಭೇಟಿ ಮಾಡಿದೆ ಎಂದೂ ಸಮಜಾಯಿಸಿ ನೀಡಿದರು.
ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕ ವಿಠ್ಠಲ ಹಲಗೇಕರ್, ಮಾಜಿ ಶಾಸಕರಾದ ಮಹಾಂತೇಶ ದೊಡ್ಡಗೌಡರ್, ಅನಿಲ ಬೆನಕೆ, ವಿಶ್ವನಾಥ ಪಾಟೀಲ, ಅರವಿಂದ ಪಾಟೀಲ, ಸುಭಾಷ ಪಾಟೀಲ, ಮಹಾಂತೇಶ ಕವಟಗಿಮಠ, ಮೊದಲಾದವರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ