Kannada NewsKarnataka NewsNationalPolitics

*ನನಗೆ ಯಾರ ಬೆಂಬಲವೂ ಬೇಡ, ಪಕ್ಷ ಹೇಳಿದಂತೆ ನಾನು ಕೆಲಸ ಮಾಡುತ್ತೇನೆ: ಡಿಕೆ ಶಿವಕುಮಾರ್*

ಪ್ರಗತಿವಾಹಿನಿ ಸುದ್ದಿ: “ಕರ್ಮಣ್ಯೇ ವಾಧಿಕಾರಸ್ತೇ ಮಾ ಫಲೇಷು ಕದಾಚನ ಎಂಬ ಶ್ಲೋಕದಂತೆ ನಮ್ಮ ಪ್ರಯತ್ನ ನಾವು ಮಾಡೋಣ ಫಲಾಫಲ ದೇವರಿಗೆ ಬಿಡೋಣ. ನನಗೆ ಯಾರ ಬೆಂಬಲವೂ ಬೇಡ, ಪಕ್ಷ ಹೇಳಿದಂತೆ ನಾನು ಕೆಲಸ ಮಾಡುತ್ತೇನೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಪಷ್ಟಪಡಿಸಿದರು.

ಶೃಂಗೇರಿಯ ಹೆಲಿಪ್ಯಾಡ್ ನಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಉತ್ತರಿಸಿದರು. ಮುಂದಿನ ಸಿಎಂ ಡಿ.ಕೆ. ಶಿವಕುಮಾರ್ ಅವರು ಆಗಬೇಕು ಎಂದು ಕಾರ್ಯಕರ್ತರು ಒತ್ತಾಯ ಮಾಡುತ್ತಿದ್ದಾರೆ ಎಂದು ಕೇಳಿದಾಗ, “ನನ್ನ ಪರವಾಗಿ ಯಾರೂ ಒತ್ತಾಯ ಮಾಡುವುದು ಬೇಡ. ನನಗೆ ಯಾರ ಬೆಂಬಲವೂ ಬೇಡ. ಈ ವಿಚಾರದಲ್ಲಿ ಯಾವುದೇ ಶಾಸಕರು ನನಗೆ ಬೆಂಬಲ ನೀಡುವುದು ಬೇಡ. ನಾನುಂಟು ಕಾಂಗ್ರೆಸ್ ಪಕ್ಷವುಂಟು. ಪಕ್ಷದ ನಾಯಕರು ಹೇಳಿದಂತೆ ನಾನು ಕೆಲಸ ಮಾಡಿಕೊಂಡು ಹೋಗುತ್ತೇನೆ. ನನ್ನ ಪರವಾಗಿ ಶಾಸಕರು, ಕಾರ್ಯಕರ್ತರು ಕೂಗುವುದು ಬೇಡ. ನಾನು ನನ್ನ ಕರ್ತವ್ಯ ಮಾಡುತ್ತೇನೆ” ಎಂದು ಸ್ಪಷ್ಟಪಡಿಸಿದರು.

ಟೆಂಪಲ್ ರನ್ ಎನ್ನುವವರು, ದೇವಾಲಯ ಮುಚ್ಚಿಬಿಡಿ

ನೀವು ದೇವಾಲಯ ಹಾಗೂ ಮಠಗಳ ಭೇಟಿಗೆ ಟೆಂಪಲ್ ರನ್ ಎಂದು ವ್ಯಾಖ್ಯಾನ ಮಾಡಲಾಗುತ್ತಿದೆ ಎಂದು ಕೇಳಿದಾಗ, “ನಾನು ಧರ್ಮದ ಮೇಲೆ ನಂಬಿಕೆ ಇಟ್ಟುಕೊಂಡಿರುವವನು, ನಿತ್ಯ ಪೂಜೆ ಮಾಡುವವನು. ನನ್ನ ಒಳಿತು, ರಾಜ್ಯದ ಒಳಿತು, ನನ್ನ ನಂಬಿದವರ ಹಾಗೂ ಸಮಾಜದ ಒಳಿತಿಗಾಗಿ ನಾನು ಪ್ರಾರ್ಥಿಸುತ್ತೇನೆ. ಟೆಂಪಲ್ ರನ್ ಎಂದು ವ್ಯಾಖ್ಯಾನ ಮಾಡುವುದಾದರೆ ನೀವೆಲ್ಲ ಸೇರಿ ದೇವಾಲಯಗಳನ್ನು ಮುಚ್ಚಿಬಿಡಿ. ಸರ್ಕಾರದಲ್ಲಿ ಮುಜರಾಯಿ ಇಲಾಖೆ, ವಕ್ಫ್ ಮಂಡಳಿ ಇರುವುದು ಏಕೆ? ಅವರವರ ವಿಚಾರ ಅವರವರ ನಂಬಿಕೆ. ಧರ್ಮ ಯಾವುದಾದರೂ ತತ್ವವೊಂದೇ, ಕರ್ಮ ಹಲವಾದರೂ ನಿಷ್ಠೆಯೊಂದೇ, ಪೂಜೆ ಯಾವುದಾದರೂ ಭಕ್ತಿ ಒಂದೇ, ನಾಮ ಹಲವಾದರೂ ದೈವವೊಂದೇ. ದೇವನೊಬ್ಬ ನಾಮ ಹಲವು ಎಂದು ನಾನು ಪದೇ ಪದೆ ಹೇಳುತ್ತೇನೆ” ಎಂದು ತಿಳಿಸಿದರು.

ಪಕ್ಷ ಹೇಳಿದಂತೆ ನಾನು, ಸಿಎಂ ಕೆಲಸ ಮಾಡುತ್ತಿದ್ದೇವೆ

ನೀವು ಶೃಂಗೇರಿಗೆ ಭೇಟಿ ನೀಡಿದಾಗೆಲ್ಲಾ ನಿಮ್ಮ ರಾಜಕೀಯ ಜೀವನದಲ್ಲಿ ಹಲವು ತಿರುವುಗಳು ಪಡೆದಿವೆ ಎಂದು ಕೇಳಿದಾಗ, “ಯಾರೂ ತಲೆಕೆಡಿಸಿಕೊಳ್ಳುವುದು ಬೇಡ. ನನಗೆ ಯಾವುದೇ ತಿರುವಿನ ಅಗತ್ಯವಿಲ್ಲ. ಜನ ಆಶೀರ್ವಾದ ಮಾಡಿ ನಮಗೊಂದು ಅವಕಾಶ ಕೊಟ್ಟಿದ್ದಾರೆ. ಐದು ವರ್ಷ ಸರ್ಕಾರ ಮಾಡುತ್ತೇವೆ. ಪಕ್ಷ ಹೇಳಿದಂತೆ ನಾನು ಹಾಗೂ ಸಿಎಂ ಕೆಲಸ ಮಾಡುತ್ತೇವೆ. ಬೇರೆಯವರ ಮಾತುಗಳು ಗೌಣ” ಎಂದು ತಿಳಿಸಿದರು.

ಶ್ರೀಗಳು ರಾಜಕೀಯಕ್ಕೆ ಹಸ್ತಕ್ಷೇಪ ಮಾಡದೆ ಧರ್ಮ, ಸಂಸ್ಕೃತಿ, ಸಂಸ್ಕಾರ ಕಾಪಾಡುತ್ತಿದ್ದಾರೆ

ಇಂದಿನ ಶೃಂಗೇರಿ ಪ್ರವಾಸದ ಬಗ್ಗೆ ಕೇಳಿದಾಗ, “ಇಂದು ಬಹಳ ಪವಿತ್ರವಾದ ದಿನ. ಶ್ರೀ ಭಾರತಿ ತೀರ್ಥ ಮಹಾಸ್ವಾಮಿಗಳು ಮಠದ ಜವಾಬ್ದಾರಿ ಸ್ವೀಕರಿಸಿ 50 ವರ್ಷಗಳು ಪೂರ್ಣಗೊಂಡಿವೆ. ಧರ್ಮೋ ರಕ್ಷತಿ ರಕ್ಷಿತಃ ಎಂಬ ಶ್ಲೋಕವು ಧರ್ಮವನ್ನು ಯಾರು ಕಾಪಾಡುತ್ತಾರೋ ಧರ್ಮ ಅವರನ್ನು ಕಾಪಾಡುತ್ತದೆ ಎಂಬ ಸಂದೇಶ ಸಾರುತ್ತದೆ. ಅದರಂತೆ ಈ ಮಹಾಸ್ವಾಮಿಗಳು ರಾಜಕಾರಣಕ್ಕೆ ಎಂದು ಹಸ್ತಕ್ಷೇಪ ಮಾಡದೆ ಕೇವಲ ಧರ್ಮ, ಸಂಸ್ಕೃತಿ, ಸಂಸ್ಕಾರ ರಕ್ಷಣೆ ಮಾಡಿಕೊಂಡು ಬಂದಿದ್ದಾರೆ. ಆಮೂಲಕ ತಮ್ಮ ಕರ್ತವ್ಯ ನಿಭಾಯಿಸಿಕೊಂಡು ನಮಗೆ ಆಶೀರ್ವಾದ ಮಾಡುತ್ತಾ ಬಂದಿದ್ದಾರೆ.

ನನಗೆ ಮಹಾಸ್ವಾಮಿಗಳ ಮೇಲೆ ವಿಶೇಷವಾದ ನಂಬಿಕೆ, ಭಕ್ತಿ ಇದೆ. ತಾಯಿ ಸರಸ್ವತಿ ಅವರ ಮೇಲೆ ಆಶೀರ್ವಾದ ಮಾಡಿದ್ದಾಳೆ. ರಾಜೀವ್ ಗಾಂಧಿ ಅವರು ಇಲ್ಲಿ ಸಂಸ್ಕೃತ ವಿದ್ಯಾಪೀಠ ಮಾಡಲು ತೀರ್ಮಾನಿಸಿದರು. ಈ ಮಠವು ಬೆಂಗಳೂರಿನಲ್ಲಿ ಮಕ್ಕಳಿಗೆ ಜ್ಞಾನದ ದೀಪ ಬೆಳಗುವ ಪ್ರಯತ್ನ ಮಾಡುತ್ತಿದೆ. ಇವರ ಈ ಶುಭ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದ್ದಾರೆ. ಸರ್ಕಾರದ ಪರವಾಗಿ ಹಾಗೂ ವೈಯಕ್ತಿಕವಾಗಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ” ಎಂದು ತಿಳಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button