*ರಮೇಶ ಕತ್ತಿ ವೈಯಕ್ತಿಕ ಟೀಕೆಗಳ ಬಗ್ಗೆ ಆಮೇಲೆ ನಿರ್ಧರಿಸುತ್ತೇನೆ: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ, ಬೆಳಗಾವಿ ಬಿಡಿಸಿಸಿ ಬ್ಯಾಂಕ್ ಚುನಾವಣೆ ಮುಗಿದಿದೆ. ಇನ್ನೆನಿದ್ದರೂ ಜಿಲ್ಲಾದ್ಯಂತ, ರಾಜ್ಯಾದ್ಯಂತ ಪ್ರವಾಸ ಕೈಗೊಳ್ಳುವ ಮೂಲಕ ಅಭಿವೃದ್ಧಿ ಕೆಲಸಗಳಿಗೆ ಆದ್ಯತೆ ನೀಡಲಾಗುವುದು ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಅವರು ಹೇಳಿದರು.
ಹುಕ್ಕೇರಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಂಸದ ರಮೇಶ ಕತ್ತಿ ವಾಲ್ಮೀಕಿ ಸಮಾಜದ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದ್ದರ ಬಗ್ಗೆ ಈಗಾಗಲೇ ಪ್ರಕರಣ ದಾಖಲಾಗಿದೆ. ಈ ಕುರಿತು ಪೊಲೀಸ್ ಇಲಾಖೆ, ಸಮಾಜದವರು ನೋಡಿಕೊಳ್ಳುತ್ತಾರೆಂದ ಸಚಿವರು, ತಮ್ಮ ಬಗ್ಗೆಯೂ ವೈಯಕ್ತಿಕ ಟೀಕೆ ಮಾಡಿದ್ದರ ಬಗ್ಗೆ ದೀಪಾವಳಿ ಹಬ್ಬ ಮುಗಿಯಲಿ, ಈ ಕುರಿತು ಆಮೇಲೆ ನಿರ್ಧಾರ ತೆಗೆದುಕೊಳ್ಳುತ್ತೇನೆಂದು ತಿಳಿಸಿದರು.
ರಾಜ್ಯದಲ್ಲಿ ಆರ್ ಎಸ್ ಎಸ್ ಗೆ ಅಷ್ಟೇ ಅಂಕುಶ ಹಾಕುತ್ತಿಲ್ಲ. ಸರ್ಕಾರಿ ಸ್ಥಳಗಳಲ್ಲಿ ಯಾವುದೇ ಕಾರ್ಯ ಚಟುವಟಿಕೆಗಳನ್ನು ಮಾಡುವುದಕ್ಕೆ ಅನುಮತಿ ಪಡೆಬೇಕೆಂದು ತಿಳಿಸಲಾಗಿದೆ. ಇದು ಆರ್ ಎಸ್ ಎಸ್ ಗೆ ಅಷ್ಟೇ ಅಲ್ಲ, ಎಲ್ಲಾ ಸಂಘಟನೆಗಳಿಗೆ ಸಂಬಂಧಿಸುತ್ತದೆ ಎಂದರು.
ಬಿಹಾರ ಚುನಾವಣೆಗೆ ಸಚಿವರಿಂದ ಹಣ ಹೋಗುತ್ತಿದೆ ಎಂಬ ಬಿಜೆಪಿಯವರ ಆರೋಪಕ್ಕೆ ಪ್ರತಿಕ್ರಿಯಿಸಿ, ಬಿಜೆಪಿಯವರ ಹೇಳಿದೆಲ್ಲ ನಿಜವಲ್ಲ. ಬಿಜೆಪಿಯವರ ಸುಳ್ಳು ಹೇಳುವುದರಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಅವರ ಆರೋಪಕ್ಕೆ, ಹೇಳಿಕೆಗಳಿಗೆ ಆದ್ಯತೆ ನೀಡುವ ಅವಶ್ಯಕತೆ ಇಲ್ಲವೆಂದು ತಿಳಿಸಿದರು.
ಈಗಷ್ಟೇ ಚುನಾವಣೆ ಮುಗಿದಿದೆ. ಬಿಡಿಸಿಸಿ ಬ್ಯಾಂಕ್‌ಗೆ ಅಧ್ಯಕ್ಷ, ಉಪಾಧ್ಯಕ್ಷ ಆಯ್ಕೆ ಮಾಡಬೇಕೆಂದರೆ 13 ಜನ ನಿರ್ದೇಶಕರು ಕೂಡಿ, ಹಿರಿಯರೊಂದಿಗೆ ಚರ್ಚಿಸಿ ನಿರ್ಧರಿಸುತ್ತಾರೆ. ಬೆಳಗಾವಿ ಡಿಸಿಸಿ ಬ್ಯಾಂಕಿನ ನಾಮನಿರ್ದೇಶಿತ ಸ್ಥಾನವನ್ನು ಕುರುಬ ಸಮಾಜದ ಕ್ರಿಯಾಶೀಲ ವ್ಯಕ್ತಿಗೆ ನೀಡಬೇಕೆಂಬ ಚರ್ಚೆ ಇದೆ ಎಂದು ಇದೇ ವೇಳೆ ಹೇಳಿದರು.
ಇನ್ನು ಸಾಮಾನ್ಯ ಕ್ಷೇತ್ರಗಳಲ್ಲಿಯೂ ಜಾರಕಿಹೊಳಿ ಕುಟುಂಬಸ್ಥರೆ ಸ್ಪರ್ಧಿಸುತ್ತಿದ್ದಾರೆಂಬ ರಮೇಶ ಕತ್ತಿ ಹೇಳಿಕೆ ಕುರಿತು ಮಾತನಾಡಿ, ಯಾವುದೇ ಕ್ಷೇತ್ರದಲ್ಲಿ ನಾವೇ ಹೋಗಿ ಸ್ಪರ್ಧೆ ಮಾಡಿಲ್ಲ. ಯಾವ ಕ್ಷೇತ್ರದಲ್ಲಿ ಯಾರು ಸ್ಪರ್ಧಿಸಬೇಕೆಂದು ಪಕ್ಷ ನಿರ್ಧರಿಸುತ್ತದೆ. ಪಕ್ಷ ಟಿಕೆಟ್ ನೀಡಿದ್ದರಿಂದ ನಾವು ಚುನಾವಣೆಗೆ ನಿಂತಿದ್ದೇವೆ ಎಂದರು.