*ಎಲ್ಲರ ಮುಖವಾಡ ಬಯಲು ಮಾಡ್ತೀನಿ, ಆ ದಿನ ಹತ್ತಿರದಲ್ಲೇ ಇದೆ ಎಂದ ನಟ ಧನ್ವೀರ್*

ಪ್ರಗತಿವಾಹಿನಿ ಸುದ್ದಿ: ನಟ ದರ್ಶನ್ ಆಪ್ತ ಧನ್ವೀರ್ ಗೌಡ ಮತ್ತು ದರ್ಶನ್ ಪತ್ನಿ ವಿಜಯಲಕ್ಷ್ಮಿ ನಡುವಿನ ವಿವಾದ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ಕೆಲ ತಿಂಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪರೋಕ್ಷವಾಗಿ ಟಾಂಗ್ ನೀಡುತ್ತಿದ್ದ ಇಬ್ಬರ ನಡುವಿನ ಜಗಳ ಬಹಿರಂಗವಾಗಿದೆ. ಧನ್ವೀರ್ ವಿರುದ್ಧ ದರ್ಶನ್ ಪಿಎ ನಾಗರಾಜ್ ದೂರು ನೀಡಿದ್ದು, ಅದೇ ದಿನ ಧನ್ವೀರ್ ತಂದೆ ತಿಮ್ಮೇಗೌಡ ಕೂಡ ವಿಜಯಲಕ್ಷ್ಮಿ ಹಾಗೂ ಇತರರ ವಿರುದ್ಧ ದೂರು ದಾಖಲಿಸಿದ್ದಾರೆ.
ನಾಗರಾಜ್ ನೀಡಿದ ದೂರಿನ ಬಗ್ಗೆ ಪ್ರತಿಕ್ರಿಯಿಸಿರುವ ಧನ್ವೀರ್ ಗೌಡ, “ನಿಂದಿಸಿದ್ದೀನಿ ಅಂತ ಹೇಳಿದ್ದಾರೆ. ಆದರೆ ಅದಕ್ಕೆ ಕಾರಣ ಏನು ಎಂಬುದನ್ನು ಹೇಳಿಲ್ಲ. ಎಲ್ಲರ ಮುಖವಾಡವನ್ನು ಶೀಘ್ರದಲ್ಲೇ ಬಯಲು ಮಾಡ್ತೀನಿ. ಆ ದಿನ ಹತ್ತಿರದಲ್ಲೇ ಇದೆ” ಎಂದು ಹೇಳಿದ್ದಾರೆ. ಜೊತೆಗೆ, ತಾವು ಮತ್ತು ದರ್ಶನ್ ದೂರವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದು, ಶೀಘ್ರದಲ್ಲೇ ಸುದ್ದಿಗೋಷ್ಠಿ ನಡೆಸಿ ಎಲ್ಲದಕ್ಕೂ ಉತ್ತರ ನೀಡುವುದಾಗಿ ತಿಳಿಸಿದ್ದಾರೆ.
ಇತ್ತೀಚೆಗೆ ಚಾಮರಾಜನಗರ ದಸರಾ ಮಹೋತ್ಸವದ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಧನ್ವೀರ್, “ನಾಯಿ ನರಿಗಳು ಕುತಂತ್ರ ಮಾಡಿದರೂ ಏನೂ ಮಾಡೋಕೆ ಆಗಲ್ಲ” ಎಂದು ಹೇಳಿದ್ದರು. ಈ ಹೇಳಿಕೆಯ ಬೆನ್ನಲ್ಲೇ ವಿಜಯಲಕ್ಷ್ಮಿ ಸಾಮಾಜಿಕ ಜಾಲತಾಣದಲ್ಲಿ ಪ್ರತಿಕ್ರಿಯಿಸಿದ್ದರು. “ಡಿ ಬಾಸ್ ಹೆಸರು ಮೆಚ್ಚುಗೆಗಿರಲಿ, ಟೀಕೆಗಿರಲಿ, ಸ್ವಹಿತ ಸಾಧನೆಯ ಸಾಧನವಾಗದಂತೆ ನೋಡಿಕೊಳ್ಳುವುದು ಎಲ್ಲರ ಜವಾಬ್ದಾರಿ. ಅಭಿಪ್ರಾಯದಲ್ಲಿ ಪ್ರಾಮಾಣಿಕತೆ ಇರಲಿ, ಮಾತಿನಲ್ಲಿ ಗೌರವವಿರಲಿ” ಎಂದು ಬರೆದಿದ್ದರು. ಇದಕ್ಕೆ ಪ್ರತಿಯಾಗಿ ಧನ್ವೀರ್ ಕೂಡ “ಶಕುನಿ” ಎಂದು ಪೋಸ್ಟ್ ಮಾಡಿದ್ದರು.
ಇದೀಗ ವಿವಾದ ಮತ್ತಷ್ಟು ತೀವ್ರಗೊಂಡಿದ್ದು, ಎರಡೂ ಕಡೆಯಿಂದ ಪೊಲೀಸ್ ಠಾಣೆಯಲ್ಲಿ ದೂರುಗಳು ದಾಖಲಾಗಿವೆ. ಧನ್ವೀರ್ ವಿರುದ್ಧ ನಾಗರಾಜ್ ದೂರು ನೀಡಿದರೆ, ವಿಜಯಲಕ್ಷ್ಮಿ ಮತ್ತು ಇತರರ ವಿರುದ್ಧ ಧನ್ವೀರ್ ತಂದೆ ತಿಮ್ಮೇಗೌಡ ದೂರು ನೀಡಿದ್ದಾರೆ. ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎಂಬ ಕುತೂಹಲ ಹೆಚ್ಚಾಗಿದೆ.
ಧನ್ವೀರ್ ಮತ್ತು ವಿಜಯಲಕ್ಷ್ಮಿ ನಡುವಿನ ಮುನಿಸು ಕಳೆದ ಕೆಲವು ತಿಂಗಳಿಂದ ಮುಂದುವರಿದಿತ್ತು. ಈ ಹಿಂದೆ ದರ್ಶನ್ ತಾಯಿ ಮೀನಾ, ವಿಜಯಲಕ್ಷ್ಮಿ ಮತ್ತು ಧನ್ವೀರ್ ಇಬ್ಬರನ್ನೂ ಜೈಲಿನಲ್ಲಿದ್ದ ದರ್ಶನ್ ಭೇಟಿಗೆ ಕರೆದೊಯ್ದು ರಾಜಿ ಮಾಡಿಸಲು ಪ್ರಯತ್ನಿಸಿದ್ದರು. ಆದರೂ ವಿವಾದ ಸಂಪೂರ್ಣವಾಗಿ ಬಗೆಹರಿಯದೆ ಈಗ ಪೊಲೀಸ್ ಠಾಣೆ ತಲುಪಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ




