LatestPolitics

ಮೂರುಸಾವಿರ ಮಠದ ಆಸ್ತಿ ಹೊಡೆಯಲು ಬಿಡುವುದಿಲ್ಲ – ಕೆಎಲ್ಇ ಸಂಸ್ಥೆಗೆ ದಿಂಗಾಲೇಶ್ವರ ಶ್ರೀ ಎಚ್ಚರಿಕೆ

ಪ್ರಗತಿವಾಹಿನಿ ಸುದ್ದಿ, ಹುಬ್ಬಳ್ಳಿ – ​ ಮೂರುಸಾವಿರ ಮಠದ ಆಸ್ತಿಯನ್ನು ಯಾರೂ ಹೊಡೆಯಲು ಬಿಡುವುದಿಲ್ಲ. ಮಠದ ಆಸ್ತಿಯನ್ನ ಕಬಳಿಕೆ ಮಾಡಲು ಬಿಡುವುದಿಲ್ಲ. ನನ್ನ ಗುರಿ ಮೂರುಸಾವಿರ ಮಠದ ರಕ್ಷಣೆ ಎಂದು ಹುಬ್ಬಳ್ಳಿಯ ಮೂರು ಸಾವಿರ ಮಠದ ಉತ್ತರಾಧಿಕಾರಿ, ಬಾಲೆಹೊಸೂರಿನ ಶ್ರೀ ದಿಂಗಾಲೇಶ್ವರ ಸ್ವಾಮಿಗಳು ಹೇಳಿದ್ದಾರೆ.
ಕೆಎಲ್ಇ ಸಂಸ್ಥೆ ಮೂರುಸಾವಿರ ಮಠದ ಜಾಗದಲ್ಲಿ ಮೆಡಿಕಲ್ ಕಾಲೇಜು ಆರಂಭಿಸುತ್ತಿರುವ ಹಿನ್ನೆಲೆಯಲ್ಲಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು. ಗುರುವಾರ ಮೆಡಿಕಲ್ ಕಾಲೇಜು ಕಟ್ಟಡಕ್ಕೆ ಭೂಮಿ ಪೂಜೆ ನಡೆಯಲಿದೆ.ಹುಬ್ಬಳ್ಳಿಯ ಮೂರುಸಾವಿರ ಮಠದ ಆಸ್ತಿಯಲ್ಲಿ ಮೆಡಿಕಲ್ ಕಾಲೇಜ್ ಮಾಡುವುದನ್ನು ನಿಲ್ಲಿಸಬೇಕು. ಹಲವು ಕಾನೂನು ತೊಡಕು ಇರುವುದರಿಂದ ಭೂಮಿ ಪೂಜೆಯನ್ನು ನಿಲ್ಲಿಸಬೇಕು ಎಂದು ಅವರು ಹೇಳಿದರು.

ಮೂರುಸಾವಿರ ಮಠದ ಜಾಗದಲ್ಲಿ ಮೆಡಿಕಲ್ ಕಾಲೇಜು ಮಾಡುವುದಾದರೆ ಅದು ಮೂರುಸಾವಿರ ಮಠದ ಆಡಳಿತಕ್ಕೆ ಒಳಪಡಲಿ. ಕೆಎಲ್ಇ ಸಂಸ್ಥೆಯ ಆಡಳಿತದಲ್ಲಿರುವುದಾದರೆ ಮೂರುಸಾವಿರ ಮಠದ ಜಾಗವನ್ನು ಕೊಡಬಾರದು ಎಂದೂ ಅವರು ತಿಳಿಸಿದರು.

ನಾನು ಇರುವವರೆಗೂ ಆಸ್ತಿ ಕಳೆದು ಹೋಗಲು ಬಿಡುವುದಿಲ್ಲ. ನನಗೆ ಯಾವುದೇ ದುರುದ್ದೇಶವಿಲ್ಲ. ನಾನು ಮೆಡಿಕಲ್ ಕಾಲೇಜ್ ನಿರ್ಮಾಣ ಮಾಡುವುದಕ್ಕೆ ವಿರೋಧವಿಲ್ಲ. ಮಠದ ಆಸ್ತಿಯನ್ನ ಉಳಿಸುವುದು ಮುಖ್ಯ. ಕೊಲ್ಕೊತ್ತಾ ನ್ಯಾಯಾಲಯದ ಆದೇಶವೊಂದರಲ್ಲಿ ಮಠದ ಆಸ್ತಿಯನ್ನ ಪರಭಾರೆ ಮಾಡಬಾರದೆಂದು ಇದೆ ಎಂದರು.

 ಕೆಎಲ್ಇ ಸಂಸ್ಥೆಯು 24.33 ಎಕರೆ ಭೂಮಿಯನ್ನ ದಾನ ಎಂದು ಹೇಳಿಕೊಂಡಿದೆ. ಆದರೆ, ಅದು ಕಾನೂನಿನ ವ್ಯಾಪ್ತಿಯಲ್ಲಿ ಬರುವುದಿಲ್ಲ.  ಮೂರುಸಾವಿರ ಮಠದ ಹಾಲಿ ಶ್ರೀಗಳ ಸೌಮ್ಯತೆಯನ್ನ ಬಳಕೆ ಮಾಡಿಕೊಂಡು ಆಸ್ತಿಯನ್ನ ಕಬಳಿಕೆ ಮಾಡಿಕೊಂಡಿದ್ದಾರೆ. ಇಷ್ಟು ಹೇಳಿದ ಮೇಲೂ ಭೂಮಿ ಪೂಜೆ ಮಾಡಿದರೆ ಭಕ್ತರೊಂದಿಗೆ ಸೇರಿ ಹೋರಾಟದ ರೂಪುರೇಷೆ ರಚನೆ ಮಾಡಲಾಗುವುದು ಎಂದು ಶ್ರೀಗಳು ಹೇಳಿದರು.

ಕೆಎಲ್ಇ ಸಂಸ್ಥೆಗೆ ಮೂರುಸಾವಿರ ಮಠ ಈಗಾಗಲೇ ಹಲವು ಆಸ್ತಿಗಳನ್ನು ಕೊಟ್ಟಿದೆ. ಅದರಲ್ಲಿ ಹಲವು ಕಾಲೇಜುಗಳನ್ನು ನಿರ್ಮಾಣ ಮಾಡಿದೆ. ಹುಬ್ಬಳ್ಳಿಯಲ್ಲಿ ಕೆಎಲ್ಇ ಮೆಡಿಕಲ್ ಕಾಲೇಜ್ ಮಾಡಲಿ, ಆದರೆ, ಮೂರುಸಾವಿರ ಮಠದ ಆಸ್ತಿಯಲ್ಲಿ ಬೇಡ ಎಂದು  ಶ್ರೀಗಳು ಖಂಡಿಸಿದರು.

ಆಸ್ತಿ ಕಬಳಿಕೆ ಮಾಡುವವರೆ ನಾನು ಬರುವುದನ್ನು ವಿರೋಧಿಸುತ್ತಿದ್ದಾರೆ

ಈಗ ಆಸ್ತಿ ಕಬಳಿಕೆ ಮಾಡಲು ಹೊರಟಿರುವವರೇ ಮೂರುಸಾವಿರ ಮಠಕ್ಕೆ ನಾನು ಬರುವುದನ್ನು ವಿರೋಧಿಸುತ್ತಿದ್ದಾರೆ. ಆದರೆ ನಾನು ಮಠದ ಆಸ್ತಿಯನ್ನು ಉಳಿಸುವುದಕ್ಕಾಗಿಯೇ ಬರುತ್ತಿದ್ದೇನೆ. ನಾನು ಇರುವವರೆಗೂ ಯಾರೂ ಆಸ್ತಿ ಕಬಳಿಕೆ ಮಾಡಲು ಬಿಡುವುದಿಲ್ಲ ಎಂದೂ ಎಚ್ಚರಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button