
ಇನ್ನೆರಡು ದಿನಗಳಲ್ಲಿ ಬೆಳಗಾವಿಯಲ್ಲಿ ಪ್ರಯೋಗಾಲಯ ಆರಂಭ -ಜಗದೀಶ ಶೆಟ್ಟರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – : ಮತ್ತೆ ಮೂರು ಕರೊನಾ ಪ್ರಕರಣಗಳು ದೃಢಪಟ್ಟಿರುವುದರಿಂದ ರಾಯಬಾಗ ತಾಲ್ಲೂಕಿನ ಕುಡಚಿ ಸೇರಿದಂತೆ ಎಲ್ಲ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಇನ್ನಷ್ಟು ಬಿಗಿ ಕ್ರಮ ತೆಗೆದುಕೊಂಡು ಸಂಪೂರ್ಣ ಬಂದ್ ಮಾಡಬೇಕು. ಕುಡಚಿಯ ಪ್ರತಿಯೊಬ್ಬರನ್ನು ವೈಯಕ್ತಿಕವಾಗಿ ವೈದ್ಯಕೀಯ ತಪಾಸಣೆ ನಡೆಸಬೇಕು. ತಬ್ಲಿಘಿ ಜತೆ ಸಂಪರ್ಕ ಹೊಂದಿರುವವರನ್ನು ತಕ್ಷಣವೇ ಗುರುತಿಸುವ ಕೆಲಸವಾಗಬೇಕು.
ಒಂದು ವೇಳೆ ಸ್ವಯಂಪ್ರೇರಣೆಯಿಂದ ಅವರು ಮುಂದೆ ಬರದಿದ್ದರೆ ಕಾನೂನು ಪ್ರಕಾರ ಬಲಪ್ರಯೋಗಿಸಿ ಅವರನ್ನು ತಕ್ಷಣವೇ ಕ್ವಾರಂಟೈನ್ ನಲ್ಲಿ ಇರಿಸುವ ಕೆಲಸವಾಗಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.

ಕೋವಿಡ್-೧೯ ನಿಯಂತ್ರಣ ಕುರಿತು ನಗರದ ಪ್ರವಾಸಿಮಂದಿರದಲ್ಲಿ ಸೋಮವಾರ(ಏ.೧೩) ನಡೆದ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮದ್ಯ ಮಾರಾಟಕ್ಕೆ ಅವಕಾಶ ನೀಡದಂತೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಮನವರಿಕೆ ಮಾಡಲಾಗುವುದು ಎಂದರು.
ಈಗಾಗಲೇ ಕೇಂದ್ರ ಸಚಿವರಾದ ಪ್ರಹ್ಲಾದ ಜೋಶಿ ಅವರ ಜತೆ ಚರ್ಚೆ ನಡೆಸಲಾಗಿದ್ದು, ಬೆಳಗಾವಿಯಲ್ಲಿ ಇನ್ನೆರಡು ದಿನಗಳಲ್ಲಿ ಪ್ರಯೋಗಾಲಯ ಆರಂಭಗೊಳ್ಳುವ ಸಾಧ್ಯತೆಗಳಿವೆ ಎಂದು ಸಚಿವ ಜಗದೀಶ್ ಶೆಟ್ಟರ್ ತಿಳಿಸಿದರು.
ಬಿಗಿ ಕ್ರಮಕ್ಕೆ ಸೂಚನೆ:
ನಿಷೇಧಿತ ಪ್ರದೇಶಗಳಾಗಿ ಘೋಷಿಸಲಾಗಿರುವ ಹಿರೇಬಾಗೇವಾಡಿ, ಕುಡಚಿ, ಬೆಳಗುಂದಿ ಹಾಗೂ ಬೆಳಗಾವಿ ಕ್ಯಾಂಪ್ ಪ್ರದೇಶಗಳಲ್ಲಿ ಅಗತ್ಯ ವಸ್ತುಗಳು ಮತ್ತು ವೈದ್ಯಕೀಯ ಸೌಲಭ್ಯ ಒದಗಿಸಲು ಕ್ರಮಕೈಗೊಳ್ಳಬೇಕು ಎಂದರು.
ಈಗಾಗಲೇ ಸೋಂಕು ದೃಢಪಟ್ಟಿರುವ ೧೭ ಜನರ ಜತೆ ಪ್ರಾಥಮಿಕ ಸಂಪರ್ಕ ಹೊಂದಿರುವವರ ಬಗ್ಗೆ ಹೆಚ್ಚಿನ ನಿಗಾ ವಹಿಸುವ ಮೂಲಕ ಸೋಂಕು ಮತ್ತಷ್ಟು ಹರಡದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಸಚಿವ ಶೆಟ್ಟರ್ ಅವರು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಮದ್ಯ ಮಾರಾಟಕ್ಕೆ ಅವಕಾಶ ಬೇಡ:

ಜಲಸಂಪನ್ಮೂಲ ಇಲಾಖೆಯ ಸಚಿವ ರಮೇಶ್ ಜಾರಕಿಹೊಳಿ ಅವರು ಮಾತನಾಡಿ, ದೆಹಲಿಯ ತಬ್ಲಿಘಿ ಧಾರ್ಮಿಕ ಸಭೆಗೆ ಹೋಗಿಬಂದಿರುವವರು ತಮ್ಮ ಸಂಬಂಧಿಕರನ್ನು ಭೇಟಿ ಮಾಡಲು ಹೋಗುವುದು ರೂಢಿ. ಆದ್ದರಿಂದ ಅಂತಹವರನ್ನು ಪತ್ತೆಹಚ್ಚುವ ಕೆಲಸ ತುರ್ತಾಗಿ ನಡೆಸಬೇಕು. ಇಲ್ಲದಿದ್ದರೆ ಸೋಂಕು ಇನ್ನಷ್ಟು ಹರಡುತ್ತದೆ. ಯಾವುದೇ ಕಾರಣಕ್ಕೂ ಇಂತಹ ಸ್ಥಿತಿ ಉದ್ಭವಿಸಬಾರದು ಎಂದು ಅಧಿಕಾರಿಗಳಿಗೆ ತಿಳಿಸಿದರು.
ಎಂ.ಎಸ್.ಐ.ಎಲ್. ಸೇರಿದಂತೆ ಬೆಳಗಾವಿ ಜಿಲ್ಲೆಯಲ್ಲಿ ಯಾವುದೇ ಕಾರಣಕ್ಕೂ ಮದ್ಯ ಮಾರಾಟಕ್ಕೆ ಅವಕಾಶ ನೀಡಬಾರದು. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ನಡೆಸಿ ಅವರಿಗೆ ಮನವರಿಕೆ ಮಾಡಲಾಗುವುದು ಎಂದು ಸಚಿವ ಜಾರಕಿಹೊಳಿ ತಿಳಿಸಿದರು.
ಸೋಂಕಿತರ ಜತೆ ಪ್ರಾಥಮಿಕ ಸಂಪರ್ಕ ಹೊಂದಿರುವ ವ್ಯಕ್ತಿಗಳನ್ನು ಹೋಟೆಲ್ ಅಥವಾ ಮೊರಾರ್ಜಿ ದೇಸಾಯಿ ವಸತಿ ಶಾಲೆಗಳಲ್ಲಿ ಇರಿಸುವ ಬಗ್ಗೆ ಯಾವುದೇ ಗೊಂದಲಕ್ಕೆ ಅವಕಾಶ ನೀಡದೇ ಒಟ್ಟಾರೆ ಸಮಾಜದ ಹಿತದೃಷ್ಟಿಯಿಂದ ಎಲ್ಲ ಜನಪ್ರತಿನಿಧಿಗಳು ಜತೆಗೂಡಿ ಕೆಲಸ ಮಾಡಬೇಕಿದೆ.
ಇದಕ್ಕೆ ಸಂಬಂಧಿಸಿದಂತೆ ಯಾರೂ ಮಧ್ಯಪ್ರವೇಶಿಸದೇ ಜಿಲ್ಲಾಧಿಕಾರಿಗಳು ಮುಕ್ತವಾಗಿ ಕ್ರಮಕೈಗೊಳ್ಳಲು ಅವಕಾಶ ನೀಡೋಣ ಎಂದು ಸಚಿವ ರಮೇಶ್ ಜಾರಕಿಹೊಳಿ ಹೇಳಿದರು.
ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಹಾಗೂ ವಿಧಾನ ಸಭೆ ಉಪ ಸಭಾಪತಿ ಆನಂದ ಮಾಮನಿ ಅವರು ಮಾತನಾಡಿ, ಸೋಂಕು ತಡೆಗಟ್ಟಲು ಸಾಧ್ಯವಾದಷ್ಟು ಬಿಗಿ ಕ್ರಮಕ್ಕೆ ಸಲಹೆ ನೀಡಿದರು.
ಕುಡಚಿಯ ಪ್ರತಿಯೊಬ್ಬರ ಕ್ವಾರಂಟೈನ್ ಗೆ ಸಲಹೆ:
ವಿಧಾನಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ ಕವಟಗಿಮಠ, ಕುಡಚಿಯ ಪ್ರತಿಯೊಬ್ಬರನ್ನು ಕಡ್ಡಾಯವಾಗಿ ಕ್ವಾರಂಟೈನ್ ಇರಿಸದಿದ್ದರೆ ಮುಂದೆ ಇನ್ನಷ್ಟು ವ್ಯಾಪಿಸಿ ಇಡೀ ಸಮಾಜಕ್ಕೆ ಕಂಟಕವಾಗುವ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜ್ಯಸಭಾ ಸದಸ್ಯರಾದ ಡಾ.ಪ್ರಭಾಕರ್ ಕೋರೆ, ತುರ್ತು ಚಿಕಿತ್ಸೆಗೆ ಅಗತ್ಯವಿರುವ ರೋಗಿಗಳನ್ನು ಸಾಗಿಸುವ ವಾಹನಗಳಿಗೆ ಅಂತರ್ ಜಿಲ್ಲಾ ಗಡಿಯಲ್ಲಿ ಯಾವುದೇ ಕಾರಣಕ್ಕೂ ತಡೆಯೊಡ್ಡಬಾರದು ಎಂದು ತಿಳಿಸಿದರು.
ಸೂಕ್ತ ನಿಗಾ ವಹಿಸಿ; ರೇಷನ್ ವಿತರಿಸಲು ಕ್ರಮ ಕೈಗೊಳ್ಳಿ

ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳಕರ್, ಕರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಬಾಗೇವಾಡಿ ಮತ್ತು ಬೆಳಗುಂದಿಯಲ್ಲಿ ಎಲ್ಲ ಜನರು ಸಹಕರಿಸುತ್ತಿದ್ದಾರೆ. ಆದಾಗ್ಯೂ ಇನ್ನಷ್ಟು ನಿಗಾ ವಹಿಸಬೇಕು ಎಂದರು.
ಹಿರೇಬಾಗೇವಾಡಿ ಹಾಗೂ ಬೆಳಗುಂದಿ ಗ್ರಾಮಗಳ ಪ್ರತಿಗಲ್ಲಿ ಗಲ್ಲಿಗಳಲ್ಲಿ COVID19 ಬಗ್ಗೆ ಸಂಪೂರ್ಣವಾಗಿ ಸೂಕ್ತ ರೀತಿಯಲ್ಲಿ ಸರ್ವೇಗಳಾಗಬೇಕು. ಸ್ವಾಬ್ ಟೆಸ್ಟಿಂಗ್ ಮಾಡುವ ವ್ಯವಸ್ಥೆಯಾಗಬೇಕು. ಕ್ವಾರಂಟೈನ್ ನಲ್ಲಿ ಇರುವ ಜನರ ಸೂಕ್ತವಾದ ಚಿಕಿತ್ಸೆಯೊಂದಿಗೆ ನಿಗಾ ವಹಿಸಬೇಕು. ವೈರಸ್ ನಿಂದ ಬಳಲುತ್ತಿರುವ ರೋಗಿಗಳ ಬಗ್ಗೆ ಕಾಳಜಿ ತೆಗೆದುಕೊಳ್ಳಬೇಕು.
ಕ್ವಾರಂಟೈನ್ ನಲ್ಲಿ ಇರುವ ಜನ ಬೆರೆಯವರೊಂದಿಗೆ ಬೆರೆಯದ ಹಾಗೆ ನೋಡಿಕೊಳ್ಳಬೇಕು.
ಹಾಸ್ಟೆಲ್ ಮುಂತಾದ ಕಡೆ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳಬೇಕು. ತಬ್ಲಿಘಿಗಳ ಜೊತೆ ಸಂಪರ್ಕ ಹೊಂದಿದವರನ್ನು ತಕ್ಷಣವೇ ಗುರುತಿಸುವ ಕೆಲಸವಾಗಬೇಕು. ಎರಡು ತಿಂಗಳ ರೇಷನ್ ಇನ್ನೂವರೆಗೂ ತಲುಪಿಲ್ಲ, ಆದಷ್ಟು ಬೇಗ ಸೂಕ್ತ ಸಮಯದಲ್ಲಿ ರೇಷನ್ ತಲುಪಿಸಬೇಕು ಎಂದು ಹೆಬ್ಬಾಳಕರ್ ವಿನಂತಿಸಿದರು.
ಶಾಸಕ ಅನಿಲ್ ಬೆನಕೆ ಮಾತನಾಡಿ, ಕುಡಚಿ ಸೇರಿದಂತೆ ಎಲ್ಲ ಕಂಟೈನ್ಮೆಂಟ್ ಝೋನ್ ಗಳನ್ನು ಸೀಲ್ ಡೌನ್ ಮಾದರಿಯಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಸೋಂಕಿತ ಮೂವರು ಆಸ್ಪತ್ರೆಗೆ ಸ್ಥಳಾಂತರ:
ಜಿಲ್ಲೆಯಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ ಅವರು, ಈಗಾಗಲೇ ಸೋಂಕು ದೃಢಪಟ್ಟಿರುವವರ ಚಿಕಿತ್ಸೆ ಮುಂದುವರಿದಿದ್ದು, ಸದ್ಯಕ್ಕೆ ಅವರ ಆರೋಗ್ಯ ಸ್ಥಿತಿ ಉತ್ತಮವಾಗಿದೆ ಎಂದು ವಿವರಿಸಿದರು.
ಇಂದು ಹೊಸದಾಗಿ ಸೋಂಕು ದೃಢಪಟ್ಟಿರುವ ರಾಯಬಾಗ ತಾಲ್ಲೂಕಿನ ಮೂವರನ್ನೂ ಕೂಡ ಪ್ರಾಥಮಿಕ ವರದಿಯ ಪ್ರಕಾರ ನಿನ್ನೆ ರಾತ್ರಿಯೇ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಬೊಮ್ಮನಹಳ್ಳಿ ತಿಳಿಸಿದರು.
ಈಗಾಗಲೇ ಕ್ವಾರಂಟೈನ್ ನಲ್ಲಿ ಇರುವವರ ಎಲ್ಲರ ಗಂಟಲು ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳಿಸಲಾಗುತ್ತಿದೆ.
ಕುಡಚಿಯಿಂದ ಹೆಚ್ಚು ಪ್ರಕರಣಗಳು ವರದಿಯಾಗುತ್ತಿರುವುದರಿಂದ ನಿಷೇಧಿತ ಪ್ರದೇಶ (ಕಂಟೈನ್ಮೆಂಟ್ ಝೋನ್) ಎಂದು ಈಗಾಗಲೇ ಘೋಷಿಸಲಾಗಿದೆ. ದಿನಸಿ, ತರಕಾರಿ ಮತ್ತು ವೈದ್ಯಕೀಯ ಸೌಲಭ್ಯ ಹೊರತುಪಡಿಸಿ ಯಾವುದಕ್ಕೂ ಅವಕಾಶ ನೀಡಿಲ್ಲ ಜಿಲ್ಲಾಧಿಕಾರಿಗಳು ತಿಳಿಸಿದರು.
ಕುಡಚಿಯಲ್ಲಿ ಈಗಾಗಲೇ ಶೇ.೮೦ ರಷ್ಟು ಸಮೀಕ್ಷೆ ಪೂರ್ಣಗೊಂಡಿದ್ದು, ಮನೆ ಮನೆಗೆ ತೆರಳಿ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ ಎಂದು ಉಪ ವಿಭಾಗಾಧಿಕಾರಿಗಳಾದ ರವೀಂದ್ರ ಕರಲಿಂಗಣ್ಣವರ ವಿವರಿಸಿದರು.
ಬೆಳಗುಂದಿ ಮತ್ತು ಹಿರೇಬಾಗೇವಾಡಿ ಕಂಟೈನ್ಮೆಂಟ್ ಝೋನ್ ಗಳಲ್ಲಿ ನಿರಂತರ ಪರಿಶೀಲನೆ ನಡೆದಿದೆ. ಸಿಸಿಟಿವಿ ಅಳವಡಿಸಿ ಜನಸಂಚಾರದ ಮೇಲೆ ನಿಗಾ ವಹಿಸಲಾಗಿದೆ ಎಂದು ಉಪ ವಿಭಾಗಾಧಿಕಾರಿಗಳಾದ ಅಶೋಕ ತೇಲಿ ತಿಳಿಸಿದರು.
ಕ್ಯಾಂಪ್ ಪ್ರದೇಶದಲ್ಲಿ ಕೈಗೊಂಡಿರುವ ಕ್ರಮಗಳ ಕುರಿತು ಅಲ್ಲಿನ ನೋಡಲ್ ಅಧಿಕಾರಿಯಾಗಿರುವ ಪಾಲಿಕೆಯ ಆಯುಕ್ತರಾದ ಜಗದೀಶ್ ಕೆ.ಎಚ್. ಅವರು ವಿವರಿಸಿದರು.
ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಪೊಲೀಸ್ ಆಯುಕ್ತರಾದ ಬಿ.ಎಸ್.ಲೋಕೇಶ್ ಕುಮಾರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ್.ವಿ.ಮುನ್ಯಾಳ ಮತ್ತಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ