

ಲೇಖನ: ಜಯಶ್ರೀ. ಜೆ. ಅಬ್ಬಿಗೇರಿ
ಇಂಗ್ಲೀಷ್ ಉಪನ್ಯಾಸಕರು
ಬೆಳಗಾವಿ
ಸಣ್ಣವಳಿದ್ದಾಗ ನನ್ನಜ್ಜಿ ನನಗೆ ಹೇಳಿದ ಕತೆಗಳು ಅನೇಕ. ಅವುಗಳಲ್ಲಿ ಕೆಲವು ಇನ್ನೂ ಅವಳು ಹೇಳಿದ ಶೈಲಿಯಲ್ಲೇ ನೆನಪಿನಾಳದಲ್ಲಿ ಅಚ್ಚಳಿಯದಂತೆ ಉಳಿದಿವೆ. ಅದರಲ್ಲಿ ನನ್ನ ನೆಚ್ಚಿನ ಕತೆಯೆಂದರೆ, ಕುದುರೆ ಮತ್ತು ಗಜ್ಜರಿ. ಅದೊಂದು ಪುಟ್ಟದಾದ ಮಾರ್ಮಿಕ ಕತೆ. ತಾವೂ ಕೇಳಿ.
ಕುದುರೆ ಪ್ರೇಮಿಯೊಬ್ಬ ಹಲವಾರು ಕುದುರೆಗಳನ್ನು ಸಾಕಿದ್ದ. ಅವುಗಳ ಮೇಲೆ ಸವಾರಿ ಮಾಡುವುದು ಅವನ ಷೋಕಿ ಆಗಿತ್ತು. ಊರಿನ ಜನರೆಲ್ಲ ಅವನನ್ನು ಕುದರೆವಾಲಾ ಎಂದೇ ಕರೆಯುತ್ತಿದ್ದರು.ಅವನಲ್ಲಿಗೆ ಬಂದ ಅವನ ಗೆಳೆಯನೊಬ್ಬ ’ಇಷ್ಟು ಕುದುರೆಗಳನ್ನು ಓಡಿಸಿದ್ದಿಯಾ, ಆದರೆ ನನ್ನ ಕುದುರೆಯನ್ನು ಓಡಿಸಲು ನಿನಗೆ ಸಾಧ್ಯವಿಲ್ಲ. ಅದು ತುಂಬಾ ತುಂಟ ಕುದುರೆ.’ ಎಂದ. ಗೆಳೆಯನ ಸವಾಲು ಸ್ವೀಕರಿಸಿದ ಕುದುರೆವಾಲಾ. ಕುದುರೆಯನ್ನು ಓಡಿಸಲು ನೋಡಿದ. ಅದು ಅವನನ್ನು ಹತ್ತುತ್ತಿದ್ದಂತೆಯೇ ಕೆಳಕ್ಕೆ ಒಗೆಯಿತು. ದಿಗ್ಬಾçಂತನಾದ ಕುದುರೆವಾಲಾ, ನಂತರ ಸಮಾಧಾನದಿಂದ ಯೋಚಿಸಿದ. ಅದಕ್ಕೆ ಇಷ್ಟದ ಪದಾರ್ಥವನ್ನು ತಿಳಿದುಕೊಂಡ. ಕೆಲ ದಿನಗಳು ಕಳೆದ ಮೇಲೆ ಕುದುರೆ ಮೇಲೆ ನಿತ್ಯ ಸವಾರಿ ಮಾಡಿದ. ಅದ್ಹೇಗೆ? ಕುದುರೆವಾಲಾ ಮಾಡಿದ ಮೋಡಿ ಏನು ಅಂದಿರಾ? ತುಂಟ ಕುದುರೆಯನ್ನು ಓಡಿಸುವುದಕ್ಕಾಗಿ ಒಂದು ಕೋಲಿಗೆ ಅದಕ್ಕೆ ಇಷ್ಟವಾದ ಗಜ್ಜರಿ ಕಟ್ಟಿ ಇಳಿಬಿಟ್ಟನು. ಗಜ್ಜರಿ ಆಸೆಗೆ ಕುದುರೆ ಓಡಿಯೇ ಓಡಿತು. ಆಯುಷ್ಯ ಪೂರ್ತಿ ಓಡಿದರೂ ಅದಕ್ಕೆ ಗಜ್ಜರಿ ಸಿಗಲೇ ಇಲ್ಲ! ಬಾಲ ಮನಸ್ಸಿಗೆ ಅಜ್ಜಿ ಹೇಳಿದ ಕತೆ ಕುತೂಹಲಭರಿತವೆನಿಸಿ ನಗೆ ತರಿಸಿತ್ತು. ಆದರೆ ಈಗ ಬೆಳೆದ ಮನಸ್ಸಿಗೆ ಕಾಲನೆಂಬ ಮಾಲೀಕನು ನಮ್ಮ ಮನವೆಂಬ ಕುದುರೆಗೆ ವಿಷಯ ಸುಖದ ಗಜ್ಜರಿ ಆಸೆಯನ್ನು ತೋರಿಸಿ ಓಡಾಡಿಸುತ್ತಿದ್ದಾನೆ ಎಂದು ತಿಳಿದು ನೋವಾಗುತ್ತದೆ.
ಸಹಜ ಗುಣ ಆಸೆ ಪಡುವುದು ಮಾನವನ ಸಹಜ ಗುಣ. ಅದು ನಮ್ಮನ್ನು ಉನ್ನತಿಗೇರಿಸಬೇಕೇ ಹೊರತಾಗಿ ಅವನತಿಗೆ ಕಾರಣವಾಗಬಾರದು. ಡಿವಿಜಿಯವರು ತಮ್ಮ ಕಗ್ಗದಲ್ಲಿ ಹೇಳುವುದು ಇದನ್ನೇ
ಸಕ್ಕರೆಯ ಭಕ್ಷ್ಯಂವನು ಮಕ್ಕಳೆದುರಿಗೆ ಕೈಗೆ
ಸಿಕ್ಕುವಂತಿರಿಸಿ ಕದ್ದರೆ ಗದ್ದರಿಪುದೇಂ?

ಮಕ್ಕಳೆದುರಿಗೆ ಅವರಿಗಿಷ್ಟವಾದ ಸಿಹಿತಿಂಡಿಗಳನ್ನಿಟ್ಟು ಅವರು ತೆಗೆದುಕೊಂಡರೆ ಗದರುವುದೇಕೆ? ನಮ್ಮ ಮನಸ್ಸು ಮಗುವಿನಂತೆ ನೋಡುವ ಪ್ರತಿ ವಸ್ತುವನ್ನೂ ಬಯಸುತ್ತದೆ. ಅದರಲ್ಲೂ ಹೊಳೆಯುವ ವಸ್ತುಗಳನ್ನಂತೂ ಬೇಕೇ ಬೇಕು ಎಂದು ರಚ್ಚೆ ಹಿಡಿಯುತ್ತದೆ. ಆಕರ್ಷಣೆಗಳನ್ನು ಹೊಂದಬಾರದೆನ್ನುವುದು ಕಗ್ಗದ ಆಶಯವಲ್ಲ.ಆಸೆ ಆಕರ್ಷಣೆಗಳಿರಲಿ ಆದರೆ ಅವುಗಳೆಲ್ಲ ಒಂದು ಮಿತಿಯಲ್ಲಿರಲಿ ಎನ್ನುತ್ತದೆ.
ಜೋಡಿಸದಿರಿ:

ಪಾದಚಾರಿಯಾದಾಗ ಸೈಕಲ್ ಮೇಲೆ ಆಸೆ, ಸೈಕಲ್ ಸಿಕ್ಕರೆ ಬೈಕ್ ಮೇಲೆ ಆಸೆ, ಅದಾದ ಮೇಲೆ ಕಾರ್, ಅದರಲ್ಲೂ ದುಬಾರಿ ಫೆರಾರಿ ಕಾರ್. ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ನೀವು ಫೆರಾರಿ ಹೊಂದಿದ್ದೀರಾ ಇಲ್ಲವೇ ಎಂಬುದು ಮುಖ್ಯವಲ್ಲ. ನಿಮ್ಮ ಸಂತೋಷವನ್ನು ಫೆರಾರಿಗೆ ಏಕೆ ಜೋಡಿಸಿದ್ದೀರಿ ಎನ್ನುವುದು ಮುಖ್ಯವಾಗುತ್ತದೆ. ಸುಖ ಸಂತೋಷ ಸಂತೃಪ್ತಿಗಾಗಿ ಹಣ ಐಶ್ವರ್ಯ ಮತ್ತು ವಸ್ತುಗಳ ಮೇಲೆ ಅವಲಂಬಿತರಾಗಬಾರದು. ಮನುಕುಲದ ಇತಿಹಾಸವನ್ನು ಬರೆದ ಇತಿಹಾಸ ತಜ್ಞ ಟಾಯನ್ ಬಿ ಹೇಳುತ್ತಾನೆ. ’ಮಾನವನ ಇತಿಹಾಸವನ್ನು ಮೂರೇ ಮೂರು ಶಬ್ದಗಳಲ್ಲಿ ಚಿತ್ರಿಸಬಹುದು. ಅವು ಯಾವವು ಎಂದರೆ: ಆಸೆ-ಹೋರಾಟ-ಸೋಲು.’
ಅಂಟಿಕೊಳ್ಳಬೇಡಿ:
ಆಸೆಗಳು ಯಾವುದೇ ಒಂದು ಕೊರತೆ ಮಾತ್ರ. ‘ದೊಡ್ಡ ಆಸೆಗಳನ್ನು ಹೊಂದಿರುವವರು ಏನೂ ಇಲ್ಲದವರಿಗಿಂತ ಕೆಟ್ಟ ಸ್ಥಿತಿಯಲ್ಲಿರುತ್ತಾರೆ.’ ಆಸೆಗಳಿಗೆ ಅಂಟಿಕೊಳ್ಳಬೇಡಿ. ಪ್ರತಿ ನೋವಿಗೆ ಆಸೆಗಳೇ ಕಾರಣ. ‘ಆಸೆಯೇ ದುಃಖಕ್ಕೆ ಕಾರಣ’ ಎಂದು ಬುದ್ಧ ಹೇಳಿದ ಮಾತು ನಮಗೆಲ್ಲ ಗೊತ್ತೇ ಇದೆ. ಆಸೆಗಳ ಗುಲಾಮರಾದರೆ ಹೆಚ್ಚಿನ ಸಮಯದ ನೋವು ಅಂದರೆ ನೋವುಗಳನ್ನು ಮಾತ್ರ ಪಡೆಯುತ್ತೇವೆ. ಹಾಗಿದ್ದಾಗ್ಯೂ ನಮ್ಮಲ್ಲಿ ಆಸೆಗಳಿಗೇನು ಕಡಿಮೆಯಿಲ್ಲ. ನೂರಾರು ಆಸೆ, ಆಕಾಂಕ್ಷೆ, ಬಯಕೆ, ಕಾಮನೆ, ಅಪೇಕ್ಷೆಗಳ ಹಾವಳಿ ಇದ್ದೇ ಇದೆ. ಮನದಲ್ಲಿ ತುಂಬಿಕೊಂಡಿರುವ ಈ ಎಲ್ಲ ತರಹೇವಾರಿ ಆಸೆಗಳೇ ನಮ್ಮ ದುಃಖಕ್ಕೆ ಕಾರಣ ಎನ್ನುವ ಬುದ್ಧನ ಮಾತೇನೋ ನೂರಕ್ಕೆ ನೂರರಷ್ಟು ಸರಿಯಿದೆ. ಆದರೂ ಎಲ್ಲಕ್ಕೂ ಮುಖ್ಯವೆಂದರೆ ‘ನಮ್ಮ ದುಃಖಕ್ಕೆ ನಾವೇ ಕಾರಣ.’
ಬೀಜ ಬಿತ್ತದಿರಿ:
ತಲೆಯಲ್ಲಿ ಯಾವಾಗಲೂ ಯಾವುದೋ ಒಂದು ಹುಳು ಬಿಟ್ಟುಕೊಂಡೇ ಇರುತ್ತೇವೆ. ಅದನ್ನು ಖರೀದಿಸಬೇಕು. ಇದನ್ನು ಮಾಡಬೇಕು. ಅವರಂತೆ ಆಗಬೇಕು. ಎಂದು ಇನ್ನಿಲ್ಲದಂತೆ ಹಂಬಲಿಸುತ್ತೇವೆ. ಅದೇ ಬೀಜಗಳನ್ನು ಮನದ ಭೂಮಿಯಲ್ಲಿ ಬಿತ್ತಿ ಬಂಪರ್ ಬೆಳೆಗೆ ಕಾಯುತ್ತೇವೆ. ನಿರೀಕ್ಷಿಸಿದ ಸಮಯಕ್ಕೆ ನಿರೀಕ್ಷಿತ ಮಟ್ಟದಲ್ಲಿ ನಿರೀಕ್ಷಿತ ರೀತಿಯಲ್ಲಿ ಬೆಳೆ ಬಾರದೇ ಹೋದರೆ ಬೇಸರ ಪಟ್ಟುಕೊಳ್ಳುತ್ತೇವೆ ವಿಲವಿಲ ಒದ್ದಾಡುತ್ತೇವೆ. ಸಂಕಟಪಡುತ್ತೇವೆ. ದುಃಖವನ್ನು ಮತ್ತೊಬ್ಬರ ಮುಂದೆ ತೋಡಿಕೊಳ್ಳಲು ಮುಂದಾಗುತ್ತೇವೆ. ಇದನ್ನೆಲ್ಲ ಅವಲೋಕಿಸಿದಾಗ ಬೀಜಗಳನ್ನು ಬಿತ್ತಿದವರು ನಾವೇ ನಿರೀಕ್ಷಿತ ಬೆಳೆ ಬಾರದೇ ಇದ್ದಾಗ ಗೋಳಾಡುವವರು ಅಳುವವರು ದುಃಖಿಸುವವರು ನಾವೇ ಎಂದರ್ಥವಾಗಲು ಬಹಳ ಸಮಯ ಹಿಡಿಯುವುದಿಲ್ಲ.
ಮಾತಿಗೆ ಕಿವಿಗೊಡಿ:

ವಸ್ತುವಿಗಾಗಿ ವ್ಯಕ್ತಿಗಳಿಗಾಗಿ ಅಧಿಕಾರಕ್ಕಾಗಿ ಸ್ಥಾನಮಾನಗಳಿಗಾಗಿ ಸ್ವಂತ ಆಸೆಗಳಿಂದ ಸಿಕ್ಕಿಹಾಕಿಕೊಳ್ಳುತ್ತೇವೆ. ಆಸೆಗಳ ಬಾವಿಯನ್ನು ತೋಡುತ್ತಲೇ ಹೋಗುತ್ತೇವೆ. ಆದರೆ ನಮಗೆ ಸುಖ ಸಂತೃಪ್ತಿಯ ಜಲ ಸಿಗುವುದೇ ಇಲ್ಲ. ನಮ್ಮ ಈ ಸ್ಥಿತಿ ಪರಿಸ್ಥಿತಿ ಗಮನಿಸಿಯೇ ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಪರಮಾತ್ಮನು ‘ಯುದೃಚ್ಛಾಲಾಭಸಂತುಷ್ಟ’ ಪಾಠವನ್ನು ಮಾಡಿದ ಅನಿಸುತ್ತದೆ. (ಇರುವುದರಲ್ಲಿಯೇ ಆನಂದಪಡು ಮತ್ತು ಇದ್ದಷ್ಟರಲ್ಲಿಯೇ ಸಂತುಷ್ಟಪಡು.) ಶ್ರೀಕೃಷ್ಣನು ನಮ್ಮಗಳಿಗೆ ಹೇಳಿದ ಮಾತಿಗೆ ಕಿವಿಗೊಟ್ಟರೆ ನೆಮ್ಮದಿಯಿಂದ ಬದುಕಲು ಸಾದ್ಯ. ಇಲ್ಲದಿದ್ದರೆ ಇಲ್ಲದ ದುಃಖ ದುಮ್ಮಾನಗಳನ್ನು ಮೈಮೇಲೆ ಎಳೆದುಕೊಂಡು ದುಃಖಿಸಬೇಕಾಗುತ್ತದೆ. ನಮ್ಮ ಋಷಿ ಮುನಿಗಳು ನಮ್ಮನ್ನು ‘ಅಮೃತಸ್ಯ ಪುತ್ರರು’ ಎಂದು ಕರೆದಿರುವರು. ಅಂದರೆ ನಮಗೆ ಜನನ ಮರಣಗಳಿಲ್ಲ ಆಸೆ ಆಮಿಷಗಳಿಲ್ಲ ನಾವು ನಿತ್ಯ ತೃಷ್ತರು.ಸಂತಸ ಭರಿತರು.
ಕನಸಿನ ಮಾತೇ ಸರಿ:

ಇದನ್ನೇ ಹಗ್ ಡೌನ್ಸ್ ಹೀಗೆ ಹೇಳುತ್ತಾನೆ. ‘ಒಬ್ಬ ಸಂತಸ ಭರಿತ ವ್ಯಕ್ತಿ ಒಂದು ನಿರ್ದಿಷ್ಟ ಬಗೆಯ ಸಂದರ್ಭಗಳ ವ್ಯಕ್ತಿಯಾಗಿರದೆ ಒಂದು ನಿರ್ದಿಷ್ಟ ಮನೋಭಾವಗಳ ವ್ಯಕ್ತಿಯಾಗಿರುತ್ತಾನೆ.’ ಮನಸ್ಸು ಎಳೆದತ್ತ, ಕರಣ ಕರೆದತ್ತ ಸಾಗಿದರೆ ಬಾಳು ಗೋಳಾಗುವುದು ಖಚಿತ ಜಗತ್ಪ್ರಸಿದ್ಧ ಇಂಗ್ಲೀಷ್ ನಾಟಕಕಾರ ಶೇಕಸ್ಪಿಯರನು ತನ್ನ ನಾಟಕವೊಂದರಲ್ಲಿ ಪಾತ್ರವೊಂದರ ಮೂಲಕ ಹೀಗೆ ಹೇಳಿದ್ದಾನೆ ’ನಾನೂ ಒಬ್ಬ ಮಹಾರಾಜನೆ, ನನ್ನ ರಾಜ್ಯವು ನನ್ನ ಎದೆಯೊಳಗಿದೆ. ಸಂತೃಪ್ತಿಯೇ ನನ್ನ ಕಿರೀಟ. ಹೊರಗಿನ ರಾಜ್ಯಗಳು ಅಳಿಯುತ್ತವೆ. ನನ್ನ ರಾಜ್ಯವು ಎಂದೂ ಅಳೆಯುವುದಿಲ್ಲ’. ಆಸೆಯೆಂಬ ಕುದುರೆ ಏರಿದವನಿಗೆ ಸಂತೃಪ್ತಿ ಸಮಾಧಾನ ಎನ್ನುವುದು ಕನಸಿನ ಮಾತೇ ಸರಿ. ಸಿರಿ ಸಂಪತ್ತು ಎಷ್ಟೇ ಇದ್ದರೂ ಅತಿಯಾಸೆ ಇದ್ದರೆ ಅವನು ಬಡವನೆ!
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ