Kannada NewsKarnataka NewsLatestPolitics

*ತಾಕತ್ ಇದ್ದರೆ ಕಾಂತರಾಜು ವರದಿ ಸ್ವೀಕರಿಸಿ*


ಸವಾಲು ಹಾಕಿದ ಹೆಚ್.ಡಿ.ಕುಮಾರಸ್ವಾಮಿ

ಪ್ರಗತಿವಾಹಿನಿ ಸುದ್ದಿ: ಶೋಷಿತರ ಜಾಗೃತಿ ಸಮಾವೇಶ ಮಾಡುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈವರೆಗೆ ಮೀಸಲು ಸೌಲಭ್ಯವನ್ನು ಯಾರೆಲ್ಲಾ ಪಡೆದುಕೊಂಡಿದ್ದಾರೆ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಬರಲಿ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಸವಾಲು ಹಾಕಿದರು.

ಜೆಡಿಎಸ್ ಕಚೇರಿಯಲ್ಲಿ ಮಾಧ್ಯಮಗಳ ಜತೆ ಮಾತನಾಡಿದ ಅವರು; 2ಎ ಮೀಸಲು ವ್ಯಾಪ್ತಿಯಲ್ಲಿ ಸುಮಾರು 108 ಉಪ ಜಾತಿಗಳು ಇವೆ. ಆದರೆ, ಮೀಸಲಾತಿ ಸೌಲಭ್ಯದ ಸಿಂಹಪಾಲು ಯಾರ ಪಾಲಾಗಿದೆ ಎಂಬ ಬಗ್ಗೆ ಬಹಿರಂಗ ಚರ್ಚೆಗೆ ಬನ್ನಿ, ಆಮೇಲೆ ಕಾಂತರಾಜು ವರದಿ, ಇನ್ನೊಂದು ವರದಿಯ ಬಗ್ಗೆ ಮಾತನಾಡಿ ಎಂದು ಸಿದ್ದರಾಮಯ್ಯ ಅವರಿಗೆ ಪಂಥಾಹ್ವಾನ ನೀಡಿದರು.

ಕಾಂತರಾಜು ವರದಿ ಹಿಡಿದುಕೊಂಡು ಪ್ರತಿದಿನ ಭಾಷಣ ಮಾಡುತ್ತಿದ್ದಾರೆ. ಕುಮಾರಸ್ವಾಮಿ, ಬೊಮ್ಮಾಯಿ, ಯಡಿಯೂರಪ್ಪ ಈ ವರದಿಯನ್ನು ಸ್ವೀಕಾರ ಮಾಡಲಿಲ್ಲ ಎಂದುಹೇಳಿಕೊಂಡು ತಿರುಗುತ್ತಿದ್ದಾರೆ. ಈಗ ನೀವು ಅಧಿಕಾರಕ್ಕೆ ಬಂದು ಒಂದು ವರ್ಷ ಆಯಿತು. ಯಾಕೆ ಆ ವರದಿಯನ್ನು ಸ್ವೀಕಾರ ಮಾಡಿ ಜಾರಿ ಮಾಡಲಿಲ್ಲ. ಯಾರು ಅಡ್ಡ ಇದಾರೆ ನಿಮಗೆ. ತಾಕತ್ತು ಇದ್ದರೆ ಆ ಕಾಂತರಾಜು ವರದಿ ಸ್ವೀಕರಿಸಿ ಜಾರಿ ಮಾಡಿ ಎಂದು ಕುಮಾರಸ್ವಾಮಿ ಅವರು ಸಿಎಂಗೆ ನೇರ ಸವಾಲು ಹಾಕಿದರು.

ಒಬ್ಬ ಕುರಿ ಕಾಯುವವನ ಮಗ ಸಿಎಂ ಆದ ಅಂತಾ ನನ್ನ ಮೇಲೆ ವಿಷ ಕಾರ್ತಾರೆ ಅಂತ ಅಳಲು ತೋಡಿಕೊಂಡಿದ್ದಾರೆ. ಕುರಿ ಕಾಯುವ ಮಗನನ್ನೇ ಅಂದು ದೇವೇಗೌಡರು ಆರ್ಥಿಕ ಸಚಿವರನ್ನಾಗಿ ಮಾಡಿದ್ದರು. ನಿಮ್ಮ ಇಷ್ಟು ವರ್ಷದ ರಾಜಕೀಯದಲ್ಲಿ ಎಷ್ಟು ಸಲ ಸಚಿವರಾದಿರಿ, ಮುಖ್ಯಮಂತ್ರಿ ಆದಿರಿ, ಉಪ ಮುಖ್ಯಮಂತ್ರಿ ಆದಿರಿ. ಜಾತಿವ್ಯವಸ್ಥೆ, ಶೋಷಣೆ ಅಂತ್ಯ ಮಾಡಲು ಅವಕಾಶ ಇತ್ತು ನಿಮಗೆ, ಯಾಕೆ ಮಾಡಲಿಲ್ಲ? ಎಂದು ಅವರು ಸಿದ್ದರಾಮಯ್ಯ ಅವರನ್ನು ಖಾರವಾಗಿ ಪ್ರಶ್ನಿಸಿದರು.

ಇಂಥ ಸಮಾಜವನ್ನು ಒಡೆಯುವ ರಾಜಕಾರಣ ನಿಲ್ಲಿಸಿ. ಎಷ್ಟು ದಿನ ಅಧಿಕಾರದಲ್ಲಿ ಇರ್ತೀರಾ? ಕದ್ದುಮುಚ್ಚಿ ನಿಮ್ಮ ಹಾಗೆ ರಾಜಕೀಯ ಮಾಡೋನಲ್ಲ ನಾನು. ನೇರವಾಗಿಯೇ ನಾನು ಬಿಜೆಪಿ ಜತೆ ಕೈ ಜೋಡಿಸಿದ್ದೇನೆ. ನಿಮ್ಮ ಹಾಗೆ ಹೊಂದಾಣಿಕೆ ರಾಜಕಾರಣ ಮಾಡಲ್ಲ ನಾನು. ಜನಪರ ತೀರ್ಮಾನಗಳು ಇದ್ದರೆ ನಾವು ಕೂಡ ಬೆಂಬಲ ಕೊಡುತ್ತೇವೆ. ಕಮೀಷನ್ ಹೊಡೆಯುವುದು ನಿಲ್ಲಿಸಿ ಕೆಲಸ ಮಾಡಿ ಎಂದು ಅವರು ಸಿದ್ದರಾಮಯ್ಯ ಮೇಲೆ ಹರಿಹಾಯ್ದರು.

ಕಾಂಗ್ರೆಸ್ ನ್ನು ಕೊಣಕ್ಕೆ ಹೋಲಿಸಿದ ಹೆಚ್ಡಿಕೆ:

ಕಾಂಗ್ರೆಸ್ ಪಕ್ಷದ ತೀವ್ರ ಟೀಕಾ ಪ್ರಹಾರ ನಡೆಸಿದ ಅವರು, ಒಂದು ಕುಡಿಯುವ ನೀರಿನ ಜಾಗಕ್ಕೆ ಹಸುವನ್ನು ಬಿಟ್ಟರೆ ಅದು ನೀರನ್ನೂ ಕುಡಿದು ಅದನ್ನು ಕಲಕದೇ ಹೋಗುತ್ತದೆ. ಆದರೆ, ಅದೇ ಜಾಗಕ್ಕೆ ಕೋಣವನ್ನು ಬಿಟ್ಟರೆ ನೀರನ್ನು ಕುಡಿದು ಬೇರೆ ಯಾರೂ ಕುಡಿಯದ ರೀತಿ ಆ ನೀರನ್ನು ರಾಡಿ ಎಬ್ಬಿಸಿ ಹೋಗುತ್ತದೆ. ಕಾಂಗ್ರೆಸ್ ಕೋಣದ ರೀತಿ ಎಂದು ಕುಮಾರಸ್ವಾಮಿ ಅವರು ಲೇವಡಿ ಮಾಡಿದರು.

ನಿತೀಶ್ ಕುಮಾರ್ ಅವರು 9ನೇ ಸಲ ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ತೆಗೆದುಕೊಂಡಿದ್ದಾರೆ. ಇದೊಂದು ದಾಖಲೆ. ಆದರೆ, ನನ್ನ ವಿಷಯದಲ್ಲಿ ಹಾಗೆ ಆಗಿಲ್ಲ. ನರೇಂದ್ರ ಮೋದಿ 2018ರಲ್ಲೆ ಹೇಳಿದ್ದರು. ಇವತ್ತು ಕಾಂಗ್ರೆಸ್ ಬಿಟ್ಟು ಬನ್ನಿ ನಾಳೆಯೇ ಮತ್ತೆ ನಮ್ಮ ಜತೆ ಸೇರಿ ಮುಖ್ಯಮಂತ್ರಿ ಆಗಿ ಪ್ರಮಾಣ ತೆಗೆದುಕೊಳ್ಳಿ ಎಂದರು. ನಾನು ಕೇಳಲಿಲ್ಲ. ಅಂದು ಅವರ ಮಾತು ಕೇಳಿದ್ದಿದ್ದರೆ ನಿತೀಶ್ ಕುಮಾರ್ ರೀತಿ ನಾನೂ ಮತ್ತೆ ಸಿಎಂ ಆಗ್ತಾ ಇದ್ದೆ. ಬೆನ್ನಿಗೆ ಚೂರಿ ಹಾಕಿದ ಕಾಂಗ್ರೆಸ್ ನವರನ್ನು ನಂಬಿ ನಾನು ಆ ಅವಕಾಶ ಕಳೆದುಕೊಂಡೆ ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.

ಅರಸು ಬಗ್ಗೆ ಮೊಸಳೆ ಕಣ್ಣೀರು:

ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರಿಗೆ ಭಾರತರತ್ನ ಕೊಡಬೇಕು ಎಂದು ಉಪ ಮುಖ್ಯಮಂತ್ರಿ ಅವರು ಕೇಂದ್ರಕ್ಕೆ ಒತ್ತಾಯ ಮಾಡಿದ್ದಾರೆ. ಆದರೆ, ಕಾಂಗ್ರೆಸ್ ಪಕ್ಷಕ್ಕೆ ತನ್ನ ಜೀವನವನ್ನೇ ಅರ್ಪಣೆ ಮಾಡಿದ ಅವರಿಗೆ ಕಾಂಗ್ರೆಸ್ ಬೆನ್ನಿಗೆ ಚೂರಿ ಹಾಕಿತು. ಅವರ ಜೀವನವನ್ನು ಸಂಪೂರ್ಣವಾಗಿ ಹಾಳು ಮಾಡಿತು. ಈಗ ನೋಡಿದರೆ ಕಾಂಗ್ರೆಸ್ ನಾಯಕರು ಅರಸು ಅವರ ಬಗ್ಗೆ ಮೊಸಳೆ ಕಣ್ಣೀರು ಹಾಕುತ್ತಿದ್ದಾರೆ ಎಂದು ಕುಮಾರಸ್ವಾಮಿ ಅವರು ಟಾಂಗ್ ನೀಡಿದರು.

ಈಗ ಎಲ್ಲರೂ ಕಾಂಗ್ರೆಸ್ ಬಿಟ್ಟು ಹೋಗುತ್ತಿದ್ದಾರೆ. ನಿತೀಶ್ ಆಯಿತು, ಮಮತಾ ಬ್ಯಾನರ್ಜಿ, ಅಖಿಲೇಶ್ ಯಾದವ್, ಅರವಿಂದ್ ಕೇಜ್ರಿವಾಲ್ ಯಾರಿಗೂ ಆ ಪಕ್ಷದ ಸಹವಾಸ ಬೇಡವಾಗಿದೆ. ಇವರ ನಡವಳಿಕೆ ನೋಡಿ ಎಲ್ಲರೂ ಬೇಸತ್ತು ಒಬ್ಬೊಬ್ಬರಾಗಿ ಹೋಗ್ತಾ ಇದಾರೆ ಎಂದು ಕುಮಾರಸ್ವಾಮಿ ಅವರು ಹೇಳಿದರು.

ಮಾಧ್ಯಮಗೋಷ್ಠಿಯಲ್ಲಿ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಜಿಟಿ ದೇವೇಗೌಡರು, ಮಾಜಿ ಸಚಿವರಾದ ಅಲಕೊಡ್ ಹನುಮಂತಪ್ಪ, ವೆಂಕಟರಾವ್ ನಾಡಗೌಡ, ಲೀಲಾದೇವಿ ಆರ್ ಪ್ರಸಾದ್, ಮಾಜಿ ಶಾಸಕರಾದ ಸುರೇಶ್ ಗೌಡ, ರಾಜಾ ವೆಂಕಟಪ್ಪ ನಾಯಕ, ತಿಮ್ಮರಾಯಪ್ಪ, ಹಿರಿಯ ನಾಯಕರಾದ ವೀರಭದ್ರಪ್ಪ ಹಾಲಹರವಿ, ಚಂದ್ರಶೇಖರ್, ದೊಡ್ಡನಗೌಡ ಪಾಟೀಲ್, ಪ್ರಸನ್ನ ಕುಮಾರ್, ಜೆಡಿಎಸ್ ನಗರ ಘಟಕದ ಅಧ್ಯಕ್ಷ ಹೆಚ್.ಎಂ.ರಮೇಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button