
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಕ್ಯಾಂಪ್ ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯ ನಗರದ ರಕ್ಷಕ ಕಾಲೋನಿಯಲ್ಲಿ ಗೋವಾ ರಾಜ್ಯದಲ್ಲಿ ಮಾರಾಟ ಮಾಡುವ & ಮಿಲಿಟರಿ ಕ್ಯಾಂಟೀನ್ ಮುಖಾಂತರ ಸೈನಿಕರಿಗೆ ಮಾರಾಟ ಮಾಡುವ ವಿವಿಧ ಕಂಪನಿಯ ಸರಾಯಿ ಬಾಟಲ & ಚೀಲಗಳನ್ನು ಸ್ಥಳಿಯರಿಗೆ ಎರಡುಪಟ್ಟು ದರದಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಸಂಗ್ರಹಿಸಿಡಲಾಗಿತ್ತು.
ಆರೋಪಿತರಾದ ರಾಜೇಶ ಕೇಶವ ನಾಯಿಕ, (೩೭) ಸಾ: ಕುಮಾರಸ್ವಾಮಿ ಲೇಔಟ್, ಬೆಳಗಾವಿ, ಶಂಕರ ಬಸವಂತ ದೇಸನೂರ, (೩೮) ಸಾ|| ಸಿಸಿಬಿ ನಂ. ೧೪ ಕೋನವಾಳ ಗಲ್ಲಿ, ಕಣಬರ್ಗಿ, ಬೆಳಗಾವಿ ಇವರ ರಕ್ಷಕ ಕಾಲೋನಿಯ ಬಾಡಿಗೆ ಮನೆಯ ಮೇಲೆ ದಾಳಿ ಮಾಡಿದ್ದರು.
ಆರೋಪಿತರಿಂದ ಗೋವಾ ರಾಜ್ಯದಲ್ಲಿ ಮಾರಾಟವಾಗುವ ಸರಾಯಿ ತುಂಬಿದ ಒಟ್ಟು ೪೧೦ ಲೀ, ೨೫೦ ಮೀ.ಲೀಟರ್‌ದ ವಿವಿಧ ಕಂಪನಿಯ ೫೪೭ ಬಾಟಲಿಗಳು, ಮತ್ತು ಮಿಲಿಟರಿ ಕ್ಯಾಂಟೀನ್ ಮುಖಾಂತರ ಸೈನಿಕರು ಮತ್ತು ಮಾಜಿ ಸೈನಿಕರಿಗೆ ಮಾತ್ರ ಮಾರಾಟ ಮಾಡಲಾಗುವ ವಿವಿಧ ಕಂಪನಿಯ ೧೫೨ ಲೀಟರ್ ೨೫೦ ಮೀ.ಲೀಟರ್‌ದ ೨೦೩ ಸರಾಯಿ ಬಾಟಲಿಗಳು ಹೀಗೆ ಕರ್ನಾಟಕ ರಾಜ್ಯದ ಮಾರುಕಟ್ಟೆಯಲ್ಲಿ ಅಂದಾಜು ರೂ.೧೨ ಲಕ್ಷದಷ್ಟು ಬೆಲೆಬಾಳುವ ವಿವಿಧ ಕಂಪನಿಯ ಸರಾಯಿ ಬಾಟಲಿಗಳನ್ನು ಹಾಗೂ ಅಕ್ರಮ ಸರಾಯಿ ಸಾಗಾಟಕ್ಕೆ ಬಳಸಿದ ಅಂದಾಜು ಒಂದು ಲಕ್ಷ ಬೆಲೆ ಬಾಳುವ ಆಲ್ಟೋ ಕಾರನ್ನು ಜಪ್ತ ಪಡಿಸಿಕೊಳ್ಳಲಾಗಿದೆ.
ಆರೋಪಿತರು ಮುಂಬರುವ ಲೋಕಸಭಾ ಉಪಚುನಾವಣೆಯ ಕಾಲಕ್ಕೆ ಮಾರಾಟ ಮಾಡುವ ಇರಾದೆಯಿಂದ ಸಂಗ್ರಹಿಸಿಟ್ಟ ಬಗ್ಗೆ ಸುಳಿವು ಇದ್ದ ಕಾರಣ ಈ ದಾಳಿಯನ್ನು ಕೈಗೊಳ್ಳಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿತರನ್ನು ಸ್ಥಳದಲ್ಲಿ ದಸ್ತಗಿರಿ ಮಾಡಿ ಅವರ ವಿರುದ್ಧ ಕ್ಯಾಂಪ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಕೊಳ್ಳಲಾಗಿದೆ.
ಡಾ. ತ್ಯಾಗರಾಜನ್. ಕೆ. ಐಪಿಎಸ್ ಪೊಲೀಸ್ ಆಯುಕ್ತರು, ಬೆಳಗಾವಿ ನಗರ, ವಿಕ್ರಮ ಅಮಟೆ ಡಿಸಿಪಿ (ಕಾ&ಸು) ಹಾಗೂ ನಾರಾಯಣ ಬರಮನಿ ಎಸಿಪಿ ಅಪರಾಧ ರವರ ಮಾರ್ಗದರ್ಶನದಲ್ಲಿ ದಿನಾಂಕ.೧೬-೦೨-೨೦೨೧ ರಂದು ಬೆಳಗಿನ ಜಾವದಲ್ಲಿ ಸಂಜೀವ ಕಾಂಬಳೆ ಪಿಐ ಸಿಸಿಐಬಿ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ