ನಾನು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿಲ್ಲ, ಆದರೆ…. : ರಮೇಶ ಕತ್ತಿ
ಖಾನಾಪುರದ ಮೇಲೆ ಎಲ್ಲರ ಕಣ್ಣು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಜಿಲ್ಲಾ ಮಧ್ಯವರ್ತಿ ಬ್ಯಾಂಕ್ ಆಡಳಿತ ಮಂಡಳಿಯ 13 ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಇನ್ನುಳಿದ 3 ಸ್ಥಾನಗಳಿಗೆ ಶುಕ್ರವಾರ ಚುನಾವಣೆ ನಡೆಯಲಿದೆ.
ಎಲ್ಲ 16 ಸ್ಥಾನಗಳಿಗೂ ಅವಿರೋಧ ಆಯ್ಕೆ ಮಾಡಬೇಕೆನ್ನುವ ಪ್ರಯತ್ನ ಫಲ ನೀಡಲಿಲ್ಲ. ಅಂತಿಮವಾಗಿ 3 ಸ್ಥಾನಗಳಿಗೆ ಚುನಾವಣೆ ನಡೆಸಲೇಬೇಕಾಗಿದೆ. ರಾಮದುರ್ಗ ತಾಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘಗಳ ಕ್ಷೇತ್ರ, ಖಾನಾಪುರ ತಾಲೂಕಿನ ತಾಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘಗಳ ಕ್ಷೇತ್ರ ಹಾಗೂ ನೇಕಾರರ ಕ್ಷೇತ್ರಗಳಿಗೆ ಚುನಾವಣೆ ನಡೆಯಲಿದೆ.
ಇವುಗಳಲ್ಲಿ ಹೆಚ್ಚು ಕುತೂಹಲ ಮೂಡಿಸಿರುವುದು ಖಾನಾಪುರ ತಾಲೂಕಿನ ಕೃಷಿ ಪತ್ತಿನ ಸಹಕಾರಿ ಸಂಘಗಳ ಕ್ಷೇತ್ರ. ಇದಕ್ಕೆ ಕಾರಣ ಇಲ್ಲಿಂದ ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳಕರ್ ಮತ್ತು ಎಂಇಎಸ್ ನ ಮಾಜಿ ಶಾಸಕ ಅರವಿಂದ ಪಾಟೀಲ ಕಣದಲ್ಲಿದ್ದಾರೆ. ಇದು ಅತ್ಯಂತ ಪ್ರತಿಷ್ಠೆಯ ಕಣವಾಗಿದೆ. ಹಾಗಾಗಿ ಎರಡೂ ಗುಂಪುಗಳು ರೆಸಾರ್ಟ್ ರಾಜಕಾರಣ ಮಾಡುತ್ತಿದ್ದು, ಇಬ್ಬರು ಮುಖಂಡೂ ತಮ್ಮದೇ ಬಹುಮತವಿದೆ ಎಂದು ಹೇಳಿಕೊಂಡಿದ್ದಾರೆ.
ಬಿಜೆಪಿ ಮುಖಂಡರುಗಳಾದ ಬಾಲಚಂದ್ರ ಜಾರಕಿಹೊಳಿ, ಲಕ್ಷ್ಮಣ ಸವದಿ, ಉಮೇಶ ಕತ್ತಿ ಮುಂಚೂಣಿಯಲ್ಲಿ ನಿಂತು ಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿಗೆ ಅವಿರೋಧ ಆಯ್ಕೆ ಮಾಡಲು ಪ್ರಯತ್ನಿಸಿದ್ದಾರೆ. ಇವರ ಜೊತೆಗೆ ಹಾಲಿ ಅಧ್ಯಕ್ಷ ರಮೇಶ ಕತ್ತಿ, ಸಚಿವ ರಮೇಶ ಜಾರಕಿಹೊಳಿ ಸಹ ಕೈ ಜೋಡಿಸಿದ್ದರು. ಈಗ ಚುನಾವಣೆ ನಡೆಯುತ್ತಿರುವ 3 ಕ್ಷೇತ್ರಗಳಲ್ಲಿ, ಖಾನಾಪುರದಲ್ಲಿ ಅರವಿಂದ ಪಾಟೀಲ, ರಾಮದುರ್ಗದಲ್ಲಿ ಡವಣ ಮತ್ತು ನೇಕಾರ ಕ್ಷೇತ್ರದಲ್ಲಿ ಗಜಾನನ ಕ್ವಳ್ಳಿ ಬಿಜೆಪಿಯ ಈ ಮುಖಂಡರ ಅಭ್ಯರ್ಥಿಗಳು.
ನಾಳೆ ನಡೆಯಲಿರುವ ಚುನಾವಣೆಯಲ್ಲಿ ಮೂರಕ್ಕೆ ಮೂರೂ ಕ್ಷೇತ್ರಗಳಲ್ಲಿ ನಮ್ಮ ಪರವಾಗಿರುವ ಅಭ್ಯರ್ಥಿಗಳೇ ಗೆಲುವು ಸಾಧಿಸುತ್ತಾರೆ ಎನ್ನುವುದು ರಮೇಶ ಕತ್ತಿ ಅವರ ಹೇಳಿಕೆ. ಪ್ರಗತಿವಾಹಿನಿ ಜೊತೆ ಮಾತನಾಡಿದ ಅವರು, ನಮ್ಮ ಅಭ್ಯರ್ಥಿಗಳು ಗೆಲ್ಲುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ಈಗಾಗಲೆ ಆಯ್ಕೆಯಾಗಿರುವ 13 ಜನರೂ ಒಗ್ಗಟ್ಟಾಗಿದ್ದಾರೆ. ಇನ್ನು ಆಯ್ಕೆಯಾಗಲಿರುವವರೂ ಸೇರಿದಂತೆ ಎಲ್ಲರೂ ಸೇರಿ ಒಮ್ಮತದ ಅಧ್ಯಕ್ಷರನ್ನು ಆಯ್ಕೆ ಮಾಡಲಿದ್ದಾರೆ ಎನ್ನುವುದು ಅವರ ಹೇಳಿಕೆ.
ನಾನು ಅಧ್ಯಕ್ಷ ಸ್ಥಾನದ ಪೈಪೋಟಿಯಲ್ಲಿಲ್ಲ. ಆದರೆ ಪಕ್ಷದ ಹೈಕಮಾಂಡ್ ಮತ್ತು ಎಲ್ಲ ಸದಸ್ಯರು ಸೇರಿ ಆಯ್ಕೆ ಮಾಡಿದರೆ ನಾನು ಆ ಹುದ್ದೆಯಲ್ಲಿ ಮುಂದುವರಿಯಲು ಸಿದ್ದ ಎಂದು ಅವರು ಹೇಳಿದರು.
ಆಡಳಿತ ಮಂಡಳಿಯ 16 ಸದಸ್ಯರೂ ಆಯ್ಕೆಯಾದ ನಂತರ ಒಮ್ಮತದಿಂದ ಅಧ್ಯಕ್ಷರ ಆಯ್ಕೆ ನಡೆಯಲಿದೆ. ಬ್ಯಾಂಕಿನ ವ್ಯವಹಾರದಲ್ಲಿ ಅನುಭವ ಇರುವವರನ್ನು ನೋಡಿ ಆಯ್ಕೆ ಮಾಡುತ್ತಾರೆ ಎನ್ನುವ ವಿಶ್ವಾಸ ನನಗಿದೆ ಎಂದೂ ಅವರು ಹೇಳಿದರು.
ಡಿಸಿಸಿ ಬ್ಯಾಂಕ್: ಅವಿರೋಧ ಆಯ್ಕೆಯಾದವರ ವಿವರ
ಡಿಸಿಸಿ ಬ್ಯಾಂಕ್: 3 ಸ್ಥಾನಗಳಿಗೆ ಚುನಾವಣೆ ಘೋಷಣೆ
ಬೆಳಗಾವಿ ಡಿಸಿಸಿ ಬ್ಯಾಂಕ್ ಎಲೆಕ್ಷನ್ ಗೆ ಕಾಂಗ್ರೆಸ್ ಎಂಟ್ರಿ: ಬಿಗ್ ಟ್ವಿಸ್ಟ್ -Exclusive
ಡಿಸಿಸಿ ಬ್ಯಾಂಕ್: ಎಲ್ಲ ಕ್ಷೇತ್ರಗಳಿಗೆ ಅವಿರೋಧ ಆಯ್ಕೆ ಮಾಡುತ್ತೇವೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ