
ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ತಕ್ಷಣ ಹಣ ಬಿಡುಗಡೆ

ಪ್ರವಾಹ ಮತ್ತು ಮಳೆಯಿಂದ ಸಂಪೂರ್ಣ ಮನೆ ಕುಸಿದಿದ್ದರೆ ಮನೆ ನಿರ್ಮಾಣಕ್ಕೆ ಸರ್ಕಾರ ಐದು ಲಕ್ಷ ರೂಪಾಯಿ ಪರಿಹಾರ ನೀಡಲಿದೆ.
ಅದೇ ರೀತಿ ಮನೆ ನಿರ್ಮಾಣ ಮಾಡುವವರೆಗೆ ಹತ್ತು ತಿಂಗಳು ಕಾಲ ಪ್ರತಿ ತಿಂಗಳು ಐದು ಸಾವಿರ ಬಾಡಿಗೆ ಅಥವಾ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ತಕ್ಷಣ ಐವತ್ತು ಸಾವಿರ ನೀಡಲಾಗುವುದು ಎಂದು ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ತಿಳಿಸಿದರು.
ಚಿಕ್ಕೋಡಿ ತಾಲ್ಲೂಕಿನ ಅಂಕಲಿ ಗ್ರಾಮದಲ್ಲಿ ಅರಂಭಿಸಲಾಗಿರುವ ಪರಿಹಾರ ಕೇಂದ್ರಕ್ಕೆ ಭಾನುವಾರ (ಆ.18) ಭೇಟಿ ನೀಡಿದ ಸಂದರ್ಭದಲ್ಲಿ ಸಂತ್ರಸ್ತರಿಗೆ ಈ ವಿಷಯ ತಿಳಿಸಿದರು.
ಬಾಡಿಗೆ ಮನೆಯಲ್ಲಿದ್ದವರಿಗೂ ಕೂಡ ತಕ್ಷಣವೇ ಐವತ್ತು ಸಾವಿರ ರೂಪಾಯಿ ನೀಡಲಾಗುವುದು. ಸಂತ್ರಸ್ತರು ಜಮೀನು ಹೊಂದಿದ್ದರೆ ಮನೆ ನಿರ್ಮಾಣಕ್ಕೆ ಹಣ ನೀಡಲಾಗುವುದು. ಜಮೀನು ಇಲ್ಲದವರಿಗೆ ಸರ್ಕಾರದಿಂದಲೇ ಮನೆ ಒದಗಿಸಲು ಕ್ರಮ ಕೈಗೊಳ್ಳಲಾಗುತ್ತದೆ ಎಂದರು.
ಬಾಡಿಗೆ ಮನೆಯಲ್ಲಿದ್ದರೆ ತಾತ್ಕಾಲಿಕ ಶೆಡ್ ನಿರ್ಮಾಣಕ್ಕೆ ಐವತ್ತು ಸಾವಿರ ನೀಡಲು ಜಿಲ್ಲಾಧಿಕಾರಿಗಳಿಗೆ ಸೂಚನೆಯನ್ನು ನೀಡಿದರು.
ಎತ್ತರದ ಸೇತುವೆ ನಿರ್ಮಾಣಕ್ಕೆ ಮನವಿ:

ಪ್ರವಾಹ ಸಂದರ್ಭದಲ್ಲಿ ರಾಯಬಾಗ, ಚಿಕ್ಕೋಡಿ ಹಾಗೂ ಮಹಾರಾಷ್ಟ್ರದ ಸಂಪರ್ಕ ಕಡಿತಗೊಳ್ಳುವುದರಿಂದ ಜನ-ಜಾನುವಾರುಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಅನುಕೂಲ ಆಗುವಂತೆ ಫ್ಲೈ ಓವರ್ ಮಾದರಿಯಲ್ಲಿ ಎತ್ತರದ ಸೇತುವೆ ನಿರ್ಮಾಣ ಅಗತ್ಯವಿದ್ದು, ಕೂಡಲೇ ಈ ಬಗ್ಗೆ ಕ್ರಮಕೈಗೊಳ್ಳಬೇಕು ಎಂದು ರಾಜ್ಯಸಭಾ ಸದಸ್ಯ ಡಾ.ಪ್ರಭಾಕರ್ ಕೋರೆ ಮನವಿ ಮಾಡಿಕೊಂಡರು.
ಅಂಕಲಿ ಸೇರಿದಂತೆ ಸುತ್ತಮುತ್ತಲ ಗ್ರಾಮಗಳಲ್ಲಿ ಎದುರಾಗುವ ಪ್ರವಾಹ ಪರಿಸ್ಥಿತಿ ಬಗ್ಗೆ ವಿವರಣೆ ನೀಡಿದರು.
ಪ್ರತಿವರ್ಷ ಮಳೆ ಹೆಚ್ಚಾದರೆ ಕೃಷ್ಣಾ ನದಿ ತೀರದ ಗ್ರಾಮಗಳಲ್ಲಿ ಪ್ರವಾಹ ಪರಿಸ್ಥಿತಿ ಎದುರಾಗುತ್ತಿದೆ. ಮುಳುಗಡೆಯಾಗುವ ಗ್ರಾಮಗಳಿಗೆ ರಸ್ತೆ ಸಂಪರ್ಕ ಸುಲಭವಾಗುವಂತೆ ಸೇತುವೆಗಳ ಎತ್ತರ ಹೆಚ್ಚಿಸಬೇಕು ಎಂದು ಪ್ರಭಾಕರ್ ಕೋರೆ ತಿಳಿಸಿದರು.
ಜುಗೂಳ, ಮಂಗಾವತಿ ಸೇರಿದಂತೆ ಮೂರು ಗ್ರಾಮಗಳ ಸ್ಥಳಾಂತರ ಅತ್ಯಗತ್ಯವಾಗಿದೆ ಎಂದು ಕೋರೆ ಪ್ರತಿಪಾದಿಸಿದರು.
3.5 ಲಕ್ಷ ಕ್ಯೂಸೆಕ್ ನೀರು ಬಂದರೆ ಈಗಿರುವ ಸೇತುವೆಗಳು ಮುಳುಗಡೆಯಾಗುತ್ತವೆ ಎಂದು ಹಿಡಕಲ್ ಜಲಾಶಯದ ಅಧೀಕ್ಷಕ ಅಭಿಯಂತರರಾದ ಸಿ.ಡಿ.ಪಾಟೀಲ ವಿವರಿಸಿದರು.

ಪರಿಹಾರ ಕೇಂದ್ರಗಳಲ್ಲಿ ಆಶ್ರಯ ಪಡೆದಿರುವ ಸಂತ್ರಸ್ತರಿಗೆ ನೀಡಲಾಗುತ್ತಿರುವ ಊಟ, ಉಪಹಾರ, ಔಷಧಿ ಮತ್ತಿತರ ಸೌಲಭ್ಯದ ಬಗ್ಗೆ ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ್ ಭಾಸ್ಕರ್ ಮಾಹಿತಿ ಪಡೆದುಕೊಂಡರು.
ಮಕ್ಕಳಿಗೆ ಪಠ್ಯಪುಸ್ತಕ ಹಾಗೂ ಸಮವಸ್ತ್ರಗಳನ್ನು ಕೂಡ ನೀಡಲಾಗುವುದು ಎಂದು ತಿಳಿಸಿದರು.
ಪರಿಹಾರ ಕೇಂದ್ರದಲ್ಲಿ ಎಷ್ಟು ಜನರಿಗೆ ವೈದ್ಯಕೀಯ ತಪಾಸಣೆ ಮಾಡಲಾಗಿದೆ. ಯಾವ ರೀತಿಯ ಔಷಧಿ ವಿತರಣೆ, ಗರ್ಭಿಣಿಯರು ಎಷ್ಟು ಜನರಿದ್ದಾರೆ. ಅವರಿಗೆ ಯಾವ ರೀತಿಯ ಸೌಲಭ್ಯಗಳನ್ನು ನೀಡಲಾಗಿದೆ ಎಂಬುದರ ಬಗ್ಗೆ ವೈದ್ಯಾಧಿಕಾರಿಗಳಿಂದ ತಿಳಿದುಕೊಂಡರು.
ಅಗತ್ಯವಿರುವ ಔಷಧಿಗಳನ್ನು ತಕ್ಷಣ ಪೂರೈಸಲು ಈಗಾಗಲೇ ಸುತ್ತೋಲೆ ಹೊರಡಿಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್ ವಿವರಿಸಿದರು.
ರಕ್ಷಣೆ, ಸ್ಥಳಾಂತರ ಹಾಗೂ ಪರಿಹಾರ ಕೇಂದ್ರಗಳ ಮೂಲಕ ಉತ್ತಮ ಊಟೋಪಹಾರ ಜಿಲ್ಲಾಡಳಿತದ ಕಾರ್ಯ ಶ್ಲಾಘನೀಯವಾಗಿದೆ ಎಂದು ಕೋರೆ ಹೇಳಿದರು.
ಚಿಕ್ಕೋಡಿ-ಸದಲಗಾ ಶಾಸಕರಾದ ಗಣೇಶ ಹುಕ್ಕೇರಿ, ವಿಧಾನಪರಿಷತ್ ಸದಸ್ಯರಾದ ಮಹಾಂತೇಶ್ ಕವಟಗಿಮಠ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ರಾಕೇಶ್ ಸಿಂಗ್, ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ರಾಜೇಂದ್ರ ಕೆ.ವಿ. ಚಿಕ್ಕೋಡಿ ಉಪ ವಿಭಾಗಾಧಿಕಾರಿ ರವೀಂದ್ರ ಕರಲಿಂಗಣ್ಣವರ, ತಹಶೀಲ್ದಾರ ಸಂತೋಷ ಬಿರಾದಾರ ಮತ್ತಿತರರು ಉಪಸ್ಥಿತರಿದ್ದರು.
ಶಾಶ್ವತ ಒಪ್ಪಂದ ಅಗತ್ಯ: ಕವಟಗಿಮಠ ಪ್ರತಿಪಾದನೆ

ಸುಮಾರು ಆರು ಸಾವಿರ ಜನಸಂಖ್ಯೆಯನ್ನು ಹೊಂದಿರುವ ಚಿಕ್ಕೋಡಿ ತಾಲ್ಲೂಕಿನ ಯಡೂರ ಗ್ರಾಮ ಸಂಪೂರ್ಣ ಮುಳುಗಡೆಯಿಂದ ಉಂಟಾಗಿರುವ ಹಾನಿಯನ್ನು ಪರಿಶೀಲಿಸಿದ ವಿಜಯ್ ಭಾಸ್ಕರ್ ಅವರು, ಶಾಶ್ವತ ಪರಿಹಾರ ಕ್ರಮಗಳ ಕುರಿತು ಜನಪ್ರತಿನಿಧಿಗಳು ಹಾಗೂ ಸಂತ್ರಸ್ತರಿಂದ ಮಾಹಿತಿಯನ್ನು ಪಡೆದುಕೊಂಡರು.
ಈ ಸಂದರ್ಭದಲ್ಲಿ ಮಾತನಾಡಿದ ವಿಧಾನಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠ ಅವರು,
ಮಳೆಗಾಲದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಜಲಾಶಯಗಳಲ್ಲಿ ಒಳಹರಿವು ಮತ್ತು ಹೊರಹರಿವು ಪ್ರಮಾಣವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿದರೆ ಮಾತ್ರ ಸಮಸ್ಯೆಗೆ ಪರಿಹಾರ ಸಾಧ್ಯ ಎಂದು ತಿಳಿಸಿದರು.
ಸಂಪೂರ್ಣ ಮುಳುಗಡೆಯಾಗುವ ಯಡೂರ ಗ್ರಾಮದ ಜನರಿಗೆ ತುರ್ತು ಸಂದರ್ಭದಲ್ಲಿ ಬಳಕೆಗೆ ಬೋಟ್ ಒದಗಿಸಬೇಕು. ತುರ್ತು ಸಂದರ್ಭದಲ್ಲಿ ಜನರನ್ನು ರಕ್ಷಿಸುವ ಜನರಿಗೆ ಗೌರವ ಸಂಭಾವನೆ ನೀಡಲು ಅವರು ಸಲಹೆ ನೀಡಿದರು.

ಇದಾದ ಬಳಿಕ ಶಿರಗುಪ್ಪಿ ರಸ್ತೆಯ ಬದಿಯಲ್ಲಿ ಪ್ರವಾಹದಿಂದ ಹಾನಿಗೊಳಗಾಗಿರುವ ಬೆಳೆ, ಸೇತುವೆಗಳು ಮತ್ತು ರಸ್ತೆಗಳನ್ನು ಪರಿಶೀಲಿಸಿದರು.
ಅಥಣಿ ತಾಲ್ಲೂಕಿನ ಶಿರಗುಪ್ಪಿ ಗ್ರಾಮದ ವಿದ್ಯಾನಂದ ಕನ್ನಡ ಮಾಧ್ಯಮ ಶಾಲೆಯಲ್ಲಿ ಆರಂಭಿಸಲಾಗಿರುವ ಪರಿಹಾರ ಕೇಂದ್ರಕ್ಕೆ ಭೇಟಿ ನೀಡಿದರು.
ಜುಗೂಳ, ಶಹಾಪುರ, ಮಂಗಾವತಿ ಗ್ರಾಮಗಳ ಸಂತ್ರಸ್ತರನ್ನು ಭೇಟಿ ಮಾಡಿ ಸಮಸ್ಯೆಗಳನ್ನು ಆಲಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ