ರಾಷ್ಟ್ರೀಯ ವಿಪತ್ತು ಎಂದು ಕೂಡಲೇ ಘೋಷಿಸಿ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಇತಿಹಾಸದ್ಲಲೇ ಮೊದಲಬಾರಿ ಇಷ್ಟೊಂದು ದೊಡ್ಡ ಪ್ರಮಾಣದ ಪ್ರವಾಹ ಬಂದಿದ್ದು, ಕೂಡಲೇ ಇದನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಣೆ ಮಾಡಬೇಕು ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ ಒತ್ತಾಯಿಸಿದ್ದಾರೆ.
ಇಲ್ಲಿಯ ಮೋದಗಾದಲ್ಲಿ ಪ್ರವಾಹ ಸಂತ್ರಸ್ತರ ಅಹವಾಲು ಆಲಿಸಿದ ನಂತರ ಮತನಾಡಿದ ಅವರು, ಜನರ ಸಂಕಷ್ಟ ಪರಿಹರಿಸಲು ಎಲ್ಲರೂ ಒಗ್ಗಟ್ಟಿನಿಂದ ಸರಕಾರಕ್ಕೆ ಬೇಂಬಲ ನೀಡುತ್ತೇವೆ. 40 ಸಾವಿರ ಕೋಟಿ ರೂ ಗಿಂತ ಹೆಚ್ಚು ಹಾನಿಯಾಗಿದೆ ಎಂದು ಈಗಾಗಲೆ ಮುಖ್ಯಮಂತ್ರಿ ಹೇಳಿಕೆ ನೀಡಿದ್ದಾರೆ. ಮುಖ್ಯಮಂತ್ರಿಗಳು ಕೂಡಲೇ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲು ಕೇಂದ್ರಕ್ಕೆ ಒತ್ತಾಯಿಸಬೇಕು. ಪರಿಹಾರ ನಿಯಮಾವಳಿ ಬದಲಾಯಿಸಬೇಕು ಎಂದು ಆಗ್ರಹಿಸಿದರು.
ಪ್ರವಾಹ ಪರಿಹಾರ ನಿಯಮಾವಳಿಯಲ್ಲಿ ಬದಲಾವಣೆ ಮಾಡಬೇಕು. ಈವರೆಗೆ ಕೇಂದ್ರ ಮತ್ತು ರಾಜ್ಯದಲ್ಲಿ ಬೇರೆ ಬೇರೆ ಪಕ್ಷಗಳಿದ್ದುದರಿಂದ ಅದು ಆಗಿರಲಿಲ್ಲ. ತಕ್ಷಣ ಸಂತ್ರಸ್ತರಿಗೆ ತಲಾ 10 ಸಾವಿರ ರೂ. ನೀಡಬೇಕು. ಸಾವಿರಾರು ಮನೆಗಳು ಬಿದ್ದಿವೆ. ಜಮೀನು ಕೊಚ್ಚಿಹೋಗಿದೆ. ನೂರಾರು ಜನ ಸತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರಕಾರ ಪರಿಹಾರಕ್ಕೆ ಹೆಚ್ಚಿನ ಒತ್ತು ನೀಡಬೇಕು. ನಷ್ಟ ತುಂಬುವ ಕೆಲಸ ಮಾಡಬೇಕು ಎಂದು ಶಿವಕುಮಾರ ಆಗ್ರಹಿಸಿದರು.
ಮನೆ ಕಟ್ಟಲು ವಿಶೇಷ ಪ್ಯಾಕೇಜ್ ಘೋಷಿಸಬೇಕು. ಬೆಂಗಳೂರಿಗೆ ಹೋಗಿ ಸಭೆ ನಡೆಸಿ ಎಲ್ಲ ಶಾಸಕರ ನಿಧಿಯಿಂದ ಎಲ್ಲರೂ ಸೇರಿ ಪರಿಹಾರ ನಿಧಿಗೆ ಘೋಷಿಸುತ್ತೇವೆ. ನಾನು ಶಾಸಕರ ನಿಧಿಯಿಂದ 50 ಲಕ್ಷ ರೂ. ಬಿಡುಗಡೆ ಮಾಡುತ್ತೇನೆ. ಜೊತೆಗೆ ವಯಕ್ತಿಕವಾಗಿಯೂ ಆರ್ಥಿಕ ಸಹಾಯ ನೀಡುತ್ತೇನೆ ಎಂದು ಅವರು ತಿಳಿಸಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್, ವಿನಯ ನಾವಲಗಟ್ಟಿ, ಪ್ರಕಾಶ ರಾಠೋಡ ಮೊದಲಾದವರು ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ