Karnataka NewsLatest

ರಾಷ್ಟ್ರೀಯ ಶಿಕ್ಷಣ ನೀತಿ 2020 ರ ಅನುಷ್ಠಾನ ಸಮ್ಮೇಳನ ಏ.30 ಹಾಗೂ ಮೇ 1 ರಂದು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಭಾರತೀಯ ಶಿಕ್ಷಣ ಮಂಡಲ, ಕರ್ನಾಟಕ (ಉತ್ತರ) ಮತ್ತು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯ  ಸಹಯೋಗದಲ್ಲಿ ವಿಟಿಯು ನ ಡಾ. ಎ. ಪಿ.ಜೆ ಅಬ್ದುಲ್ ಕಲಾಂ ಸಭಾಂಗಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ-2020ರ (ಎನ್ಇಪಿ) ಕುರಿತು ಏಪ್ರಿಲ್ 30 ಹಾಗೂ ಮೇ 01 ರಂದು  ರಾಷ್ಟ್ರೀಯ ಸಮ್ಮೇಳನ ಏರ್ಪಡಿಸಲಾಗಿದೆ ಎಂದು ನೃಪತುಂಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶ್ರೀನಿವಾಸ ಬಳ್ಳಿ ತಿಳಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವ ವಿದ್ಯಾಲಯದ  ಸಭಾಂಗಣದಲ್ಲಿ ಸೋಮವಾರ (ಏ.11) ನಡೆದ ರಾಷ್ಟ್ರೀಯ ಶಿಕ್ಷಣ ನೀತಿ 2020ರ ಅನುಷ್ಠಾನ ರಾಷ್ಟ್ರೀಯ ಸಮ್ಮೇಳನ ಏ.30 ರಂದು ಏರ್ಪಡಿಸಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಅವರು ತಿಳಿಸಿದರು.
ಮೇ 1 ರಂದು ನಡೆಯಲಿರುವ ರಾಷ್ಟೀಯ ಸಮ್ಮೇಳನ ಕಾರ್ಯಕ್ರಮ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಲಿದ್ದಾರೆ. ಮುಖ್ಯ ಅಥಿತಿಗಳಾಗಿ ಉನ್ನತ ಶಿಕ್ಷಣ, ಐಟಿಬಿಟಿ ಮತ್ತು ಕೌಶಲ್ಯ ಖಾತೆ ಸಚಿವರಾದ ಡಾ. ಅಶ್ವತ್ ನಾರಾಯಣ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.
ಪ್ರಾಥಮಿಕ ಶಿಕ್ಷಣ ಸಚಿವರಾದ ಬಿ.ಸಿ ನಾಗರಾಜ ಹಾಗೂ ರಾಷ್ಟೀಯ ಸ್ವಯಂ ಸೇವಕ ಸಂಘದ ಸಹ ಕಾರ್ಯನಿರ್ವಾಹಕರಾದ ಡಾ. ಮನೋಹರ ವೈದ್ಯ ಅವರು ಪ್ರತಿನಿಧಿಗಳನ್ನು ಉದ್ದೇಶಿಸಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ ಎಂದು ಹೇಳಿದರು.
ಭಾರತೀಯ ಶಿಕ್ಷಣ ಮಂಡಲದ ರಾಷ್ಟೀಯ ಅಧ್ಯಾಪಕರಾದ ಪ್ರೊ. ಸಚ್ಚಿದಾನಂದ ಜೋಶಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದಾರೆ. ಭಾರತೀಯ ಶಿಕ್ಷಣ ಮಂಡಲದ ರಾಷ್ಟೀಯ ಪ್ರಧಾನ ಕಾರ್ಯದರ್ಶಿಗಳಾದ ಉಮಾಶಂಕರ ಪಚೌರಿ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿಗಳಾದ ಮುಕುಲ ಕಾನಿಟಕರ ಮತ್ತು ಸಹ ಸಂಘಟನಾ ಕಾರ್ಯದರ್ಶಿಗಳಾದ ಶಂಕರಾನಂದ ಅವರು ಮಾರ್ಗದರ್ಶನ ಮಾಡಲಿದ್ದಾರೆ ಎಂದು ತಿಳಿಸಿದರು.
ಮೇ 1 ರಂದು ನಡೆಯಲಿರುವ ಶಿಕ್ಷಣ ತಜ್ಞರ ದುಂಡುಮೇಜಿನ ಸಭೆಯಲ್ಲಿ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಉಪಾಧ್ಯಕ್ಷರಾದ ಡಾ. ತಿಮ್ಮೇಗೌಡ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರಾದ ಪ್ರೊ. ಗೋಪಾಲಕೃಷ್ಣ ಜೋಶಿ ಅವರು ಭಾಗಹಿಸಲಿದ್ದಾರೆ ಎಂದು ತಿಳಿಸಿದರು.
45 ರಾಜ್ಯಗಳಿಂದ 400ಕ್ಕಿಂತ ಅಧಿಕ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ವಿವಿಧ ಕೇಂದ್ರೀಯ ಮತ್ತು ರಾಜ್ಯ ವಿಶ್ವವಿದ್ಯಾಲಯಗಳ 30 ಕ್ಕಿಂತ ಹೆಚ್ಚು ಕುಲಪತಿಗಳು, ಕುಲಸಚಿವರು, ನಿವೃತ್ತ ಕುಲಪತಿಗಳು, ಶಿಕ್ಷಣ ತಜ್ಞರ, ಶಿಕ್ಷಣ ಸಂಸ್ಥಾ ಸಂಚಾಲಕರು ಮತ್ತು ಪ್ರಾಧ್ಯಾಪಕರು ವಿವಿಧ ಚರ್ಚೆಗಳಲ್ಲಿ ಭಾಗವಹಿಸುವರು.
ಭಾರತೀಯ ಶಿಕ್ಷಣ ಮಂಡಲದ ಕಾರ್ಯ ಚಟುವಟಿಕೆಗಳ ವಾರ್ಷಿಕ ವರದಿಯನ್ನು ವಿಶ್ಲೇಷಣೆ ಮಾಡಲಾಗುವದು. ಶಿಕ್ಷಣ ತಜ್ಞರ ವಿಷಯ ವಿಶ್ಲೇಷಣೆ ಮಾಡಿ ಹೊಸ ಹೊಸ ಪ್ರಯೋಗಗಳು, ಅನುಭವ ಮತ್ತು ಸಲಹೆಗಳನ್ನು ನೀಡಲಿದ್ದಾರೆ.
ದೇಶದ ಪ್ರತಿಯೊಂದು ಪ್ರಾಂತದ ಎನ್ಇಪಿ ಅನುಷ್ಠಾನ ಕುರಿತು ಚಿಂತನ ಮಂತನ ನಡೆಯಲಿದೆ. ರಾಷ್ಟೀಯ ಶಿಕ್ಷಣ ನೀತಿ ಮತ್ತು ರಾಷ್ಟೀಯ ಶಿಕ್ಷಣ ಕುರಿತ ಲೇಖನಗಳ ಸ್ಮರಣ ಸಂಚಿಕೆ “ಸಮಷ್ಟಿ” ಬಿಡುಗಡೆ ಮಾಡಲಾಗುವುದು.
ವಿವಿಧ ಚಟುವಟಿಕೆಗಳು ನಡೆಯಲಿವೆ:
ದೇಶದಾದ್ಯಂತ ಬರುವ ಪ್ರತಿನಿಧಿಗಳಿಗೆ ವಿಟಿಯು ಆವರಣದಲ್ಲಿ ಊಟ, ವಸತಿ, ಉಪಹಾರ ವ್ಯವಸ್ಥೆ ಮಾಡಲಾಗುವುದು. ವಿವಿಧ ಗೋಷ್ಠಿಗಳು, ಪ್ರಾಣ ವಿದ್ಯಾ ಪರಿಚಯ, ಯೋಗಾಸನ, ಗುಂಪು ಚರ್ಚೆಗಳು ಹಾಗೂ ಸಂಕಿರಣಗೋಷ್ಠಿಗಳು ನಡೆಯಲಿವೆ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಕರಿಸಿದ್ದಪ್ಪ ಅವರು ತಿಳಿಸಿದರು.
ಕಲಿಯುವಿಕೆಯ ನಿರಂತರ ಮೌಲ್ಯಮಾಪನ, ಶ್ರೇಣೀಕರಣ ಕುರಿತು ರಚಿಸಿ, ಭವಿಷ್ಯದ ಯೋಜನೆಗಳನ್ನು ಮಾಡಲಾಗುವುದು. ಎನ್ಇಪಿ ಅನುಷ್ಠಾನಗೊಳಿಸುವಲ್ಲಿ ಕರ್ನಾಟಕ ರಾಜ್ಯವು ಮುಂಚೂಣಿಯಲ್ಲಿರುವ ಕಾರಣ ರಾಷ್ಟ್ರೀಯ ಸಮ್ಮೇಳನ ರಜತ ಮಹೋತ್ಸವ ವಿಟಿಯು ನಲ್ಲಿ ಏರ್ಪಡಿಸಲಾಗಿದೆ.
ಎನ್ಇಪಿ  ಅವಶ್ಯವಾಗಿರುವ ಅಧ್ಯಾಪಕರ ತರಬೇತಿ ಕುರಿತು ಯೋಚಿಸಲಾಗುವುದು. ದೇಶಾದ್ಯಂತ ಶಿಕ್ಷಕರು  ಎನ್ಇಪಿ ಅನುಷ್ಠಾನದಲ್ಲಿ  ತೊಡಗಿಕೊಳ್ಳಲು ಕ್ರಿಯಾತ್ಮಕ ಯೋಜನೆಗಳನ್ನು ಸೂಚಿಸಲಾಗುವುದು ಎಂದು ತಿಳಿಸಿದರು.
ಸೃಜನಾತ್ಮಕ ಕಲಿಕೆ, ಅನುಭವ ಕಲಿಕೆ, ಶಿಸ್ತು ಕಲಿಕೆ ಮತ್ತು ವಿದ್ಯಾರ್ಥಿ ಸ್ನೇಹ ಮಾರ್ಗದರ್ಶನ ಪತ್ರವನ್ನು ಶಿಕ್ಷಕರು ಸರಿಯಾಗಿ ನಿರ್ವಹಿಸಿ ವಿದ್ಯಾರ್ಥಿಗಳ ಸರ್ವಾಂಗೀಣ ವಿಕಾಸದಲ್ಲಿ ತೊಡಗಿಕೊಳ್ಳುವಂತೆ ಪ್ರಯತ್ನಿಸಲಾಗುವುದು.
ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ವಿಶ್ವವಿದ್ಯಾಲಯ, ಶಾಲಾ-ಕಾಲೇಜುಗಳಲ್ಲಿ ಪರಸ್ಪರ ಹೊಂದಾಣಿಕೆಯಿಂದ ಎನ್ಇಪಿ ನೀತಿಯನ್ನು ಅನುಷ್ಠಾನಗೊಳಿಸುವ ಬಗ್ಗೆ ಚರ್ಚಿಸಲಾಗುವುದು ಪ್ರೊ. ಕರಿಸಿದ್ದಪ್ಪ ತಿಳಿಸಿದರು.
ವಿಟಿಯು ಕುಲಸಚಿವ ಎ.ಎಸ್.ದೇಶಪಾಂಡೆ, ಕರ್ನಾಟಕ (ಉತ್ತರ) ಭಾರತೀಯ ಶಿಕ್ಷಣ ಮಂಡಲ ಅಧ್ಯಕ್ಷರಾದ ಡಾ. ಸತೀಶ ಜಿಗಜಿನ್ನಿ, ಕರ್ನಾಟಕ (ಉತ್ತರ) ಭಾರತೀಯ ಶಿಕ್ಷಣ ಮಂಡಲ ಕಾರ್ಯದರ್ಶಿ ಡಾ. ಗಿರೀಶ ತೆಗ್ಗಿನಮಠ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button