Latest

ಏಕಕಾಲಕ್ಕೆ ಎಲ್ಲಾ 5 ಗ್ಯಾರಂಟಿ ಯೋಜನೆಗಳ ಜಾರಿ : ಸರಕಾರ ಘೋಷಣೆ; ಇಲ್ಲಿದೆ ವಿವರ

ಈ ತಿಂಗಳ 11ರಿಂದ ಮಹಿಳೆಯರಿಗೆ ರಾಜ್ಯಾದ್ಯಂತ ಬಸ್ ಉಚಿತ; ಜುಲೈ 1ರಿಂದ 10 ಕಿಲೋ ಅಕ್ಕಿ, ಜುಲೈ 1ರಿಂದ ವಿದ್ಯುತ್ ಉಚಿತ, ಗೃಹಲಕ್ಷ್ಮೀಗೆ ತಕ್ಷಣ ಅರ್ಜಿ ಆಹ್ವಾನ

 

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ವಿವರ ನೀಡಿದೆ. ಎಲ್ಲಾ ಗ್ಯಾರಂಟಿ ಯೋಜನೆಗಳು ಇದೇ ವರ್ಷ ಜಾರಿಯಾಗಲಿದೆ ಎಂದು ಸರಕಾರ ತಿಳಿಸಿದೆ.

ಸಚಿವಸಂಪುಟ ಸಭೆಯ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಈ ಕುರಿತು ಮಾಹಿತಿ ನೀಡಿದ್ದಾರೆ.

ಗೃಹ ಜ್ಯೋತಿ ಅಡಿ ವಿದ್ಯುತ್ ಬಳಕೆಯ 12 ತಿಂಗಳ ಸರಾಸರಿ ಆಧಾರದ ಮೇಲೆ ಶೇ.10ರಷ್ಟು ಹೆಚ್ಚು ಸೇರಿಸಿ ಉಚಿತವಾಗಿ ನೀಡುತ್ತೇವೆ ಎಂದು ತಿಳಿಸಿದರು. ಜುಲೈ 1ರಿಂದ ಈ ಯೋಜನೆ ಜಾರಿಯಾಗಲಿದೆ.

ಶಕ್ತಿ ಯೋಜನೆಯಡಿ ರಾಜ್ಯದ ಒಳಗಡೆ ಎಸಿ ಮತ್ತು ಲಕ್ಸುರಿ ಹೊರತಾದ ಬಸ್ ಗಳಲ್ಲಿ ಎಲ್ಲಾ ಮಹಿಳೆಯರಿಗೆ ಉಚಿತ ಪ್ರಯಾಣದ ಅವಕಾಶ ನೀಡಲಾಗಿದೆ.  ಜೂನ್ 11ರಿಂದಲೇ ಇದು ಜಾರಿಯಾಗಲಿದ್ದು,  ನನ್ನ ಹೆಂಡತಿಗೂ ಬಸ್ ನಲ್ಲಿ ಉಚಿತ ಪ್ರಯಾಣವಿರಲಿದೆ ಎಂದು ಸಿದ್ದರಾಮಯ್ಯ ತಿಳಿಸಿದರು. ರಾಜ್ಯದ ಒಳಗಡೆ ಎಲ್ಲೇ ಹೋಗುವುದಾದರೂ ಕರ್ನಾಟಕದವರಿಗೆ ಉಚಿತವಾಗಿ ಪ್ರಯಾಣಿಸಬಹುದು. ಸ್ಲೀಪರ್ ಕೋಚ್ ನಲ್ಲಿ ಉಚಿತವಿಲ್ಲ. ಬಿಎಂಟಿಸಿ, ಕೆಎಸ್ ಆರ್ ಟಿಸಿ ಎಲ್ಲಾ ಬಸ್ ಗಳಿಗೂ ಅನ್ವಯ.

ಯುವನಿಧಿ ಅಡಿ  2022 – 23ರಲ್ಲಿ ಉತ್ತೀರ್ಣರಾಗುವ ಎಲ್ಲ ಪದವೀಧರರಿಗೆ/ ಡಿಪ್ಲೋಮಾ ಪಡೆದವರಿಗೆ ಮುಂದಿನ 24 ತಿಂಗಳು ಯುವನಿಧಿ ಅಡಿಯಲ್ಲಿ ಪ್ರತಿ ತಿಂಗಳ 3 ಸಾವಿರ/1500 ರೂ. ನೀಡಲಾಗುವುದು.

ಜುಲೈ 1ರಿಂದ ಪ್ರತಿಯೊಬ್ಬರಿಗೂ 10 ಕಿಲೋ ಅಕ್ಕಿ ನೀಡಲಾಗುತ್ತದೆ. ಎಪಿಎಲ್, ಬಿಪಿಎಲ್ ಕಾರ್ಡುದಾರರಿಗೂ ಅಕ್ಕಿ ಸಿಗಲಿದೆ.

ಗೃಹ ಲಕ್ಷ್ಮೀ ಯೋಜನೆಯಡಿ ಅರ್ಜಿ ಕರೆಯಲಾಗುತ್ತದೆ. ಮನೆಯವರೇ ಯಜಮಾನಿಯನ್ನು ಗುರುತಿಸಿ ಅರ್ಜಿ ಹಾಕಬೇಕಾಗುತ್ತದೆ ಎಂದು ಅವರು ವಿವರಿಸಿದರು. ಆಗಷ್ಟ್ 15ರಿಂದ ಈ ಯೋಜನೆ ಜಾರಿಯಾಗಲಿದೆ.

ನಾವು ನುಡಿದಂತೆ ನಡೆದವರು. ಹಿಂದೆಯೂ ಕೊಟ್ಟ ಎಲ್ಲ ಭರವಸೆ ಈಡೇರಿಸಿದ್ದೇವೆ. ಬಿಜೆಪಿಯವರು ಯಾವುದೇ ಭರಸೆ ಈಡೇರಿಸದೆ ಮಾತನಾಡುವ ಏನು ಹಕ್ಕಿದೆ ಎಂದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ ಪ್ರಶ್ನಿಸಿದರು.

*ಗ್ಯಾರಂಟಿ ಯೋಜನೆ ಕುರಿತ ಸಂಪುಟ ತೀರ್ಮಾನಗಳ ಬಗ್ಗೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ ಕೆ ಶಿವಕುಮಾರ್ ಜಂಟಿ ಮಾಧ್ಯಮಗೋಷ್ಟಿಯಲ್ಲಿ ಹೇಳಿದ್ದು:*
ಜನ ವಿಶ್ವಾಸ ಇಟ್ಟು ಅಧಿಕಾರ ಕೊಟ್ಟಿದ್ದಾರೆ.
ನಾವು ಬಸವಣ್ಣನ ನಾಡಿನವರು. ಕೊಟ್ಟ ಮಾತಿಗೆ ಬದ್ಧ.
5 ಗ್ಯಾರಂಟಿಗಳನ್ನು ನೀಡಲು ತೀರ್ಮಾನ ಮಾಡಿದ್ದೇವೆ.
*ಗೃಹಜ್ಯೋತಿ:*
200 ಯೂನಿಟ್ ಉಚಿತ ವಿದ್ಯುತ್.
12 ತಿಂಗಳ ಸರಾಸರಿ ಆಧರಿಸಿ, ಅದಕ್ಕೆ ಶೇಕಡಾ 10 ರಷ್ಟು ಸೇರಿಸಿ, ಅದಕ್ಕೆ ಸಂಪೂರ್ಣ ಶುಲ್ಕ ವಿನಾಯಿತಿ.
ಜುಲೈ ತಿಂಗಳ ವಿದ್ಯುತ್ ಬಳಕೆಗೆ ಆಗಸ್ಟ್ ನಿಂದ ಅನ್ವಯ. ಬಾಡಿಗೆದಾರರಿಗೂ ಅನ್ವಯ.
*ಗೃಹಲಕ್ಷ್ಮಿ:*
ಆಧಾರ್ ಕಾರ್ಡ್, ಅಕೌಂಟ್ ಡೀಟೇಲ್ಸ್, ಆನ್ಲೈನ್ ಆಫ್ ಲೈನ್ ಅರ್ಜಿ ಆಧರಿಸಿ ಆಗಸ್ಟ್ 15 ರಿಂದ ಜಾರಿ.
ಜೂನ್ 15 ರಿಂದ ಜುಲೈ 15 ರೊಳಗೆ ಡೀಟೇಲ್ಸ್ ಜತೆ ಅರ್ಜಿ ಸಲ್ಲಿಸಬೇಕು.
ಬಿಪಿಎಲ್ ಅಂಡ್ ಎಪಿಎಲ್ ಕಾರ್ಡ್ ದಾರರಿಗೆ ಸಿಗುತ್ತೆ. ಮನೆ ಯಜಮಾನಿಯನ್ನು ಕುಟುಂಬದವರೇ ತೀರ್ಮಾನ ಮಾಡಬೇಕು.
ಸಾಮಾಜಿಕ ಭದ್ರತೆ ಪಿಂಚಣಿದಾರರಿಗೂ 2000 ರೂ. ಕೊಡತೇವೆ.
*ಅನ್ನಭಾಗ್ಯ:*
ಜುಲೈ 1 ರಿಂದ ಎಲ್ಲ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡ್ ದಾರರಿಗೆ ತಲಾ10 ಕೆಜಿ ಆಹಾರಧಾನ್ಯ ಕೊಡತೇವೆ.
*ಶಕ್ತಿ:*
ವಿದ್ಯಾರ್ಥಿನಿಯರು ಸೇರಿದಂತೆ ಕರ್ನಾಟಕದ ಎಲ್ಲ ಮಹಿಳೆಯರಿಗೆ ಜೂನ್ 11 ರಿಂದ ಕರ್ನಾಟಕ ರಾಜ್ಯದೊಳಗೆ ಉಚಿತ ಪ್ರಯಾಣ ಅವಕಾಶ.
ಬಿಎಂಟಿಸಿ ಬಸ್ ಸೇವೆಯನ್ನು ಬಳಸಬಹುದು.
ಎಸಿ ಮತ್ತು ಲಕ್ಸುರಿ ಬಸ್ ಹೊರತುಪಡಿಸಿ ಸಾಮಾನ್ಯ ಬಸ್ ಗಳಿಗೆ ಮಾತ್ರ ಅನ್ವಯ.
ಕೆಎಸ್ ಆರ್ಟಿಸಿಯಲ್ಲಿ 50 % ಸೀಟು ಪುರುಷರಿಗೆ ಮೀಸಲು.
ಐರಾವತ, ರಾಜಹಂಸ ಸೇರಿ ಎಲ್ಲ ರೀತಿಯ ಲಕ್ಸ್ಯೂರಿ ಬಸ್, ಎಸಿ ಮತ್ತು ನಾನ್ ಎಸಿ ಸ್ಲೀಪರ್ ಬಸ್ ಗಳಿಗೆ ಇದು ಅನ್ವಯ ಆಗದು.
*ಯುವನಿಧಿ:*
2023 ರಲ್ಲಿ ಪದವಿ ಪಾಸ್ ಮಾಡಿದವರಿಗೆ 24 ತಿಂಗಳು ಪ್ರತಿ ತಿಂಗಳು 3000, ಡಿಪ್ಲೋಮದಾರರಿಗೆ 1500 ರು ಭತ್ಯೆ. ತೃತೀಯ ಲಿಂಗಿಗಳಿಗೂ ಅನ್ವಯ. 18 ವರ್ಷದಿಂದ 25 ವರ್ಷದವರಿಗೆ ಅನ್ವಯ.
ಅವರು ಅರ್ಜಿ ಹಾಕಬೇಕು. ಅರ್ಜಿ ಕೊಟ್ಟಾಗಿಂದ ಜಾರಿ. ಅರ್ಜಿ ಸಲ್ಲಿಸಲು 6 ತಿಂಗಳು ಕಾಲವಕಾಶ.
*ಖಚಿತವಾಗಿ ಜಾರಿಯಾದ ಉಚಿತಗಳು*
*ಬಡವರ-ಮಧ್ಯಮ ವರ್ಗದವರ ಕಲ್ಯಾಣಕ್ಕೆ ಕ್ರಾಂತಿಕಾರಕ ಮುನ್ನುಡಿ ಬರೆದ ಕಾಂಗ್ರೆಸ್ ಸರ್ಕಾರ*
*ಕಿಕ್ಕಿರಿದು ತುಂಬಿದ್ದ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಂದ ಚಾರಿತ್ರಿಕ ಘೋಷಣೆ*
*13 ಬಜೆಟ್ ಮಂಡಿಸಿದ ಸಿದ್ದರಾಮಯ್ಯ ಅವರಿಂದ ಸಿದ್ದಗೊಂಡ 5 ಗ್ಯಾರಂಟಿ ಸ್ಕೀಂಗಳ ಎದೆಗಾರಿಕೆಯ ನೀಲನಕ್ಷೆ*
ಬೆಂಗಳೂರು, ಜೂನ್‌ 2- ಕಾಂಗ್ರೆಸ್‌ ಪಕ್ಷವು ಪ್ರಣಾಳಿಕೆಯಲ್ಲಿ ಘೋಷಿಸಿದ ಎಲ್ಲ 5 ಗ್ಯಾರಂಟಿ ಯೋಜನೆಗಳನ್ನು ಸಹ ಪ್ರಸಕ್ತ ಆರ್ಥಿಕ ವರ್ಷದಲ್ಲಿಯೇ ಜಾರಿಗೊಳಿಸಲಾಗುವುದು ಎಂದು  ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚಾರಿತ್ರಿಕ ಘೋಷಣೆ ಮಾಡಿದರು.
ಅವರು ಇಂದು ಐದು ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ನಡೆದ ಸಚಿವ ಸಂಪುಟ ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಮತ್ತು ಅದಕ್ಕೂ ಮುಂಚಿತವಾಗಿ 5 ಗ್ಯಾರಂಟಿ ಯೋಜನೆಗಳನ್ನು ಘೋಷಿಸಿ, ನಾನು ಮತ್ತು ಪಕ್ಷದ ಅಧ್ಯಕ್ಷರು ರುಜು ಮಾಡಿದ ಗ್ಯಾರಂಟಿ ಕಾರ್ಡುಗಳನ್ನು ಕನ್ನಡ ನಾಡಿನ ಪ್ರತಿ ಮನೆಗೂ ತಲುಪಿಸಿದ್ದೆವು. ಅದರಂತೆಯೇ ಮೊದಲ ಸಚಿವ ಸಂಪುಟ ಸಭೆಯಲ್ಲಿಯೇ ಈ ಯೋಜನೆಗಳ ಅನುಷ್ಠಾನಕ್ಕೆ ತಾತ್ವಿಕ ಅನುಮೋದನೆ ನೀಡಿದ್ದಲ್ಲದೆ ಇಂದು ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಿ, ಯೋಜನೆಗಳ ಅನುಷ್ಠಾನ ಕುರಿತು ತೀರ್ಮಾನ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಯಾವುದೇ ಜಾತಿ-ಧರ್ಮ-ಲಿಂಗ-ಭಾಷೆಯ ಬೇಲಿ ಇಲ್ಲದೆ ಸಮಸ್ತ ಕನ್ನಡಿಗರಿಗೆ ಈ ಯೋಜನೆಗಳನ್ನು ರೂಪಿಸಲಾಗಿದೆ ಎಂದರು.
ಸರ್ಕಾರ ಘೋಷಿಸಿರುವ ಗೃಹಜ್ಯೋತಿ, ಗೃಹಲಕ್ಷ್ಮಿ, ಅನ್ನಭಾಗ್ಯ, ಶಕ್ತಿ ಹಾಗೂ ಯುವ ನಿಧಿ ಯೋಜನೆಗಳ ಅನುಷ್ಠಾನ ಕುರಿತು ಸಚಿವ ಸಂಪುಟ ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ವಿವರ ಹೀಗಿದೆ.
*ಗೃಹ ಜ್ಯೋತಿ*
ಪ್ರಣಾಳಿಕೆಯಲ್ಲಿ ಘೋಷಿಸಿದಂತೆ 200 ಯುನಿಟ್‌ ವರೆಗೆ ಉಚಿತ ವಿದ್ಯುತ್‌ ಒದಗಿಸಲು ಸಚಿವ ಸಂಪುಟ ತೀರ್ಮಾನಿಸಿತು. ಈ ಯೋಜನೆಯಡಿ ಬಳಕೆದಾರರ ಕಳೆದ 12 ತಿಂಗಳ ವಿದ್ಯುತ್‌ ಬಳಕೆಯ ಸರಾಸರಿಯ ಮೇಲಿನ ಶೇ. 10 ರಷ್ಟು ಉಚಿತ ವಿದ್ಯುತ್‌ ಒದಗಿಸಲಾಗುವುದು. ಜುಲೈ 1 ರಿಂದ ಬಳಕೆಯಾಗುವ ವಿದ್ಯುತ್‌ ಗೆ ಈ ಯೋಜನೆ ಅನ್ವಯವಾಗುತ್ತದೆ. ಅಲ್ಲಿಯ ವರೆಗಿನ ವಿದ್ಯುತ್‌ ಬಳಕೆಗೆ ಸಂಬಂಧಿಸಿದ ಬಿಲ್ಲನ್ನು ಬಳಕೆದಾರರು ಪಾವತಿಸಬೇಕು. ಆಗಸ್ಟ್ ತಿಂಗಳಿನಿಂದ ಈ ಯೋಜನೆಯ ಫಲಾನುಭವಿಗಳು ವಿದ್ಯುತ್ ಬಿಲ್ ಕಟ್ಟಬೇಕಿಲ್ಲ ಎಂದು ಸಿದ್ದರಾಮಯ್ಯ ಅವರು ಘೋಷಿಸಿದರು.
*ಗೃಹ ಲಕ್ಷ್ಮಿ*
ರಾಜ್ಯದಲ್ಲಿರುವ ಬಿಪಿಎಲ್‌ ಹಾಗೂ ಎಪಿಎಲ್‌ ಕುಟುಂಬಗಳ ಯಜಮಾನಿಯ ಖಾತೆಗೆ ಮಾಸಿಕ 2000 ರೂ. ಮೊತ್ತ ವರ್ಗಾವಣೆ ಮಾಡಲಾಗುವುದು. ಈ ಯೋಜನೆಯ ಸೌಲಭ್ಯ ಪಡೆಯಲು ಮಹಿಳೆಯರು ಅರ್ಜಿ ಸಲ್ಲಿಸಬೇಕು. ಇದರಲ್ಲಿ ಮನೆಯ ಯಜಮಾನಿ ಯಾರು ಎಂಬುದನ್ನು ಘೋಷಿಸಬೇಕು; ಬ್ಯಾಂಕ್‌ ಖಾತೆ ಸಂಖ್ಯೆ, ಆಧಾರ್‌ ಸಂಖ್ಯೆ ಮಾಹಿತಿ ಒದಗಿಸಬೇಕು. ಜೂನ್‌ 15 ರಿಂದ ಜುಲೈ 15  ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗುವುದು. ಜುಲೈ 15 ರಿಂದ ಆಗಸ್ಟ್‌ 15ರ ಅವಧಿಯಲ್ಲಿ ಅರ್ಜಿಗಳನ್ನು ಪರಿಶೀಲಿಸಿ, ಅಗತ್ಯ ತಂತ್ರಾಂಶಗಳನ್ನು ಅಭಿವೃದ್ಧಿ ಪಡಿಸಿ, ಆಗಸ್ಟ್‌ 15 ರಂದು ಸ್ವಾತಂತ್ರ್ಯ ದಿನಾಚರಣೆಯ ದಿನ ಈ ಯೋಜನೆಗೆ ಚಾಲನೆ ನೀಡಲಾಗುವುದು.
*ಅನ್ನ ಭಾಗ್ಯ*
ಹಿಂದಿನ ತಮ್ಮ ಸರ್ಕಾರದ ಅವಧಿಯಲ್ಲಿ ನೀಡಲಾಗುತ್ತಿದ್ದ 7 ಕೆಜಿ ಆಹಾರ ಧಾನ್ಯವನ್ನು ಬಿಜೆಪಿ ಸರ್ಕಾರವು 5 ಕೆಜಿಗೆ ಇಳಿಸಿದೆ. ಇದೀಗ ಆಹಾರಧಾನ್ಯದ ಪ್ರಮಾಣವನ್ನು 10 ಕೆಜಿಗೆ ಹೆಚ್ಚಿಸಲಾಗುವುದು. ಜೂನ್‌ ತಿಂಗಳ ಪಡಿತರ ವಿತರಣೆ ಪ್ರಕ್ರಿಯೆ ಪ್ರಾರಂಭವಾಗಿರುವುದರಿಂದ ಹಾಗೂ ಆಹಾರ ಧಾನ್ಯ ಖರೀದಿಸಬೇಕಾಗಿರುವುದರಿಂದ ಜುಲೈ 1 ರಿಂದ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು. ಅಂತ್ಯೋದಯ ಕಾರ್ಡುದಾರರು ಹಾಗೂ ಬಿಪಿಎಲ್‌ ಕಾರ್ಡುದಾರರಿಗೆ ಈ ಯೋಜನೆ ಸೌಲಭ್ಯ ದೊರೆಯಲಿದೆ.
*ಶಕ್ತಿ*
ವಿದ್ಯಾರ್ಥಿನಿಯರೂ ಸೇರಿದಂತೆ ಎಲ್ಲ ವರ್ಗಗಳ ಮಹಿಳೆಯರಿಗೆ ಎಸಿ ಹಾಗೂ ಲಕ್ಷುರಿ ಬಸ್‌ಗಳನ್ನು ಹೊರತುಪಡಿಸಿ ಇತರ ಎಲ್ಲ ಬಸ್‌ಗಳಲ್ಲಿ ರಾಜ್ಯದೊಳಗೆ ಉಚಿತ ಪ್ರಯಾಣ ಸೌಲಭ್ಯ ಒದಗಿಸಲಾಗುವುದು. ಜೂನ್‌ 11 ರಿಂದ ಈ ಯೋಜನೆಗೆ ಚಾಲನೆ ನೀಡಲಾಗುವುದು. ಈ ಯೋಜನೆಯು ಶೇ. 94 ರಷ್ಟು ಮಹಿಳಾ ಪ್ರಯಾಣಿಕರಿಗೆ ಅನುಕೂಲಕರವಾಗಲಿದೆ.
ಬಸ್‌ಗಳಲ್ಲಿ ಶೇ. 50 ರಷ್ಟು ಸೀಟುಗಳನ್ನು ಪುರುಷರಿಗೆ ಮೀಸಲಿರಿಸಲಾಗುವುದು.
*ಯುವನಿಧಿ*
2022-23ನೇ ಶೈಕ್ಷಣಿಕ ವರ್ಷದಲ್ಲಿ ವೃತ್ತಿಪರ ಕೋರ್ಸುಗಳೂ ಸೇರಿದಂತೆ ಎಲ್ಲ ವಿಧದ ಪದವೀಧರ ಯುವಕ-ಯುವತಿಯರು, ಡಿಪ್ಲೊಮಾ ಹೊಂದಿದವರಿಗೆ ಈ ಯೋಜನೆ ಅನ್ವಯಿಸುತ್ತದೆ. ಪದವಿ ಪಡೆದು 180 ದಿನಗಳಾದರೂ ಉದ್ಯೋಗ ದೊರೆಯದ ಪದವೀಧರರಿಗೆ 24 ತಿಂಗಳ ಅವಧಿಗೆ ಮಾಸಿಕ 3000 ರೂ. ಹಾಗೂ ಡಿಪ್ಲೊಮಾದಾರರಿಗೆ ಮಾಸಿಕ 1500 ರೂ. ನಿರುದ್ಯೋಗ ಭತ್ಯೆ ನೀಡಲಾಗುವುದು.
ಈ ಸೌಲಭ್ಯ ಪಡೆಯಲು ಅರ್ಜಿ ಸಲ್ಲಿಸಬೇಕಾಗಿದ್ದು, ಲಿಂಗತ್ವ ಅಲ್ಪಸಂಖ್ಯಾತರಿಗೂ ಈ ಸೌಲಭ್ಯ ಒದಗಿಸಲಾಗುವುದು.
*ದುಂದುವೆಚ್ಚ-ದುರುಪಯೋಗಕ್ಕೆ ಬ್ರೇಕ್*
ಬಡವರ ಮತ್ತು ಮಧ್ಯಮ ವರ್ಗದವರ ಅನುಕೂಲ ಮತ್ತು ಅಗತ್ಯಕ್ಕಾಗಿ ಜಾರಿ ಮಾಡಿರುವ ಮಹತ್ವದ ಐದು ಗ್ಯಾರಂಟಿ ಯೋಜನೆಗಳು ದುರುಪಯೋಗ ಮತ್ತು ದುಂದುವೆಚ್ಚ ಆಗದಂತೆ ಎಚ್ಚರಿಕೆ ವಹಿಸಲಾಗಿದೆ.
*ನನ್ನ ಹೆಂಡ್ತಿಗೂ ಫ್ರೀ*
ಬಸ್ ಪ್ರಯಾಣ “ನನ್ನ ಹೆಂಡ್ತಿಗೂ ಫ್ರೀ”. ಹೀಗೆ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಾಸ್ಯ ಚಟಾಕಿ ಹಾರಿಸಿದರು.
ಕಿಕ್ಕಿರುದು ತುಂಬಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರು ರಾಶಿ ರಾಶಿ ಪ್ರಶ್ನೆಗಳನ್ನು ಮುಂದಿಟ್ಟರು. ಎಲ್ಲಾ ಪ್ರಶ್ನೆಗಳಿಗೂ ಲೀಲಾಜಾಲವಾಗಿ, ಹಾಸ್ಯದ ಶೈಲಿಯಲ್ಲಿ ಮುಖ್ಯಮಂತ್ರಿಗಳು ಉತ್ತರಿಸಿದರು.  ಪತ್ರಕರ್ತರಿಗೆ ಅರ್ಥ ಆಗುವಂತೆ ತಮ್ಮ ಮಾತುಗಳನ್ನು ಪುನರಾವರ್ತನೆ ಮಾಡಿದರು.
*ರಾಜಹಂಸನೂ ಫ್ರೀ ಕೊಟ್ಟುಬಿಡ್ರಿ*
ಉಚಿತ ಬಸ್ ಪ್ರಯಾಣದ ವಿವರ ನೀಡುತ್ತಿದ್ದ ಮುಖ್ಯಮಂತ್ರಿಗಳು ಬಾಯಿತಪ್ಪಿ ” ರಾಜಹಂಸ ಬಸ್ ಗಳಲ್ಲೂ ಉಚಿತವಾಗಿ ಪ್ರಯಾಣಿಸಬಹುದು” ಅಂದು ಬಿಟ್ಟರು. ಗಾಭರಿ ಬಿದ್ದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಅವರು “ರಾಜಹಂಸ ಉಚಿತ ಅಲ್ಲ” ಎಂದು ನೆನಪಿಸಿದರು. ಈ ವೇಳೆ ಮುಖ್ಯಮಂತ್ರಿಗಳು, “ರಾಜಹಂಸದಲ್ಲೂ ಉಚಿತವಾಗಿ ಓಡಾಡಲಿ ಬಿಡ್ರಿ” ಎಂದರು. ಇದಕ್ಕೆ ಉತ್ತರಿಸಿದ ಸಚಿವರು, “ಎಲ್ಲರೂ ರಾಜಹಂಸಕ್ಕೆ ನುಗ್ತಾರೆ. ಉಳಿದ ಬಸ್ ಗಳನ್ನು ಹತ್ತುವುದಿಲ್ಲ” ಎಂದರು.
*ಶೇ 94 ರಷ್ಟು ಉಚಿತ*
ಐಷಾರಾಮಿ ಮತ್ತು ಎಸಿ ಹಾಗೂ ಸ್ಲೀಪಿಂಗ್ ಬಸ್ ಗಳನ್ನು ಹೊರತುಪಡಿಸಿ ಉಳಿದೆಲ್ಲಾ ಬಸ್ ಗಳಲ್ಲೂ ಮಹಿಳೆಯರು ಉಚಿತವಾಗಿ ಓಡಾಡಲು ಅವಕಾಶ ಕೊಟ್ಟಿರುವುದರಿಂದ ಶೇ 94 ರಷ್ಟು ಬಸ್ ಗಳಲ್ಲಿ ಉಚಿತ ಅನುಕೂಲ ಒದಗಿಸಿದಂತಾಗಿದೆ.
*ತೃತೀಯ ಲಿಂಗಿಗಳಿಗೂ ಉಚಿತ:  ಪ್ರಥಮ*
ಉಚಿತ ಬಸ್ ಪ್ರಯಣದ ಸವಲತ್ತನ್ನು ತೃತೀತ ಲಿಂಗಿಗಳಿಗೂ ಒದಗಿಸಲಾಗಿದೆ.
ಈಗಾಗಲೇ ಸಾಮಾಜಿಕ ಭದ್ರತೆ ಯೋಜನೆಯ ಅಡಿಯಲ್ಲಿ ಪಿಂಚಣಿ ಅಥವಾ ಮಾಸಾಶನ ಪಡೆಯುತ್ತಿರುವ ಮಹಿಳೆಯರಿಗೂ ಗೃಹ ಲಕ್ಷ್ಮಿ ಯೋಜನೆಯು ಅನ್ವಯವಾಗುತ್ತದೆ. ಮಾಸಾಶನದ ಜತೆಗೆ ಗೃಹಲಕ್ಷ್ಮಿ ಯೋಜನೆಯ 2 ಸಾವಿರ ರೂಪಾಯಿ ಕೂಡ ಇವರ ಖಾತೆಗೆ ಜಮಾ ಆಗಲಿವೆ.
https://pragati.taskdun.com/implementation-of-all-5-guarantee-schemes-siddaramaiahs-announcement/

https://pragati.taskdun.com/belgaum-constable-and-three-arrested-for-deceiving-to-exchange-notes-of-2000-rs/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button