ಸಾಹಿತ್ಯ ಸಮ್ಮೇಳನಕ್ಕೆ ಸಮ್ಮೇಳನಾಧ್ಯಕ್ಷರಿಗೆ ಆಹ್ವಾನ
ಬೆಳಗಾವಿ – ಜನೇವರಿ ೩೦, ೩೧ ರಂದು ಕಾಗವಾಡದಲ್ಲಿ ಜರುಗಲಿರುವ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ವಾಧ್ಯಕ್ಷರಾಗಿ ನೇಮಕ ಆಗಿರುವ ಡಾ. ಪ್ರಭಾಕರ ಕೋರೆ ಯವರಿಗೆ ಜಿಲ್ಲಾ ಕ.ಸಾ.ಪ ವತಿಯಿಂದ ಕಸಾಪ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ ರವರ ನೇತೃತ್ವದಲ್ಲಿ, ಜಿಲ್ಲೆಯ ವಿವಿಧ ತಾಲೂಕುಗಳ ಅಧ್ಯಕ್ಷರು, ಸಾಹಿತ್ಯಾಭಿಮಾನಿಗಳು, ಕೋರೆ ಯವರ ಅಭಿಮಾನಿಗಳ ಬಳಗ, ಹಿರಿಯ ಸಾಹಿತಿಗಳ ಸಮ್ಮುಖದಲ್ಲಿ ಸೋಮವಾರ ದಿ. ೧೮ರಂದು ಕೋರೆಯವರ ಬೆಳಗಾವಿ ನಿವಾಸದಲ್ಲಿ ಸಮ್ಮೇಳನಕ್ಕೆ ಅಧಿಕೃತವಾದ ಆಹ್ವಾನ ನೀಡಿ, ದಂಪತಿಗಳಾದ ಆಶಾದೇವಿ ಕೋರೆ ಮತ್ತು ಡಾ. ಪ್ರಭಾಕರ್ ಕೋರೆ ಯವರನ್ನು ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಕಾಗವಾಡ ತಾಲೂಕ ಅಧ್ಯಕ್ಷ ಡಾ. ಸಿದ್ದಗೌಡ ಕಾಗೆ ಮಾತನಾಡಿ ಕೋರೆಯವರ ಸಂಘಟನಾ ಚಾತುರ್ಯ, ಕನ್ನಡ ನಾಡು-ನುಡಿ ಸಾಹಿತ್ಯ ಪ್ರೇಮ, ಅವರ ಮಾನವೀಯ ಮೌಲ್ಯಗಳನ್ನು ಕೊಂಡಾಡಿ ನಾಡಿಗೆ, ನುಡಿಗೆ ಸಾಹಿತ್ಯಕ್ಕೆ ನಿಮ್ಮ ಮಾರ್ಗದರ್ಶನ ಮತ್ತು ಆಶೀರ್ವಾದ ಬೇಕು ಎಂದರು.
ಆಹ್ವಾನ ಸ್ವೀಕರಿಸಿ ಮಾತನಾಡಿದ ಪ್ರಭಾಕರ ಕೋರೆ ಅವರು ಸಮ್ಮೇಳನ ಕೇವಲ ಜಾತ್ರೆಯಂತೆ ಆಗಬಾರದು, ಅಚ್ಚುಕಟ್ಟಾಗಿ ಸಂಘಟನೆ ಮಾಡುವುದರ ಜೊತೆಗೆ ಅರ್ಥಪೂರ್ಣ ಕಾರ್ಯಕ್ರಮಗಳು ನಡೆದು ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಅವುಗಳನ್ನು ಕಾರ್ಯರೂಪ ಮಾಡುವ ದೃಷ್ಟಿಯಿಂದ ನಿರ್ಣಯ ಕೈಗೊಳ್ಳಬೇಕು. ಸಮ್ಮೇಳನಕ್ಕೆ ನನ್ನ ವತಿಯಿಂದ ಸರ್ವ ರೀತಿಯ ಸಹಕಾರ ಕೊಡುತ್ತೇನೆ ಎಂದು ಅಭಯ ನೀಡಿದರು.
ಈ ಸಂದರ್ಭದಲ್ಲಿ ಹಿರಿಯ ಸಾಹಿತಿಗಳಾದ ಬಸವರಾಜ ಜಗಜಂಪಿ, ಜ್ಯೋತಿ ಬದಾಮಿ, ಶಾಂತ ಮಸೂತಿ, ಗುರುದೇವಿ ಹುಲೆಪ್ಪನವರಮಠ, ಯ.ರು ಪಾಟೀಲ, ಬಸವರಾಜ್ ಗವಿಮಠ, ಹೇಮ ಸೋನೊಳ್ಳಿ , ನಿರ್ಮಲಾ ಬಟ್ಟಲ್, ನೀಲಗಂಗಾ ಚರಂತಿಮಠ, ಶಾಲಿನಿ ಚಿನಿವಾಲರ, ಸುನಂದಾ ಎಮ್ಮಿ, ಪ್ರಕಾಶ್ ದೇಶಪಾಂಡೆ, ಬಾಬಣ್ಣ ನಾಯ್ಕ, ಲಲಿತಾ ಪರ್ವತ್ ರಾವ್, ಮಹಾನಂದಾ ಪಾರಶೆಟ್ಟಿ , ಮಹಾಂತೇಶ ಉಕ್ಕಲಿ, ಸಿದ್ದರಾಮ ಮೋಟಗಿ, ಶೇಖರ ಹಲಸಗಿ, ಎಂ ವೈ ಮೆಣಸಿನಕಾಯಿ, ವೀರಭದ್ರ ಅಂಗಡಿ ಸೇರಿದಂತೆ ಅಪಾರ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.
ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನ
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಮಹಿಳಾ ಉದ್ಧೇಶಿತ ಆಯವ್ಯಯದಡಿ ಪತ್ರಿಕೋದ್ಯಮ ಪದವಿ/ಸ್ನಾತಕೋತ್ತರ ಪದವೀಧರ ಮಹಿಳೆಯರು ವೃತ್ತಿಯಲ್ಲಿ ತೊಡಗಿಕೊಳ್ಳಲು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಹತ್ತು ತಿಂಗಳ ಅಪ್ರೆಂಟಿಸ್ ತರಬೇತಿಯನ್ನು ಹಮ್ಮಿಕೊಂಡಿದೆ.
೨೦೨೦-೨೧ ನೇ ಸಾಲಿನಲ್ಲಿ ಇಲಾಖೆಯ ಬೆಳಗಾವಿ ಜಿಲ್ಲಾ ಕಚೇರಿಯಲ್ಲಿ ಇಬ್ಬರು ಮಹಿಳಾ ಅಭ್ಯರ್ಥಿಗಳನ್ನು ಮೆರಿಟ್ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
ಆಯ್ಕೆಯಾದ ಪ್ರತಿ ಅಪ್ರೆಂಟಿಸ್ಗೆ ಮಾಹೆಯಾನ ರೂ. ೧೫ ಸಾವಿರ ರೂಪಾಯಿ ಸ್ಟೈಫಂಡ್ ನೀಡಲಾಗುವುದು. ಇಲಾಖೆಯ ಕ್ಷೇತ್ರ ಪ್ರಚಾರ ಕಾರ್ಯಗಳಲ್ಲಿ, ಸುದ್ದಿ ಸಂಗ್ರಹ, ರಚನೆ ಹಾಗೂ ವಿಶೇಷ ಲೇಖನ ರಚನೆಗಳಲ್ಲಿ ತರಬೇತಿ ನೀಡಲಾಗುವುದು.
ಅಭ್ಯರ್ಥಿಗಳು ಪತ್ರಿಕೋದ್ಯಮದಲ್ಲಿ ಪದವಿ/ಸ್ನಾತಕೋತ್ತರ ಪದವಿ ಪಡೆದಿರಬೇಕು. ಕಂಪ್ಯೂಟರ್ ಜ್ಞಾನ ಹೊಂದಿದ್ದು, ಕನ್ನಡ ಭಾಷೆಯ ಬಳಕೆಯಲ್ಲಿ ಪ್ರಬುದ್ಧತೆ ಇರಬೇಕು.
ಅರ್ಜಿ ಸಲ್ಲಿಸಲು ನಿಗದಿಪಡಿಸಿದ ದಿನಾಂಕದಂದು ಅಭ್ಯರ್ಥಿಗಳ ವಯಸ್ಸು ೪೦ ವರ್ಷದೊಳಗಿರಬೇಕು. ಅರ್ಜಿಯೊಂದಿಗೆ ಎಸ್ಸೆಸ್ಸೆಲ್ಸಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಸ್ನಾತಕೋತ್ತರ ಪದವಿ ಪ್ರಮಾಣಪತ್ರ, ಪಾಸ್ ಪೋರ್ಟ್ ಅಳತೆಯ ಎರಡು ಭಾವಚಿತ್ರ ಹಾಗೂ ಇನ್ನಿತರ ಪೂರಕ ದಾಖಲೆಗಳನ್ನು ದ್ವಿ-ಪ್ರತಿಯಲ್ಲಿ ಸಲ್ಲಿಸಲು ಫೆಬ್ರುವರಿ ೨ ಕೊನೆಯ ದಿನಾಂಕವಾಗಿರುತ್ತದೆ.
ಆಸಕ್ತರು ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಯನ್ನು “ಉಪ ನಿರ್ದೇಶಕರ ಕಚೇರಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನ್ಯಾಯಾಲಯ ಆವರಣ(ಹಳೆ ಜಿಲ್ಲಾ ಪಂಚಾಯತ ಪಕ್ಕದಲ್ಲಿ) ಬೆಳಗಾವಿ” ಇಲ್ಲಿ ಪಡೆಯಬಹುದು.
ಹೆಚ್ಚಿನ ಮಾಹಿತಿಗಾಗಿ ಮೊಬೈಲ್- ೯೪೮೦೮೪೧೨೩೩ ಅಥವಾ ೯೪೪೮೫೮೯೬೩೯ ಸಂಪರ್ಕಿಸಬಹುದು ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಉಪ ನಿರ್ದೇಶಕ ಗುರುನಾಥ ಕಡಬೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ತಂಬಾಕು ಉತ್ಪನ್ನ ಮಾರಾಟ: ೩೩ ಪ್ರಕರಣ ದಾಖಲು
ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಹಾಗೂ ಪೊಲೀಸ ಇಲಾಖೆಯ ಸಹಯೋಗದೊಂದಿಗೆ ಜ.೧೮ ಸೋಮವಾರದಂದು ಬೆಳಗಾವಿ ನಗರದ ಸಾಂಬ್ರಾ ಗ್ರಾಮದಲ್ಲಿ ಕೋಟ್ಪಾ-೨೦೦೩ ಕಾಯ್ದೆಯಡಿಯಲ್ಲಿ ದಾಳಿಯನ್ನು ನಡೆಸಲಾಯಿತು.
ಜಿಲ್ಲಾ ತಂಬಾಕು ನಿಯಂತ್ರಣಾಧಿಕಾರಿಗಳ ಮಾರ್ಗದರ್ಶನದಡಿಯಲ್ಲಿ ಸಾರ್ವಜನಿಕರಿಗೆ ಕೋಟ್ಪಾ-೨೦೦೩ ಕಾಯ್ದೆ ವಿರುದ್ದವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮಾಡುವ ಮತ್ತು ನೇರ ಪರೋಕ್ಷವಾಗಿ ತಂಬಾಕು ಜಾಹೀರಾತು ಪ್ರದರ್ಶನ, ಶೈಕ್ಷಣ ಕ ಆವರಣದ ೧೦೦ ಮೀಟರ ಅಂತರದೋಳಗೆ ತಂಬಾಕು ಉತ್ಪನ್ನ ಮಾರಾಟ ಮಾಡುವ ಅಂಗಡಿ ಮಾಲಿಕರಿಗೆ ಜಾಗೃತಿ ಮೂಡಿಸಿ ಹಾಗು ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳನ್ನು ತಿಳಿಸಲಾಯಿತು.
ಕೋಟ್ಪಾ-೨೦೦೩ ಕಾಯ್ದೆ ಅಡಿಯಲ್ಲಿ ಒಟ್ಟು ೩೩ ಪ್ರಕರಣಗಳನ್ನು ದಾಖಲಿಸಿ ದಂಡ ವಿಧಿಸಲಾಯಿತು ಹಾಗೂ ಸೆಕ್ಷನ್-೪ ನಾಮಫಲಕವನ್ನು ವಿತರಿಸಲಾಯಿತು. ಹಾಗೂ ಸಾರ್ವಜನಿಕರಲ್ಲಿ ತಂಬಾಕು ಸೇವನೆಯ ದುಷ್ಪರಿಣಾಮದ ಕುರಿತು ಅರಿವು ಮೂಡಿಸಲಾಯಿತು.
ಸದರಿ ದಾಳಿಯಲ್ಲಿ ಜಿಲ್ಲಾ ತಂಬಾಕು ನಿಯಂತ್ರಣ ಕೋಶದಿಂದ ಡಾ.ಶ್ವೇತಾ ಪಾಟೀಲ ಜಿಲ್ಲಾ ಸಲಹೆಗಾರರು, ಕವಿತಾ ರಾಜನ್ನವರ ಜಿಲ್ಲಾ ಸಮಾಜ ಕಾರ್ಯಕತೆ, ಮಲ್ಲಿಕಾರ್ಜುನ ಸುಲದಾಳ ಹಾಗೂ ಹನುಮಂತ ಜರಕುದ್ರಿ ಪೊಲೀಸ ಸಿಬಂದ್ದಿಗಳು ಸದರಿ ದಾಳಿಯಲ್ಲಿ ಉಪಸ್ಥಿತರಿದ್ದರು ಎಂದು ಜಿಲ್ಲಾ ಸಮೀಕ್ಷಾ/ ತಂಬಾಕು ನಿಯಂತ್ರಣಧಿಕಾರಿಗಳು ಅವರು ಪ್ರಕಟಣೆಯಲ್ಲಿ ತಿಳಿದ್ದಾರೆ.
ಜ.೨೧ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಆಚರಣೆ
ಜಿಲ್ಲಾಡಳಿತ,ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಹಾನಗರ ಪಾಲಿಕೆ ಸಂಯುಕ್ತ ಆಶ್ರಯದಲ್ಲಿ ಗುರುವಾರ (ಜ.೨೧) ಬೆಳಿಗ್ಗೆ ೧೧ ಗಂಟೆಗೆ ಬಸವರಾಜ ಕಟ್ಟೀಮನಿ ಸಭಾಂಗಣದಲ್ಲಿ ಶ್ರೀ ನಿಜಶರಣ ಅಂಬಿಗರ ಚೌಡಯ್ಯನವರ ಜಯಂತಿ ಉತ್ಸವ ಏರ್ಪಡಿಸಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರಾದ ರಮೇಶ್ ಜಾರಕಿಹೊಳಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿಗಳು ಮತ್ತು ಸಾರಿಗೆ ಇಲಾಖೆ ಸಚಿವರು ಲಕ್ಷ್ಮಣ ಸಂ. ಸವದಿ ಘನ ಉಪಸ್ಥಿತರಿರುವರು.
ಯಕ್ಕುಂಡಿಯ ಸರಕಾರಿ ಪದವಿಪೂರ್ವ ಕಾಲೇಜು ಪ್ರಾಚಾರ್ಯರಾದ ಡಾ. ವಾಯ್.ಎಂ. ಯಾಕೊಳ್ಳಿ ಅವರು ಉಪನ್ಯಾಸ ನೀಡಲಿದ್ದು, ಜ್ಯೋತಿ ಬಸವರಾಜ ಕುರೇರ ಮತ್ತು ತಂಡದವರಿಂದ ವಚನ ಸಂಗೀತ ಕಾರ್ಯಕ್ರಮ ನಡೆಯಲಿದೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಚಿವರಾದ ಶಶಿಕಲಾ ಜೊಲ್ಲೆ ಮತ್ತು ಕೈಮಗ್ಗ ಮತ್ತು ಜವಳಿ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸಚಿವರು ಶ್ರೀಮಂತ ಪಾಟೀಲ, ಮಾನ್ಯ ಸಚಿವರಾದ ಉಮೇಶ ಕತ್ತಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಶಾಸಕರು ಅನಿಲ ಎಸ್. ಬೆನಕೆ ಅಧ್ಯಕ್ಷತೆ ವಹಿಸಲಿದ್ದಾರೆ.
ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ್ ಕವಟಗಿಮಠ, ಕರ್ನಾಟಕ ವಿಧಾನ ಸಭೆ ಉಪ ಸಭಾಧ್ಯಕ್ಷರಾದ ವಿಶ್ವನಾಥ ಚ. ಮಾಮನಿ, ನವದೆಹಲಿ ಕರ್ನಾಟಕ ಸರ್ಕಾರದ ವಿಶೇಷ ಪ್ರತಿನಿಧಿಯಾದ ಶಂಕರಗೌಡ ಐ. ಪಾಟೀಲ, ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ ಅಧ್ಯಕ್ಷರು ಹಾಗೂ ಶಾಸಕರಾದ ದುರ್ಯೋಧನ ಐಹೊಳೆ, ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಆಶಾ ಐಹೊಳೆ, ಕರ್ನಾಟಕ ರಾಜ್ಯ ತಾಂಡಾ ಅಭಿವೃದ್ಧಿ ನಿಗಮ ಹಾಗೂ ಶಾಸಕರಾದ ಪಿ. ರಾಜೀವ, ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ಶಾಸಕರಾದ ಮಹೇಶ ಕುಮಠಳ್ಳಿ, ಹಾಗೂ ಜಿಲ್ಲಾ ಗಂಗಾಮತಸ್ಥರ ಸಮಾಜದ ಅಧ್ಯಕ್ಷರಾದ ಗಂಗಾರಾಮ ತಳವಾರ ಉಪಸ್ಥಿತರಿರುವರು ಎಂದು ಜಿಲ್ಲಾಧಿಕಾರಿಗಳಾದ ಎಂ.ಜಿ. ಹೀರೆಮಠ ಅವರು ತಿಳಿಸಿದ್ದಾರೆ.
ಜೀವನದಲ್ಲಿ ಯಶಸ್ಸು ಸಾಧಿಸಲು ಧೈರ್ಯ ಅವಶ್ಯಕ : ಆಶಾ ಐಹೊಳೆ
ಜೀವನದಲ್ಲಿ ಏನೇ ಕಷ್ಟ ಬಂದರೂ ಧೈರ್ಯವಾಗಿ ಎದುರಿಸಿ ಯಶಸ್ಸು ಸಾಧಿಸಬೇಕೆಂದು ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಆಶಾ ಪ್ರಶಾಂತರಾವ ಐಹೊಳೆ ಅವರು ಕರೆ ನೀಡಿದರು.
ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಲಿಂಗರಾಜಕಾಲೇಜ್ ಬೆಳಗಾವಿ ಇವರುಗಳ ಸಂಯುಕ್ತಾಶ್ರಯದಲ್ಲಿ ಮಂಗಳವಾರ (ಜ.೧೯) ಬೆಳಗಾವಿಯ ಲಿಂಗರಾಜ್ ಕಾಲೇಜಿನ ಸೆಂಟ್ರಲ್ ಹಾಲ್‌ನಲ್ಲಿ ೨೦೨೦-೨೧ನೇ ಸಾಲಿನ ಬೆಳಗಾವಿ ಜಿಲ್ಲಾ ಮಟ್ಟದ ಯುವ ಸಪ್ತಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಬೆಳಗಾವಿಯ ರಾಮಕೃಷ್ಣ ಮಿಷನ್‌ಆಶ್ರಮದ ಸ್ವಾಮಿ ಮೋಕ್ಷಾತ್ಮಾನಂದಜೀ ಮಹಾರಾಜ ಅವರು, ಇಂದಿನ ಯುವಜನತೆ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಯಶಸ್ಸು ಸಾಧಿಸಿ ತಮ್ಮತಂದೆ/ತಾಯಿಗಳಿಗೆ, ಕಾಲೇಜಿಗೆ ಹಾಗೂ ದೇಶಕ್ಕೆ ಕೀರ್ತಿ ತರಬೇಕೆಂದು ಹೇಳುತ್ತಾ ಸ್ವಾಮಿ ವಿವೇಕಾನಂದರ ಕುರಿತು ಉಪನ್ಯಾಸವನ್ನು ನೀಡಿದರು.
ಲಿಂಗರಾಜ್ ಕಾಲೇಜಿನ ಉಪ ಪ್ರಾಚಾರ್ಯರಾದ ಶ್ರೀಮತಿ ಎಮ್.ಆರ್.ಬನಹಟ್ಟಿರವರು ಅಧ್ಯಕ್ಷತೆಯನ್ನು ವಹಿಸಿದ್ದರು. ಅತಿಥಿಗಳಾಗಿ ಲಿಂಗರಾಜ ಕಾಲೇಜಿನ ಪ್ರಾಚಾರ್ಯರಾದ ಗಿರಿಜಾ ಹಿರೇಮಠ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಹೆಚ್.ಎಮ್. ಚನ್ನಪ್ಪಗೋಳ ಹಾಗೂ ನೆಹರುಯುವಕೇಂದ್ರ ನಿವೃತ್ತಯುವ ಸಮನ್ವಯಾಧಿಕಾರಿಗಳಾದ ಶ್ರೀ ಎಸ್.ಯು.ಜಮಾದಾರ, ಲಿಂಗರಾಜ ಕಾಲೇಜಿನ ದೈಹಿಕ ನಿರ್ದೇಶಕರಾದ ಡಾ. ಸಿ.ರಾಮರಾವ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಉಪ ನಿರ್ದೇಶಕರಾದ ಶ್ರೀ ಎಚ್.ಡಿ.ಕೋಳೇಕರ ಹಾಗೂ ರಾಜ್ಯ ಯುವ ಪ್ರಶಸ್ತಿ ವಿಜೇತರಾದ ಶ್ರೀ ಸಿದ್ದಣ್ಣ ದುರದುಂಡಿ ಅವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ