ಲೇಖನ: ರವಿ ಕರಣಂ
ಜೀವನದಲ್ಲಿ ಕುಟುಂಬದ ಸದಸ್ಯರನ್ನು ಹೊರತು ಪಡಿಸಿ, ಅತೀ ಮಹತ್ವದ ವ್ಯಕ್ತಿಗಳೆಂದರೆ ಸ್ನೇಹಿತರು. ಅವರು ಒಂದು ಲೆಕ್ಕದಲ್ಲಿ ಕುಟುಂಬದ ಅಪ್ರತ್ಯಕ್ಷ ಆಧಾರ ಸ್ಥಂಭಗಳಾಗಿರುತ್ತಾರೆ. ಕಷ್ಟ, ದುಃಖ, ನೋವು ಮತ್ತು ಸಂತೋಷದ ಘಳಿಗೆಗಳಲ್ಲಿ ಯಾವತ್ತೂ ಜೊತೆಯಾಗಿರುವವರು. ಅಂತಹ ವ್ಯಕ್ತಿಗಳ ಆಯ್ಕೆ ತೀರಾ ಕಠಿಣ. ನಾವು ಬರೀ ನಂಬಿಕೆಗಳ ಮೇಲೆ ತೇಲುತ್ತೇವೆ. ಎಲ್ಲಿ ನಂಬಿಕೆಗೆ ಧಕ್ಕೆಯುಂಟಾಗುತ್ತದೆಯೋ ಅಲ್ಲಿ ಮುಳುಗುತ್ತೇವೆ. ಅದು ನಮ್ಮ ಹಣೆ ಬರೆಹವೇ ಹಾಗೆ ಎಂದುಕೊಂಡು ನಮಗೆ ನಾವೇ ಸಮಾಧಾನ ಹೇಳಿಕೊಳ್ಳಬೇಕಷ್ಟೇ.
ನಾವೆಲ್ಲ ಸಾಕಷ್ಟು ಕಥೆಗಳನ್ನು ಕೇಳಿದ್ದೇವೆ. ಸ್ನೇಹಕ್ಕಾಗಿ ಯಾರು ಯಾರೆಲ್ಲ ಏನೇನು ಮಾಡಿದ್ದಾರೆಂದು. ಮಹಾಭಾರತದಲ್ಲಿ ಕೃಷ್ಣ ಮತ್ತು ಸುಧಾಮ, ದುರ್ಯೋಧನ ಮತ್ತು ಕರ್ಣ,
ರಾಮಾಯಣದಲ್ಲಿ ರಾಮ ಮತ್ತು ಹನುಮಂತ, ಇತಿಹಾಸದಲ್ಲಿ ಚಾಣಕ್ಯ ಮತ್ತು ಚಂದ್ರಗುಪ್ತ ಮೌರ್ಯ, ಭೋಜರಾಜ ಮತ್ತು ಕಾಳಿದಾಸ, ಕೃಷ್ಣದೇವರಾಯ ಮತ್ತು ತೆನಾಲಿ ರಾಮಕೃಷ್ಣ, ಅಕ್ಬರ್ ಮತ್ತು ಬೀರಬಲ್ ಮತ್ತು ಹಲವರು. ಅವರವರ ಸ್ಥಾನಗಳೇನೇ ಇದ್ದರೂ ಅವರ ನಡುವಿನ ಸ್ನೇಹ ಅನನ್ಯವಾದದ್ದು. ಇದು ಮಾಹಿತಿಗಾಗಿ ಉಲ್ಲೇಖಿಸಿದ್ದು. ಇವರ ಬಗ್ಗೆ ಬರೆವ ಇಂಗಿತವಿಲ್ಲ. ಎಂದಾದರೂ ಮಾತಾಡೋಣ.
ನೀವು ಹೇಗೇ ಇದ್ದರೂ ನಿಮ್ಮ ಜೊತೆ ನಿಲ್ಲ ಬಲ್ಲ ವ್ಯಕ್ತಿಯೇ ಜೀವನದಲ್ಲಿ ಅತ್ಯುತ್ತಮ ಸ್ನೇಹಿತನಾಗುತ್ತಾನೆ. ಮರೆಯುವಂತಿಲ್ಲ. ತಪ್ಪು ಮಾಡಿದಾಗ ಅದನ್ನು ವಿವರಿಸಿ, ಗೌರವದ, ಸುಸಂಸ್ಕೃತ ಜೀವನದ ಸರಿದಾರಿಯಲ್ಲಿ ನಡೆಸುವಾತ, ಎಂಥದೇ ಸಂದರ್ಭ ಬಂದಿದ್ದಾಗ್ಯೂ ಸಹ ಎದೆ ಕೊಟ್ಟು, ಕೈ ಹಿಡಿದು ನಿಲ್ಲುವವ ಮಾತ್ರವೇ ನಿಜ ಸ್ನೇಹಿತನಾಗುತ್ತಾನೆ.
ನಿಮ್ಮ ಅರಿವಿಗೆ ಬಂದಿರಲಿಕ್ಕೇ ಬೇಕಿದು. ಒಂದೊಮ್ಮೆ ನೀವು ಹೆಸರು ಮಾಡಿದ್ದರೆ, ಸಾವಿರಾರು ಜನಕ್ಕೆ ಬೇಕಾದವರೂ ಮತ್ತು ನಾಯಕರೂ ಆಗಿದ್ದರೆ, ನಿಮ್ಮ ಸುತ್ತಲೂ ಬಾಲ್ಯದ, ಶಾಲೆಯ, ಹೊಸದಾಗಿ ಪರಿಚಿತರಾದ ಸ್ನೇಹಿತರು ಯಾವಾಗಲೂ ನಿಮ್ಮ ಸುತ್ತ ಮುತ್ತ ನೆರೆದಿರುತ್ತಾರೆ. ಕಾರಣ ನಿಮ್ಮ ಹೆಸರಿನ ಮೂಲಕ ತಾವು ಇತರರಿಗೆ ಪರಿಚಿತರಾಗಿ ತಮ್ಮದೊಂದು ಪ್ರಭಾವ ಹೆಚ್ಚಿಸಿಕೊಳ್ಳುವ ಇರಾದೆ. ಇರಲಿ. ಸಂಘ ಜೀವನದಲ್ಲಿ ಅದು ಸಹಜ ಕ್ರಿಯೆ. ಹಾಗೊಮ್ಮೆ ನೀವು ತಪ್ಪು ಮಾಡಿ, ಗೌರವಕ್ಕೆ ಚ್ಯುತಿ ಬಂದಾಗ, ಸಮಾಜದಲ್ಲಿ ಹೆಸರಿಗೆ ಧಕ್ಕೆ ಬಂದಾಗ, ನಿಮ್ಮ ಸುತ್ತ ಮುತ್ತ ಇದ್ದವರೆಲ್ಲ ಎಲ್ಲಿರುತ್ತಾರೆ ? ಆಗಲೇ ನಿಮಗೆ ನಿಜ ಸ್ನೇಹಿತರಾರು ಎಂಬುದು ತಿಳಿಯುತ್ತದೆ.
ಆದರೆ ಒಂದೊಮ್ಮೆ ಸಮಾಜದ, ಕಾನೂನಿನ ದೃಷ್ಟಿಯಲ್ಲಿ ‘ತಪ್ಪಿತಸ್ಥ’ ಎಂದು ಕಂಡು ಬಂದಿದ್ದೇ ಆದರೆ, ಅಕ್ಷರಶಃ ಅವನು ಏಕಾಂಗಿಯಾಗಿ ಬಿಡುತ್ತಾನೆ. ಹಾಗಿದ್ದರೆ ಬೆನ್ನಿಗೆ ನಿಲ್ಲುವವರೊಬ್ಬರು ಬೇಕಲ್ಲ. ಪರಿಚಿತರೋ ಅಥವಾ ಅಪರಿಚಿತರೋ ವ್ಯಕ್ತಿಯೊಬ್ಬ ಸಹಾಯಕ್ಕೆ ಬಂದದ್ದೇ ಆದರೆ ಅವನೇ ನಿಜವಾದ ಸ್ನೇಹಿತ. ಗೆಳೆಯ. ಮಿತ್ರ. ಕಡೆಗೆ ಆಪತ್ಬಾಂಧವ ಎನ್ನೋಣ. ಅದುವರೆಗೂ ಇದ್ದವರೆಲ್ಲ ಲಾಭಕ್ಕಾಗಿ ಬಂದವರು. ಕೆಟ್ಟ ಘಳಿಗೆಯಲ್ಲಿ ಬಿಟ್ಟು ಹೋಗುವವರು. ಆಗೊಂದು ಸ್ನೇಹಿತರ ಬಗೆಗೆ ಸ್ಪಷ್ಟತೆ ದೊರೆಯುತ್ತದೆ. ಇಂಥದೊಂದು ಅನುಭವ ಪ್ರತಿಯೊಬ್ಬರಿಗೂ ಆಗಿಯೇ ಇರುತ್ತದೆ.
ಹಾಗಾದ ಮೇಲೆ ಮುಂದೊಂದು ಬದಲಾವಣೆ ಇದೆ. ಕೆಟ್ಟ ಘಳಿಗೆ ಯಾವತ್ತೂ ಶಾಶ್ವತವಾಗಿರಲ್ಲ. ಪರಿಸ್ಥಿತಿ ಬದಲಾಗುತ್ತದೆ. ಕಷ್ಟದಿಂದ ಹೊರಬಂದವನು ಜಗತ್ತು ಹೇಗೆಂದು ಅರ್ಥ ಮಾಡಿಕೊಂಡ ಮೇಲೆ ಯಾರನ್ನೂ, ಯಾವತ್ತೂ ನಂಬಲು ಅಶಕ್ತನಾಗುತ್ತಾನೆ. ಅವನು ಸುತ್ತಲಿನ ಜನರನ್ನು ನಂಬುವುದಿಲ್ಲ. ಜಗತ್ತೇ ಹೀಗೆ ಎಂಬ ನಿರ್ಣಯಕ್ಕೆ ಬಂದು ಬಿಡುತ್ತಾನೆ. ಹೀಗಾಗಿ ಅವನು ಸಮಾಜದಿಂದ, ಸಮಾಜ ಅವನಿಂದ ಅಂತರ ಕಾಯ್ದುಕೊಳ್ಳಲು ಶುರುವಾಗುತ್ತದೆ. ತಾನು ಅನುಭವಿಸಿದಂತೆಯೇ ಅನುಭವಿಸಿದ ವ್ಯಕ್ತಿಗಳದ್ದೇ ಒಂದು ವರ್ಗ ರೂಪಗೊಳ್ಳುತ್ತದೆ. ಇದೇ ಸಾಮಾಜಿಕ ಕವಲುಗಳಿಗೆ ದಾರಿ ಮಾಡಿಕೊಡುತ್ತದೆ.
ನಿಜವಾದ ಸ್ನೇಹಕ್ಕೆ ಲಾಭ- ನಷ್ಟಗಳ ತಕ್ಕಡಿಯಿರಲ್ಲ. ಅದು ಪರಸ್ಪರರ ಭಾವನೆಗಳ ಸೇತುವೆಯ ಮೇಲೆ ನಿಂತಿರುತ್ತದೆ. ಸುಖದ ದಿನಗಳಲ್ಲಿ ಎಲ್ಲರೂ ಸುತ್ತ ನೆರೆದು, ನಗುತ್ತಾರೆ. ಹೊಗಳುತ್ತಾರೆ. ಆಕಸ್ಮಿಕವಾಗಿ ಕಷ್ಟಗಳಿಗೆ ಸಿಲುಕಿದಾಗ ಸಮೀಪಕ್ಕೆ ಸುಳಿಯಲಾರರು. ಕಾರಣ ಅಂಥವನಿಂದ ಲಾಭವಂತೂ ಇಲ್ಲ. ಅವನ ಗೋಳು ನಮಗ್ಯಾಕೆ ಎಂದು ದೂರ ಸರಿಯುತ್ತಾರೆ. ಅಂದರೆ ಅದುವರೆಗಿದ್ದ ‘ಸ್ನೇಹ’ ಜೊಳ್ಳು ಎಂದಾಯಿತಲ್ಲವೇ ? ಅನಾರೋಗ್ಯಕ್ಕೆ ತುತ್ತಾದಾಗ, ವ್ಯಾಪಾರದಲ್ಲಿ ನಷ್ಟವಾದಾಗ, ಸಾಲಕ್ಕೆ ಹಣ ಕೇಳಬಹುದು. ಅಲೆದಾಡಿಸಬಹುದು. ಕೆಲಸದ ಭಾರವನ್ನು ನಮ್ಮ ಮೇಲೆ ಹೇರಿ ಬಿಡಬಹುದು. ಅಥವಾ ಅವನೇ ನಮಗೆ ಹೊರೆಯಾಗಿ ಬಿಡಬಹುದು ಎಂದು ತೆರೆಮರೆಗೆ ಸರಿಯುತ್ತಾರೆ. ಆದರೆ ನಿಜ ಸ್ನೇಹಿತ ಯಾವತ್ತೂ ಜೊತೆಗಿರುತ್ತಾನೆ. ಕೈಲಾದುದನ್ನು ಮಾಡುತ್ತಾನೆ. ಏನೂ ಮಾಡಲಾಗದಿದ್ದರೂ ಕಡೇ ಪಕ್ಷ ಪಕ್ಕಕ್ಕಾದರೂ ಬಂದು ಕುಳಿತುಕೊಳ್ಳುತ್ತಾನಲ್ಲ. ಅದೇ ದೊಡ್ಡ ಉಪಕಾರ. ಇಡೀ ಬಂಧು – ಬಳಗ, ಸಮಾಜ ಎಲ್ಲ ಕೈ ಬಿಟ್ಟರೂ, ಬಿಡದೇ ಜೊತೆಗಿರುವವನೇ ಮನಸಿಗೆ ಊರುಗೋಲಾಗುತ್ತಾನೆ.
ಅವರವರ ಏನೇ ಭಿನ್ನಾಭಿಪ್ರಾಯಗಳಿದ್ದಾಗ್ಯೂ ಅವುಗಳನ್ನೆಲ್ಲ ಬದಿಗಿರಿಸಿ, ಸ್ನೇಹದ ಬಳ್ಳಿ ತುಂಡಾಗದಂತೆ ಕಾಯ್ದುಕೊಳ್ಳಲು ಇಬ್ಬರು ತೊಡಗಿಕೊಂಡಿರುತ್ತಾರೆ. ಒಬ್ಬರ ಬೆನ್ನಿಗೊಬ್ಬರು ನಿಂತುಕೊಳ್ಳುವುದು. ಜೊತೆಯಾಗಿ ಉಳಿಯುವುದು ಮತ್ತು ಬೆಳೆಯುವುದು ಹಾಗೆ ಜೀವನ ಪರ್ಯಂತ ಇರುವುದು ಅತಿ ಮುಖ್ಯ. ಅಂತಹ ‘ಸ್ನೇಹಿತ’ ದೊರಕುವುದು ತುಂಬಾ ಕಠಿಣವೇ. ನಮ್ಮ ಜೀವನದಲ್ಲಿ ಅದೆಷ್ಟೋ ಜನ ಬಂದು ಹೋದವರ ಸಂಖ್ಯೆ ಹೆಚ್ಚು. ಅವರೆಲ್ಲಾ ತಾತ್ಪೂರ್ತಿಕ, ಸಾಂದರ್ಭಿಕ ಸ್ನೇಹಿತರಷ್ಟೇ. ಅವರು ಸ್ಮೃತಿ ಪಟಲದಲ್ಲಿ ಶಾಶ್ವತ ಸ್ಥಾನ ಗಳಿಸುವುದಿಲ್ಲ. ಅಂಥವರೆಲ್ಲ “ಉಂಡೂ ಹೋದ, ಕೊಂಡೂ ಹೋದ” ಗುಂಪಿನವರು. ಅಲ್ಲವೇ ?
ಕೆಲವೊಮ್ಮೆ ನೀವೇ ಮಾತಾಡಿಕೊಂಡ ಮಾತುಗಳಿವೆಯಲ್ಲ. ಸ್ನೇಹಿತರಲ್ಲಿ ಮೂರು ತರಹವೆಂದು !
1) ಕೆಲವರು ರಸ್ತೆ ಮೇಲಿನವರು. ಹಾಯ್ ಬಾಯ್ ಮತ್ತು ಚಹಾದ ಪೂರ್ತಿಗಿರುವವರು. 2) ಕೆಲವರು ಮನೆಯ ತನಕ ಬಂದು, ತಿಂದು, ಚಹಾ ಕುಡಿದು ಹೋಗುವವರು. ಇವರನ್ನೆಲ್ಲ ಸುಖದ ಗಿರಾಕಿಗಳೆಂದು ಕರೆಯಬಹುದು.
3) ಕಷ್ಟಗಳಲ್ಲಿ ಬರುವವರು ಮನಸ್ಸಿನೊಳಗೆ ಬರುತ್ತಾರೆ. ಇರುತ್ತಾರೆ. ಈ ಮೂರನೇ ವರ್ಗದವರು ದೊರಕುವುದು ತೀರಾ ಕಠಿಣ.
ಹಾಗಾಗಿ ಸ್ನೇಹಿತರನ್ನಾಗಿ ಮಾಡಿಕೊಳ್ಳುವ ಮುಂಚೆಯೇ ನಮ್ಮಲ್ಲಿ ಚಾಣಾಕ್ಷತನವಿರಬೇಕು. ಅವನ ವ್ಯಕ್ತಿತ್ವ ಎಂತಹುದು ? ಎಂಬುದನ್ನು ಸೂಕ್ಷ್ಮವಾಗಿ ಗಮನಿಸಬೇಕು. ಹೇಳಿದ್ದನ್ನು ಕೃತಿಗಿಳಿಸುತ್ತಾನೆಯೋ ಇಲ್ಲವೋ ಸಣ್ಣ ಸಣ್ಣ ವಿಷಯದಲ್ಲಿ ಅವನು ಪಾಲುದಾರನಾಗುತ್ತಿದ್ದಾನೆ ಎಂದಾದರೆ, ಅಂತಹ ಸ್ಪಂದನೆಗೆ ನಾವು ಸಿದ್ದರಿರಬೇಕು. ಇಲ್ಲಿ ತೆಗೆದುಕೊಳ್ಳುವುದಷ್ಟೇ ಇರುವುದಿಲ್ಲ. ಕೊಡುವುದೂ ಇರುತ್ತದೆ. ” ನೀ ನನಗಿದ್ದರೆ ನಾ ನಿನಗೆ ” ಎಂಬ ಗಾದೆ ಮಾತು ಹುಟ್ಟಿಕೊಂಡದ್ದೇ ಈ ರೀತಿಯೇನೋ ! ಪರಸ್ಪರರಲ್ಲಿ ತಾಳ ಮೇಳವಿರಬೇಕು. ಎರೆಡು ಕಡೆಗಳಲ್ಲಿ ಸಮಾನ ಮನಸ್ಥಿತಿ ಇರಬೇಕು. ಏರು ಪೇರಾಯಿತೋ ಅಲ್ಲಿಗೆ ಕಥೆ ಮುಗಿಯಿತು. ಎಲ್ಲರ ಜಿವನದಲ್ಲೂ ಏರು ಪೇರಾದದ್ದು ಇದೆಯಲ್ಲವೇ ? ಹಳೆತನ್ನು ಮರೆತು, ಹೊಸತನಕ್ಕೆ ಹಾತೊರೆಯುವುದೇ ಜೀವನ. ಅಂತೂ ಬದುಕಿನಲ್ಲಿ ‘ಸ್ನೇಹ’ವೆಂಬುದು ಊರುಗೋಲಿದ್ದಂತೆ. ಅದರ ಆಳ-ಅಗಲ ವರ್ಣನಾತೀತ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ