ಅಮಗಾಂವ ಗ್ರಾಮದಿಂದ ಹೊತ್ತು ತಂದು ಆಸ್ಪತ್ರೆಗೆ ದಾಖಲಿಸಿದ್ದ ಮಹಿಳೆ ಚಿಕಿತ್ಸೆ ಫಲಿಸದೇ ಸಾವು
ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲೂಕಿನ ಭೀಮಗಡ ಸಂರಕ್ಷಿತ ಅಭಯಾರಣ್ಯ ವ್ಯಾಪ್ತಿಯ ದಟ್ಟ ಅರಣ್ಯ ಪ್ರದೇಶದಲ್ಲಿರುವ ಅಮಗಾಂವ ಗ್ರಾಮದಿಂದ ಕಳೆದ ಶುಕ್ರವಾರ ಗ್ರಾಮಸ್ಥರು ಸೇರಿ ಮುಖ್ಯವಾಹಿನಿಯವರೆಗೆ ಹೊತ್ತುತಂದು ಅಲ್ಲಿಂದ ಅಂಬ್ಯುಲನ್ಸ್ ಮೂಲಕ ಬೆಳಗಾವಿಯ ಆಸ್ಪತ್ರೆಗೆ ದಾಖಲಿಸಿದ್ದ ಅಮಗಾಂವ ಗ್ರಾಮದ ಮಹಿಳೆ ಹರ್ಷದಾ ಹರಿಶ್ಚಂದ್ರ ಘಾಡಿ (೩೮) ಚಿಕಿತ್ಸೆ ಫಲಿಸದೇ ಗುರುವಾರ ಸಾವನ್ನಪ್ಪಿದ್ದಾರೆ.
ಎದೆ ನೋವಿನಿಂದಾಗಿ ಕಳೆದ ಆರು ದಿನಗಳಿಂದ ಬೆಳಗಾವಿಯ ಜಿಲ್ಲಾಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಹರ್ಷದಾ ಬ್ರೇನ್ ಟ್ಯೂಮರ್ ಕಾಯಿಲೆಯಿಂದ ಬಳಲುತ್ತಿದ್ದರು. ಆಸ್ಪತ್ರೆಗೆ ದಾಖಲಾದ ದಿನವೇ ಆಕೆಯ ಆರೋಗ್ಯ ಪರೀಕ್ಷಿಸಿದ್ದ ವೈದ್ಯರು ಆಕೆಯ ಆರೋಗ್ಯ ಸ್ಥಿತಿ ಸುಧಾರಿಸುವ ಲಕ್ಷಣಗಳು ಕಡಿಮೆ ಎಂದು ಆಕೆಯ ಕುಟುಂಬಸ್ಥರಿಗೆ ತಿಳಿಸಿದ್ದರು. ಕುಟುಂಬದ ಸದಸ್ಯರು ಆಕೆಯನ್ನು ಮರಳಿ ಮನೆಗೆ ಕರೆದೊಯ್ಯುವ ಸಿದ್ಧತೆ ನಡೆಸಿದ್ದರು.
ಇದೇ ಸಂದರ್ಭದಲ್ಲಿ ಅಮಗಾಂವ ಗ್ರಾಮಸ್ಥರು ಆಕೆಯನ್ನು ಹಲವು ಕಿಮೀವರೆಗೆ ಹೊತ್ತುತಂದ ಪ್ರಕರಣ ಮಾಧ್ಯಮಗಳ ಮೂಲಕ ಇಡೀ ರಾಜ್ಯದ ಗಮನ ಸೆಳೆದಿತ್ತು. ಮಾಧ್ಯಮಗಳಲ್ಲಿ ಬಿತ್ತರವಾದ ವರದಿಯಿಂದ ಎಚ್ಚೆತ್ತ ಸರ್ಕಾರ ಆಕೆಗೆ ಉಚಿತವಾಗಿ ಚಿಕಿತ್ಸೆ ನೀಡುವಂತೆ ವೈದ್ಯರಿಗೆ ಸೂಚಿಸಿತ್ತು. ವೈದ್ಯರು ಆಕೆಯನ್ನು ತುರ್ತು ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ಮುಂದುವರೆಸಿದ್ದರು. ಕೊನೆಗೂ ಆಕೆಗೆ ಚಿಕಿತ್ಸೆ ಫಲಿಸದೇ ಗುರುವಾರ ಸಂಜೆ ಇಹಲೋಕ ತ್ಯಜಿಸಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ