ಪ್ರಗತಿವಾಹಿನಿ ಸುದ್ದಿ; ಗೋಕಾಕ: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಜನೋಪಯೋಗಿ ಕಾರ್ಯಕ್ರಮಗಳನ್ನು ಮನಗಂಡು ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಕೈಬಲಪಡಿಸಲು ಬಿಜೆಪಿ ಅಭ್ಯರ್ಥಿ ಮಂಗಳಾ ಅಂಗಡಿ ಅವರಿಗೆ ಆಶೀರ್ವಾದ ಮಾಡುವಂತೆ ಆಹಾರ ಮತ್ತು ನಾಗರೀಕ ಪೂರೈಕೆ ಸಚಿವ ಉಮೇಶ್ ಕತ್ತಿ ಮತದಾರರಲ್ಲಿ ಮನವಿ ಮಾಡಿದರು.
ಅರಭಾವಿ ಮತಕ್ಷೇತ್ರದ ಲೋಳಸೂರ, ಬಸಳಿಗುಂದಿ, ನಲ್ಲಾನಟ್ಟಿ ಗ್ರಾಮಗಳಿಗೆ ತೆರಳಿ ಬೆಳಗಾವಿ ಲೋಕಸಭಾ ಉಪಚುನಾವಣೆಯ ಬಿಜೆಪಿ ಅಭ್ಯರ್ಥಿ ಮಂಗಳಾ ಸುರೇಶ ಅಂಗಡಿ ಅವರ ಪ್ರಚಾರಾರ್ಥ ಸಭೆಯಲ್ಲಿ ಮಾತನಾಡಿದ ಅವರು, ದಿ. ಸುರೇಶ ಅಂಗಡಿ ಅವರು ಕೇಂದ್ರ ಸಚಿವರಾಗಿ ಅತ್ಯಲ್ಪ ಅವಧಿಯಲ್ಲಿ ಸಾಕಷ್ಟು ಅಭಿವೃದ್ದಿ ಪರ ಕಾರ್ಯಗಳನ್ನು ಕೈಗೊಂಡಿದ್ದರೆಂದು ಹೇಳಿದರು.
ಬೆಳಗಾವಿ-ಕಿತ್ತೂರ-ಧಾರವಾಡ ನಡುವಿನ ಹೊಸ ರೈಲು ಮಾರ್ಗದ ಕಾಮಗಾರಿಗೆ ಮಂಜೂರಾತಿಗಾಗಿ ಶ್ರಮವಹಿಸಿದ್ದರು. ಬೆಳಗಾವಿ-ಬೆಂಗಳೂರು ವಿಶೇಷ ರೈಲ್ವೆ ಪ್ರಾರಂಭಿಸಿದರು. ಕೋವಿಡ್-19 ಸಮಯದಲ್ಲಿ ಕಾರ್ಮಿಕರು ತಮ್ಮ-ತಮ್ಮ ಗ್ರಾಮಗಳಿಗೆ ತೆರಳಲು ಶ್ರಮಿಕ ರೈಲು ಪ್ರಾರಂಭಿಸಿ ಜನಮನ್ನಣೆ ಗಳಿಸಿದ್ದರು. 150 ಕೋಟಿ ರೂಗಳ ವೆಚ್ಚದಲ್ಲಿ ಬೆಳಗಾವಿ ರೈಲ್ವೆ ನಿಲ್ದಾಣವನ್ನು ನವೀಕರಣಗೊಳಿಸಿದರು. ಕಡಿಮೆ ಅವಧಿಯಲ್ಲಿ ರೈಲ್ವೆ ಸಚಿವರಾಗಿ ಕರ್ನಾಟಕಕ್ಕೆ ಮಹತ್ತರ ಕೊಡುಗೆ ಅರ್ಪಿಸಿದ್ದಾರೆ. ಸುಮಾರು 54 ಸಾವಿರ ಕೋಟಿ ರೂಗಳ ಅನುದಾನವನ್ನು ರಾಜ್ಯದ ಅಭಿವೃದ್ದಿಗೆ ನೀಡುವಲ್ಲಿ ದಿ. ಅಂಗಡಿ ಪಾತ್ರ ಅಪಾರವಾಗಿತ್ತು ಎಂದು ಹಿಂದಿನ ಸಚಿವ ದಿ. ಸುರೇಶ ಅಂಗಡಿಯವರ ಕಾರ್ಯವನ್ನು ಸ್ಮರಿಸಿ, ಇಂತಹ ಸರಳ ಸಜ್ಜನಿಕೆಯ ವ್ಯಕ್ತಿ ಕೋವಿಡ್‍ಗೆ ಬಲಿಯಾಗಿರುವುದು ದುರಂತವೆಂದು ವಿಷಾದಿಸಿದರು.
ಸುಸಂಸ್ಕೃತ ಕೌಜಲಗಿ ಮನೆತನದ ಮಂಗಳಾ ಅವರು ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ, ಇವರ ತಂದೆ ಈ ಭಾಗದ ರೈತರ ಜೀವನಾಡಿ ಪ್ರಭಾ ಶುಗರ್ಸ್ ಹುಟ್ಟು ಹಾಕುವಲ್ಲಿ ಗಣನೀಯ ಸೇವೆ ಸಲ್ಲಿಸಿದ್ದರು. ಮಂಗಳಾ ಅವರಿಗೆ ಜಿಲ್ಲೆಯಾಧ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು, ಜಾರಕಿಹೊಳಿ ಕುಟುಂಬದ ನಾಲ್ವರು ಸಹೋದರರ ಬೆಂಬಲ ಇವರ ಬೆನ್ನಿಗಿದೆ. ಕೆಎಮ್‍ಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರು ಕಾರ್ಯದೊತ್ತಡದಿಂದ ಪ್ರಚಾರದಲ್ಲಿ ಇದುವರೆಗೂ ಭಾಗಿಯಾಗಿಲ್ಲ. ಇನ್ನೆರಡು ದಿನಗಳಲ್ಲಿ ಪ್ರಚಾರದಲ್ಲಿ ಪಾಲ್ಗೊಳ್ಳುವುದಾಗಿ ತಮಗೆ ತಿಳಿಸಿದ್ದಾರೆಂದು ಸಚಿವ ಉಮೇಶ್ ಕತ್ತಿ ತಿಳಿಸಿದರು.
ಸಂಸದ ಈರಣ್ಣ ಕಡಾಡಿ ಮಾತನಾಡಿ, ಕಳೆದ ಬಾರಿ ಅರಭಾವಿ ಕ್ಷೇತ್ರದಿಂದ ಬಿಜೆಪಿಗೆ 55ಸಾವಿರ ಮತಗಳ ಮುನ್ನಡೆ ನೀಡಲಾಗಿತ್ತು. ಇದಕ್ಕೂ ಹೆಚ್ಚಿನ ಪ್ರಮಾಣದಲ್ಲಿ ಮತಗಳ ಮುನ್ನಡೆ ನೀಡುವಂತೆ ಕೋರಿದರು. ಕಾಂಗ್ರೇಸ್ ಅಭ್ಯರ್ಥಿ ಸತೀಶ ಜಾರಕಿಹೊಳಿ ಅವರು ದೊಡ್ಡ ಮಟ್ಟದ ನಾಯಕರು. ಅವರ ಬಗ್ಗೆ ತಮಗೆ ಅಪಾರ ಗೌರವವಿದೆ. ಆದರೆ ಸತೀಶ ಅವರ ರಾಜಕೀಯ ಬೆಳವಣಿಗೆಯನ್ನು ಕಾಂಗ್ರೇಸ್‍ನ ಒಂದು ಗುಂಪು ಸಹಿಸದೇ ಈ ಚುನಾವಣೆಯಲ್ಲಿ ಅಭ್ಯರ್ಥಿಯನ್ನಾಗಿ ಮಾಡಿದೆ. ಅವರನ್ನು ರಾಜ್ಯ ರಾಜಕಾರಣದಿಂದ ದೂರವಿಡುವ ಹುನ್ನಾರ ಅಡಗಿದೆ ಎಂದು ಆರೋಪಿಸಿದ ಅವರು, ಕಾಂಗ್ರೇಸ್‍ಗೆ ಮತ ಹಾಕಿದರೇ ಯಾವುದಕ್ಕೂ ಪ್ರಯೋಜನವಿಲ್ಲ, ಏಕೆಂದರೆ ಕಾಂಗ್ರೇಸ್ ಪಕ್ಷ ನಕಲಿ ಗಾಂಧಿಗಳನ್ನು ಹೊಂದಿದೆ. ಅದೊಂದು ಜೋಕರ್‍ಗಳ ಪಕ್ಷವೆಂದು ವ್ಯಂಗ್ಯವಾಡಿದರು. ವಿಶ್ವಮಾನ್ಯ ನಾಯಕರಾಗಿರುವ ಪ್ರಧಾನಿ ಮೋದಿ ಅವರಿಗೆ ಶಕ್ತಿ ತುಂಬಲು ಬಿಜೆಪಿಗೆ ಮತ ನೀಡಿ ಆಯ್ಕೆ ಮಾಡುವಂತೆ ಕೋರಿದರು.
ಈ ಸಂದರ್ಭದಲ್ಲಿ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಆಪ್ತಸಹಾಯಕ ನಾಗಪ್ಪ ಶೇಖರಗೋಳ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುಭಾಶ ಪಾಟೀಲ, ಜಿ.ಪಂ ಸದಸ್ಯ ಗೋವಿಂದ ಕೊಪ್ಪದ, ಓಬಿಸಿ ಜಿಲ್ಲಾಧ್ಯಕ್ಷ ಬಸು ಮಾಳೆದ, ವಕೀಲ ಎಲ್.ಟಿ.ತಪಸಿ, ಪ್ರಮೋದ ಜೋಶಿ, ಮುಖಂಡರಾದ ಮನು ಗಡಾದ, ಯಮನಪ್ಪ ಬಾಗಾಯಿ, ಪುಂಡಲೀಕ ಮೇಟಿ, ಹಣಮಂತ ಬಾಗಾಯಿ, ಲಕ್ಷ್ಮಣ ತಪಸಿ, ನಜೀರ ಮಕಾನದಾರ, ಆರ್.ಕೆ.ಬೆಣಚಿನಮರಡಿ, ಎಮ್.ಕೆ.ಕುಳ್ಳೂರ, ಪರಸಪ್ಪ ಮೇಲ್ಮಟ್ಟಿ, ಸಿದ್ರಾಮ ಕುಳ್ಳೂರ, ಶಿವಾಜಿ ಅರಭಾವಿ, ಸಾಗರ, ಎಸ್.ಎಸ್.ಪಾಟೀಲ, ಬಸಪ್ಪ ಅರಭಾವಿ, ಭೀಮಶಿ ಪಾತ್ರೋಟ, ಧರೆಪ್ಪ ಕುಳ್ಳೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.ನಂತರ ಬೀರನಗಡ್ಡಿ, ಬಳೋಬಾಳ, ಹುಣಶ್ಯಾಳ ಪಿ.ಜಿ. ಗ್ರಾಮಗಳಿಗೆ ತೆರಳಿ ಸಚಿವ ಉಮೇಶ್ ಕತ್ತಿ ಮತಯಾಚಿಸಿದರು.
ರಾಹುಲ್ ಗಾಂಧಿ ಬಿಜೆಪಿಯವರಿಗೆ ಸಿಂಹಸ್ವಪ್ನ: ಮಲ್ಲಿಕಾರ್ಜುನ ಖರ್ಗೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ