ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಖನಿಜ ಸಂಪತ್ತು ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯದಲ್ಲಿ ಹೆಚ್ಚಾಗಿದೆ. ವಿವಿಧ ರಾಜ್ಯಗಳಿಗೆ ಮಾದರಿಯಾಗುವ ನಿಟ್ಟಿನಲ್ಲಿ ಹೊಸ ರೀತಿಯ ಮೈನಿಂಗ್ ಯೋಜನೆ ರೂಪಿಸಲಾಗಿದ್ದು, ಶೀಘ್ರದಲ್ಲಿ ಅನುಷ್ಠಾನಗೊಳಸಲಾಗುವುದು ಎಂದು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಸಚಿವರಾದ ಮುರುಗೇಶ ನಿರಾಣಿ ತಿಳಿಸಿದರು.
ಬೆಳಗಾವಿಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನೂತನ ಕಛೇರಿ ಮತ್ತು ಜಿಲ್ಲಾ ಖನಿಜ ಭವನ ರವಿವಾರ (ಮಾ.15) ಬಾಕ್ಸೈಟ್ ರಸ್ತೆಯ ಕುಮಾರಸ್ವಾಮಿ ಬಡಾವಣೆಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು.
10 ಲಕ್ಷದೊಳಗಿನ ಮನೆ ಕಟ್ಟಡ ನಿರ್ಮಾಣ ಮಾಡಲು ಜನರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೊಸ ಯೋಜನೆ ಮಾಡಲಾಗಿದೆ.
ಆಶ್ರಯ ಮನೆ, ರೈತರು ಸೇರಿದಂತೆ ಕೆಳ ಮತ್ತು ಮಧ್ಯಮ ವರ್ಗದ ಜನರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ಕಡಿಮೆ ದರದಲ್ಲಿ ಮರಳು ನೀಡಲು ಯೋಜನೆ ರೂಪಿಸಲಾಗಿದ್ದು, 10 ಲಕ್ಷದೊಳಗಿನ ಕಟ್ಟಡಗಳಿಗೆ 1 ಟನ್ ಮರಳಿಗೆ 100 ರಿಂದ 200 ರೂಪಾಯಿ ನಿಗದಿ ಮಾಡಿ ಕಡಿಮೆ ದರದಲ್ಲಿ ನೀಡಲಾಗುವುದು ಎಂದು ತಿಳಿಸಿದರು.
ಮುಂದಿನ ದಿನಗಳಲ್ಲಿ ಬೆಳಗಾವಿ ಜಿಲ್ಲೆ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಲಿಗಲ್ ಮೈನಿಂಗ್, ಬ್ಲಾಸ್ಟಿಂಗ್ ಟ್ರೈನಿಂಗ್ ಮತ್ತು ಮರಳು ಬೆಲೆ ನಿಗದಿ ಕುರಿತು ಸಾರಿಗೆ ಇಲಾಖೆ, ಅರಣ್ಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಕ್ವಾರಿ ಮಾಲೀಕರ ಜೊತೆಗೆ ಸಭೆ ನಡೆಸಲಾಗುವುದು ಎಂದು ಹೇಳಿದರು.
ವೈಜ್ಞಾನಿಕ ಮಾದರಿ ಮೈನಿಂಗ್ ಯೋಜನೆ:
ಜಾರ್ಖಂಡ್ ರಾಜ್ಯದ ಮಾದರಿಯಲ್ಲಿ ತರಬೇತಿ ಪಡೆದು ಬ್ಲಾಸ್ಟಿಂಗ್ ಮಾಡಲಾಗುವುದು ಹಾಗೂ ಪರಿಸರ ಹಾನಿಯಾಗದಂತೆ ಸಂರಕ್ಷಣೆ ಮಾಡಲಾಗುವುದು ಎಂದು ಸಚಿವ ನಿರಾಣಿ ತಿಳಿಸಿದರು.
ಈಗಿರುವ ಬ್ಲಾಸ್ಟಿಂಗ್ ಸ್ಥಳಗಳನ್ನು ಪರಿಶೀಲನೆ ನಡೆಸಿ, ತರಬೇತಿ ನೀಡಿದ ನಂತರ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಿ ಬ್ಲಾಸ್ಟಿಂಗ್ ಮಾಡಲಾಗುವುದು ಎಂದು ಹೇಳಿದರು.
ಮೈನಿಂಗ್ ಸ್ಕೂಲ್, ಮೈನಿಂಗ್ಯು ನಿವರ್ಸಿಟಿ ಪ್ರಾರಂಭಿಸುವ ಯೋಜನೆ ಮಾಡಲಾಗಿದೆ. ಇತರೆ ರಾಜ್ಯಗಳಿಗೆ ಮಾದರಿಯಾಗುವಂತೆ ಹೊಸ ರೀತಿಯ ವೈಜ್ಞಾನಿಕ ಮೈನಿಂಗ್ ಮಾಡಲಾಗುವುದು.
ಮೈನಿಂಗ್ ಸ್ಕೂಲ್ ಮೂಲಕ ವೈಜ್ಞಾನಿಕ ತರಬೇತಿ ನೀಡಲಾಗುವುದು. ಹೊಸ ಮೈನಿಂಗ್ ನೀತಿ ಅತ್ಯಂತ ಕಡಿಮೆ ಸಮಯ ನಿಗದಿ ಮಾಡಿ ಜಾರಿಗೆ ತರಲಾಗುವುದು ಎಂದು ತಿಳಿಸಿದರು.
ಬೆಳಗಾವಿ ಖನಿಜ ಭವನ ಸುಮಾರು 1.5 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ವಿವಿಧ ಜಿಲ್ಲೆಗಳಲ್ಲಿ ಖನಿಜ ಭವನ ನಿರ್ಮಾಣ ಮಾಡಲಾಗುವುದು ಎಂದು ಸಚಿವರಾದ ಮುರುಗೇಶ ನಿರಾಣಿ ಹೇಳಿದರು.
ಅನಧಿಕೃತ ಮೈನಿಂಗ್ ಮತ್ತು ಬ್ಲಾಸ್ಟಿಂಗ್ ನಿಂದ ಸಮೀಪದ ಊರುಗಳಿಗೆ, ಜನರಿಗೆ ಯಾವುದೇ ತೊಂದರೆ ಆಗದಂತೆ ಹಾಗೂ ಪರಿಸರ ಸಂಪನ್ಮೂಲ ಹಾನಿಯಾಗದಂತೆ ಹೊಸ ಮಾದರಿ ಮೈನಿಂಗ್ ನಿಯಮಗಳಿಗೆ ತಮ್ಮ ಸಹಮತ ವ್ಯಕ್ತಪಡಿಸಿದರು.
ಗುತ್ತಿಗೆದಾರರಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ಮೈನಿಂಗ್ ವ್ಯವಸ್ಥೆ ಮಾಡಲಾಗಿದ್ದು, ಬ್ಲಾಸ್ಟಿಂಗ್ ವಿಚಾರದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ವಿಧಾನ ಪರಿಷತ್ತಿನ ಸರ್ಕಾರದ ಮುಖ್ಯ ಸಚೇತಕರಾದ ಮಹಾಂತೇಶ್ ಕವಟಗಿಮಠ ತಿಳಿಸಿದರು.
ಜಿಲ್ಲಾಧಿಕಾರಿಗಳಾದ ಎಂ.ಜಿ ಹಿರೇಮಠ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ದರ್ಶನ್. ಹೆಚ್. ವಿ, ಪೊಲೀಸ್ ಆಯುಕ್ತರಾದ ಡಾ. ಕೆ ತ್ಯಾಗರಾಜನ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಲಕ್ಷ್ಮಣ್ ನಿಂಬರಗಿ, ಉಪವಿಭಾಗಾಧಿಕಾರಿಗಳಾದ ಅಶೋಕ ತೇಲಿ ಉಪಸ್ಥಿತರಿದ್ದರು. ಶೈಲಾ ಕೊಕ್ಕರಿ ನಿರೂಪಿಸಿದರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಉಪ ನಿರ್ದೇಶಕರಾದ ಬಿಂದನ ಪಾಟೀಲ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ