*ಕೆಎಲ್ಎಸ್ ಜಿಐಟಿಯಲ್ಲಿ ಇನ್ಕ್ಯುಬೇಷನ್ ಸೆಂಟರ್ ಹಾಗೂ ಎನ್ವಿಡಿಯಾ ಬೆಂಬಲಿತ ಎಐ ಲ್ಯಾಬ್ ಉದ್ಘಾಟನೆ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕರ್ನಾಟಕ ಲಾ ಸೋಸೈಟಿ (ಕೆಎಲ್ಎಸ್) ಅಧ್ಯಕ್ಷ ಅನಂತ ಮಂಡಗಿ ಅವರು ಕೆಎಲ್‌ಎಸ್ ಗೋಗಟೆ ಇನ್‌ಸ್ಟಿಟ್ಯೂಟ ಆಫ ಟೆಕ್ನಾಲಜಿ (KLS GIT)ಯ ಎರಡು ಪ್ರಮುಖ ಉಪಕ್ರಮಗಳನ್ನು ಉದ್ಘಾಟಿಸಿದರು.
ಇನ್ಕ್ಯುಬೇಷನ್ ಸೆಂಟರ್ KLS GRID (GIT’s Research, Innovation, and Development Centre) ನ ಉದ್ಘಾಟನೆ ನೆರವೇರಿಸಿದರು. ಈ GRID ಕೇಂದ್ರವು ಮಹಾವಿದ್ಯಾಲಯದಲ್ಲಿ ಸಂಶೋಧನೆ, ಹೊಸ ಕಲ್ಪನೆಗಳು ಹಾಗೂ ಸ್ಟಾರ್ಟಪ್ ಸಂಸ್ಕೃತಿಗೆ ಉತ್ತೇಜನ ನೀಡಲು ಸ್ಥಾಪಿಸಲಾಯಿತು. ಇದರಿಂದ ವಿದ್ಯಾರ್ಥಿಗಳಿಗೆ ತಮ್ಮ ಕಲ್ಪನೆಗಳನ್ನು ಕಾರ್ಯರೂಪಕ್ಕೆ ತರಲು ಅವಕಾಶ ದೊರೆಯಲಿದೆ.
ಉದ್ಯಮಿಗಳು ತಮ್ಮ ಸ್ಟಾರ್ಟಪ್ ಗಳನ್ನು ಇಲ್ಲಿ ಸ್ಥಾಪಿಸಬಹುದಾಗಿದೆ, ಕಾಲೇಜಿನ ಮೂಲಸೌಕರ್ಯಗಳನ್ನು ಬಳಸಿಕೊಳ್ಳಬಹುದು, ವಿದ್ಯಾರ್ಥಿಗಳ ಇಂಟರ್ನ್‌ಶಿಪ್ ಹಾಗೂ ಉಪನ್ಯಾಸಕರು ಮತ್ತು ಮಾರ್ಗದರ್ಶಕರಿಂದ ತಾಂತ್ರಿಕ ಸಲಹೆ ಪಡೆಯಬಹುದು. ಈಗಾಗಲೇ ೮ ಸ್ಟಾರ್ಟಪ್‌ಗಳು ಈ ಕೇಂದ್ರದಿಂದ ಕಾರ್ಯನಿರ್ವಹಣೆ ಆರಂಭಿಸುತ್ತಿವೆ. ಪ್ರಸ್ತುತ ಈ ಕೇಂದ್ರವು ೫೦ ಸ್ಟಾರ್ಟಪ್‌ಗಳಿಗೆ ಅವಕಾಶ ನೀಡಬಲ್ಲದು.
ಮುಂದಿನ ೧೮ ತಿಂಗಳಿನಲ್ಲಿ ೨೫,೦೦೦ ಚದರ ಅಡಿ ಪ್ರದೇಶವಿರುವ ಇನ್ನೊಂದು ಇನ್ಕ್ಯುಬೇಷನ ಸೆಂಟರ್ ನಿರ್ಮಾಣಗೊಳ್ಳಲಿದ್ದು, ಅದನ್ನು ಘೋಷಿಸಲಾಯಿತು. ಇದಲ್ಲದೆ, TiE (The Indus Entrepreneurs) ಹುಬ್ಬಳ್ಳಿಯ ಕಛೇರಿಯನ್ನೂ GRID ಸೆಂಟರ್ ನಲ್ಲಿಯೇ ಸ್ಥಾಪಿಸಲಾಗುತ್ತಿದ್ದು, ಬೆಳಗಾವಿಯ ಉದ್ಯಮಶೀಲತೆ ಮತ್ತು ಸ್ಟಾರ್ಟಪ್ ವಿಶ್ವವನ್ನು ಮತ್ತಷ್ಟು ಬಲಗೊಳಿಸಲು ಸಹಕಾರಿಯಾಗಲಿದೆ.
ತದನಂತರ ಎನ್ವಿಡಿಯಾ ಬೆಂಬಲಿತ ಕೃತಕ ಬುದ್ಧಿಮತ್ತೆ (AI) ಲ್ಯಾಬ್ ನ ಉದ್ಘಾಟನೆಯು ಅನಂತ ಮಂಡಗಿ ಅವರಿಂದ ನಡೆಯಿತು. ಈ ಎಐ ಲ್ಯಾಬ್‌ಗಾಗಿ ನವೀಕೃತ ಡೇಟಾ ಸೆಂಟರ್‌ನಲ್ಲಿ NVIDIA HGX H200 GPU Servers ಗಳನ್ನು ಅಳವಡಿಸಲಾಗಿದೆ. ಇದರ ಮೂಲಕ KLS GIT ಕಂಪ್ಯೂಟರ ಸೈನ್ಸ್ ಕ್ಷೇತ್ರದಲ್ಲಿ ಶ್ರೇಷ್ಠ ಮಟ್ಟಕ್ಕೇರಲಿದ್ದು, ಕಂಪ್ಯೂಟರ್ ಸೈನ್ಸ್ ಸಹಿತ ಇತರ ವಿಭಾಗಗಳ ವಿದ್ಯಾರ್ಥಿಗಳು ಮತ್ತು GRID ನಲ್ಲಿ ಇರುವ ಸ್ಟಾರ್ಟಪ್‌ಗಳು ಕೂಡ ಈ ತಂತ್ರಜ್ಞಾನದಿಂದ ಲಾಭ ಪಡೆಯಲಿದ್ದಾರೆ.
ತಮ್ಮ ಭಾಷಣದಲ್ಲಿ ಅನಂತ್ ಮಂಡಗಿ “KLS ಸಂಸ್ಥೆ ವಿದ್ಯಾರ್ಥಿಗಳು ಹಾಗೂ ಪೋಷಕರ ಆಸೆ-ಆಕಾಂಕ್ಷೆಗಳನ್ನು ಪೂರೈಸುವ ಉದ್ದೇಶದಿಂದ ಕೋಟ್ಯಾಂತರ ರೂಪಾಯಿಗಳನ್ನು ಮೂಲಸೌಕರ್ಯ ಅಭಿವೃದ್ಧಿಗೆ ಹೂಡಿಕೆಯಾಗಿ ಬಳಸುತ್ತಿದೆ” ಎಂದು ಹೇಳಿದರು. ಅವರು ತಂತ್ರಜ್ಞಾನದ ಪರಿವರ್ತನೆಗಳಿಗೆ ಸಜ್ಜಾಗಿರುವ ಶಿಕ್ಷಕರ ಪರಿಶ್ರಮ ಮತ್ತು ಬದ್ಧತೆಯನ್ನು ಶ್ಲಾಘಿಸಿದರು.
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಅಧ್ಯಾಪಕರು, ವಿದ್ಯಾರ್ಥಿಗಳು, ಪೋಷಕರು, ವಿವಿಧ ಸಂಸ್ಥೆಗಳ ಸದಸ್ಯರು, CII, TiE ಹುಬ್ಬಳ್ಳಿ, ಬೆಳಗಾವಿ ಚೇಂಬರ್ ಆಫ್ ಕಾಮರ್ಸ್ ಹಾಗೂ BETCA ಸದಸ್ಯರು ಉಪಸ್ಥಿತರಿದ್ದರು. KLS GRID ನಲ್ಲಿ ಇನ್ಕ್ಯುಬೇಟಾಗಿರುವ ಎಂಟು ಸ್ಟಾರ್ಟಪ್‌ಗಳ ಪ್ರತಿನಿಧಿಗಳು ತಮ್ಮ ಯೋಜನೆಗಳನ್ನು ಮಂಡಿಸಿದರು.
ಪ್ರಾಂಶುಪಾಲ ಡಾ. ಎಂ. ಎಸ್. ಪಾಟೀಲ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಡೀನ್ ಡಾ. ಶ್ವೇತಾ ಗೌಡರ್ ಅವರು ಮಹಾವಿದ್ಯಾಲಯದ ಪರವಾಗಿ ಮಾತನಾಡಿದರು. T-Hub ಹೈದರಾಬಾದ್ ಮಾಜಿ ಸದಸ್ಯ ಗಜೇಂದ್ರ ತ್ರಿಪಾಠಿ ಅವರು KLS GIT ನ ಸ್ಟಾರ್ಟಪ್ ವಿಶ್ವದ ಅನುಕೂಲ ಕುರಿತು ಮಾತನಾಡಿದರು.
ಕಾರ್ಯಕ್ರಮದಲ್ಲಿ KLS ಸಂಸ್ಥೆಯ ಪದಾಧಿಕಾರಿಗಳಾದ ರಾಮ ಭಂಡಾರೆ, ಉದಯ ಕಾಲ್ಕುಂದ್ರಿಕರ, ವಿವೇಕ ಕುಲಕರ್ಣಿ, ಸುಧೀಂದ್ರ ಗಣಾಚಾರಿ, ಆರ್, ಎಸ್ ಮುತಾಲಿಕ, ರಾಜೇಂದ್ರ ಬೆಳಗಾಂವ್ಕರ್, ಉಜ್ವಲಾ ಮಂಡಗಿ, ಅಶೋಕ ಕುಲಕರ್ಣಿ ಮತ್ತು ವಿ. ಎಂ. ದೇಶಪಾಂಡೆ ಉಪಸ್ಥಿತರಿದ್ದರು.